ಐಎಎಸ್‌; ಸಿಎಂ ಜಂಟಿ ಕಾರ್ಯದರ್ಶಿ, ಜಾರಕಿಹೊಳಿ ಭಾವ, ಸಚಿವರ ಆಪ್ತ ಕಾರ್ಯದರ್ಶಿಗೆ ಶಿಫಾರಸ್ಸು

ಬೆಂಗಳೂರು; ಕೆಎಎಸ್ ವೃಂದದಲ್ಲದ ಅಧಿಕಾರಿಗಳಿಗೆ (ನಾನ್ ಕೆಎಎಸ್‌) ಐಎಎಸ್‌ ಹುದ್ದೆಗೆ ಬಡ್ತಿ ನೀಡುವ ಸಂಬಂಧ ರಾಜ್ಯ ಸರ್ಕಾರವು ಕೇಂದ್ರಕ್ಕೆ ಕಳುಹಿಸಿರುವ ಪಟ್ಟಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿಶೇಷ ಕರ್ತವ್ಯಾಧಿಕಾರಿ ಎ ಲೋಕೇಶ್‌, ಜಾರಕಿಹೊಳಿ ಕುಟುಂಬ ಸದಸ್ಯ ಬೆಳಗಾವಿ ವಿಭಾಗದ ಅಬಕಾರಿ ಜಂಟಿ ಆಯುಕ್ತ ಡಾ ವೈ ಮಂಜುನಾಥ್‌, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಆಪ್ತ ಕಾರ್ಯದರ್ಶಿ ಅನಿಲ್‌ಕುಮಾರ್‌ ಸೇರಿದಂತೆ ಒಟ್ಟು 14 ಮಂದಿ ಅಧಿಕಾರಿಗಳ ಹೆಸರು ಇದೆ.

ಕೆಎಎಸ್‌ ವೃಂದದವರಲ್ಲದ ಸಾರಿಗೆ, ಅಬಕಾರಿ, ಲೆಕ್ಕಪತ್ರ, ಪಂಚಾಯತ್ ರಾಜ್, ಲೋಕೋಪಯೋಗಿ ಇಲಾಖೆಯಲ್ಲಿ ಸೇವಾ ಹಿರಿತನ ಹೊಂದಿರುವ ಹಾಗೂ ಐಎಎಸ್‌ಗೆ ಬಡ್ತಿ ಪಡೆಯುವ ಅರ್ಹತೆ ಇದ್ದ ಅಧಿಕಾರಿಗಳ ಪಟ್ಟಿಯನ್ನು 2020ರ ಅಕ್ಟೋಬರ್‌ 17ರಂದು ಕೇಂದ್ರ ಲೋಕಸೇವಾ ಆಯೋಗಕ್ಕೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್‌ ರವಾನಿಸಿದ್ದಾರೆ. ಈ ಪಟ್ಟಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಐಎಎಸ್‌ ವೃಂದದಲ್ಲಿ ಒಟ್ಟು 3 ಹುದ್ದೆಗಳಿಗೆ 14 ಮಂದಿ ಹೆಸರುಗಳನ್ನೊಳಗೊಂಡ ಪಟ್ಟಿಯನ್ನು ರವಾನಿಸಲಾಗಿದೆ ಎಂದು ಗೊತ್ತಾಗಿದೆ. 14 ಮಂದಿಯ ಪೈಕಿ ಬಹುಪಾಲು ಅಧಿಕಾರಿಗಳು ರಾಜಕೀಯವಾಗಿ ಪ್ರಭಾವಿಗಳು ಎನ್ನಲಾಗಿದೆ. ಆಯ್ಕೆ ಸಮಿತಿಯು ನವೆಂಬರ್‌ 3ರಂದು ಸಂದರ್ಶನ ನಡೆಸಲಿದೆ ಎಂದು ತಿಳಿದು ಬಂದಿದೆ.

ಪಟ್ಟಿಯಲ್ಲಿರುವ ಹೆಸರುಗಳಿವು

ಡಾ ವಿಜಯಪ್ರಕಾಶ್‌ (ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ)
ಅನಿಲ್‌ಕುಮಾರ್‌ (ಕಾರ್ಯದರ್ಶಿ, ಜಲಸಂಪನ್ಮೂಲ ಇಲಾಖೆ)
ಡಾ ಎನ್‌ ಶ್ರೀನಿವಾಸ್‌ ( ಜಂಟಿ ನಿರ್ದೇಶಕ, ಆಹಾರ ನಾಗರಿಕ ಗ್ರಾಹಕ ವ್ಯವಹಾರಗಳ ಇಲಾಖೆ)
ಟಿ ವೇಣುಗೋಪಾಲ್‌ ರೆಡ್ಡಿ (ಜಂಟಿ ನಿರ್ದೇಶಕರು, ರಾಜ್ಯ ಲೆಕ್ಕಪತ್ರ ಇಲಾಖೆ)
ಪಿ ಕುಮಾರ್‌ (ರಿಜಿಸ್ಟ್ರಾರ್‌, ಬೆಂಗಳೂರು ವಿ ವಿ)
ಸಿ ಪಿ ನಾರಾಯಣಸ್ವಾಮಿ (ಹೆಚ್ಚುವರಿ ಕಮಿಷನರ್‌, ಸಾರಿಗೆ ಇಲಾಖೆ)
ವಿ ಗೋವಿಂದರಾಜ್‌ (ಮುಖ್ಯ ಇಂಜಿನಿಯರ್‌, ರಾಷ್ಟ್ರೀಯ ಹೆದ್ದಾರಿ)
ದೀಪಕ್‌ ದೊರೈವರ್‌ (ನಿರ್ದೇಶಕರು, ರಾಜ್ಯ ಲೆಕ್ಕಪತ್ರ ಇಲಾಖೆ)
ಕೆ ಎನ್‌ ಗಂಗಾಧರ್‌ (ಜಂಟಿ ನಿಯಂತ್ರಕರು, ರಾಜ್ಯ ಲೆಕ್ಕಪತ್ರ ಇಲಾಖೆ)
ಡಾ ಎಂ ಆರ್‌ ಏಕಾಂತಪ್ಪ (ನಿರ್ದೇಶಕರು, ಪಂ.ರಾಜ್‌)
ಜೆ ಜ್ಞಾನೇಂದ್ರಕುಮಾರ್‌ (ಹೆಚ್ಚುವರಿ ಕಮಿಷನರ್‌, ಸಾರಿಗೆ ಇಲಾಖೆ)
ಆರ್‌ ರಮೇಶ್‌ (ನಿರ್ದೇಶಕರು ತಾಂತ್ರಿಕ ಕೋಶ,ವಾಣಿಜ್ಯ ಕೈಗಾರಿಕೆ)

ಈ ಪಟ್ಟಿಯಲ್ಲಿರುವ ಅಧಿಕಾರಿಗಳ ಪೈಕಿ ಬಹುತೇಕರು ಸಚಿವರುಗಳಿಗೆ ಆಪ್ತ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದವರು. ಅನಿಲ್‌ಕುಮಾರ್‌ ಅವರು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಆಪ್ತ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿಂದೆ ಸಚಿವರಾಗಿದ್ದ ಸೊಗಡು ಶಿವಣ್ಣ ಅವರಿಗೆ ಕೆ ಎನ್‌ ಗಂಗಾಧರ್‌ ಅವರು ಆಪ್ತ ಕಾರ್ಯದರ್ಶಿಯಾಗಿದ್ದರು. ಅದೇ ರೀತಿ ಈ ಹಿಂದೆ ಸಚಿವರಾಗಿದ್ದ ಬಾಲಚಂದ್ರ ಜಾರಕಿಹೊಳ, ಸಿ ಎಸ್‌ ಪುಟ್ಟರಾಜು ಮತ್ತು ಆರ್‌ ಅಶೋಕ್‌ ಅವರು ಆರೋಗ್ಯ ಸಚಿವರಾಗಿದ್ದ ಅವಧಿಯಲ್ಲೇ ಪಿ ಕುಮಾರ್‌ ಅವರು ಆಪ್ತ ಕಾರ್ಯದರ್ಶಿಯಾಗಿದ್ದರು. ಜಿ ಜ್ಞಾನೇಂದ್ರ ಕುಮಾರ್‌ ಅವರು ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಹತ್ತಿರದ ಸಂಬಂಧಿಯಾಗಿದ್ದಾರೆ.

3 ವರ್ಷಗಳಿಂದಲೂ ಡಾ ವೈ ಮಂಜುನಾಥ್‌ಗೆ ಶಿಫಾರಸ್ಸು

ಅಬಕಾರಿ ಜಂಟಿ ಆಯುಕ್ತ ಡಾ ವೈ ಮಂಜುನಾಥ್‌, ಹಾಲಿ ಜಲಸಂಪನ್ಮೂಲ ಸಚಿವ ರಮೇಶ ಕಿಹೊಳಿ, ಕಾಂಗ್ರೆಸ್ ಶಾಸಕ ಸತೀಶ ಜಾರಕಿಹೊಳಿ, ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಭಾವ. ಇವರನ್ನು ಐಎಎಸ್‌ ಹುದ್ದೆಗೆ ಬಡ್ತಿ ನೀಡಲು 2017ರಲ್ಲೇ ರಾಜ್ಯ ಸರ್ಕಾರ ಶಿಫಾರಸ್ಸು ಮಾಡಿತ್ತು.

ಅರ್ಹತೆ ಇರುವವರನ್ನು ಕೈಬಿಟ್ಟು ಕಳಂಕಿತರು, ಪ್ರಭಾವಿಗಳ ಹೆಸರನ್ನು 2017ರಲ್ಲೇ ಶಿಫಾರಸು ಮಾಡಿದ್ದಕ್ಕೆ ಅಧಿಕಾರಿಗಳ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಈಗ ಕಳಿಸಿರುವ 14 ಅಧಿಕಾರಿಗಳ ಪಟ್ಟಿಯಲ್ಲಿ ಡಾ ವೈ ಮಂಜುನಾಥ್‌ ಅವರ ಹೆಸರು ಕೂಡ ಇರುವುದು ವಿಶೇಷ.

ಮೈಸೂರು ಜಿಲ್ಲೆಯ ಅಬಕಾರಿ ಅಧೀಕ್ಷಕರಾಗಿದ್ದ ಮಂಜುನಾಥ್‌ (ಸದ್ಯ ಬೆಳಗಾವಿ ವಿಭಾಗದ ಜಂಟಿ ಆಯುಕ್ತ) ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು 2012ರಲ್ಲಿ ದಾಳಿ ನಡೆಸಿದ್ದರು. ಆಗ ಅವರ ಕಚೇರಿಯಲ್ಲಿ 1.55 ಲಕ್ಷ ಹಾಗೂ ಇತರೆ ಸಿಬ್ಬಂದಿ ಬಳಿ ಇದ್ದ ಹಣ ಸೇರಿ ಒಟ್ಟು 4.19 ಲಕ್ಷ ನಗದನ್ನು ವಶಪಡಿಸಿಕೊಂಡಿದ್ದರು. ಈ ಸಂಬಂಧ ಎಂಟು ಜನರ ಮೇಲೆ ಎಫ್‌ಐಆರ್‌ ದಾಖಲಾಗಿತ್ತು. ಅಲ್ಲದೆ ಇದೇ ಪ್ರಕರಣದಲ್ಲಿ ಮಂಜುನಾಥ್ ಜೈಲುವಾಸ ಅನುಭವಿಸಿದ್ದನ್ನು ಸ್ಮರಿಸಬಹುದು.

ಹಾಗೆಯೇ ಲೋಕಾಯುಕ್ತ ಪೊಲೀಸರು, ಮಂಜುನಾಥ್‌ ಆದಾಯ ಮೀರಿ ಆಸ್ತಿ ಗಳಿಸಿರುವುದನ್ನು ಪತ್ತೆ ಹಚ್ಚಿದ್ದರು. ಎಂಟು ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ವಿಚಾರಣೆಗೆ ಗುರಿಪಡಿಸಲು ಮೈಸೂರು ಲೋಕಾಯುಕ್ತ ಎಸ್.ಪಿ ಸರ್ಕಾರಕ್ಕೆ ಪತ್ರ ಬರೆದಿದ್ದರು. ಇವರಲ್ಲಿ ಏಳು ಜನರನ್ನು ವಿಚಾರಣೆಗೆ ಗುರಿಪಡಿಸಲು ಅನುಮತಿ ನೀಡಲಾಗಿತ್ತು. ಇವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿತ್ತು.

ಇನ್ನು, ಮಂಜುನಾಥ್‌ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ವಿಚಾರಣೆ ಗುರಿಪಡಿಸಲು ಅನುಮತಿ ನೀಡುವಂತೆ 2016ರಿಂದ ಸರ್ಕಾರಕ್ಕೆ ಹಲವು ಬಾರಿ ಪ್ರಸ್ತಾವನೆ ಕಳುಹಿಸಲಾಗಿತ್ತು ಎಂದು ಲೋಕಾಯುಕ್ತ ಕಚೇರಿ ವಿಶ್ವಸನೀಯ ಮೂಲಗಳು ತಿಳಿಸಿವೆ.

the fil favicon

SUPPORT THE FILE

Latest News

Related Posts