‘ದಿ ಫೈಲ್‌’ವರದಿ ಪರಿಣಾಮ; ವೀರಶೈವ ಲಿಂಗಾಯತ ಒಬಿಸಿ ಪಟ್ಟಿಗೆ ಸೇರ್ಪಡೆ ಕೈಬಿಟ್ಟ ಸರ್ಕಾರ

ಬೆಂಗಳೂರು; ವೀರಶೈವ ಲಿಂಗಾಯತರನ್ನು ಓಬಿಸಿ ಪಟ್ಟಿಗೆ ಸೇರಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡಲು ಹೊರಟಿದ್ದ ಬಿಜೆಪಿ ಸರ್ಕಾರ ಸದ್ಯಕ್ಕೆ ಆ ಪ್ರಸ್ತಾವನೆಯಿಂದ ದೂರ ಸರಿದಿದೆ. ಇಂದು ನಡೆದ ಸಚಿವ ಸಂಪುಟದ ಅನುಮೋದನೆ ಪಡೆದು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಕಣಕ್ಕಿಳಿದಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಇದರಿಂದ ಮುಖಭಂಗವಾದಂತಾಗಿದೆ.

ಒಬಿಸಿ ಪಟ್ಟಿಗೆ ವೀರಶೈವ ಲಿಂಗಾಯತ ಸಮುದಾಯವನ್ನು ಸೇರಿಸುವ ಸಂಬಂಧ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಸಂಪುಟಕ್ಕೆ ಪ್ರಸ್ತಾವನೆ ಸಲ್ಲಿಸಿರುವುದನ್ನು ಟಿಪ್ಪಣಿ ಸಮೇತ ‘ದಿ ಫೈಲ್‌’ ಹೊರಗೆಡವಿತ್ತು. ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಹೊರಟಿದೆ ಎಂದು ‘ದಿ ಫೈಲ್‌’ ವರದಿ ಪ್ರಕಟಿಸುತ್ತಿದ್ದಂತೆ ಉಳಿದ ಮಾಧ್ಯಮಗಳು ಇದನ್ನು ಪ್ರಸಾರ ಮಾಡಿ ವಿಸ್ತರಿಸಿದವು.

ಕೇಂದ್ರದ ಒಬಿಸಿ ಮೀಸಲಾತಿ ಪಟ್ಟಿಗೆ ವೀರಶೈವ ಲಿಂಗಾಯತ ಸಮುದಾಯ; ತರಾತುರಿಯ ಶಿಫಾರಸ್ಸು

ಇದರಿಂದ ಯಡಿಯೂರಪ್ಪ ಮತ್ತು ಸರ್ಕಾರ ತೀವ್ರ ಮುಜುಗರಕ್ಕೆ ಸಿಲುಕಿತು. ಓಬಿಸಿ ಪಟ್ಟಿಗೆ ಸೇರ್ಪಡೆಗೊಳಿಸುವ ವಿಚಾರದ ಕೇಂದ್ರದ ಬಿಜೆಪಿ ವರಿಷ್ಠರು ಇದಕ್ಕೆ ತಡೆಯೊಡಿದ್ದರು. ಹೀಗಾಗಿ ಇಂದು ನಡೆದ ಸಚಿವ ಸಂಪುಟದಲ್ಲಿ ಈ ವಿಚಾರ ಪ್ರಸ್ತಾಪವಾಗಲಿಲ್ಲ. ಬಿಜೆಪಿ ರಾಷ್ಟ್ರೀಯ ಘಟಕದ ವರಿಷ್ಠರ ಸೂಚನೆಯಿಂದಾಗಿಯೇ ಶಿಫಾರಸ್ಸು ಮಾಡುವುರಿಂದ ರಾಜ್ಯ ಬಿಜೆಪಿ ಸರ್ಕಾರ ಹಿಂದೆ ಸರಿಯಿತು.

ಕೇಂದ್ರದ ಓಬಿಸಿ ಪಟ್ಟಿಗೆ ವೀರಶೈವ ಲಿಂಗಾಯತ ಸಮುದಾಯವನ್ನು ಸೇರ್ಪಡೆಗೊಳಿಸಲು ಶಿಫಾರಸ್ಸು ಮಾಡುವ ಮೂಲಕ ತಮ್ಮ ಶಕ್ತಿಯನ್ನು ಇನ್ನಷ್ಟು ಇಮ್ಮಡಿಗೊಳಿಸಲು ಹೊರಟಿದ್ದ ಯಡಿಯೂರಪ್ಪ ಅವರಿಗೆ ಈಗ ತೀವ್ರ ಮುಖಭಂಗವಾದಂತಾಗಿದೆ.

ಸಂಪುಟ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ‘ಮುಖ್ಯಮಂತ್ರಿಗಳಿಗೆ ಈ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆ. ಈ ಹಿನ್ನೆಲೆಯಲ್ಲಿ ಓಬಿಸಿ ಕೋಟಾಕ್ಕೆ ಸೇರಿಸುವಂತೆ ಶಿಫಾರಸು ಮಾಡುವ ನಿರ್ಧಾರದಿಂದ ಹಿಂದೆ ಸರಿಯಲಾಗಿದೆ,’ ಎಂದು ತಿಳಿಸಿದರು.

1994ರಲ್ಲಿಯೇ ವೀರಶೈವ ಲಿಂಗಾಯತರನ್ನು ಓಬಿಸಿಗೆ ಸೇರಿಸಬೇಕು ಎಂದು ಬೇಡಿಕೆ ಇಡಲಾಗಿತ್ತು. ಇದರ ಜೊತೆಗೆ ಇನ್ನು ಕೆಲವು ಸಮುದಾಯಗಳನ್ನು ಒಳಗೊಂಡು ಸಮಗ್ರ ಅಧ್ಯಯನ ನಡೆಸಿ, ಕೇಂದ್ರಕ್ಕೆ ಶಿಫಾರಸು ಸಲ್ಲಿಸಲು ನಿರ್ಧರಿಸಲಾಗಿದೆ,’ ಎಂದು ವಿವರಿಸಿದರು.

ಈ ಮೀಸಲಾತಿಗೂ ರಾಜ್ಯ ಸರಕಾರಕ್ಕೂ ಸಂಬಂಧ ಇಲ್ಲ. ಕೇಂದ್ರ ಸರಕಾರದ ಕೋಟಾದಡಿಯಲ್ಲಿ ಮೀಸಲಾತಿ ನೀಡಿ ಎಂಬುದು ವೀರಶೈವ – ಲಿಂಗಾಯತರ ಬೇಡಿಕೆ. ಇದಕ್ಕಾಗಿ 1999 ರಿಂದ ವೀರಶೈವ ಮಹಾಸಭಾ ಕೇಂದ್ರ ಸರಕಾರದೊಂದಿಗೆ ಹೋರಾಟ ಮಾಡುತ್ತಾ ಬಂದಿದೆ. ಈ ಸಂಬಂಧ ಮಹಾಸಭಾ ತನ್ನ ಪ್ರಯತ್ನ ಮುಂದುವರಿಸಬೇಕು ಎಂದು ಮಾಧುಸ್ವಾಮಿ ಹೇಳಿದ್ದಾರೆ.

ಕೇಂದ್ರ ಸರ್ಕಾರದ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಗೆ ಸೇರ್ಪಡೆ ಮಾಡಲು ಶಿಫಾರಸ್ಸು ಮಾಡುವ ಸಂಬಂಧ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಸಂಪುಟದ ಅನುಮೋದನೆಗೆ ತರಾತುರಿಯಲ್ಲಿ (ಹಿಂವಿ ಸಿ 609/2020) ಪ್ರಸ್ತಾವನೆ ಸಲ್ಲಿಸಿತ್ತು.

ವೀರಶೈವ ಲಿಂಗಾಯತ ಸಮುದಾಯವನ್ನು ಒಬಿಸಿ ಪಟ್ಟಿಗೆ ಸೇರ್ಪಡೆಗೊಳಿಸಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭಾ ಕೂಡ ಹಿಂದಿನ ಕಾಂಗ್ರೆಸ್‌ ಸರ್ಕಾರದ ಮಮುಂದೆ ಪ್ರತಿಪಾದಿಸಿತ್ತು. ಲಿಂಗಾಯತ ಸಮುದಾಯದಲ್ಲಿ ಒಟ್ಟು 102 ಜಾತಿಗಳನ್ನು ಗುರುತಿಸಲಾಗಿದೆ. ಅದರಲ್ಲಿ ಈಗಾಗಲೇ 30 ಜಾತಿಗಳು ಒಬಿಸಿ ಪಟ್ಟಿಯಲ್ಲಿವೆ. ಒಬಿಸಿ ಪಟ್ಟಿಗೆ ಸೇರಿಸುವುದಾದರೆ ಉಳಿದ 72 ಜಾತಿಗಳನ್ನು ಸೇರಿಸಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುವುದಾದರೆ ಲಿಂಗಾಯತ ಶಿರೋನಾಮೆಯಲ್ಲೇ ಕೊಡಬೇಕು ಎಂದು ಮಹಾಸಭಾ ಹಕ್ಕೊತ್ತಾಯ ಮಂಡಿಸಿತ್ತು.

ಬಿಜೆಪಿ ಸರ್ಕಾರವು ಲಿಂಗಾಯತ ಶಿರೋನಾಮೆಯಡಿಯಲ್ಲಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡದೆಯೇ ವೀರಶೈವ ಹೆಸರನ್ನೂ ಸೇರ್ಪಡೆಗೊಳಿಸಿರುವುದು ಜಾಗತಿಕ ಲಿಂಗಾಯತ ಮಹಾಸಭಾದ ಕೆಂಗಣ್ಣಿಗೂ ಗುರಿಯಾಗುವ ಸಾಧ್ಯತೆಗಳಿವೆ.

ಮಹಾರಾಷ್ಟ್ರದಲ್ಲಿ ಮರಾಠ ಸಮುದಾಯಕ್ಕೆ ನೀಡಿರುವ ಮೀಸಲಾತಿ ಮಾದರಿಯಲ್ಲೇ ಕರ್ನಾಟಕದಲ್ಲಿ ವೀರಶೈವ ಲಿಂಗಾಯತರಿಗೆ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ವೀರಶೈವ ಲಿಂಗಾಯತ ಸಮುದಾಯ ಪ್ರತಿನಿಧಿಗಳು ಪ್ರತಿಭಟನೆ ನಡೆಸಿದ್ದರು.

ಲಿಂಗಾಯತ ಸಮುದಾಯದಲ್ಲಿ ನಮಗೆ ಅಲ್ಪಸಂಖ್ಯಾತ ಸ್ಥಾನಮಾನ ಬೇಡ ಆದರೆ ಮೀಸಲಾತಿ ಬೇಕಾಗಿದೆ. ಸರ್ಕಾರವು ಆರ್ಥಿಕವಾಗಿ ಹಿಂದುಳಿದ ಸಮುದಾಯದವರನ್ನು ಗುರುತಿಸಿ ಮೀಸಲಾತಿ ನೀಡಬೇಕು, ಇತ್ತೀಚೆಗೆ ಮಹಾರಾಷ್ಟ್ರ ಸರ್ಕಾರ ಮರಾಠಿಗರಿಗೆ ನೀಡಿರುವ ರೀತಿಯಲ್ಲಿ ಕರ್ನಾಟಕದಲ್ಲಿ ವೀರಶೈವ ಲಿಂಗಾಯತರಿಗೂ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿದ್ದನ್ನು ಸ್ಮರಿಸಬಹುದು.

‘ಶೈಕ್ಷಣಿಕ, ಔದ್ಯೋಗಿಕ, ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದ ವರ್ಗಗಳನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರವು ಮೀಸಲಾತಿ ನೀಡಿದೆ. ಆದರೆ  ಮುಂದುವರೆದ ಜನಾಂಗಗಳು ಮೀಸಲಾತಿ ಸೌಲಭ್ಯ ಪಡೆಯಲು ಮುಂದಾದರೆ ಅಥವಾ ಅದರ ವ್ಯಾಪ್ತಿಗೆ ಬಂದರೆ ನೈಜವಾಗಿ ಹಿಂದುಳಿದ ವರ್ಗಗಳು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಾರೆ. ಅಲ್ಲದೆ  ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ  ತಂದಂತೆ,’ ಎನ್ನುತ್ತಾರೆ ಹಿಂದುಳಿದ ವರ್ಗಗದ ಮುಖಂಡರೊಬ್ಬರು.

the fil favicon

SUPPORT THE FILE

Latest News

Related Posts