ಅನಾರೋಗ್ಯ, ಭ್ರಷ್ಟಾಚಾರ, ಆಡಳಿತ ಕುಸಿತ; ಸಿಎಂ ವಿಚಾರಣೆಗೆ ಅನುಮತಿ ಕೋರಿ ಮನವಿ

ಬೆಂಗಳೂರು; ಮಿತಿ ಮೀರಿರುವ ಭ್ರಷ್ಟಾಚಾರ, ಆಡಳಿತ ಯಂತ್ರ ಕುಸಿತ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆರೋಗ್ಯ ಕ್ಷೀಣಿಸುತ್ತಿರುವುದನ್ನು ಕುಟುಂಬ ಸದಸ್ಯರು ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂಬ ಕಾರಣಗಳನ್ನು ಮುಂದಿಟ್ಟಿರುವ ಸಾಮಾಜಿಕ ಕಾರ್ಯಕರ್ತ ರವಿಕುಮಾರ್‌ ಕಂಚನಹಳ್ಳಿ ಅವರು ಯಡಿಯೂರಪ್ಪ ಅವರನ್ನು ವಿಚಾರಣೆಗೆ ಒಳಪಡಿಸಲು ಅನುಮತಿ ಮತ್ತು ಸಂವಿಧಾನದ ವಿಧಿ 356ರಡಿ ಲಭ್ಯವಿರುವ ಅಧಿಕಾರವನ್ನು ಬಳಸಿ ರಾಜ್ಯ ಬಿಜೆಪಿ ಸರ್ಕಾರವನ್ನು ವಜಾಗೊಳಿಸಬೇಕು ರಾಜಭವನ ಮೆಟ್ಟಿಲೇರಿದ್ದಾರೆ.

ಯಡಿಯೂರಪ್ಪ ಅವರ ಅನಾರೋಗ್ಯವನ್ನು ಅವರ ಪುತ್ರ ಬಿ ವೈ ವಿಜಯೇಂದ್ರ ಅವರು ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂದು ರವಿಕುಮಾರ್‌ ಅವರು ರಾಜ್ಯಪಾಲರಿಗೆ ಸಲ್ಲಿಸಿರುವ ಲಿಖಿತ ಮನವಿಯಲ್ಲಿ ವಿವರಿಸಿದ್ದಾರೆ. ಇದರ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ರಾಜರಾಜೇಶ್ವರಿ ನಗರ ಮತ್ತು ಶಿರಾ ಕ್ಷೇತ್ರದಲ್ಲಿ ಬಿಜೆಪಿ ಗಳಿಸಿರುವ ಜಯಭೇರಿಯನ್ನು ಮುಂದಿಟ್ಟುಕೊಂಡು ಸಚಿವ ಸಂಪುಟ ವಿಸ್ತರಣೆ ಕಸರತ್ತಿನಲ್ಲಿ ಯಡಿಯೂರಪ್ಪ ಅವರು ತೊಡಗಿರುವ ಬೆನ್ನಲ್ಲೇ ರವಿಕುಮಾರ್‌ ಸಲ್ಲಿಸಿರುವ ಮನವಿ ಮಹತ್ವ ಪಡೆದುಕೊಂಡಿದೆ.

ಆರೋಗ್ಯ ಕ್ಷೀಣಿಸುತ್ತಿದೆಯೇ?

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಇತ್ತೀಚೆಗೆ ಅವರಿಗೆ ಹೆಚ್ಚು ಹೊತ್ತು ನಿಲ್ಲಲು, ಮಾತನಾಡಲು ಸಾಧ್ಯವಾಗುತ್ತಿಲ್ಲ. ಅನಾರೋಗ್ಯಕ್ಕೀಡಾಗಿರುವ ಯಡಿಯೂರಪ್ಪ ಅವರಿಗೆ ಆಡಳಿತ ಯಂತ್ರ ಮುನ್ನಡೆಸಲು ಕಷ್ಟವಾಗುತ್ತಿದೆ. ಈ ಪರಿಸ್ಥಿತಿಯನ್ನು ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರು ಆಡಳಿತ ಯಂತ್ರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಿದ್ದಾರೆ.

ವಿಜಯೇಂದ್ರರಿಂದಲೇ ಕಡತ ನಿರ್ವಹಣೆ?

ರಾಜ್ಯದಲ್ಲೀಗ ಇಬ್ಬರು ವ್ಯಕ್ತಿಗಳು ಮುಖ್ಯಮಂತ್ರಿಗಳಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ದೂರಿರುವ ರವಿಕುಮಾರ್‌ ಅವರು ಮುಖ್ಯಮಂತ್ರಿ ಕಚೇರಿ ನಿರ್ವಹಿಸುವ ಕಡತಗಳನ್ನು ಅವರ ಪುತ್ರ ವಿಜಯೇಂದ್ರ ಅವರೇ ನಿರ್ವಹಿಸುತ್ತಿದ್ದಾರೆ ಎಂದು ಬಲವಾಗಿ ಆರೋಪಿಸಿದ್ದಾರೆ. ಅಲ್ಲದೆ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದ ಟೆಂಡರ್ ಕಡತಗಳಿಗೂ ಅವರೇ ಸಹಿ ಮಾಡುತ್ತಿದ್ದಾರೆ. ಹಾಗೆಯೇ ಯಡಿಯೂರಪ್ಪ ಅವರ ಮಕ್ಕಳು, ಮೊಮ್ಮಕ್ಕಳು ಕೂಡ ಆಡಳಿತ ಕಾರ್ಯಕಲಾಪಗಳಲ್ಲಿ ನೇರವಾಗಿ ಪ್ರಭಾವ ಬೀರುತ್ತಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ ಎನ್ನುವುದಕ್ಕೆ ಈ ಬೆಳವಣಿಗೆಗಳೇ ಸಾಕ್ಷಿ ಎಂದು ವಿವರಿಸಿರುವುದು ಮನವಿಯಿಂದ ತಿಳಿದು ಬಂದಿದೆ.

ಅಪಾರ್ಟ್‌ಮೆಂಟ್‌ನಲ್ಲಿ ವಿಧಾನಸೌಧದ ಕಚೇರಿ

ಶಿವಾನಂದ ವೃತ್ತ ಸಮೀಪದ ಆದರ್ಶ ವಸತಿ ಸಮುಚ್ಛಯದಲ್ಲಿ ಫ್ಲಾಟ್‌ ಹೊಂದಿರುವ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರು ಅಲ್ಲಿಂದಲೇ ವಿಧಾನಸೌಧದ ಕಾರ್ಯಗಳನ್ನು ಅನಧಿಕೃತವಾಗಿ ನಡೆಸುತ್ತಿದ್ದಾರೆ. ಈ ವಿಚಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಗೊತ್ತಿದ್ದರೂ ಮೌನ ವಹಿಸಿದ್ದಾರೆ ಎಂದು ಮನವಿಯಲ್ಲಿ ಪ್ರಸ್ತಾಪಿಸಿರುವ ರವಿಕುಮಾರ್‌, ಆಡಳಿತ ಯಂತ್ರ ದುರುಪಯೋಗಪಡಿಸಿಕೊಂಡಿರುವ ವಿಜಯೇಂದ್ರ ಅವರು 15 ಸಾವಿರ ಕೋಟಿಗೂ ಅಧಿಕ ಹಣ ಮಾಡಿರುವ ಮಾಹಿತಿ ಸಾರ್ವಜನಿಕವಾಗಿ ಹರಿದಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಆಡಳಿತ ಯಂತ್ರ ಕುಸಿತ

ಸರ್ಕಾರದಲ್ಲಿರುವ ಇತರೆ ಸಚಿವರು ಮತ್ತು ಅವರ ಕುಟುಂಬ ಸದಸ್ಯರು ಹಾಗೂ ಪಕ್ಷದ ಇತರೆ ಮುಖಂಡರು ಕೂಡ ಇದೇ ಹಾದಿಯಲ್ಲಿ ಅಕ್ರಮವಾಗಿ ಹಣ ಮಾಡುವುದರಲ್ಲಿ ತೊಡಗಿಸಿಕೊಂಂಡಿದ್ದಾರೆ. ಬೆಂಗಳೂರು ಗಲಭೆ ಪ್ರಕರಣದಲ್ಲಿ ಶಾಸಕರೊಬ್ಬರ ಮನೆಗೆ ಬೆಂಕಿ ಹಚ್ಚಿದ್ದನ್ನು ಗಮನಿಸಿದರೆ ರಾಜ್ಯದಲ್ಲಿ ಆಡಳಿತಯಂತ್ರ ಕುಸಿದಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಆದ್ದರಿಂದ ತಾವು ರಾಜ್ಯದಲ್ಲಿ ಆಡಳಿತ ಕುಸಿದಿರುವುದನ್ನು ಪರಿಗಣಿಸಿ, ಸಂವಿಧಾನದ ವಿಧಿ 356ರಡಿ ಲಭ್ಯವಿರುವ ಅಧಿಕಾರವನ್ನು ಬಳಸಿ ರಾಜ್ಯ ಸರ್ಕಾರವನ್ನು ವಜಾಗೊಳಿಸಲು ಕ್ರಮ ಜರುಗಿಸಬೇಕು ಎಂದು ರಾಜ್ಯಪಾಲರಿಗೆ ರವಿಕುಮಾರ್‌ ಮನವಿ ಮಾಡಿದ್ದಾರೆ.

the fil favicon

SUPPORT THE FILE

Latest News

Related Posts