ಅಶೋಕ್‌ಕುಮಾರ್‌ ಆತ್ಮಹತ್ಯೆಯ ಹಿಂದಿದೆಯೇ ಪೆನುಗೊಂಡ ಜಮೀನು ಪ್ರಕರಣ?

ಬೆಂಗಳೂರು; ಗಾರ್ಡನ್‌ ಸಿಟಿ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್‌ ಆಗಿದ್ದ ನಿವೃತ್ತ ಪ್ರಾಧ್ಯಾಪಕ ಅಶೋಕ್‌ಕುಮಾರ್‌ ಅವರ ಆತ್ಮಹತ್ಯೆ ಪ್ರಕರಣದ ಹಿಂದೆ ಹಲವು ಅನುಮಾನಗಳು ವ್ಯಕ್ತವಾಗಿವೆ. ಈ ಕುರಿತು ಶಂಕೆ ವ್ಯಕ್ತಪಡಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಅವರು ಹೈಕೋರ್ಟ್‌ ನ್ಯಾಯಮೂರ್ತಿಯೊಬ್ಬರಿಂದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಇದೆಲ್ಲದರ ಮಧ್ಯೆಯೇ ಪೆನುಗೊಂಡ ಜಮೀನು ಪ್ರಕರಣವೂ ಅಶೋಕ್‌ಕುಮಾರ್‌ ಆವರ ಆತ್ಮಹತ್ಯೆ ಪ್ರಕರಣದ ಜತೆಗೆ ಥಳಕು ಹಾಕಿಕೊಂಡಿದೆ. ಅಶೋಕ್‌ಕುಮಾರ್‌ ಅವರು ಹೂಡಿಕೆ ಮಾಡಿದ್ದರು ಎನ್ನಲಾಗಿರುವ ಆಂಧ್ರದ ಪೆನುಗೊಂಡ ಬಳಿ 160 ಎಕರೆ ಜಮೀನಿನ ಪ್ರಕರಣದಲ್ಲಿ ವಂಚನೆಗೊಳಗಾಗಿ ಕಂಗೆಟ್ಟಿದ್ದರು ಎಂಬ ಮಾತುಗಳು ಕೇಳಿ ಬರುತ್ತಿವೆ.

ಹಣ ಕೊಟ್ಟರೂ ಕುಲಪತಿ ಹುದ್ದೆ ಲಭಿಸಲಿಲ್ಲ ಎಂಬುದು ಆತ್ಮಹತ್ಯೆಗೆ ತಕ್ಷಣದ ಕಾರಣವಾಗಿರಬಹುದಾದರೂ ಹಿಂದಿನ ರಾಜ್ಯಪಾಲರಿಗೆ ನಿಕಟವರ್ತಿ ಎಂದು ಹೇಳಲಾಗಿರುವ ಆಂಧ್ರ ಮೂಲದ ವ್ಯಕ್ತಿಯೊಬ್ಬರು ಪೆನುಗೊಂಡ ಬಳಿ 160 ಎಕರೆ ಜಮೀನಿನ ಮೇಲೆ ಅಶೋಕ್‌ಕುಮಾರ್‌ ಅವರಿಂದ ಹೂಡಿಕೆ ಮಾಡಿಸಿ, ಆ ನಂತರ ವಂಚನೆಗೈದಿದ್ದು ಕೂಡ ಆತ್ಮಹತ್ಯೆಗೆ ಕಾರಣವಾಗಿರಬಹುದು ಎನ್ನಲಾಗಿದೆ. ಆದರೆ ಈ ಯಾವ ಮಾಹಿತಿಗಳನ್ನು ಕುಟುಂಬ ಸದಸ್ಯರ ಬಳಿ ಹಂಚಿಕೊಳ್ಳದೇ ಗೌಪ್ಯವಾಗಿರಿಸಿದ್ದರು ಎಂದು ತಿಳಿದು ಬಂದಿದೆ.

ಜಮೀನು ಮಾರಾಟ ಮಾಡಿಸಲು ನಿಕಟವರ್ತಿಗಳ ಬಳಿ ಅಶೋಕ್‌ಕುಮಾರ್‌ ಮಾತುಕತೆ ನಡೆಸಿದ್ದರು. ಜಮೀನು ಮಾರಾಟ ವಿಳಂಬವಾಗಿದ್ದರಿಂದಾಗಿ ಅವರು ಕಂಗೆಟ್ಟಿದ್ದರು ಎಂದು ಹೇಳಲಾಗುತ್ತಿದೆಯಲ್ಲದೆ ಆಂಧ್ರ ಮೂಲದ ವ್ಯಕ್ತಿ ಮತ್ತು ಅಶೋಕ್‌ಕುಮಾರ್‌ ಅವರ ಫೋನ್‌ ಕರೆಗಳ (ಸಿಡಿಆರ್‌) ಜಾಡನ್ನಿಡಿದು ಹೊರಟರೆ ಇವರ ಆತ್ಮಹತ್ಯೆ ಪ್ರಕರಣ ಮತ್ತೊಂದು ತಿರುವು ತೆಗೆದುಕೊಳ್ಳಲಿದೆ ಎಂದು ವಿಶ್ವಸನೀಯ ಮೂಲಗಳು ‘ದಿ ಫೈಲ್‌’ಗೆ ತಿಳಿಸಿವೆ.

ಪ್ರೊ. ಅಶೋಕ್‌ಕುಮಾರ್‌ ಅವರು ರಾಜೀವ್‌ಗಾಂಧಿ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್‌ (ಮೌಲ್ಯಮಾಪನ) ಆಗಿದ್ದ ವೇಳೆಯಲ್ಲಿ ಆಂಧ್ರ ಮೂಲದ ವ್ಯಕ್ತಿಯೊಬ್ಬರು ಪರಿಚಯವಾಗಿದ್ದರು ಎಂದು ಗೊತ್ತಾಗಿದೆ. ಹಿಂದಿನ ರಾಜ್ಯಪಾಲರು ತನಗೆ ನಿಕಟವರ್ತಿ ಎಂದು ಬಿಂಬಿಸಿಕೊಂಡಿದ್ದ ಆಂಧ್ರ ಮೂಲದ ವ್ಯಕ್ತಿ, ಕುಲಪತಿ ಹುದ್ದೆ ಕೊಡಿಸುವುದಾಗಿ ಭರವಸೆ ನೀಡಿದ್ದ ಎಂದು ಹೇಳಲಾಗಿದೆ. ಆತನ ಮಾತು ನಂಬಿದ್ದ ಅಶೋಕ್‌ಕುಮಾರ್‌ ಅವರು ರಾಜಭವನ ರಸ್ತೆಯಲ್ಲಿರುವ ಖಾಸಗಿ ಹೋಟೆಲ್‌ವೊಂದರಲ್ಲಿ 2013ರಲ್ಲೇ 1.80 ಕೋಟಿ ರು. ನಗದು ನೀಡಿದ್ದರು. ಆದರೆ ಕುಲಪತಿ ಹುದ್ದೆಗೆ ನೇಮಕವಾಗಿರಲಿಲ್ಲ ಎಂದು ಅವರ ನಿಕಟವರ್ತಿಯೊಬ್ಬರು ‘ದಿ ಫೈಲ್‌’ಗೆ ತಿಳಿಸಿದ್ದಾರೆ.

ಆಂಧ್ರ ಮೂಲದ ವ್ಯಕ್ತಿ ಮೇಲೆ ಸೈಬರ್‌ ಅಪರಾಧ ಎಸಗಿರುವ ಆರೋಪಗಳಿವೆ ಎನ್ನಲಾಗಿದೆ. ಪ್ರಕರಣವೊಂದರಲ್ಲಿ ಸಿಬಿಐ ತನಿಖೆಗೂ ಒಳಗಾಗಿದ್ದರು ಎಂದು ಹೇಳಲಾಗುತ್ತಿದೆಯಲ್ಲದೆ ಯುಪಿಎ ಸರ್ಕಾರದಲ್ಲಿದ್ದ ಕೇಂದ್ರ ಮಾನವ ಸಂಪನ್ಮೂಲ ಸಚಿವರ ಸಂಬಂಧಿಕ ಎಂದು ಹೇಳಿ ನಂಬಿಸಿದ್ದ ಎನ್ನಲಾಗಿದೆ.

ಮೈಸೂರು ವಿಶ್ವವಿದ್ಯಾಲಯ ಕುಲಪತಿ ಹುದ್ದೆಗೆ ನೇಮಕವಾಗಿದ್ದ ಶೋಧನಾ ಸಮಿತಿಯು ಅಶೋಕ್‌ಕುಮಾರ್‌ ಅವರ ಹೆಸರನ್ನು ಶಿಫಾರಸ್ಸು ಮಾಡಿತ್ತು. ಆದರೆ ಹಿಂದಿನ ಕಾಂಗ್ರೆಸ್‌ ಸರ್ಕಾರವು ಬೇರೊಬ್ಬರನ್ನು ಕುಲಪತಿಯನ್ನಾಗಿ ನೇಮಿಸಿತ್ತು. ಹಿಂದಿನ ಮುಖ್ಯಮಂತ್ರಿಗೆ ಪರಿಚಯವಿದ್ದ ಅಶೋಕ್‌ಕುಮಾರ್‌ ಅವರ ಸೋದರರೊಬ್ಬರು ಹಲವು ಪ್ರಯತ್ನ ನಡೆಸಿದ್ದರೂ ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ನೇಮಕವಾಗಿರಲಿಲ್ಲ.

ಈ ಬೆಳವಣಿಗೆಯಿಂದ ಬೇಸತ್ತಿದ್ದ ಅಶೋಕ್‌ಕುಮಾರ್‌ ಅವರು ಆ ನಂತರವೂ ಬೇರೆ ಸಾಂಪ್ರದಾಯಕ ವಿಶ್ವವಿದ್ಯಾಲಯಗಳಲ್ಲಿ ಖಾಲಿಯಾಗಿದ್ದ ಕುಲಪತಿ ಹುದ್ದೆಗೆ ಪ್ರಯತ್ನ ಮುಂದುವರೆಸಿದ್ದರು. ಶೋಧನಾ ಸಮಿತಿ ಇವರ ಹೆಸರನ್ನು ಹಲವು ಬಾರಿ ಶಿಫಾರಸ್ಸು ಮಾಡಿತ್ತಾದರೂ ಪಟ್ಟಿಯಲ್ಲಿದ್ದ ಬೇರೊಬ್ಬ ಪ್ರಾಧ್ಯಾಪಕರನ್ನು ಸರ್ಕಾರ ನೇಮಿಸಿತ್ತು. ಇದರಿಂದಲೂ ಅವರು ನೊಂದಿದ್ದರು ಎಂದು ಕುಟುಂಬ ಸದಸ್ಯರೊಬ್ಬರು ‘ದಿ ಫೈಲ್‌’ಗೆ ಮಾಹಿತಿ ನೀಡಿದರು.

ಸಂಘಪರಿವಾರದ ಹಲವು ಪ್ರಮುಖರೊಡನೆಯೂ ಉತ್ತಮ ಸಂಪರ್ಕ ಬಾಂಧವ್ಯ ಹೊಂದಿದ್ದ ಅಶೋಕ್‌ಕುಮಾರ್‌ ಅವರು ಬಿಜೆಪಿ ಸರ್ಕಾರದ ಅವಧಿಯಲ್ಲಿ ಖಾಲಿಯಾಗಿದ್ದ ರಾಯಚೂರು ವಿಶ್ವವಿದ್ಯಾಲಯದ ಕುಲಪತಿ ಹುದ್ದೆ ಆಕಾಂಕ್ಷಿಯಾಗಿದ್ದರು. ಸಂಘಪರಿವಾರದ ಪ್ರಮುಖರ ಸಂಪರ್ಕ ಮತ್ತು ಬಾಂಧವ್ಯವನ್ನು ಬಳಸಿಕೊಂಡು ಕುಲಪತಿ ಗಾದಿಗೇರಲು ಪ್ರಯತ್ನ ಮುಂದುವರೆಸಿದ್ದರು ಎನ್ನಲಾಗಿದೆ.

ಆತ್ಮಹತ್ಯೆಯಲ್ಲಿ ಯಾರ ಕೈವಾಡ ಇದೆಯೋ ಗೊತ್ತಿಲ್ಲ. ಹಣವನ್ನು ಯಾವ ಮಂತ್ರಿ ತೆಗೆದುಕೊಂಡಿದ್ದರೋ ಗೊತ್ತಿಲ್ಲ. 2.5 ಕೋಟಿ ಹಣ ಕೊಟ್ಟಿದ್ದರು ಎಂದು ಚರ್ಚೆ ನಡೆಯುತ್ತಿದೆ. ಅವರಿಗೆ ಸ್ವಲ್ಪ ದಿನ ಕಾಯುವಂತೆ ಹಣ ಪಡೆದವರು ಹೇಳಿದ್ದರು ಎಂಬ ಮಾತು ಕೇಳಿ ಬರುತ್ತಿದೆ. ದೊಡ್ಡ ದೊಡ್ಡ ವ್ಯಕ್ತಿಗಳ ಕೈವಾಡ ಇದರಲ್ಲಿ ಇರುವಂತೆ ಕಾಣುತ್ತಿದೆ. ವಿಧಾನಸೌಧದಲ್ಲಿ ಯಾವ ಗೋಡೆಗೆ ತಾಕಿದರೂ ಹಣದ ವ್ಯವಹಾರ ನಡೆಯುತ್ತದೆ. ಕುಲಪತಿ ಪದವಿಯನ್ನು ಈ ಸರ್ಕಾರದಲ್ಲಿ ಮಾರಾಟಕ್ಕೆ ಇಡಲಾಗಿದೆ ಎಂದು ಜನರು ಆಡಿಕೊಳ್ಳುತ್ತಿದ್ದಾರೆ ಎಂದು ಡಿ ಕೆ ಶಿವಕುಮಾರ್ ಆರೋಪಿಸಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts