ಬೆಂಗಳೂರು; ಗುಂಡ್ಲುಪೇಟೆ ತಾಲೂಕಿನಲ್ಲಿ ವೀರಾಪುರ ಗ್ರಾಮದ ಕಬ್ಬೇಕಟ್ಟೆ ಶನೇಶ್ವರಸ್ವಾಮಿ ದೇವಸ್ಥಾನ ಆವರಣದಲ್ಲಿ ದಲಿತ ಯುವಕನ ಮೇಲೆ ಹಲ್ಲೆ ನಡೆದಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವವರೆಗೂ ಪೊಲೀಸರು ಎಫ್‌ಐಆರ್ ದಾಖಲಿಸಿಕೊಳ್ಳದೇ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಪಂಗಡಗಳ ಕಲ್ಯಾಣ ಸಮಿತಿ ಅಭಿಪ್ರಾಯಪಟ್ಟಿದೆ.
ಈ ಕುರಿತು ಶಾಸಕ ಎಸ್ ಅಂಗಾರ ಅಧ್ಯಕ್ಷತೆಯ ಸಮಿತಿಯು ವಿಧಾನಸಭೆಗೆ 2020ರ ಸೆ.23ರಂದು ವರದಿ ಮಂಡಿಸಿದೆ.
ದಲಿತ ಯುವಕ ಪ್ರತಾಪ್ ಪರಿಶಿಷ್ಟ ಜಾತಿಯವನು ಎಂದು ಗೊತ್ತಾದ ಮೇಲೆ ಮರಕ್ಕೆ ಕಟ್ಟಿ ಹಾಕಿ ರಕ್ತ ಬರುವಂತೆ ಹೊಡೆದಿರುವುದು, ಪ್ರಥಮ ಚಿಕಿತ್ಸೆ ಕೊಡಿಸುವ ಬದಲು ಪೊಲೀಸರು ಕಾಲಿನಿಂದ ಒದ್ದು ಜೀಪ್ ಹತ್ತಿಸಿದ್ದ ವರ್ತನೆಯನ್ನು ಖಂಡಿಸಿದೆ.
ಈ ಪ್ರಕರಣದಲ್ಲಿ ತಕ್ಷಣವೇ ಎಫ್‌ಐಆರ್ ದಾಖಲಿಸಿಕೊಳ್ಳದೇ ಉದ್ದೇಶಪೂರ್ವಕವಾಗಿ ಸಬ್ ಇನ್ಸ್‌ಪೆಕ್ಟರ್‌ರಿಂದ ಡಿವೈಎಸ್ಪಿವರೆಗಿನ ಹಂತದ ಅಧಿಕಾರಿ, ಸಿಬ್ಬಂದಿ ಕರ್ತವ್ಯ ಲೋಪ ಎಸಗಿದ್ದಾರೆ. ಇವರ ವಿರುದ್ಧ ಕಾನೂನು ಉಲ್ಲಂಘನೆ ಅಡಿಯಲ್ಲಿ ಕಠಿಣ ಕ್ರಮ ಜರುಗಿಸಬೇಕು ಎಂದೂ ಸಮಿತಿ ಶಿಫಾರಸ್ಸು ಮಾಡಿದೆ.
‘ಈ ಪ್ರಕರಣದಲ್ಲಿ ಎಸ್ ಐ ಒಬ್ಬರನ್ನು ಅಮಾನತುಗೊಳಿಸಿ ಉಳಿದವರನ್ನು ಬಿಡುವುದು ಸರಿಯಾದ ಕ್ರಮವಲ್ಲ. ಅಲ್ಲದೆ ವಿಚಾರಣೆ ನಿಧಾನವಾದಷ್ಟು ಪ್ರಕರಣ ಬೇರೆ ರೀತಿಯ ತಿರುವು ಪಡೆಯುವ ಸಾಧ್ಯತೆ ಇರುವುದರಿಂದ ಜಿಲ್ಲಾ ರಕ್ಷಣಾಧಿಕಾರಿಯಿಂದ ವರದಿ ಪಡೆದು ತಪ್ಪಿತಸ್ಥರ ವಿರುದ್ಧ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು,’ ಎಂದು ಸಮಿತಿ ಶಿಫಾರಸ್ಸು ಮಾಡಿದೆ.
ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಅಧಿಕಾರಿಗಳೂಳ, ಜಿಲ್ಲಾಧಿಕಾರಿ, ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ, ಸಮಾಜ ಕಲ್ಯಾಣ ಇಲಾಖೆಯೂ ಸೇರಿದಂತೆ ಇತರೆ ಅಧಿಕಾರಿಗಳು ಸಕಾಲದಲ್ಲಿ ಕ್ರಮ ವಹಿಸಿದ್ದರೆ ಇಂತಹ ಘಟನೆ ನಡೆಯುತ್ತಿರಲಿಲ್ಲ ಎಂದು ಸಮಿತಿ ಅಭಿಪ್ರಾಯಿಸಿರುವುದು ವರದಿಯಿಂದ ಗೊತ್ತಾಗಿದೆ.
‘ಒಬ್ಬ ಮನುಷ್ಯನನ್ನು ಬೆತ್ತಲೆಗೊಳಿಸಿ ಮರಕ್ಕೆ ಕಟ್ಟಿಹಾಕಿ ಹಲ್ಲೆ ಮಾಡುವುದು ಅಮಾನುಷ ಕೃತ್ಯ. ಪ್ರತಾಪನ ಮೇಲೆ ದೌರ್ಜನ್ಯ ಮಾಡಿರುವವರ ಜತೆ ಪೊಲೀಸಿನವರೂ ಸೇರಿಕೊಂಡು ದೌರ್ಜನ್ಯ ಮಾಡಿರುವುದು ಕಾಣಿಸುತ್ತದೆ. ಪ್ರತಾಪ್ ದಲಿತನೆಂದು ಗೊತ್ತಾದ ಮೇಲೆ ಮರಕ್ಕೆ ಕಟ್ಟಿ ಹಾಕಿ ರಕ್ತ ಬರುವಂತೆ ಹೊಡೆದಿದ್ದಾರೆ. ಆತನನ್ನು ಕಾಲಿನಿಂದ ಒದ್ದು ಜೀಪ್ ಹತ್ತಿಸಿದ್ದ ವರ್ತನೆ ಖಂಡನೀಯ,’ ಎಂದು ಸಮಿತಿ ಅಭಿಪ್ರಾಯಿಸಿದೆ.
ಐಎಎಸ್ ಪರೀಕ್ಷೆ ಬರೆಯಲು ಅನುಮತಿ ನೀಡಲಿಲ್ಲ
‘ಮಾನಸಿಕವಾಗಿ ಅಸ್ವಸ್ಥನೆಂದು ನನ್ನನ್ನು ಈ ಘಟನೆಯಲ್ಲಿ ಬಿಂಬಿಸಿ ನನಗೆ ಮಾನಸಿಕ, ದೈಹಿಕವಾಗಿ ಸಾಕಷ್ಟು ಹಿಂಸೆ ನೀಡಿದ್ದಾರೆ. ನಾನು ಹುಚ್ಚನಲ್ಲ. ನಾನು ಒಬ್ಬ ಪದವೀಧರ. ಈ ಹಿಂದೆ ಸರ್ಕಾರದ ಪ್ರಾಧಿಕಾರ ಒಂದರಲ್ಲಿ ಸಹಾಯಕ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದೆ. ಐಎಎಸ್ ಪರೀಕ್ಷೆ ಪಾಸ್ ಮಾಡಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡಬೇಕೆಂಂಬ ಮಹತ್ವಾಕಾಂಕ್ಷೆಯಿಂದ ದೆಹಲಿಯಲ್ಲಿ ಐಎಎಸ್ ಪರೀಕ್ಷೆ ತರಬೇತಿ ಪಡೆದಿದ್ದೇನೆ. ಸ್ವಲ್ಪ ಮಾನಸಿಕ ಒತ್ತಡವಾದರೆ ಸ್ವಲ್ಪ ಡಿಪ್ರೆಷನ್‌ಗೆ ಹೋಗುತ್ತೇನೆ. ಅಷ್ಟು ಬಿಟ್ಟರೆ ನಾನು ಮಾನಸಿಕ ಅಸ್ವಸ್ಥನಲ್ಲ. ಪರಿಶ್ರಮದ ಬಳಲಿಕೆಯಿಂದ ಪರೀಕ್ಷಾ ದಿನವೇ ಮರೆತು ಹೋಗಿತ್ತು. ಜೂನ್ 2ರಂದು ಬೆಳಗ್ಗೆ ಬೈಕ್ ಓಡಿಸಿಕೊಂಡು ಮರಿಮಲ್ಲಪ್ಪ ಶಾಲೆಯಲ್ಲಿ ಪರೀಕ್ಷೆ ಬರೆಯಲು ಹೋಗುವ ವೇಳೆಗೆ ಪರೀಕ್ಷೆ ಆರಂಭವಾಗಿತ್ತು. ನನಗೆ ಪರೀಕ್ಷೆ ಬರೆಯಲು ಅನುಮತಿ ಕೊಡಲಿಲ್ಲ,’ ಎಂದು ದಲಿತ ಯುವಕ ಪ್ರತಾಪ್ ಸಮಿತಿ ಮುಂದೆ ಹೇಳಿಕೆ ನೀಡಿದ್ದರು.
ಹುಚ್ಚನಲ್ಲ ಎಂದರೂ ಬಿಡಲಿಲ್ಲ
ಪರೀಕ್ಷೆ ಬರೆಯಲು ಅನುಮತಿ ಸಿಗದ ಕಾರಣ ಮಾನಸಿಕವಾಗಿ ಬೇಸರವಾಗಿ ಡಿಪ್ರೆಷನ್‌ಗೆ ಹೋಗುವಂತಾಯಿತು. ಬೈಕ್ ಮೇಲೆ ರಾಘವಪುರದ ಕಡೆಗೆ ಹೋಗಲು ತೀರ್ಮಾನಿಸಿ ಹೊರಟೆ. ದಾರಿ ಮಧ್ಯೆಯಲ್ಲಿ ಯಾರೋ ನನ್ನ ಮೇಲೆ ದಾಳಿ ಮಾಡಿ ನನ್ನ ಮೊಬೈಲ್‌ನ್ನು ಕಸಿದುಕೊಂಡು ಚೆನ್ನಾಗಿ ಹೊಡೆದರು. ನನಗೆ ಆಗ ಏನಾಗುತ್ತಿದೆ ಎಂದು ತಿಳಿಯುವ ಸ್ಥಿತಿಯಲ್ಲಿ ಇರಲಿಲ್ಲ. ಕಣ್ಣು ಬಿಟ್ಟಾಗ ದೇವಸ್ಥಾನದ ಬಳಿ ಕುಳಿತಿದ್ದೆ. ತಿನ್ನಲಿಕ್ಕೆ ಏನೂ ಕೊಡಲಿಲ್ಲ. ನೀರು ಕೇಳಿದ್ದಕ್ಕೆ ಕಂಬಕ್ಕೆ ಕಟ್ಟಿ ಹಾಕಿ ಚೆನ್ನಾಗಿ ಹೊಡೆದರು. ನಂತರ ರಸ್ತೆಯಲ್ಲಿ ನನ್ನನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿಸಿ ಪುನಃ ದೇವಸ್ಥಾನಕ್ಕೆ ಕರೆತಂದು 10 ಜನರು ನನ್ನನ್ನು ತುಳಿದು ಹೊಡೆದರು. ಬೆನ್ನು, ತಲೆಗೆ ಏಟು ಕೊಟ್ಟು ದೈಹಿಕವಾಗಿ ಹಲ್ಲೆ ನಡೆಸಿದರು. ಕಲ್ಲುಗಳಿಂದ ಹೊಡೆದರು. ಹುಚ್ಚನಲ್ಲ ಎಂದರೂ ಬಿಡಲಿಲ್ಲ ಎಂದು ಘಟನೆ ಕುರಿತು ಪ್ರತಾಪ್ ಸಮಿತಿಗೆ ವಿವರಿಸಿರುವುದು ವರದಿಯಿಂದ ತಿಳಿದು ಬಂದಿದೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ವೀರಾಪುರ ಗ್ರಾಮದಲ್ಲಿರುವ ಶನೇಶ್ವರ ದೇವಸ್ಥಾನದ ಆವರಣದಲ್ಲಿ ದಲಿತ ಯುವಕ ಪ್ರತಾಪ್ ಎಂಬಾತನ ಮೇಲೆ 2019ರ ಮಾರ್ಚ್ 3ರಂದು ಹಲ್ಲೆ ನಡೆದಿತ್ತು. ಈ ಕುರಿತು ಸಮಿತಿಯು 2019ರ ಜೂನ್ 15ರಂದು ಸ್ಥಳಕ್ಕೆ ಭೇಟಿ ನೀಡಿ ಪ್ರತಾಪನ ಸಂಬಂಧಿಕರು, ಟ್ರಸ್ಟಿಗಳು, ಸ್ಥಳೀಯ ಗ್ರಾಮಸ್ಥರಿಂದ ವಿವರಣೆ ಪಡೆದಿತ್ತು.