ಬೆಂಗಳೂರು; ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೋಂದಣಿ, ವಾರ್ಷಿಕ ಲೆಕ್ಕಪತ್ರಗಳು ಸರ್ಕಾರಕ್ಕೆ ಸಲ್ಲಿಕೆಯಾಗುತ್ತಿದೆಯೇ ಅಥವಾ ಇಲ್ಲವೇ ಎಂಬುದು ಸೇರಿದಂತೆ ಅಧಿವೇಶನದಲ್ಲಿ ಹಲವು ಪ್ರಶ್ನೆಗಳನ್ನು ಎತ್ತಿದ್ದ ವಿಧಾನಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ಅವರಿಗೆ ಸಹಕಾರ ಇಲಾಖೆ ಸಚಿವ ಎಸ್ ಟಿ ಸೋಮಶೇಖರ್ ಅವರು ತಿಂಗಳಾದರೂ ಉತ್ತರ ನೀಡಿಲ್ಲ.
ಸೆಪ್ಟಂಬರ್‌ನಲ್ಲಿ ನಡೆದಿದ್ದ ವಿಧಾನ ಪರಿಷತ್ ಅಧಿವೇಶನದ ವೇಳೆಯಲ್ಲಿ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕುರಿತು ಕೇಳಿದ್ದ 4 ಪ್ರಶ್ನೆಗಳ ಪೈಕಿ ಒಂದೇ ಒಂದು ಪ್ರಶ್ನೆಗೆ ಉತ್ತರ ನೀಡದಿರುವುದು ತಿಳಿದು ಬಂದಿದೆ.
ಹರಿಪ್ರಸಾದ್ ಕೇಳಿದ್ದ ಪ್ರಶ್ನೆಗಳೇನು?
1. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿರುದ್ಧ ಸರ್ಕಾರಕ್ಕೆ ದೂರುಗಳು ಬಂದಿವೆಯೇ?
2. ರಾಷ್ಟ್ರೀಯ ಸ್ವಯಂ ಸೇವಕ ಸಂಘ ನೋಂದಣಿಯಾಗಿದೆಯೇ? ಸದಸ್ಯತ್ವದ ಪಟ್ಟಿ ಸರ್ಕಾರಕ್ಕೆ ಸಲ್ಲಿಸಿ ಸಂವಿಧಾನಬದ್ಧವಾಗಿ ಪ್ರತಿ 3 ವರ್ಷಗಳಿಗೊಮ್ಮೆ ಸಂಘದ ಚುನಾವಣೆ ನಡೆಯುತ್ತಿದೆಯೇ ಮತ್ತು ವಾರ್ಷಿಕ ಲೆಕ್ಕಪತ್ರ ಸರ್ಕಾರಕ್ಕೆ ಸಲ್ಲಿಕೆಯಾಗಿದೆಯೇ?
3. ಸದರಿ ಸಂಘಟನೆಯು ರಾಜ್ಯದಲ್ಲಿ ಸ್ವಂತ ಅಥವಾ ಬಾಡಿಗೆ ಕಚೇರಿ ಹೊಂದಿದೆಯೇ?
4. ವಿಳಾಸವೇ ಇಲ್ಲದ ನೋಂದಣಿಯಾಗದ ಸದಸ್ಯತ್ವ ಪಟ್ಟಿ ಸಲ್ಲಿಸದ ಸಂವಿಧಾನಬದ್ಧವಾಗಿ ಚುನಾವಣೆ ನಡೆಸದ ಸಂಘಟನೆಯ ಆದಾಯ, ಖರ್ಚು ವೆಚ್ಚಗಳ ಬಗ್ಗೆ ಸರ್ಕಾರಕ್ಕೆ ಉತ್ತರದಾಯಿತ್ವ ಸಲ್ಲಿಸದ ಸಂಘಟನೆಗಳು ಸರ್ಕಾರಕ್ಕೆ ಅರ್ಥಾತ್ ಸಮಾಜಕ್ಕೆ ವಂಚಿಸಿದಂತಿದ್ದು ಸಮಾಜದ ಹಿತ ಕಾಪಾಡಬಲ್ಲುದೆ?
ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಸಂಘ ಪರಿವಾರದ ಮಾತೃಸಂಸ್ಥೆ. ನಾಗಪುರದಲ್ಲಿ ಪ್ರಧಾನ ಕಚೇರಿ ಹೊಂದಿರುವ ಸಂಘವು, ಬೆಂಗಳೂರು ನಗರದ ಚಾಮರಾಜಪೇಟೆಯಲ್ಲಿ ಕೇಶವ ಕೃಪಾದಲ್ಲಿಯೂ ಕಚೇರಿಯನ್ನು ಹೊಂದಿದೆ. ಅಸಲಿಗೆ ಇಲ್ಲಿ ಯಾವುದೇ ಔಪಚಾರಿಕ ಸದಸ್ಯತ್ವವಿಲ್ಲ.
ದೆಹಲಿಯ ಉದಾಸೀನ್ ಆಶ್ರಮದಲ್ಲಿ 2012ರಿಂದಲೇ ಆರ್‌ಎಸ್‌ಎಸ್ ಕೇಂದ್ರ ಕಚೇರಿ ನಿರ್ಮಾಣ ಮಾಡುತ್ತಿದೆ ಎಂದು ಸಂಘ ತನ್ನ ವರದಿಯಲ್ಲಿ ತಿಳಿಸಿತ್ತು. ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ದೆಹಲಿಯಲ್ಲಿ ಕೇಂದ್ರ ಕಚೇರಿ ನಿರ್ಮಿಸಲು ಜನ ಸಾಮಾನ್ಯರ ಜೇಬಿಗೆ ಕೈ ಹಾಕಿತ್ತು ಎಂಬ ಆರೋಪವು ಕೇಳಿ ಬಂದಿತ್ತು. ಅದರಲ್ಲೂ ತುಂಬಾ ಮುಖ್ಯವಾಗಿ ಆರ್‌ಎಸ್‌ಎಸ್ ಸಿದ್ಧಾಂತವನ್ನು ಬೆಂಬಲಿಸುವ ಮಂದಿಯನ್ನು ಸಂಪರ್ಕಿಸಿದ್ದ ಸಂಘದ ನಾಯಕರು, ದೇಣಿಗೆ ಪಡೆಯುವುದರಲ್ಲಿ ನಿರತವಾಗಿತ್ತು ಎಂದು ಹೇಳಲಾಗಿತ್ತು.
ಸಂಘದ ಪ್ರತಿಯೊಂದು ಕೆಲಸಗಳನ್ನು ಸಮಾಜದ ಬೆಂಬಲದಿಂದ ಕೈಗೆತ್ತಿಕೊಳ್ಳಲಾಗುತ್ತಿದೆ. ಅಲ್ಲದೆ ದೇಣಿಗೆಗಳನ್ನು ಚೆಕ್‌ಗಳ ಮೂಲಕ ಪಡೆಯಲಾಗುತ್ತಿದೆ. ಸಂಘದ ಹಿತೈಷಿಗಳು ಕೊಡುಗೆಯಾಗಿ ನೀಡಿದ್ದನ್ನು ಮಾತ್ರ ತೆಗೆದುಕೊಳ್ಳಲಾಗುತ್ತಿದೆ ಎಂದು ಐಎನ್‌ಎಸ್ ಸುದ್ದಿಸಂಸ್ಥೆಗೆ ಆರ್‌ಎಸ್‌ಎಸ್ ಮುಖ್ಯಸ್ಥರು ತಿಳಿಸಿದ್ದನ್ನು ಸ್ಮರಿಸಿಕೊಳ್ಳಬಹುದು.
ಆರ್‌ಎಸ್‌ಎಸ್ ಯಾವುದೇ ನೋಂದಾಯಿತ ಎನ್‌ಜಿಒ ಅಲ್ಲ. ಹಾಗೆಯೇ ಯಾವುದೇ ಲೆಕ್ಕ ಪರಿಶೋಧನೆಗೂ ಒಳಪಡುವುದಿಲ್ಲ. ಅದೇ ರೀತಿ ಆದಾಯ ತೆರಿಗೆ ಕಾಯ್ದೆಯೂ ಅನ್ವಯವಾಗುವುದಿಲ್ಲ. ಆದರೂ ಹಣವನ್ನು ಮಾತ್ರ ಸಂಗ್ರಹಿಸುತ್ತಿದೆ. ಇದಲ್ಲದೆ ವಿದೇಶಿ ಹಣವನ್ನು ಹೇಗೆ ಪಡೆಯುತ್ತದೆ ಎಂಬುದು ಸಹ ಬಹಿರಂಗಗೊಳ್ಳುವುದಿಲ್ಲ ಎಂದು ಐಎನ್‌ಎಸ್ ವರದಿಯಲ್ಲಿ ವಿವರಿಸಲಾಗಿತ್ತು.
ಅದೇ ರೀತಿ ಆರ್ ಎಸ್ ಎಸ್ ಸಂಸ್ಥೆ ಕುರಿತು 2018ರ ಡಿಸೆಂಬರ್‌ನಲ್ಲಿ ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ಅಂಬೇಡ್ಕರ್ ಅನೇಕ ಪ್ರಶ್ನೆಗಳನ್ನು ಎತ್ತಿದ್ದರು. ಸಂಸ್ಥೆಯನ್ನು ನೋಂದಾಯಿಸಿಲ್ಲವೇಕೆ ಮತ್ತು ಆದಾಯ ತೆರಿಗೆ ಏಕೆ ಪಾವತಿಸಿಲ್ಲ ಎಂಬ ಪ್ರಶ್ನೆಗಳನ್ನು ಕೇಳಿದ್ದರು ಎಂದು ಫ್ರೀ ಪ್ರೆಸ್ ಜರ್ನಲ್ ಸಂಸ್ಥೆ ವರದಿ ಮಾಡಿತ್ತು.
ಆರೆಸ್ಸಸ್ ಸಂಘಟನೆಯನ್ನು ಒಂದು ಸೀಕ್ರಟ್ ಸೊಸೈಟಿ ಎಂದು ಹೇಳಿದ್ದ ನೆಹರೂ ಅವರು ಆರೆಸ್ಸಸ್ ಮೂಲಭೂತವಾಗಿ ಸಾರ್ವಜನಿಕ ಮುಖವಾಡವನ್ನು ಹೊಂದಿದ ಒಂದು ಸೀಕ್ರೆಟ್ ಸಂಸ್ಥೆ. ಈ ಆರೆಸ್ಸಸ್ ಸಂಸ್ಥೆಯಲ್ಲಿ ಸದಸ್ಯರಿಲ್ಲ, ನೊಂದಣಿ ಇಲ್ಲ, ಅಸಂಖ್ಯಾತ ದೇಣಿಗೆಯನ್ನು ಪಡೆಯುತ್ತಿದ್ದರೂ ಅಲ್ಲಿ ಲೆಕ್ಕಪತ್ರಗಳಿಲ್ಲ ಎಂದು ಹೇಳಿದ್ದನ್ನು ಸ್ಮರಿಸಿಕೊಳ್ಳಬಹುದು.
ಭಾರತದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ 55 ಸಾವಿರ ಶಾಖೆಗಳಿದ್ದು, 1 ಲಕ್ಷ 70 ಸಾವಿರ ಚಟುವಟಿಕೆಗಳು ನಿತ್ಯ ನಡೆಯುತ್ತಿದೆ ಎನ್ನಲಾಗಿದೆ.