ಕೋವಿಡ್‌-19; ದುಬಾರಿ ದರ ವಸೂಲಿ ನಡುವೆಯೂ ಖಾಸಗಿ ಆಸ್ಪತ್ರೆಗಳ ಆದಾಯ ಕುಸಿತ!

ಬೆಂಗಳೂರು; ಕೋವಿಡ್‌-19 ದೃಢಪಟ್ಟ ಸೋಂಕಿತರಿಗೆ ಚಿಕಿತ್ಸೆ ನೀಡಿದ್ದ ಖಾಸಗಿ ಅಸ್ಪತ್ರೆಗಳು ದುಬಾರಿ ದರವನ್ನು ವಸೂಲಿ ಮಾಡಿವೆ ಎಂಬ ಗುರುತರವಾದ ಆರೋಪಗಳ ನಡುವೆಯೇ ಇದೇ ಅವಧಿಯಲ್ಲಿ ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳು ಕೋಟ್ಯಂತರ ಮೊತ್ತದಲ್ಲಿ ನಿವ್ವಳ ನಷ್ಟ ಹೊಂದಿವೆ ಎಂಬ ಅಂಕಿ ಅಂಶಗಳು ಬಹಿರಂಗಗೊಂಡಿವೆ.

ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಪ್ರತಿಷ್ಠಿತ ಎಂಬ ಹೆಗ್ಗಳಿಕೆ ಹೊಂದಿರುವ ಪೋರ್ಟಿಸ್‌ ಮತ್ತು ನಾರಾಯಣ ಹೃದಯಾಲಯ ಆಸ್ಪತ್ರೆಗಳು ನಿವ್ವಳ ನಷ್ಟ ಹೊಂದಿರುವುದು ಗೊತ್ತಾಗಿದೆ. ಫೋರ್ಟಿಸ್ ಹೆಲ್ತ್‌ಕೇರ್‌ 2019ರ ಏಪ್ರಿಲ್-ಜೂನ್‌ನಲ್ಲಿ 1,138.3 ಕೋಟಿ ರೂ. ಗಳಿಂದ 2020 ರ ಏಪ್ರಿಲ್-ಜೂನ್‌ನಲ್ಲಿ 606 ಕೋಟಿ ರೂ. ಗೆ ಕುಸಿದಿದೆ. ಒಟ್ಟು ಆದಾಯ 523.4 ಕೋಟಿ ರು ಅಥವಾ ಶೇ 46.8ರಷ್ಟು ಕುಸಿದಿದೆ. ಕೋವಿಡ್‌ ತ್ರೈಮಾಸಿಕದಲ್ಲಿ 178.9 ಕೋಟಿ ರು. ನಿವ್ವಳ ನಷ್ಟ ಹೊಂದಿದೆ ಎಂದು ಇಂಡಿಯಾ ಸ್ಪೆಂಡ್‌ ವರದಿ ಮಾಡಿದೆ.

ಅದೇ ರೀತಿ ನಾರಾಯಣ ಹೃದಯಾಲಯವು ತನ್ನ ಒಟ್ಟು ಆದಾಯದಲ್ಲಿ 383.9 ಕೋಟಿ ರು.ಗೆ ಕುಸಿದಿದೆ. (777.4 ಕೋಟಿಯಿಂದ 393.5 ಕೋಟಿ ರೂ.ಗೆ) ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ 30.3ಕೋಟಿ ರು.ನಿವ್ವಳ ಲಾಭಕ್ಕೆ ಹೋಲಿಸಿದರೆ ಕೋವಿಡ್‌ ತ್ರೈಮಾಸಿಕದಲ್ಲಿ 119.7 ಕೋಟಿ ರು.ಗೆ ಕುಸಿದಿದೆ ಎಂದು ತಿಳಿದು ಬಂದಿದೆ.

ಕೋವಿಡ್‌-19 ಸಂಕೀರ್ಣ ಸಂದರ್ಭ. ನಿಯಮಿತವಾಗಿ ಪರೀಕ್ಷೆ, ತಪಾಸಣೆ, ಚಿಕಿತ್ಸೆಗೆಂದು ಹೋಗುತ್ತಿದ್ದವರು ಆಸ್ಪತ್ರೆಗಳಿಂದ ಹಲವು ತಿಂಗಳುಗಳಿಂದ ದೂರ ಉಳಿದಿದ್ದು ನಿಜ. ಹಾಗಾಗಿ ಆಸ್ಪತ್ರೆಗಳಿಗೆ ಆದಾಯ ಕುಂಠಿತವಾಗಿದ್ದರೆ ಅಚ್ಚರಿಯೇನಿಲ್ಲ. ಹಾಗೆಯೇ ಕೋವಿಡ್‌-19 ಕಾರಣವನ್ನು ಮುಂದಿಟ್ಟುಕೊಂಡು ಹಣವಂತರಿಂದ, ವಿಮೆ ಪಾಲಿಸಿದಾರರಿಂದ ಮತ್ತು ತೀವ್ರ ಜೀವ ಅಪಾಯದಲ್ಲಿರುವಂತಹ ರೋಗಿಗಳಿಂದ ಖಾಸಗಿ ಆಸ್ಪತ್ರೆಗಳು ಸುಲಿಗೆ ಮಾಡಿರುವುದನ್ನು ತಳ್ಳಿ ಹಾಕಲಾಗದು. ಒಟ್ಟಾರೆ ಸಮಾಜ ಬಹಳ ಜವಾಬ್ದಾರಿಯಿಂದ ಕಾಳಜಿಯಿಂದ ನಡೆದುಕೊಳ್ಳಬೇಕಾದ ಸಂದರ್ಭದಲ್ಲಿ ಸಣ್ಣತನ ಮತ್ತು ದುರಾಸೆಗೆ ಒಳಗಾಗಿ ನಡೆದುಕೊಂಡಿರುವುದು ನಮ್ಮಲ್ಲಿ ಆಗಿದೆ. ಇದು ಸಮಾಜ ತಲೆತಗ್ಗಿಸುವ ಘಟನೆಗಳಿಗೆ ಕಾರಣವಾಗಿದೆ.

ರವಿ ಕೃಷ್ಣಾರೆಡ್ಡಿ, ಕರ್ನಾಟಕ ರಾಷ್ಟ್ರಸಮಿತಿ

ಕೋವಿಡ್‌-19ರ ಹಿನ್ನೆಲೆಯಲ್ಲಿ ಘೋಷಿಸಿದ್ದ ಲಾಕ್‌ಡೌನ್‌ನಿಂದಾಗಿ ಬಹುತೇಕರು ಶಸ್ತ್ರ ಚಿಕಿತ್ಸೆಗಳನ್ನು ಮುಂದೂಡಿದ್ದರು. ಡಯಾಲಿಸಿಸ್, ಕಿಮೋಥೆರಪಿ, ರಕ್ತ ವರ್ಗಾವಣೆ, ದೀರ್ಘಕಾಲದ ಕಾಯಿಲೆ ಇರುವ ರೋಗಿಗಳು ಆಸ್ಪತ್ರೆಗಳಿಗೆ ದಾಖಲಾಗಲು ಹಿಂಜರಿತ, ಅದರಲ್ಲೂ ಅಂತರರಾಷ್ಟ್ರೀಯ ವಿಮಾನಗಳ ಸ್ಥಗಿತದಿಂದಾಗಿ ವಿದೇಶಿ ರೋಗಿಗಳು ಶಸ್ತ್ರಚಿಕಿತ್ಸೆಗಳಿಗಾಗಿ ಬೆಂಗಳೂರಿಗೆ ಭೇಟಿ ನೀಡುವುದನ್ನು ನಿಲ್ಲಿಸಿದರು. ಹೀಗಾಗಿ ನಿವ್ವಳ ನಷ್ಟದ ಪ್ರಮಾಣ ಹೆಚ್ಚಾಗಿದೆ ಎಂಬುದು ಖಾಸಗಿ ಆಸ್ಪತ್ರೆಗಳ ವಾದ.

‘ಆಸ್ಪತ್ರೆಗಳ ಆವರಣ ಸ್ವಚ್ಚಗೊಳಿಸುವ ಮತ್ತು ಆರೋಗ್ಯ ಸಿಬ್ಬಂದಿಗೆ ರಕ್ಷಣಾತ್ಮಕ ಸಾಧನಗಳ ಖರೀದಿಯೂ ಇರುವ ವೆಚ್ಚವನ್ನು ಹೆಚ್ಚಿಸಿದೆ. ಅಲ್ಲದೆ ರೋಗಿಗಳ ದಾಖಲಾತಿ ಕಡಿಮೆಯಾದ ಪರಿಣಾಮ ಇರುವ ಸಿಬ್ಬಂದಿ ಸಂಖ್ಯೆಯನ್ನೂ ಕಡಿತಗೊಳಿಸಲಾಗಿದೆ. ಇನ್ನು ಕೆಲವು ಅಸ್ಪತ್ರೆಗಳು ಕೋವಿಡ್‌ ಭೀತಿಯ ನಡುವೆಯೂ ವೈದ್ಯಕೀಯ ಸೇವೆಯಲ್ಲಿ ತೊಡಗಿಸಿಕೊಳ್ಳುವುದಕ್ಕಾಗಿ ಬೋನಸ್‌ಗಳನ್ನು ನೀಡಿದೆ ಎನ್ನುತ್ತಾರೆ ಖಾಸಗಿ ಅಸ್ಪತ್ರೆಯ ಹಣಕಾಸು ಅಧಿಕಾರಿಯೊಬ್ಬರು.

the fil favicon

SUPPORT THE FILE

Latest News

Related Posts