ಸ್ಮಾರ್ಟ್ ಸಿಟಿ ಅನುದಾನದಲ್ಲಿ ಕರ್ನಾಟಕಕ್ಕೆ 566 ಕೋಟಿ; ಗುಜರಾತ್‌, ಉತ್ತರ ಪ್ರದೇಶಕ್ಕೆ ಸಿಂಹಪಾಲು

ಬೆಂಗಳೂರು; ಸ್ಮಾರ್ಟ್‌ ಸಿಟಿ ಯೋಜನೆಯಡಿ ಬೆಂಗಳೂರು ನಗರ ಸೇರಿದಂತೆ ದೇಶದ ನೂರು ನಗರಗಳನ್ನು ಸ್ಮಾರ್ಟ್‌ ಸಿಟಿಯನ್ನಾಗಿಸಲು ಕೇಂದ್ರ ಸರ್ಕಾರ ಹಂಚಿಕೆ ಮಾಡಿರುವ ಒಟ್ಟು 19,022 ಕೋಟಿ ರು ಪೈಕಿ ಗುಜರಾತ್‌ ರಾಜ್ಯದ 6 ನಗರಗಳಿಗೆ ಈವರೆವಿಗೆ 1,627 ಕೋಟಿ ರು., ಉತ್ತರ ಪ್ರದೇಶದ 10 ನಗರಗಳಿಗೆ 1,416 ಕೋಟಿ ನೀಡಿರುವ ಕೇಂದ್ರ ಸರ್ಕಾರ ಕರ್ನಾಟಕದ 6 ನಗರಗಳಿಗೆ 566 ಕೋಟಿ ಮಾತ್ರ ಅನುದಾನ ನೀಡಿದೆ.

ಅಥಣಿ ಮೂಲದ ವಕೀಲ ಹಾಗೂ ಸಾಮಾಜಿಕ ಕಾರ್ಯಕರ್ತ ಭೀಮನಗೌಡ ಪರಗೊಂಡ ಅವರಿಗೆ ಕೇಂದ್ರದ ವಸತಿ ಮತ್ತು ನಗರಾಭಿವೃದ್ಧಿ ಇಲಾಖೆಯು 2020ರ ಅಕ್ಟೋಬರ್‌ 9ರಂದು ಆರ್‌ಟಿಐ ಅಡಿಯಲ್ಲಿ ನೀಡಿರುವ ಮಾಹಿತಿ ಪ್ರಕಾರ ಕರ್ನಾಟಕದ ನಗರಗಳೂ ಸೇರಿದಂತೆ ದೇಶದ ಉಳಿದ ನಗರಗಳ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಅನುದಾನ ಬಿಡುಗಡೆ ಮಾಡಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಯೋಜನೆಯ ಒಟ್ಟಾರೆ ಮೊತ್ತದ ಪೈಕಿ ಶೇ.50ರಷ್ಟನ್ನು ಮಾತ್ರ ಬಿಡುಗಡೆ ಮಾಡಿರುವ ಕೇಂದ್ರ ಸರ್ಕಾರದ ಧೋರಣೆಯಿಂದ ಯೋಜನಾ ಕಾಮಗಾರಿಗಳು ತೆವಳುತ್ತಿವೆ. ನಿಗದಿತ ಅವಧಿಯೊಳಗೆ ಅನುದಾನ ಬಿಡುಗಡೆ ಆಗದ ಕಾರಣ ಯೋಜನಾ ವೆಚ್ಚ ದುಪ್ಪಟ್ಟಾಗಲು ದಾರಿಮಾಡಿಕೊಟ್ಟಂತಾಗಿದೆ. ಈವರೆವಿಗೆ ಬಿಡುಗಡೆ ಮಾಡಿರುವ ಹಣದಿಂದ ಪ್ರಾಥಮಿಕ ಸೌಲಭ್ಯಗಳನ್ನೂ ಒದಗಿಸಲಾಗಿಲ್ಲ ಎಂಬುದು ತಿಳಿದು ಬಂದಿದೆ.

2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದ ದೇಶದ ನೂರು ನಗರಗಳನ್ನು ಆತ್ಮ ಸಿಟಿಯನ್ನಾಗಿಸುವ ಯೋಜನೆ, ಇನ್ನೆರಡು ವರ್ಷಗಳಲ್ಲಿ ಪೂರ್ಣಗೊಳ್ಳಬೇಕು. ಆದರೆ ಈಗ ಬಿಡುಗಡೆ ಆಗಿರುವ ಅನುದಾನದ ಸ್ಥಿತಿ ನೋಡಿದರೆ ಮೂರು ವರ್ಷದಲ್ಲಿ ಯೋಜನೆ ಪೂರ್ಣಗೊಳ್ಳುವುದು ಅನುಮಾನ ಎನ್ನಲಾಗಿದೆ.

ಗುಜರಾತ್‌ನ 6 ನಗರಗಳಿಗೆ ಒಂದೇ ಕಂತಿನಲ್ಲಿ 1,627 ಕೋಟಿ ರು. ಬಿಡುಗಡೆ ಮಾಡಿರುವ ಕೇಂದ್ರ ಸರ್ಕಾರ, ಕರ್ನಾಟಕದ ಮಂಗಳೂರು, ಹುಬ್ಬಳ್ಳಿ ಧಾರವಾಡ, ದಾವಣಗೆರೆ ಶಿವಮೊಗ್ಗ ನಗರಗಳಿಗೆ ತಲಾ 196 ಕೋಟಿ, ಬೆಳಗಾವಿ ಮತ್ತು ತುಮಕೂರುಗಳಿಗೆ 294 ಕೋಟಿ, ಮತ್ತು ಬೆಂಗಳೂರಿಗೆ 194 ಕೋಟಿ ಸೇರಿದಂತೆ ಒಟ್ಟು 566 ಕೋಟಿ ರೂಪಾಯಿ ನೀಡಿರುವುದು ಆರ್‌ಟಿಐನಿಂದ ಗೊತ್ತಾಗಿದೆ.

ಅರುಣಾಚಲ ಪ್ರದೇಶದ ಪಾಸೀಘಾಟ್‌ಗೆ 153 ಕೋಟಿ, ಇಟಾನಗರಕ್ಕೆ 151ಕೋಟಿ, ಆಸ್ಸಾಂ ಏಕೈಕ ನಗರ ಗೌಹಾತಿಗೆ 196 ಕೋಟಿ, ಬಿಹಾರದ ಬಾಗಲಪುರಕ್ಕೆ 196 ಕೋಟಿ, ಮುಜಾಫರ್ ನಗರ 60 ಕೋಟಿ ,ಪಾಟ್ನಾಕ್ಕೆ 194 ಕೋಟಿ, ಮತ್ತು ಬಿಹಾರ ಶರೀಪ್ ನಗರಕ್ಕೆ 60ಕೋಟಿ, ಛತ್ತೀಸಗಢದ ಬಿಸಾಲಪುರಕ್ಕೆ 58 ಕೋಟಿ, ರಾಯಪುರಕ್ಕೆ 96 ಕೋಟಿ, ನಯಾ ರಾಯಪುರಕ್ಕೆ 122 ಕೋಟಿ, ಗೋವಾದ ಪಣಜಿಗೆ 196 ಕೋಟಿ, ಗುಜರಾತ್ ರಾಜ್ಯದ ವಡೋದರಾಕ್ಕೆ 245 ಕೋಟಿ, ಗಾಂಧಿ ನಗರ 196 ಕೋಟಿ, ಸೂರತ್ಗೆ 400 ಕೋಟಿ, ರಾಜಕೋಟ್‌ಗೆ 245 ಕೋಟಿ,ಅಹ್ಮದಾಬಾದ್ಗೆ 345 ಕೋಟಿ, ದಾಹುದ್‌ಗೆ 196 ಕೋಟಿ ರು. ಬಿಡುಗಡೆಯಾಗಿದೆ.

ಆಂಧ್ರಪ್ರದೇಶದ ತಿರುಪತಿಗೆ 291.5 ಕೋಟಿ, ಕಾಕಿನಾಡ್ 392 ಕೋಟಿ, ವಿಶಾಖಪಟ್ಟಣಂಗೆ 294 ಕೋಟಿ, ಅಮರಾವತಿಗೆ 488 ಕೋಟಿ ಅನುದಾನ ನೀಡಿದೆ. ಅದೇ ರೀತಿ ಹರಿಯಾಣ ರಾಜ್ಯದ ಕರ್ನಾಲ್‌ಗೆ 60 ಕೋಟಿ, ಫರಿದಾಬಾದ್‌ಗೆ 294 ಕೋಟಿ, ಹಿಮಾಚಲ ಪ್ರದೇಶದ ಧರ್ಮಶಾಲಾಗೆ 245 ಕೋಟಿ ಮತ್ತು ಶಿಮ್ಲಾಗೆ 126 ಕೋಟಿ ಅನುದಾನ ಒದಗಿಸಿದೆ.

ಕೇಂದ್ರ ಸರ್ಕಾರ ಸ್ಮಾರ್ಟ್‌ ಸಿಟಿ ಯೋಜನೆಯನ್ನು ಗಂಭೀರವಾಗಿ ಪರಿಗಣಿಸಬೇಕು. ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ತನ್ನ ಪಾಲಿನ ಶೇ.50ರಷ್ಟು ಹಣವನ್ನು ಬಿಡುಗಡೆ ಮಾಡಬೇಕು. ಆಯಾ ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರಿ ಕಾಮಗಾರಿ ಪೂರ್ಣಗೊಳಿಸದಿದ್ದರೆ ಯೋಜನಾ ವೆಚ್ಚ ದುಪ್ಪಟ್ಟುಗೊಳ್ಳಲಿದೆ. ಅಲ್ಲದೆ ಅಭಿವೃದ್ಧಿ ನೆಪದಲ್ಲಿ ಸಾರ್ವಜನಿಕರಿಗೆ ತೊಂದರೆ, ಸರ್ಕಾರದ ಹಣವು ಅಪವ್ಯಯವಾಗಲಿದೆ.

ಭೀಮನಗೌಡ ಪರಗೊಂಡ, ವಕೀಲರು

ಇನ್ನು, ಜಮ್ಮು ಮತ್ತು ಕಾಶ್ಮೀರದ ಶ್ರೀನಗರಕ್ಕೆ 84 ಕೋಟಿ, ಜಮ್ಮುವಿಗೆ 127 ಕೋಟಿ, ಜಾರ್ಖಂಡ್ ರಾಜ್ಯದ ರಾಂಚಿಗೆ 392ಕೋಟಿ ನೀಡಿರುವ ಕೇಂದ್ರ ಸರ್ಕಾರ, ಕೇಂದ್ರಾಡಳಿತ ಪ್ರದೇಶ ಅಂಡೋಮಾನ್ ನಿಕೋಬಾರ್‌ನ ಪೋರ್ಟ್ ಬ್ಲೇರ್‌ಗೆ 196 ಕೋಟಿ, ಚಂಡೀಗಢಕ್ಕೆ 196 ಕೋಟಿ ದಾದ್ರಾ ನಗರ ಹವೇಲಿಯ ಸಿಲ್ವಾಸ್ ನಗರಕ್ಕೆ 104 ಕೋಟಿ, ದಮನ್ ಮತ್ತು ದಿಯು ದ ದಿಯು ನಗರಕ್ಕೆ 110 ಕೋಟಿ, ದೆಹಲಿಯ ಮಹಾನಗರಕ್ಕೆ 201 ಕೋಟಿ, ಲಕ್ಷದ್ವೀಪದ ಕವರತ್ತಿ 60ಕೋಟಿ, ಪುದುಚೇರಿಗೆ 103 ಕೋಟಿ ಹಣ ಬಿಡುಗಡೆ ಮಾಡಿರುವುದು ಆರ್‌ಟಿಐನಿಂದ ತಿಳಿದು ಬಂದಿದೆ.

ಕೇರಳ ರಾಜ್ಯದ ಕೊಚ್ಚಿನ್‌ಗೆ 196 ಕೋಟಿ, ತಿರುವನಂತಪುರಂಗೆ 194 ಕೋಟಿ, ಮಧ್ಯಪ್ರದೇಶ ದ ಗ್ವಾಲಿಯರ್‌ಗೆ 196 ಕೋಟಿ, ಭೂಪಾಲ್‌ಗೆ 490 ಕೋಟಿ, ಇಂದೋರ್‌ಗೆ 490 ಕೋಟಿ,ಜಬಲಪುರಕ್ಕೆ 392 ಕೋಟಿ ,ಸಾಗರಕ್ಕೆ 85 ಕೋಟಿ,ಸಾತ್ನಾಗೆ 196 ಕೋಟಿ, ,ಉಜ್ಜೈನಿಗೆ 294 ಕೋಟಿ ಒದಗಿಸಿದೆ.
ಹಾಗೆಯೇ ಮಹಾರಾಷ್ಟ್ರದ ಕಲ್ಯಾಣ- ಡೊಂಬಿವಲಿ, ನಾಶಿಕ,ಥಾಣೆ, ಸೊಲ್ಲಾಪುರಗಳಿಗೆ ತಲಾ 196 ಕೋಟಿ, ಔರಂಗಾಬಾದ್‌ಗೆ 245 ಕೋಟಿ,ಪುಣೆಗೆ 295 ಕೋಟಿ, ಪಿಂಪ್ರಿ-ಚಿಂಚ್ವಾಡ್ 245 ಕೋಟಿ , ನಾಗಪುರಕ್ಕೆ 217.23 ಕೋಟಿ, ಮಣಿಪುರದ ಇಂಪಾಲ್‌ಗೆ 196 ಕೋಟಿ, ಮೇಘಾಲಯದ ಶಿಲ್ಲಾಂಗ್‌ಗೆ 55ಕೋಟಿ, ಮಿಜೋರಾಂ ನ ಐಜಿವಾ ಗೆ 128 ಕೋಟಿ, ನಾಗಾಲ್ಯಾಂಡ್‌ನ ಕೋಹಿಮಾಗೆ 196 ಕೋಟಿ, ಒರಿಸ್ಸಾ ರಾಜ್ಯದ ರೂರ್ಕೇಲಾಗೆ 196 ಕೋಟಿ, ಭುವನೇಶ್ವರ್‌ಗೆ 392 ಕೋಟಿ, ಪಂಜಾಬ್‌ನ ಲೂಧಿಯಾನ್‌ಗೆ 196 ಕೋಟಿ, ಅಮೃತಸರ ಮತ್ತು ಜಲಂಧರ ನಗರಗಳಿಗೆ ತಲಾ 60 ಕೋಟಿ, ರಾಜಸ್ಥಾನದ ಕೋಟಾಗೆ 196 ಕೋಟಿ,ಅಜ್ಮೈರ ಮತ್ತು ಜೈಪುರಗಳಿಗೆ ತಲಾ 245 ಕೋಟಿ ಹಾಗೂ ಉದಯಪುರ್‌ಗೆ 343 ಕೋಟಿ ಅನುದಾನ ನೀಡಿರುವುದು ಗೊತ್ತಾಗಿದೆ.

ಸಿಕ್ಕಿಂನ ನಾಮ್ಚಿಗೆ 245ಕೋಟಿ ಮತ್ತು ಗ್ಯಾಂಗ್‌ ಟಕ್‌ಗೆ 194ಕೋಟಿ, ತಮಿಳುನಾಡಿನ ತಂಜಾವೂರಿಗೆ 196ಕೋಟಿ,ತೂತುಕೂಡಿಗೆ 196 ಕೋಟಿ, ವೆಲ್ಲೂರಿಗೆ 294 ಕೋಟಿ, ಚೆನ್ನೈಗೆ 343 ಕೋಟಿ ,ತಿರುಪ್ಪುರಕ್ಕೆ 343 ಕೋಟಿ ,ಸೇಲಂಗೆವ 294 ಕೋಟಿ, ತಿರುಚಿರಾಪಳ್ಳಿಗೆ 196 ಕೋಟಿ, ಈರೋಡ್‌ಗೆ 294 ಕೋಟಿ ,ತಿರುವನೇಲ್ವಿಗೆ 196 ಕೋಟಿ ಕೊಯಮತ್ತೂರಿಗೆ 343 ಕೋಟಿ, ಮದುರೈಗೆ 294 ಕೋಟಿ ಒದಗಿಸಿದೆ.
ತೆಲಂಗಾಣದ ವಾರಂಗಲ್ ಮತ್ತು ಕರೀಮ್‌ ನಗರಕ್ಕೆ ತಲಾ 196 ಕೋಟಿ, ತ್ರಿಪುರ ರಾಜ್ಯದ ಅಗರ್ತಾಲ್‌ಗೆ 245 ಕೋಟಿ ನೀಡಿದೆ. ಉತ್ತರ ಪ್ರದೇಶದ ಝಾನ್ಸಿ, ಸಹರಾನಪುರ, ಮೊರದಾಬಾದ್ ಮತ್ತು ಬ್ಯಾರಿಲ್‌ಗಳಿಗೆ ತಲಾ 60 ಕೋಟಿ, ಕಾನ್ಪುರ ಮತ್ತು ಅಲಹಾಬಾದ್ ಗಳಿಗೆ ತಲಾ 245 ಕೋಟಿ, ಅಲಿಗಡ್‌ ಮತ್ತು ಲಕ್ನೋ ಗೆ ತಲಾ 196 ಕೋಟಿ, ಆಗ್ರಾ ಮತ್ತು ವಾರಣಾಸಿಗೆ 294 ಕೋಟಿ ನೀಡಿದೆ.

ಕೇಂದ್ರ ಸರಕಾರದ ಸಚಿವಾಲಯ ನೀಡಿರುವ ಈ ಅಂಕಿ ಅಂಶಗಳನ್ನು ಗಣನೆಗೆ ತೆಗೆದುಕೊಂಡರೆ ಆಯ್ಕೆಯಾದ ದಿನದಿಂದ ಈವರೆವಿಗೆ ಒದಗಿಸಿರುವ ಅನುದಾನ ಮತ್ತು ಬಿಡುಗಡೆಯಾಗಿರುವ ಹಣ ಅತ್ಯಲ್ಪ ಪ್ರಮಾಣದ್ದಾಗಿದೆ. ನಿಗದಿತ ಅವಧಿಯೊಳಗೆ ಅನುದಾನ ನೀಡದ ಕಾರಣ ದೇಶದ ಬಹುತೇಕ ನಗರಗಳಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಗೆ ಗ್ರಹಣ ಹಿಡಿದಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ.

the fil favicon

SUPPORT THE FILE

Latest News

Related Posts