ಅಶೋಕ್‌ಕುಮಾರ್‌ ಆತ್ಮಹತ್ಯೆ ; ಗುಲ್ಬರ್ಗಾ ವಿ.ವಿ.ಗೆ ಶಿಫಾರಸ್ಸಾಗಿರುವ ಪ್ರಾಧ್ಯಾಪಕರ ಬೆದರಿಕೆಗೆ ಅಂಜಿದ್ದರೇ?

ಬೆಂಗಳೂರು; ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ಶಿಫಾರಸ್ಸಾಗಿರುವ ಸಂಘ ಪರಿವಾರದ ನಂಟು ಹೊಂದಿರುವ ಪ್ರಾಧ್ಯಾಪಕರೊಬ್ಬರು ಪ್ರೊ. ಅಶೋಕ್‌ಕುಮಾರ್‌ ಅವರಿಗೆ ಕುಲಪತಿ ಹುದ್ದೆ ದೊರಕಿಸಿಕೊಡುವುದಾಗಿ ನಂಬಿಸಿ ಹಣ ಪಡೆದು ಆ ನಂತರ ಹಣ ನೀಡದೇ ಬೆದರಿಸಿದ್ದರು ಎಂಬ ಮಾತುಗಳು ಕೇಳಿ ಬರುತ್ತಿವೆ.

ಅಶೋಕ್‌ಕುಮಾರ್‌ ಅವರ ಆತ್ಮಹತ್ಯೆ ಪ್ರಕರಣ ವಿಶ್ವವಿದ್ಯಾಲಯದ ಅಂಗಳದಲ್ಲಿ ಚರ್ಚೆಗೆ ಕಾರಣವಾಗಿರುವ ಬೆನ್ನಲ್ಲೇ ಪ್ರಭಾವಿ ಪ್ರಾಧ್ಯಾಪಕರೊಬ್ಬರು ಮಾಡಿದ್ದಾರೆ ಎನ್ನಲಾಗಿರುವ ವಂಚನೆಯೂ ಮುನ್ನೆಲೆಗೆ ಬಂದಿದೆ. ಪ್ರಕರಣ ನಡೆದ 2 ದಿನಗಳ ನಂತರ ಹೊರಬಿದ್ದಿರುವ ಮಾಹಿತಿ, ಆತ್ಮಹತ್ಯೆ ಪ್ರಕರಣಕ್ಕೆ ಮತ್ತೊಂದು ತಿರುವು ನೀಡಿದಂತಾಗಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ ಪ್ರಭಾವಿ ಪ್ರಾಧ್ಯಾಪಕ ಅಶೋಕ್‌ಕುಮಾರ್‌ ಅವರ ಸಹದ್ಯೋಗಿ ಮಾತ್ರವಲ್ಲದೆ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್‌ ಆಗಿಯೂ ಕಾರ್ಯನಿರ್ವಹಿಸಿದ್ದರು ಎನ್ನಲಾಗಿದೆ.

ಸಂಘ ಪರಿವಾರದದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಆ ಪ್ರಾಧ್ಯಾಪಕರೇ 4 ವಿಶ್ವವಿದ್ಯಾಲಯಗಳ ಪೈಕಿ ಯಾವುದಾದಾರೂ ಒಂದು ವಿಶ್ವವಿದ್ಯಾಲಯದಲ್ಲಿ ಕುಲಪತಿ ಹುದ್ದೆ ಕೊಡಿಸುವುದಾಗಿ ಹೇಳಿ ಅಶೋಕ್‌ಕುಮಾರ್‌ ಅವರನ್ನು ನಂಬಿಸಿ ಹಣವನ್ನು ಪಡೆದಿದ್ದರು ಎಂಬ ಮಾತುಗಳು ವಿಶ್ವವಿದ್ಯಾಲಯದ ಅಂಗಳದಲ್ಲಿ ಹರಿದಾಡುತ್ತಿವೆ.

4 ವಿಶ್ವವಿದ್ಯಾಲಯಗಳ ಕುಲಪತಿ ಹುದ್ದೆ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲ ಎಂದು ಖಚಿತಪಡಿಸಿಕೊಂಡಿದ್ದರು. ಆ ನಂತರ ಅಶೋಕ್‌ಕುಮಾರ್‌ ಅವರು ಹಣವನ್ನು ವಾಪಸ್‌ ಕೇಳಿದ್ದರು. ಆದರೆ ಹಣ ವಾಪಸ್‌ ಕೊಡಲು ನಿರಾಕರಿಸಿದ್ದರು ಎನ್ನಲಾಗಿರುವ ಆ ಪ್ರಾಧ್ಯಾಪಕ, ಅಶೋಕ್‌ಕುಮಾರ್‌ ಅವರನ್ನೇ ಬೆದರಿಸಿದ್ದರು. ಪ್ರಕರಣವೊಂದರಲ್ಲಿ ಹಾಕಲಾಗಿದ್ದ ಬಿ ರಿಪೋರ್ಟ್‌ ವರದಿಗೆ ಮರು ಜೀವ ಕೊಡಲಾಗುವುದು ಎಂದು ಬೆದರಿಸಿದ್ದರು ಎಂದು ಅವರ ಆಪ್ತರೊಬ್ಬರು ‘ದಿ ಫೈಲ್‌’ಗೆ ಮಾಹಿತಿ ನೀಡಿದ್ದಾರೆ.

ಅತ್ತ ಹಣವೂ ಇಲ್ಲ, ಇತ್ತ ಕುಲಪತಿ ಹುದ್ದೆಯೂ ಇಲ್ಲ ಎಂಬಂತಾಗಿದ್ದ ಸಂದರ್ಭದಲ್ಲೇ ಆ ಪ್ರಾಧ್ಯಾಪಕ ಒಡ್ಡಿದ್ದ ಬೆದರಿಕೆಯಿಂದ ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆಪ್ತರೊಬ್ಬರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಇದೆಲ್ಲದರ ಮಧ್ಯೆಯೇ ಪೆನುಗೊಂಡ ಜಮೀನು ಪ್ರಕರಣವೂ ಅಶೋಕ್‌ಕುಮಾರ್‌ ಆವರ ಆತ್ಮಹತ್ಯೆ ಪ್ರಕರಣದ ಜತೆಗೆ ಥಳಕು ಹಾಕಿಕೊಂಡಿದೆ. ಅಶೋಕ್‌ಕುಮಾರ್‌ ಅವರು ಹೂಡಿಕೆ ಮಾಡಿದ್ದರು ಎನ್ನಲಾಗಿರುವ ಆಂಧ್ರದ ಪೆನುಗೊಂಡ ಬಳಿ 160 ಎಕರೆ ಜಮೀನಿನ ಪ್ರಕರಣದಲ್ಲಿ ವಂಚನೆಗೊಳಗಾಗಿ ಕಂಗೆಟ್ಟಿದ್ದರು ಎಂಬ ಮಾತುಗಳು ಕೇಳಿ ಬರುತ್ತಿವೆ.

ಹಣ ಕೊಟ್ಟರೂ ಕುಲಪತಿ ಹುದ್ದೆ ಲಭಿಸಲಿಲ್ಲ ಎಂಬುದು ಆತ್ಮಹತ್ಯೆಗೆ ತಕ್ಷಣದ ಕಾರಣವಾಗಿರಬಹುದಾದರೂ ಹಿಂದಿನ ರಾಜ್ಯಪಾಲರಿಗೆ ನಿಕಟವರ್ತಿ ಎಂದು ಹೇಳಲಾಗಿರುವ ಆಂಧ್ರ ಮೂಲದ ವ್ಯಕ್ತಿಯೊಬ್ಬರು ಪೆನುಗೊಂಡ ಬಳಿ 160 ಎಕರೆ ಜಮೀನಿನ ಮೇಲೆ ಅಶೋಕ್‌ಕುಮಾರ್‌ ಅವರಿಂದ ಹೂಡಿಕೆ ಮಾಡಿಸಿ, ಆ ನಂತರ ವಂಚನೆಗೈದಿದ್ದು ಕೂಡ ಆತ್ಮಹತ್ಯೆಗೆ ಕಾರಣವಾಗಿರಬಹುದು ಎನ್ನಲಾಗಿದೆ. ಆದರೆ ಈ ಯಾವ ಮಾಹಿತಿಗಳನ್ನು ಕುಟುಂಬ ಸದಸ್ಯರ ಬಳಿ ಹಂಚಿಕೊಳ್ಳದೇ ಗೌಪ್ಯವಾಗಿರಿಸಿದ್ದರು ಎಂದು ತಿಳಿದು ಬಂದಿದೆ.

ಜಮೀನು ಮಾರಾಟ ಮಾಡಿಸಲು ನಿಕಟವರ್ತಿಗಳ ಬಳಿ ಅಶೋಕ್‌ಕುಮಾರ್‌ ಮಾತುಕತೆ ನಡೆಸಿದ್ದರು. ಜಮೀನು ಮಾರಾಟ ವಿಳಂಬವಾಗಿದ್ದರಿಂದಾಗಿ ಅವರು ಕಂಗೆಟ್ಟಿದ್ದರು ಎಂದು ಹೇಳಲಾಗುತ್ತಿದೆ.

the fil favicon

SUPPORT THE FILE

Latest News

Related Posts