ಆರ್‌ಎಸ್‌ಎಸ್‌; ಹಿಂದೂ ಧಾರ್ಮಿಕ ಸಂಸ್ಥೆ ಧರ್ಮಾದಾಯ ದತ್ತಿ ಇಲಾಖೆಗೂ ಸಂಬಂಧಿಸಿಲ್ಲ

ಬೆಂಗಳೂರು; ಹಿಂದುತ್ವವನ್ನು ಬಲವಾಗಿ ಪ್ರತಿಪಾದಿಸುವ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಗೂ ಸಂಬಂಧಿಸಿಲ್ಲ ಎಂಬ ಮಾಹಿತಿ ಇದೀಗ ಹೊರಬಿದ್ದಿದೆ. ಹಾಗೆಯೇ ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರ ಅಡಿಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ನೋಂದಣಿಯಾಗಿಲ್ಲ ಎಂಬ ಅಂಶವೂ ಇದೀಗ ಆರ್‌ಟಿಐನಿಂದ ಬಹಿರಂಗವಾಗಿದೆ.

ಸಾಮಾಜಿಕ ಕಾರ್ಯಕರ್ತ ಎನ್‌ ಹನುಮೇಗೌಡ ಅವರು ಅವರು ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ಧಾರ್ಮಿಕ ದತ್ತಿ ಇಲಾಖೆ ಮತ್ತು ಸಹಕಾರ ಇಲಾಖೆ ನೀಡಿರುವ ಉತ್ತರವು ವಿವಿಧ ಆಯಾಮಗಳಲ್ಲಿ ಚರ್ಚೆಗೆ ಮುನ್ನುಡಿ ಬರೆದಿವೆ.

ರೆಡ್ಡಿ ಸೋದರರ ತವರು ಜಿಲ್ಲೆ ಬಳ್ಳಾರಿ, ಬೆಳಗಾವಿ, ಚಿತ್ರದುರ್ಗ ಸೇರಿದಂತೆ ರಾಜ್ಯದ ಯಾವ ಜಿಲ್ಲೆಗಳಲ್ಲೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್‌) ಹೆಸರಿನಲ್ಲಿ ಯಾವುದೇ ಸಂಘ, ಸಂಸ್ಥೆಗಳು ನೋಂದಣಿಯಾಗಿಲ್ಲ ಎಂದು 2020ರ ಅಕ್ಟೋಬರ್‌ 20 ಮತ್ತು 23ರಂದು ಜಿಲ್ಲಾ ಸಹಕಾರ ಸಂಘಗಳ ನೋಂದಣಾಧಿಕಾರಿಗಳು ಉತ್ತರ ಒದಗಿಸಿದ್ದಾರೆ. ಇದರ ಪ್ರತಿಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೋಂದಣಿ, ವಾರ್ಷಿಕ ಲೆಕ್ಕಪತ್ರಗಳು ಸರ್ಕಾರಕ್ಕೆ ಸಲ್ಲಿಕೆಯಾಗುತ್ತಿದೆಯೇ ಅಥವಾ ಇಲ್ಲವೇ ಎಂಬುದು ಸೇರಿದಂತೆ ಅಧಿವೇಶನದಲ್ಲಿ ವಿಧಾನ ಪರಿಷತ್‌ ಸದಸ್ಯ ಬಿ ಕೆ ಹರಿಪ್ರಸಾದ್‌ ಹಲವು ಪ್ರಶ್ನೆಗಳನ್ನು ಎತ್ತಿದ್ದರ ಬೆನ್ನಲ್ಲೇ ಜಿಲ್ಲಾ ಸಹಕಾರ ಸಂಘಗಳ ನೋಂದಣಾಧಿಕಾರಿಗಳು ಮತ್ತು ಧಾರ್ಮಿಕ ದತ್ತಿ ಇಲಾಖೆ ನೀಡಿರುವ ಉತ್ತರವು ಮುನ್ನೆಲೆಗೆ ಬಂದಿದೆ.

ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಹಿನ್ನೆಲೆಯಲ್ಲಿ ಸಂಸ್ಕಾರ ಕೊಡುವ ಕಾರ್ಯಕ್ಕೆ ಸಹಕಾರಿ ಇಲಾಖೆಯ ನೋಂದಣಿ ಅವಶ್ಯಕತೆ ಇಲ್ಲ ಎಂದು ಸಹಕಾರ ಇಲಾಖೆ ಹೇಳುತ್ತಿದೆ. ಆದರೆ ಧಾರ್ಮಿಕ ಚಟುವಟಿಕೆಗಳನ್ನೂ ಈ ಸಂಘ ನಡೆಸುತ್ತಿರುವ ಹಿನ್ನೆಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆಯಲ್ಲಿ ಸಂಘವನ್ನು ಅದರ ವ್ಯಾಪ್ತಿಗೆ ಒಳಪಡಿಸಬಹುದಿತ್ತು. ಆದರೆ ಆರ್‌ಎಸ್ಎಸ್‌ ಧಾರ್ಮಿಕ ದತ್ತಿ ಇಲಾಖೆಗೆ ಸಂಬಂಧಿಸಿಲ್ಲ ಎಂದು 2020ರ ಅಕ್ಟೋಬರ್‌ 22ರಂದು ಉತ್ತರಿಸಿದೆ.

ಹದಿನೆಂಟು ವರ್ಷಕ್ಕಿಂತ ಮೇಲ್ಪಟ್ಟ ಸಂಘಟಿತವಾದ ಯಾವುದೇ ಏಳು ಅಥವಾ ಹೆಚ್ಚಿಗೆ ವ್ಯಕ್ತಿಗಳು ಸಂಘದ ಸಂಸ್ಥಾಪನಾ ಪತ್ರದಲ್ಲಿ ತಮ್ಮ ಹೆಸರುಗಳನ್ನು ಬರೆಯುವ ಮೂಲಕ ಮತ್ತು ಇತರೇ ರೀತಿಯಲ್ಲಿ ನೋಂದಣಿಗೆ ಸಂಬಂಧಿಸಿದಂತೆ ಅಧಿನಿಯಮ ಮತ್ತು ಅದರಡಿಯಲ್ಲಿ ಮಾಡಿದ ನಿಯಮಗಳ ಪಾಲನೆ ಮಾಡುವ ಮೂಲಕ ಕರ್ನಾಟಕ ಸಂಘಗಳ ನೋಂದಣಿ ಅಧಿನಿಯಮ, 1960 ಅಧಿನಿಯಮದಡಿಯಲ್ಲಿ ಸಂಘವನ್ನು ರಚಿಸಬಹುದು.

ಈ ಅಧಿನಿಯಮದಡಿಯಲ್ಲಿ ಶಿಕ್ಷಣ, ವಿಜ್ಞಾನ ಸಾಹಿತ್ಯ ಅಧವಾ ಲಲಿತ ಕಲೆಗಳ ವೃದ್ಧಿ ಮತ್ತು ಕ್ರೀಡೆಗಳ ಬೆಳವಣಿಗೆ, ವಾಣಿಜ್ಯ ಅಥವಾ ಕೈಗಾರಿಕೆ ಅಥವಾ ಇತರೆ ಯಾವುದೇ ಉಪಯುಕ್ತ ಬೋಧನೆ ಮತ್ತು ಜ್ಞಾನದ ಪ್ರಸಾರ, ರಾಜಕೀಯ ಶಿಕ್ಷಣದ ಪ್ರಸಾರ, ಸದಸ್ಯರ ಉಪಯೋಗಕ್ಕೆ ಅಥವಾ ಸಾರ್ವಜನಿಕರಿಗೆ ತೆರೆದಿರುವಂಥ ಗ್ರಂಥಾಲಯ ಅಥವಾ ಓದುವ ಸ್ಥಳಗಳ ಅಥವಾ ಸಾರ್ವಜನಿಕ ವಸ್ತು ಸಂಗ್ರಹಾಲಯ ಮತ್ತು ಚಿತ್ರಕಲೆ ಮತ್ತು ಇತರ ಕಲಾ ಕೆಲಸಗಳ ಸ್ಥಾಪನೆ ಅಥವಾ ನಿರ್ವಹಣೆ ಉದ್ದೇಶಗಳಿಗಾಗಿ ಸಂಘ, ಸಂಸ್ಥೆಗಳನ್ನು ಸ್ಥಾಪಿಸಬಹುದು.

ಹಾಗೆಯೇ ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ, 1960 ರ ಅಡಿಯಲ್ಲಿ ನೋಂದಾವಣೆ ಮಾಡಿಸಬೇಕು. ಆದರೆ ಆರ್‌ಎಸ್‌ಎಸ್‌ ಈವರೆವಿಗೂ ಈ ಕಾಯ್ದೆ ಅಡಿಯಲ್ಲಿ ನೋಂದಣಿ ಮಾಡಿಸದಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

‘ಹಿಂದುತ್ವ ಪ್ರತಿಪಾದಿಸುವ ಮತ್ತು ಹಿಂದೂ ಆಚಾರ ವಿಚಾರ, ಪರಂಪರೆಗಳನ್ನು ಸಮರ್ಥಿಸಿಕೊಂಡು ಅದನ್ನು ಉಳಿಸಿ ಬೆಳೆಸುವ ಪ್ರಚಾರ ಮಾಡುತ್ತಿರುವ ಆರ್‌ಎಸ್‌ಎಸ್‌ ಧಾರ್ಮಿಕ ದತ್ತಿ ಇಲಾಖೆಯಲ್ಲಿ ನೋಂದಾಯಿಸಿಕೊಂಡು ಅಥವಾ ಸಂವಿಧಾನದ ಚೌಕಟ್ಟಿನೊಳಗೆ ಪಾರದರ್ಶಕ ಪಾಲಿಸದೆ ಸರ್ಕಾರವನ್ನು ವಂಚಿಸುತ್ತಿದೆ’.

ಎನ್‌ ಹನುಮೇಗೌಡ, ಸಾಮಾಜಿಕ ಕಾರ್ಯಕರ್ತ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿರುದ್ಧ ಸರ್ಕಾರಕ್ಕೆ ದೂರುಗಳು ಬಂದಿವೆಯೇ?, ಸಂಘ ನೋಂದಣಿಯಾಗಿದೆಯೇ? ಸದಸ್ಯತ್ವದ ಪಟ್ಟಿ ಸರ್ಕಾರಕ್ಕೆ ಸಲ್ಲಿಸಿ ಸಂವಿಧಾನಬದ್ಧವಾಗಿ ಪ್ರತಿ 3 ವರ್ಷಗಳಿಗೊಮ್ಮೆ ಸಂಘದ ಚುನಾವಣೆ ನಡೆಯುತ್ತಿದೆಯೇ ಮತ್ತು ವಾರ್ಷಿಕ ಲೆಕ್ಕಪತ್ರ ಸರ್ಕಾರಕ್ಕೆ ಸಲ್ಲಿಕೆಯಾಗಿದೆಯೇ, ಸದರಿ ಸಂಘಟನೆಯು ರಾಜ್ಯದಲ್ಲಿ ಸ್ವಂತ ಅಥವಾ ಬಾಡಿಗೆ ಕಚೇರಿ ಹೊಂದಿದೆಯೇ, ವಿಳಾಸವೇ ಇಲ್ಲದ ನೋಂದಣಿಯಾಗದ ಸದಸ್ಯತ್ವ ಪಟ್ಟಿ ಸಲ್ಲಿಸದ ಸಂವಿಧಾನಬದ್ಧವಾಗಿ ಚುನಾವಣೆ ನಡೆಸದ ಸಂಘಟನೆಯ ಆದಾಯ, ಖರ್ಚು ವೆಚ್ಚಗಳ ಬಗ್ಗೆ ಸರ್ಕಾರಕ್ಕೆ ಉತ್ತರದಾಯಿತ್ವ ಸಲ್ಲಿಸದ ಸಂಘಟನೆಗಳು ಸರ್ಕಾರಕ್ಕೆ ಅರ್ಥಾತ್‌ ಸಮಾಜಕ್ಕೆ ವಂಚಿಸಿದಂತಿದ್ದು ಸಮಾಜದ ಹಿತ ಕಾಪಾಡಬಲ್ಲುದೆ ಎಂಬ ಪ್ರಶ್ನೆಗಳನ್ನು ಹರಿಪ್ರಸಾದ್‌ ಅವರು ಕೇಳಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts