ಬೌರಿಂಗ್‌ ವೈದ್ಯಕೀಯ ಕಾಲೇಜಿಗೆ ಅಟಲ್‌ ಹೆಸರು; ಉತ್ತರದ ಚಾಳಿ ಮುಂದುವರಿಕೆ

ಬೆಂಗಳೂರು; ಐತಿಹಾಸಿಕ ನಗರ, ಸ್ಮಾರಕ ಹಾಗೂ ಸಾರ್ವಜನಿಕ ಸಂಸ್ಥೆಗಳ ಹೆಸರು ಬದಲಾಯಿಸುವ ಉತ್ತರ ಪ್ರದೇಶ ಸರ್ಕಾರದ ಚಾಳಿ ಇದೀಗ ರಾಜ್ಯ ಬಿಜೆಪಿ ಸರ್ಕಾರಕ್ಕೂ ಅಂಟಿದೆ.

ಸ್ವಾತಂತ್ರ್ಯ ಪೂರ್ವದ ದಿನಗಳಲ್ಲಿ ಬೆಂಗಳೂರು ನಗರದಲ್ಲಿದ್ದ ಏಕಮಾತ್ರ ನಾಗರಿಕ ವೈದ್ಯಕೀಯ ಸಂಸ್ಥೆ ಎಂಬ ಹೆಗ್ಗಳಿಕೆ ಹೊಂದಿರುವ ಬೌರಿಂಗ್‌ ಲೇಡಿ ಕರ್ಜನ್‌ ಆಸ್ಪತ್ರೆಯ ಆವರಣದಲ್ಲಿ ಉದ್ಧೇಶಿತ ವೈದ್ಯಕೀಯ ಕಾಲೇಜಿನ ಹೆಸರನ್ನು ಬದಲಿಸಿ ಅಟಲ್‌ ಬಿಹಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಎಂದು ಮರು ನಾಮಕರಣ ಮಾಡಿ ಆದೇಶ ಹೊರಡಿಸಿದೆ. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್‌ ಅವರು ಆದೇಶದ ಪ್ರತಿಯನ್ನು ಟ್ವೀಟ್‌ ಮಾಡಿದ್ದಾರೆ.

ಮೂಲತಃ ಮೈಸೂರು ರಾಜ್ಯಕ್ಕೆ ಸೇರಿದ ವೈದ್ಯಕೀಯ ಸಂಸ್ಥೆಯಾಗಿದ್ದ ಬೌರಿಂಗ್‌ ಲೇಡಿ ಕರ್ಜನ್‌ ಆಸ್ಪತ್ರೆಯನ್ನು 1884 ರಲ್ಲಿ ಇದು ಸಿವಿಲ್ ಮತ್ತು ಮಿಲಿಟರಿ ಆಡಳಿತಕ್ಕೆ ವಹಿಸಲಾಗಿತ್ತು. ಈ ಆಸ್ಪತ್ರೆ 1890 ತನಕ ಬೆಂಗಳೂರಿನಲ್ಲಿದ್ದ ಏಕ ಮಾತ್ರ ನಾಗರಿಕ ವೈದ್ಯಕೀಯ ಸಂಸ್ಥೆ ಆಗಿತ್ತು. ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ ಈ ಪ್ರದೇಶವು ಅವರ ದಂಡುಪ್ರದೇಶವಾಗಿತ್ತಲ್ಲದೆ ಈ ಬೌರಿಂಗ್ ಆಸ್ಪತ್ರೆಯನ್ನು ಐರೋಪ್ಯರ ಬಳಕೆಗಾಗಿ 1916ರಲ್ಲಿ ಸ್ಥಾಪನೆಯಾಗಿತ್ತು.

ಐತಿಹಾಸಿಕ ಪ್ರಾಮುಖ್ಯತೆ ಹೊಂದಿದ್ದ ಈ ಬೌರಿಂಗ್ ಆಸ್ಪತ್ರೆಯ ಆವರಣದಲ್ಲಿ ಹೊಸದಾಗಿ ಪ್ರಾರಂಭಿಸಲಾಗಿರುವ ‘ಬೌರಿಂಗ್ ಮತ್ತು ಲೇಡಿ ಕರ್ಜನ್ ವೈದಕೀಯ ಮಹಾ ವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ’ಯ ಹೆಸರನ್ನು ಬದಲಿಸಿ ಅದಕ್ಕೆ ಅಟಲ್ ಬಿಹಾರಿ ವಾಜಪೇಯಿ ಸಂಸ್ಥೆ ಎಂದು ಮರು ನಾಮಕರಣ ಮಾಡಿರುವುದಕ್ಕೆ ಆಕ್ಷೇಪಗಳು ಕೇಳಿ ಬಂದಿವೆ. ಹೆಸರು ಬದಲಿಸುವ ಮೂಲಕ ಇತಿಹಾಸಕ್ಕೆ ಅಪಚಾರ ಎಸಗಲಾಗಿದೆ ಎಂಬ ಆರೋಪಕ್ಕೆ ಬಿಜೆಪಿ ಸರ್ಕಾರ ಗುರಿಯಾಗಿದೆ.

ಈ ಹಿಂದೆಯೂ ಯಡಿಯೂರಪ್ಪ ಅವರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಒದಗಿಸುತ್ತಿದ್ದ ಸಾರಿಗೆ ಸೇವೆಗೂ ಅಟಲ್‌ ಸಾರಿಗೆ ಎಂದು ನಾಮಕರಣ ಮಾಡಿದ್ದನ್ನು ಸ್ಮರಿಸಬಹುದು.
ಪ್ರಸಕ್ತ ಸಾಲಿನಿಂದ ಬೌರಿಂಗ್ ಮತ್ತು ಲೇಡಿ ಕರ್ಜನ್ ವೈದ್ಯಕೀಯ ಕಾಲೇಜು ಆರಂಭಿಸಲು ಭಾರತೀಯ ವೈದ್ಯಕೀಯ ಪರಿಷತ್(ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ) ಅನುಮತಿ ನೀಡಿದೆ. 2019-20ನೇ ಸಾಲಿನಿಂದ ಕಾಲೇಜಿಗೆ ಪ್ರವೇಶ ಆರಂಭವಾಗಲಿದ್ದು 150 ಮೆರಿಟ್ ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ ಆಗಸ್ಟ್ ತಿಂಗಳಿಂದ ಪ್ರವೇಶ ಕಲ್ಪಿಸಲು ಸಕಲ ಸಿದ್ಧತೆ ನಡೆಯುತ್ತಿದೆ.

the fil favicon

SUPPORT THE FILE

Latest News

Related Posts