ಕೊಲೆಸ್ಟ್ರಾಲ್‌ ನಿಯಂತ್ರಣ ಉಪಕರಣ ಖರೀದಿಯಲ್ಲಿ ಅವ್ಯವಹಾರ; ಆರೋಪ ಸಾಬೀತಾದರೂ ಕ್ರಮವಿಲ್ಲ

ಬೆಂಗಳೂರು; ಬೆಂಗಳೂರಿನ ಬೌರಿಂಗ್‌ ಮತ್ತು ಲೇಡಿ ಕರ್ಜನ್‌ ಆಸ್ಪತ್ರೆಯಲ್ಲಿ ಕೊಲೆಸ್ಟ್ರಾಲ್‌ ನಿಯಂತ್ರಿಸುವ ಉಪಕರಣ ಖರೀದಿಯಲ್ಲಿ ನಡೆದಿರುವ ಅವ್ಯವಹಾರ ಪ್ರಕರಣ, 17 ವರ್ಷಗಳಾದರೂ ತಾರ್ಕಿಕ ಅಂತ್ಯ ಕಂಡಿಲ್ಲ. ವೈದ್ಯಕೀಯ ಶಿಕ್ಷಣ ಇಲಾಖೆಯ ಈ ನಿರ್ಲಕ್ಷ್ಯದಿಂದಾಗಿ ಆಪಾದಿತ ಅಧಿಕಾರಿ ನಿವೃತ್ತಿ ಹೊಂದುವರೆಗೂ ಯಾವುದೇ ಕ್ರಮ ಜರುಗಿಸಿಲ್ಲ.  ಈಗಾಗಲೇ ಅಧಿಕಾರಿ ನಿವೃತ್ತಿ ಆಗಿರುವ  ಕಾರಣ ಸರ್ಕಾರಕ್ಕೆ ಆಗಿರುವ ಲಕ್ಷಾಂತರ ರು.ಗಳ ನಷ್ಟವನ್ನು ಯಾರು ಭರಿಸಬೇಕು ಎಂದು ನಿರ್ಧರಿಸುವ ಸಂಬಂಧ ವೈದ್ಯಕೀಯ ಶಿಕ್ಷಣ ಇಲಾಖೆ ಜಿಜ್ಞಾಸೆಯಲ್ಲಿ ಮುಳುಗಿದೆ.

ಕೊಲೆಸ್ಟ್ರಾಲ್‌ ಉಪಕರಣ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪಗಳ ಕುರಿತು ತನಿಖೆ ನಡೆಸಲು 2003ರಲ್ಲಿ ಲೋಕಾಯುಕ್ತ ತನಿಖೆಗೆ ವಹಿಸಲಾಗಿತ್ತು. ಪ್ರಕರಣ ಕುರಿತು ತನಿಖೆ ನಡೆಸಿದ್ದ ಲೋಕಾಯುಕ್ತರು 2006ರಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ವರದಿ ಸಲ್ಲಿಕೆಯಾಗಿ 14 ವರ್ಷಗಳಾದರೂ ಆರೋಪಿತ ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕರ ವಿರುದ್ಧ ಈವರೆವಿಗೂ ಯಾವುದೇ ಕ್ರಮ ವಹಿಸಿಲ್ಲ ಎಂದು ತಿಳಿದು ಬಂದಿದೆ.

ಪ್ರಕರಣ ಕುರಿತು ಕರ್ನಾಟಕ ವಿಧಾನಪರಿಷತ್‌ನ ಭರವಸೆ ಸಮಿತಿಗೆ ಉತ್ತರಿಸಿರುವ ವೈದ್ಯಕೀಯ ಶಿಕ್ಷಣ ಇಲಾಖೆ, ಅಧಿಕಾರಿ ವಯೋ ನಿವೃತ್ತಿ ಹೊಂದಿರುವ ಕಾರಣ ಆಪಾದಿತ ಅಧಿಕಾರಿ ವಿರುದ್ಧ ದಾವೆ ಹೂಡುವುದು ಸೇರಿದಂತೆ ಕ್ರಮ ವಹಿಸಲು ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಗೆ ಸಾಧ್ಯವಾಗಿಲ್ಲ ಎಂದು ತಿಳಿಸಿದೆ. ವಿಧಾನಪರಿಷತ್‌ನ ಭರವಸೆ ಸಮಿತಿಗೆ ನೀಡಿರುವ ಉತ್ತರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

61 ಲಕ್ಷ ರು.ನಷ್ಟ

ಡಾ ಶಿವರತ್ನ ಸಾವಡಿ ಅವರು ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕರಾಗಿದ್ದ ಅವಧಿಯಲ್ಲಿ ಬೌರಿಂಗ್‌ ಮತ್ತು ಲೇಡಿ ಕರ್ಜನ್‌ ಆಸ್ಪತ್ರೆಯಲ್ಲಿ ಕೊಲೆಸ್ಟ್ರಾಲ್‌ ನಿಯಂತ್ರಿಸುವ ಉಪಕರಣ ಖರೀದಿಯಾಗಿತ್ತು. ಖರೀದಿ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾಗಿರುವ ಅವ್ಯವಹಾರದಿಂದ ಸರ್ಕಾರಕ್ಕೆ 61 ಲಕ್ಷ ರು. ನಷ್ಟವುಂಟಾಗಿತ್ತು. ಇದಕ್ಕೆ ಅಂದಿನ ವೈದ್ಯಕೀಯ ಶಿಕ್ಷಣ ನಿರ್ದೇಶಕರಾಗಿದ್ದ ಡಾ ಶಿವರತ್ನ ಸಾವಡಿ ಅವರು ಜವಾಬ್ದಾರಿ ಎಂದು ಲೋಕಾಯುಕ್ತ ವರದಿಯಲ್ಲಿ ಹೇಳಲಾಗಿತ್ತು.

ಸರ್ಕಾರಕ್ಕೆ ಆಗಿರುವ ನಷ್ಟವನ್ನು ಆಪಾದಿತ ಅಧಿಕಾರಿಯಿಂದ ವಸೂಲಿ ಮಾಡಬೇಕು ಮತ್ತು ಸಿಸಿಎ ನಿಯಮಾವಳಿಗಳ ಪ್ರಕಾರ ಶಿಸ್ತು ಕ್ರಮ ಜರುಗಿಸಬೇಕು ಎಂದು ಲೋಕಾಯುಕ್ತರು ಶಿಫಾರಸ್ಸು ಮಾಡಿದ್ದರು. ವರದಿ ಸಲ್ಲಿಕೆಯಾದ ನಂತರ ಕ್ರಮ ಜರುಗಿಸಬೇಕಿದ್ದ ವೈದ್ಯಕೀಯ ಶಿಕ್ಷಣ ಇಲಾಖೆಯು ಆಪಾದಿತ ಅಧಿಕಾರಿ ನಿವೃತ್ತಿಯಾಗುವವರೆಗೂ ಯಾವುದೇ ಕ್ರಮ ವಹಿಸಿರಲಿಲ್ಲ ಎಂಬುದು ಭರವಸೆ ಸಮಿತಿಗೆ ನೀಡಿರುವ ಉತ್ತರದಿಂದ ಗೊತ್ತಾಗಿದೆ.

ಕಾಲಹರಣ ಮಾಡಿದ ಇಲಾಖೆ

ಈ ಪ್ರಕರಣ ನಡೆದಿರುವುದು 1999ರಲ್ಲಿ. ಲೋಕಾಯುಕ್ತಕ್ಕೆ ತನಿಖೆಗೆ ವಹಿಸಿದ್ದು 2003ರಲ್ಲಿ. ಆರೋಪಗಳ ಕುರಿತು ತನಿಖೆ ನಡೆಸಿದ್ದ ಲೋಕಾಯುಕ್ತ ಸಂಸ್ಥೆಯು 2006ರಲ್ಲಿ ತನಿಖಾ ವರದಿ ಸಲ್ಲಿಸಿದೆ. ವೈದ್ಯಕೀಯ ಶಿಕ್ಷಣ ಇಲಾಖೆಯು ಪ್ರಕರಣ ಕುರಿತು ತಕ್ಷಣವೇ ಕ್ರಮ ಜರುಗಿಸಿದ್ದಲ್ಲಿ ಆಪಾದಿತ ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೆಶಕರನ್ನು ದಂಡಿಸಲು ಸಾಧ್ಯವಿತ್ತು. ಆಪಾದಿತ ಅಧಿಕಾರಿಯು ನಿವೃತ್ತಿ ಹೊಂದುವವರೆಗೂ ಯಾವುದೇ ಕ್ರಮ ಕೈಗೊಳ್ಳದ ಇಲಾಖೆಯು ಕಾಲಹರಣ ಮಾಡಿರುವುದು ಇಲಾಖೆಯು ನೀಡಿರುವ ಉತ್ತರದಿಂದ ತಿಳಿದು ಬಂದಿದೆ.

ಡಿಪಿಎಆರ್‌ ನೀಡಿರುವ ಉತ್ತರದಲ್ಲೇನಿದೆ?

ಪ್ರಕರಣ ಕುರಿತು ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯು 2006ರ ನವೆಂಬರ್‌ 4ರಂದು ಅಭಿಪ್ರಾಯ ನೀಡಿದೆ. ‘ ಕೆಸಿಎಸ್‌ಆರ್‌ ನಿಯಮ 214ರ ಅಡಿ ಘಟನೆ ನಡೆದ 4 ವರ್ಷಗಳ ಒಳಗೆ ವಿಚಾರಣೆಯನ್ನು ಆರಂಭಿಸಬೇಕು. ಪ್ರಸ್ತುತ ಪ್ರಕರಣದಲ್ಲಿ ಘಟನೆ ನಡೆದಿರುವುದು 1999ರಲ್ಲಿ. ನಿಯಮ 214ರಲ್ಲಿ ನಿಗದಿಪಡಿಸಿರುವ 4 ವರ್ಷಗಳ ಅವಧಿ ಮುಕ್ತಾಯವಾಗಿದೆ. ಆದ್ದರಿಂದ ಈಗ ಅರ ವಿರುದ್ಧ ಇಲಾಖೆ ವಿಚಾರಣೆ ಪ್ರಾರಂಭಿಸಲು ಅವಕಾಶವಿರುವುದಿಲ್ಲ. ಇದರಿಂದ ಸರ್ಕಾರಕ್ಕೆ ಆಗಿರುವ ನಷ್ಟವನ್ನು ಸಿವಿಲ್‌ ದಾವೆ ಹೂಡುವ ಮೂಲಕ ವಸೂಲು ಮಾಡುವ ಸಾಧ್ಯತೆ ಬಗ್ಗೆ ಕಾನೂನು ಇಲಾಖೆಯನ್ನು ಸಂಪರ್ಕಿಸಬಹುದು,’ ಎಂದು ಅಭಿಪ್ರಾಯ ನೀಡಿದೆ.

ಈಗಾಗಲೇ ನಿವೃತ್ತಿಯಾಗಿರುವ ಆಪಾದಿತ ಅಧಿಕಾರಿ ಡಾ ಶಿವರತ್ನ ಸಿ ಸಾವಡಿ ಅವರು ಪ್ರಕರಣ ಸಂಬಂಧ ಮಧ್ಯಸ್ಥಿಕೆ ಕೇಂದ್ರದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ಸರ್ಕಾರ ಈ ಪ್ರಕರಣದಲ್ಲಿ ಸ್ವಯಂ ನಿರ್ಧಾರ ಕೈಗೊಂಡಿಲ್ಲ. ಆದರೆ ಪ್ರತಿವಾದಿಗಳು ಮಧ್ಯಸ್ಥಿಕೆ ಕೇಂದ್ರಕ್ಕೆ ಹಾಜರಾಗುವಲ್ಲಿ ತಡ ಮಾಡಿರುವ ಕಾರಣ ನ್ಯಾಯಾಲಯದ ಆದೇಶಕ್ಕಾಗಿ ಸರ್ಕಾರ ಎದುರು ನೋಡುತ್ತಿರುವುದು ಉತ್ತರದಿಂದ ಗೊತ್ತಾಗಿದೆ.

the fil favicon

SUPPORT THE FILE

Latest News

Related Posts