ಬೆಂಗಳೂರು; ಪ್ರಧಾನ ಅರ್ಚಕರು, ನಿವೃತ್ತ ಐಎಎಸ್ ಅಧಿಕಾರಿ, ಅವರದೇ ಮಾಸಿಕ ಪತ್ರಿಕೆ ಅಂಕಣಕಾರ, ಪತ್ರಕರ್ತರೂ ಸೇರಿದಂತೆ ಒಟ್ಟು 50 ಮಂದಿಯನ್ನು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಮಹಾದೇವ ಪ್ರಕಾಶ್ ಅವರು 2019ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ ಟಿ ರವಿ ಅವರಿಗೆ ಶಿಫಾರಸ್ಸು ಮಾಡಿದ್ದರು.
ಬಂಗಾರಪೇಟೆ ತಾಲೂಕಿನ ಐನೂರು ಹೊಸಹಳ್ಳಿ ಗ್ರಾಮ ಪಂಚಾಯ್ತಿ ಕಾರಮಂಗಲ ಗ್ರಾಮದ ಮೀಸಲಾತಿ ಬದಲಾಯಿಸಲು ಕೋಲಾರ ಜಿಲ್ಲಾಧಿಕಾರಿಗೆ ಬರೆದಿದ್ದ ಪತ್ರ ಚರ್ಚೆಗೀಡಾಗಿರುವ ಬೆನ್ನಲ್ಲೇ ರಾಜ್ಯೋತ್ಸವ ಪ್ರಶಸ್ತಿಗೆ ಮಾಡಿದ್ಸ ಶಿಫಾರಸ್ಸಿನ ಪಟ್ಟಿಯೂ ಮುನ್ನೆಲೆಗೆ ಬಂದಿದೆ.
ಪ್ರಶಸ್ತಿಗಾಗಿ ನಾನು ಎಂದಿಗೂ ಲಾಬಿ ಮಾಡಿಲ್ಲ ಎಂದು ಬರೆದುಕೊಂಡಿದ್ದ ಮಹಾದೇವ ಪ್ರಕಾಶ್ ಅವರು ತಮ್ಮ ಸಂಪಾದಕತ್ವದಲ್ಲಿ ಹೊರತರುತ್ತಿರುವ ಮಾಸಿಕವೊಂದರ ಅಂಕಣಕಾರ ಪತ್ರಕರ್ತ ಎಂ ಕೆ ಭಾಸ್ಕರರಾವ್ ಅವರನ್ನು ಪ್ರಶಸ್ತಿಗೆ ಮಾಡಿದ್ದ ಶಿಫಾರಸ್ಸು ಕೂಡ ‘ಲಾಬಿ’ಯ ಮತ್ತೊಂದು ಮುಖವಾಗಿತ್ತೇ ಎಂಬ ಮಾತು ಕೇಳಿ ಬಂದಿದೆ.
ಲಾಬಿ ಮತ್ತು ಶಿಫಾರಸ್ಸುಗಳನ್ನಾಧರಿಸಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತಿದೆ ಎಂದು ಪ್ರಶಸ್ತಿ ವಂಚಿತರೊಬ್ಬರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಪೀಠ, ಪ್ರಶಸ್ತಿ ಆಯ್ಕೆ ಸಂಬಂಧ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಿ ಆ ಸಮಿತಿ ಮೂಲಕ ಪ್ರಶಸ್ತಿಗೆ ಆಯ್ಕೆ ಮಾಡಬೇಕು ಎಂದು ಹೈಕೋರ್ಟ್ ಸೂಚಿಸಿತ್ತು.
ಅದರಂತೆ ಕಳೆದ ಬಾರಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನೂ ರಚಿಸಿತ್ತು. ಇಂತಹದೊಂದು ಸಮಿತಿ ಇದ್ದರೂ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಮಹಾದೇವ ಪ್ರಕಾಶ್ ಅವರು ಶಿಫಾರಸ್ಸು ಪಟ್ಟಿಯನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವರಿಗೆ ನೀಡುವ ಮೂಲಕ ಆಯ್ಕೆ ಪ್ರಕ್ರಿಯೆಯಲ್ಲಿ ಪ್ರಭಾವ ಬೀರಿದ್ದರೇ ಎಂಬುದೂ ಚರ್ಚೆಗೆ ಗ್ರಾಸವಾಗಿದೆ.
ವಿಶೇಷವೆಂದರೆ 2019ನೇ ಸಾಲಿನಲ್ಲಿ ಶಿಫಾರಸ್ಸು ಮಾಡಿದ್ದವರ ಪೈಕಿ ಪತ್ರಕರ್ತ ಮಲ್ಲಿಕಾರ್ಜುನಯ್ಯ, ಡಾ ಅಂಜಿನಪ್ಪ ಮತ್ತು ನಿವೃತ್ತ ಐಎಎಸ್ ಅಧಿಕಾರಿ ಮುದ್ದುಮೋಹನ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರಕಿತ್ತು. 2019ನೇ ಸಾಲಿನಲ್ಲಿ ಮಹಾದೇವ ಪ್ರಕಾಶ್ ಅವರು ಮಾಡಿದ್ದ ಶಿಫಾರಸ್ಸಿನ ಪಟ್ಟಿ ‘ದಿ ಫೈಲ್’ಗೆ ಲಭ್ಯವಾಗಿದೆ.
ಶಿಫಾರಸ್ಸಿನ ಪಟ್ಟಿಯಲ್ಲಿದ್ದವರ ಹೆಸರು
ಪ್ರಧಾನ ಅರ್ಚಕ ಎಸ್ ಕಾಶಿವಿಶ್ವನಾಥ್ ಶಾಸ್ತ್ರಿ, ಪತ್ರಕರ್ತ ಡಾ ಮೈ ಸಿ ಪಾಟೀಲ್, ದೂರದರ್ಶನ ಕೇಂದ್ರದ ನಿರ್ಮಲಾ ಎಲಿಗಾರ್, ನಿವೃತ್ತ ಐಎಎಸ್ ಅಧಿಕಾರಿ ಕೆ ಅಮರನಾರಾಯಣ, ಸಾಹಿತಿ ವಿಜಯಶ್ರೀ ಸಬರದ, ಮಲ್ಲಿಕಾರ್ಜುನ ಹೆಗ್ಗಳಗಿ, ಪತ್ರಕರ್ತ ಮುಂಜಾನೆ ಸತ್ಯ, ಪತ್ರಕರ್ತ ಸೋಮಸುಂದರ ರೆಡ್ಡಿ, ಡಿವೈಎಸ್ಪಿ ಡಿ ಪಾಲಾಕ್ಷಯ್ಯ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್‌ನ ಡಾ ಎ ವಿ ಸತ್ಯನಾರಾಯಣ, ಹಿರಿಯ ಪತ್ರಿಕೋದ್ಯಮಿ ಗಂಗಹನುಮಯ್ಯ, ದ್ವಾರನಕುಂಟೆ ಪಾತಣ್ಣ, ಸಾರ್ವಜನಿಕ ಸಂಪರ್ಕಾಧಿಕಾರಿ ಎಂ ಸಿದ್ದಲಿಂಗಸ್ವಾಮಿ, ಕವಿ ಡಾ ಬಿ ವಿ ಸತ್ಯನಾರಾಯಣರಾವ್, ಗುರಮ್ಮ ಸಿದ್ದಾರೆಡ್ಡಿ, ಸಂಗಮೇಶ್ ಬಾದವಾಡಗಿ.
ಡಿ ಎನ್ ಲೋಕಪ್ಪ, ತಾ ನಂ ಕುಮಾರಸ್ವಾಮಿ, ಸಂಪಾದಕಿ ಲೀಲಾವತಿ, ರಂಗಭೂಮಿ ಕ್ಷೇತ್ರದ ಬಸವರಾಜ ಬೆಂಗೇರಿ, ಕೆ ಎಂ ಮಹೇಶ್ವರಸ್ವಾಮಿ, ಎಚ್ ಸಿ ಶಿವಬುದ್ದಿ ಬಾಗವತರ್, ಆರೋಗ್ಯ ಕ್ಷೆತ್ರದ ಬಾಲಗಂಗಾಧರ್ ತಿಲಕ್, ಶಂಕರ್‌ಭಟ್, ಕ್ರೀಡಾಪಟು ಬಂಗಾರಮ್ಮ, ಹಿರಿಯ ಕಲಾವಿದ ಶಂಕರ್ ಭಟ್, ವೈದ್ಯಕೀಯ ಕ್ಷೇತ್ರ ಡಾ ರಮೇಶ್ ಎಸ್ ಮುಧೋಳ್, ಸಾಹಿತಿ ಚಂದ್ರಕಾಂತ ಕರದಳ್ಳಿ, ಡಾ ಸುಧಾಂಶು ಕುಲಕರ್ಣೀ, ಸಂಸ್ಥಾಪನಾ ಅಧ್ಯಕ್ಷ ಪ್ರೊ ಎಂ ರಕ್ಮಾಂಗದನಾಯ್ಡು, ಗಾಂಧಿವಾದಿ ಬಾಬುರಾಜೇಂದ್ರ ಚನ್ನಪ್ಪ, ಆರೋಗ್ಯ ಕ್ಷೇತ್ರದ ಡಾ ಎಚ್ ವಿ ನಟರಾಜ್ ಸೇರಿದಂತೆ ಹಲವರಿಗೆ ಶಿಫಾರಸ್ಸು ಮಾಡಿದ್ದರು ಎಂಬುದು ಪಟ್ಟಿಯಿಂದ ಗೊತ್ತಾಗಿದೆ. ಈ ಪೈಕಿ ಅಮರನಾರಾಯಣ ಅವರಿಗೆ 2020ನೇ ಸಾಲಿನಲ್ಲಿ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ವಿಶೇಷ.
ಪ್ರಶಸ್ತಿಗಾಗಿ ನಾನು ಎಂದಿಗೂ ಲಾಬಿ ಮಾಡಿಲ್ಲ. ಈ ಬಾರಿ ಅಧಿಕಾರದ ಬಲದಿಂದ ಪ್ರಶಸ್ತಿ ಪಡೆದೆ ಎನ್ನುವ ಅಭಿಪ್ರಾಯ ಸಾರ್ವಜನಿಕವಾಗಿ ಮೂಡಬಾರದು. ನಮ್ಮ ನಡೆ ನುಡಿ ಇತರರಿಗೆ ಮಾದರಿಯಾಗಬೇಕೇ ಹೊರತು ಮಾರಕವಾಗಬಾರದು ಎನ್ನುವ ದೃಷ್ಟಿಯಿಂದ ಪ್ರಶಸ್ತಿ ನಿರಾಕರಿಸುವ ನಿರ್ಧಾರ ಮಾಡಿದ್ದೇನೆಂದು ತಿಳಿಸಿದ್ದನ್ನು ಸ್ಮರಿಸಬಹುದು.