ಆರ್‌ಟಿಪಿಸಿಆರ್‌ ಪರೀಕ್ಷೆಯಲ್ಲಿ ಇಳಿಮುಖ; ರಾಜ್ಯದ ಕಾರ್ಯವೈಖರಿಗೆ ಕೇಂದ್ರ ಅತೃಪ್ತಿ

ಬೆಂಗಳೂರು; ಕೋವಿಡ್‌-19 ತಪಾಸಣೆಗೆ ಸಂಬಂಧಿಸಿದಂತೆ ರಾಜ್ಯದ ಸರ್ಕಾರಿ ಮತ್ತು ಖಾಸಗಿ ವಲಯದ ಒಟ್ಟು 53 ವೈದ್ಯಕೀಯ ಕಾಲೇಜುಗಳು ಐಸಿಎಂಆರ್‌ನಲ್ಲಿ ನೋಂದಣಿ ಮಾಡಿಸಿದ್ದರೂ ಆರ್‌ಟಿ-ಪಿಸಿಆರ್‌ ಪರೀಕ್ಷೆಯಲ್ಲಿ ನಿಗದಿತ ಗುರಿಯನ್ನು ತಲುಪಿಲ್ಲ. ಪರೀಕ್ಷೆಗಳ ಸಂಖ್ಯೆ ಹೆಚ್ಚಳವಾಗುವ ಬದಲಿಗೆ ಬರಬರುತ್ತ ಇಳಿಮುಖವಾಗುತ್ತಿದೆ. ಈ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಹಾಗೂ ಐಸಿಎಂಆರ್‌ ತನ್ನ ಅತೃಪ್ತಿಯನ್ನು ವ್ಯಕ್ತಪಡಿಸಿದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಹಾಗೂ ಐಸಿಎಂಆರ್‌ನ ನಿರ್ದೇಶಕ ಪ್ರೊ.ಬಲರಾಮ್‌ ಭಾರ್ಗವ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್‌ ಅವರಿಗೆ 2020ರ ಸೆಪ್ಟಂಬರ್‌ 29ರಂದು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಕೋವಿಡ್‌-19 ತಪಾಸಣೆಯಲ್ಲಿ ನೆರೆಯ ರಾಜ್ಯಗಳಿಗಿಂತ ಮುಂದಿದೆ ಮತ್ತು ಪಾಸಿಟಿವ್‌ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದೆ ಎಂದು ಆರೋಗ್ಯ ಇಲಾಖೆಯ ಹಿಂದಿನ ಸಚಿವ ಶ್ರೀರಾಮುಲು ಮತ್ತು ಹಾಲಿ ಸಚಿವ ಡಾ ಕೆ ಸುಧಾಕರ್‌ ಅವರು ಬೀಗುತ್ತಿರುವ ಬೆನ್ನಲ್ಲೇ ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ಬರೆದಿರುವ ಪತ್ರ ಮುನ್ನೆಲೆಗೆ ಬಂದಿದೆ. ಅದೇ ರೀತಿ ರಾಜ್ಯದಲ್ಲಿ ಇನ್ನೂ 7 ಖಾಸಗಿ ವೈದ್ಯಕೀಯ ಕಾಲೇಜುಗಳು ಐಸಿಎಂಅರ್‌ನಲ್ಲಿ ನೋಂದಣಿ ಮಾಡಿಸಬೇಕಿದೆ ಎಂಬುದು ಪತ್ರದಿಂದ ಗೊತ್ತಾಗಿದೆ.

‘ದಿನವೊಂದಕ್ಕೆ 1,680 ಆರ್‌ಟಿಪಿಸಿಆರ್‌ ತಪಾಸಣೆ (ಒಂದು ವೈದ್ಯಕೀಯ ಕಾಲೇಜು ಆರ್‌ಟಿಪಿಸಿಆರ್‌ ಉಪಕರಣವೊಂದರಿಂದ ಪ್ರತಿ ದಿನಕ್ಕೆ 240 ತಪಾಸಣೆ) ನಡೆಸಬೇಕು. ಆದರೆ ರಾಜ್ಯದಲ್ಲಿ ಕೋವಿಡ್‌-19 ಒಟ್ಟು ಪರೀಕ್ಷೆಗಳ ಪೈಕಿ ಆರ್‌ಟಿಪಿಸಿಆರ್‌ ಪರೀಕ್ಷೆಗಳ ಪ್ರಮಾಣ ಕೇವಲ ಶೇ.42ರಷ್ಟಿದೆ. ಸೆಪ್ಟಂಬರ್‌ನಲ್ಲಿ ಒಟ್ಟಾರೆ ಶೇ.13.5ರಷ್ಟು ಮಾತ್ರ ನಡೆಸಿದೆ,’ ಎಂದು ಪ್ರೊ.ಬಲರಾಮ್‌ ಭಾರ್ಗವ ಅವರು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.

ಆರ್‌ಟಿಪಿಸಿಆರ್‌ನಿಂದ ಪರೀಕ್ಷೆ ನಡೆಸಿದರಷ್ಟೇ ಕೋವಿಡ್‌-19ರ ಕರಾರುವಕ್ಕಾದ ಫಲಿತಾಂಶ ಬರುವ ಸಾಧ್ಯತೆಗಳೇ ಹೆಚ್ಚಿದೆ. ಆದರೆ ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆಯ ಕಾರ್ಯದರ್ಶಿ ಅವರು ಬರೆದಿರುವ ಪತ್ರದ ಪ್ರಕಾರ ರಾಜ್ಯದಲ್ಲಿ ಆರ್‌ಟಿಪಿಸಿಆರ್‌ ಪರೀಕ್ಷೆಗಿಂತಲೂ ಆಂಟಿಜೆನ್‌ ಪರೀಕ್ಷೆಯೇ ಹೆಚ್ಚಿನ ಸಂಖ್ಯೆಯಲ್ಲಿದೆ.

2020ರ ಅಕ್ಟೋಬರ್‌ 19ರವರೆಗೆ ಒಟ್ಟು 10 ಲಕ್ಷ ಜನಕ್ಕೆ ದೆಹಲಿಯಲ್ಲಿ 2,40,365 ಪರೀಕ್ಷೆಗಳಾಗಿವೆ. ಜಮ್ಮು ಕಾಶ್ಮೀರದಲ್ಲಿ 1,61,232, ಆಂಧ್ರದಲ್ಲಿ 1,43,767, ಅಸ್ಸಾಂನಲ್ಲಿ 1,39,797, ತಮಿಳುನಾಡಿನಲ್ಲಿ 1,25,199 ಪರೀಕ್ಷೆಗಳಾಗಿದ್ದರೆ ರಾಜ್ಯದಲ್ಲಿ 1,10,360 ಮಾತ್ರ ಪರೀಕ್ಷೆಗಳಾಗಿವೆ ಎಂದು ತಿಳಿದು ಬಂದಿದೆ. ಈ ಪೈಕಿ ಆರ್‌ಟಿಪಿಸಿಆರ್‌ ಪರೀಕ್ಷೆ ಶೇ.42ರಷ್ಟು ಮಾತ್ರ ಇದೆ. ಇದರ ಪ್ರಕಾರ ರಾಜ್ಯದ ಒಟ್ಟು ಜನಸಂಖ್ಯೆಗೆ 65 ಲಕ್ಷ ಜನಕ್ಕೆ ಮಾತ್ರ ಪರೀಕ್ಷೆ ನಡೆಸಿದಂತಾಗಿದೆ.

ರಾಜ್ಯದಲ್ಲಿ ಅಕ್ಟೋಬರ್‌ 18ರವರೆಗೆ ಒಟ್ಟು 66,67,777 ಒಟ್ಟು ತಪಾಸಣೆ ಆಗಿದ್ದರೆ ಈ ಪೈಕಿ 42,16,682 ಆರ್‌ಟಿಪಿಸಿಆರ್‌ ಪರೀಕ್ಷೆಗಳಾಗಿವೆ. ಅಕ್ಟೋಬರ್‌ 21ರ ಅಂತ್ಯಕ್ಕೆ ಆರ್‌ಟಿಪಿಸಿಆರ್‌ ಮತ್ತಿತರ ಪರೀಕ್ಷೆ ನಡೆಸಿರುವ ಸಂಖ್ಯೆ ಒಟ್ಟಾರೆಯಾಗಿ 44,43,977 ಸಂಖ್ಯೆ ತಲುಪಿದೆ. ಅದೇ ರೀತಿ 25,08,858 ಸಂಖ್ಯೆಯಲ್ಲಿ ಆಂಟಿಜೆನ್‌ ಪರೀಕ್ಷೆಗಳಾಗಿವೆ ಎಂದು ತಿಳಿದು ಬಂದಿದೆ.

ಇನ್ನು, ಅಕ್ಟೋಬರ್‌ 15ರಿಂದಲೇ ರಾಜ್ಯದಲ್ಲಿ ಕಡಿಮೆ ಸಂಖ್ಯೆಯಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಹೀಗಾಗಿಯೇ ಪಾಸಿಟಿವ್‌ ಪ್ರಕರಣಗಳ ಸಂಖ್ಯೆಯಲ್ಲಿಯೂ ಇಳಿಮುಖವಾಗುತ್ತಿದೆ ಎನ್ನಲಾಗುತ್ತಿದೆ. ಅಕ್ಟೋಬರ್‌ 11ರಂದು 9,522 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದರೆ ಅಕ್ಟೋಬರ್‌ 13ರಂದು 8,477, ಅಕ್ಟೋಬರ್‌ 15ರಂದು 7,542, ಅಕ್ಟೋಬರ್‌ 17ರಂದು 7,012, ಅಕ್ಟೋಬರ್‌ 19ರಂದು 5,018 ಪ್ರಕರಣಗಳು ದೃಢಪಟ್ಟಿದ್ದವು. ಅಕ್ಟೋಬರ್‌ 2ನೇ ವಾರದಲ್ಲಿ 1,13,000 ಸಂಖ್ಯೆಯಲ್ಲಿ ಪರೀಕ್ಷೆಗಳಾಗಿದ್ದರೆ ಅಕ್ಟೋಬರ್‌ 16ರ ಹೊತ್ತಿಗೆ ಈ ಸಂಖ್ಯೆ 78,000ಕ್ಕಿಳಿದಿತ್ತು.

ಅಕ್ಟೋಬರ್‌ 5ರಿಂದ 13ರವರೆಗೆ ಸರಾಸರಿ 10,000 ಪ್ರಕರಣಗಳು ದೃಢಪಟ್ಟಿದ್ದರೆ, ಅಕ್ಟೋಬರ್‌ 10ರ ನಂತರ ಪರೀಕ್ಷೆ ಸಂಖ್ಯೆಯಲ್ಲಿ ಕಡಿಮೆ ಆಗಿರುವ ಕಾರಣ ಸಹಜವಾಗಿಯೇ ದೃಢಪಟ್ಟ ಪ್ರಕರಣಗಳ ಸಂಖ್ಯೆಯಲ್ಲಿಯೂ ಕಡಿಮೆ ಆಗುತ್ತಿದೆ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಆರೋಗ್ಯ ಇಲಾಖೇಯ ಅಧಿಕಾರಿಯೊಬ್ಬರು.

ಇನ್ನು, ಕೊರೊನಾದಿಂದ ಮೃತಪಟ್ಟವರಿಗೆ ಸಂಬಂಧಿಸಿದಂತೆ ಸರ್ಕಾರ ನೀಡುತ್ತಿರುವ ಅಂಕಿ ಸಂಖ್ಯೆಗಳಲ್ಲೂ ವ್ಯತ್ಯಾಸವಿದೆ ಎನ್ನಲಾಗಿದೆ. ಬೆಂಗಳೂರು ನಗರದಲ್ಲಿ 3,190 ಕೊರೊನಾದಿಂದ ಮೃತಪಟ್ಟಿದ್ದರೆ ಎಂದು ಸರ್ಕಾರ ಹೇಳುತ್ತಿದೆಯಾದರೂ ಕಳೆದ ವರ್ಷದ ಜುಲೈನಲ್ಲಿ 5,778, ಆಗಸ್ಟ್‌ನಲ್ಲಿ 5,481, ಸೆಪ್ಟಂಬರ್‌ನಲ್ಲಿ 5,411 ಮಂದಿ ಮೃತಪಟ್ಟಿದ್ದರು. 2020ರ ಜುಲೈನಲ್ಲಿ 6,477, ಆಗಸ್ಟ್‌ನಲ್ಲಿ 9,340, ಸೆಪ್ಟಂಬರ್‌ನಲ್ಲಿ 8,710 ಸಂಖ್ಯೆಯ ಜನರು ಬೆಂಗಳೂರು ನಗರ ವ್ಯಾಪ್ತಿಯೊಂದರಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಹಾಗೆಯೇ 2019ರ ಜುಲೈನಿಂದ ಸೆಪ್ಟಂಬರ್‌ವರೆಗೆ 16,670 ಜನರು ಬೆಂಗಳೂರು ನಗರದಲ್ಲಿ ಮೃತಪಟ್ಟಿದ್ದರೆ, 2020ರ 3 ತಿಂಗಳ ಅವಧಿಯಲ್ಲಿ 24,527 ಜನರು ಮರಣ ಹೊಂದಿದ್ದಾರೆ. ಇದರ ಪ್ರಕಾರ 7,857ಕ್ಕೂ ಹೆಚ್ಚು ಮರಣ ಸಂಭವಿಸಿದೆ.

the fil favicon

SUPPORT THE FILE

Latest News

Related Posts