ಕೋವಿಡ್‌-19; ಮುಖ್ಯಮಂತ್ರಿ ಸೇರಿ 23 ಜಿಲ್ಲೆಗಳ ಶಾಸಕರು ಅನುದಾನ ಪ್ರಸ್ತಾವನೆಯನ್ನೇ ಸಲ್ಲಿಸಿಲ್ಲ

ಬೆಂಗಳೂರು; ಕೋವಿಡ್‌–19 ವೈರಾಣು ನಿಯಂತ್ರಿಸಲು ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಅನುದಾನ ಬಳಕೆ ಮಾಡಿಕೊಳ್ಳುವ ಸಂಬಂಧ ತೀರ್ಮಾನ ಪ್ರಕಟಿಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ಸಂಬಂಧ ಶಿವಮೊಗ್ಗ ಜಿಲ್ಲಾಧಿಕಾರಿಗೆ ಯಾವ ಪ್ರಸ್ತಾವನೆಯನ್ನೂ ಸಲ್ಲಿಸಿಲ್ಲ.

ಹಾಗೆಯೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಕಾನೂನು ಸಚಿವ ಮಾಧುಸ್ವಾಮಿ, ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್‌ ಈಶ್ವರಪ್ಪ , ರಮೇಶ್‌ ಜಾರಕಿಹೊಳಿ ಸೇರಿದಂತೆ ಸಚಿವರು ಪ್ರತಿನಿಧಿಸಿರುವ ಕ್ಷೇತ್ರಗಳೂ ಸೇರಿದಂತೆ ಒಟ್ಟು 23 ಜಿಲ್ಲೆಗಳ ಶಾಸಕರು ಆಯಾ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆಯನ್ನೇ ಸಲ್ಲಿಸದಿರುವುದು ಬಹಿರಂಗವಾಗಿದೆ.

ಆತಂಕಕಾರಿ ಕೋವಿಡ್‌–19 ವೈರಾಣು ನಿಯಂತ್ರಿಸಲು ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯ ಅನುದಾನ ಬಳಕೆ ಮಾಡಿಕೊಳ್ಳಲು ರಾಜ್ಯ ಸರ್ಕಾರ ತೀರ್ಮಾನಿಸಿತ್ತು. ಈ ತೀರ್ಮಾನ ಹೊರಬಿದ್ದ 5 ತಿಂಗಳ ನಂತರ (2020ರ ಸೆ.29ರ ಅಂತ್ಯಕ್ಕೆ) ಬೆರಳಣಿಕೆಯಷ್ಟು ಶಾಸಕರು ಮಾತ್ರ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಈ ಕುರಿತು ವಿಧಾನಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ ಅವರು ಕೇಳಿದ್ದ ಪ್ರಶ್ನೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನೀಡಿರುವ ಉತ್ತರವು, ಶಾಸಕರ ನಿರಾಸಕ್ತಿಯನ್ನು ಬಹಿರಂಗಪಡಿಸಿದೆ.

ಪ್ರಸ್ತಾವನೆ ಸಲ್ಲಿಸದ ಜಿಲ್ಲೆಗಳಿವು

ಬೀದರ್‌, ಚಿತ್ರದುರ್ಗ, ಕಲ್ಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಬೆಂಗಳೂರು ಗ್ರಾಮಾಂತರ, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಧಾರವಾಡ, ಬಾಗಲಕೋಟೆ, ಉತ್ತರ ಕನ್ನಡ, ಗದಗ್‌ ಮತ್ತು ಬೆಳಗಾವಿ ಜಿಲ್ಲೆಯ ಯಾವೊಬ್ಬ ಶಾಸಕರು ಪ್ರಸ್ತಾವನೆಯನ್ನು ಸಲ್ಲಿಸಿಲ್ಲ ಎಂಬುದು ಯಡಿಯೂರಪ್ಪ ಅವರು ನೀಡಿರುವ ಉತ್ತರದಿಂದ ಗೊತ್ತಾಗಿದೆ.

ಬಳ್ಳಾರಿ ನಗರ ಶಾಸಕ ಜಿ ಸೋಮಶೇಖರ ರೆಡ್ಡಿ ಅವರು 2020-21ನೇ ಸಾಲಿನ ಕ್ಷೇತ್ರ ವ್ಯಾಪ್ತಿಯ ನಿಧಿಯನ್ನು ಕೋವಿಡ್‌-19 ಪರಿಹಾರ ನಿಧಿಗೆ ದೇಣಿಗೆ ನೀಡಲು ಒಪ್ಪಿದ್ದರು. ಆದರೆ ಆರ್ಥಿಕ ಇಲಾಖೆಯ ಹಿಂಬರಹದಂತೆ ಅದನ್ನು ತಡೆಹಿಡಿಯಲಾಗಿದೆ. ಅದೇ ರೀತಿ ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಅವರು 50.00 ಲಕ್ಷ ರು. ಅನುದಾನ ಬಳಕೆ ಮಾಡಲು ಪ್ರಸ್ತಾವನೆ ಸಲ್ಲಿಸಿದ್ದರೆ, ಬೆಂಗಳೂರು ನಗರ ಜಿಲ್ಲೆಯ ಜಯನಗರ ಕ್ಷೇತ್ರದ ಶಾಸಕಿ ಸೌಮ್ಯ ರೆಡ್ಡಿ ಪ್ರಸ್ತಾವನೆ ಸಲ್ಲಿಸಿದ್ದರು ಎಂಬುದು ತಿಳಿದು ಬಂದಿದೆ.

ಹಾಗೆಯೇ ಹಾವೇರಿ ಜಿಲ್ಲೆಯ ಸಿ ಎಂ ಉದಾಸಿ (27.71 ಲಕ್ಷ) ಮತ್ತು ವಿಧಾನಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ (46.65 ಲಕ್ಷ)ಮ ವಿಜಯಪುರದ ಸುನೀಲ್‌ಗೌಡ (98.99 ಲಕ್ಷ), ಹಾಸನದ ಎಂ ಎ ಗೋಪಾಲಸ್ವಾಮಿ (19.50 ಲಕ್ಷ) ರು.ಗಳನ್ನು ಬಿಡುಗಡೆ ಮಾಡಿರುವುದು ಗೊತ್ತಾಗಿದೆ.

ಶಾಸಕರ ಕ್ಷೇತ್ರಾಭಿವೃದ್ಧಿ ಯೋಜನೆಯ ಪರಿಷ್ಕತ ಮಾರ್ಗಸೂಚಿ ಅನ್ವಯ ಪ್ರಕೃತಿ ವಿಕೋಪದಡಿ ಶಾಸಕರ ಸ್ಥಳೀಯ ಕ್ವೇತ್ರಾಭಿವೃದ್ಧಿ ಅನುದಾನ ಬಳಕೆ ಮಾಡಿಕೊಳ್ಳಲು ಅವಕಾಶವಿರುವುದರಿಂದ ಕೊರೊನಾ ವೈರಸ್‌ ತಡೆಯಲು 2020–21ನೇ ಸಾಲಿನಲ್ಲಿ ಮಾತ್ರ ಈ ಅನುದಾನ ಬಳಸಲು ಅನುಮತಿ ನೀಡಿ ಸರ್ಕಾರ ಆದೇಶ ಹೊರಡಿಸಿತ್ತು. ಅಲ್ಲದೆ ಶಾಸಕರು ಬಯಸಿದರೆ ತಮ್ಮ ಅನುದಾನವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಬಹುದು ಎಂದು ಸರ್ಕಾರ ಆದೇಶದಲ್ಲಿ ತಿಳಿಸಿತ್ತು.

ಜಿಲ್ಲಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿರುವ ಶಾಸಕರನ್ನು ಸಂಪರ್ಕಿಸಿ, ಅವರ ಪ್ರಸ್ತಾವನೆಗಳಿಗೆ ತುರ್ತು ಲಭ್ಯವಿರುವ ಪಿ.ಡಿ ಖಾತೆಯ ಹಣದಿಂದ 2 ಕೋಟಿಗೆ ಸೀಮಿತಗೊಳಿಸಿ ಬಳಸಲು ಕ್ರಮ ಕೈಗೊಳ್ಳಬಹುದು ಎಂದು ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಆದೇಶದಲ್ಲಿ ತಿಳಿಸಿದ್ದನ್ನು ಸ್ಮರಿಸಬಹುದು.

2018–19ನೇ ಸಾಲಿನಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಶಾಸಕರಿಗೆ 481.69 ಕೋಟಿ ಬಿಡುಗಡೆ ಆಗಿದೆ. 2019– 20ನೇ 299.67 ಕೋಟಿ ರು. ಇದೆ. ಬಹುತೇಕ ಶಾಸಕರು ಲಭ್ಯವಿರುವ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡದ ಕಾರಣ ಜಿಲ್ಲಾಧಿಕಾರಿಗಳ ಪಿ.ಡಿ ಖಾತೆಯಲ್ಲಿ ಹಣ ಈಗಲೂ ಉಳಿದಿದೆ.

the fil favicon

SUPPORT THE FILE

Latest News

Related Posts