ಬೆಂಗಳೂರು; ಬೇಲೇಕೇರಿ ಅದಿರು ರಫ್ತು ಪ್ರಕರಣದಲ್ಲಿ ಆರೋಪಕ್ಕೆ ಗುರಿಯಾಗಿರುವ ಭಾರತ್ ಮೈನ್ಸ್ ಅಂಡ್ ಮಿನರಲ್ಸ್ ಮತ್ತು ಬಿಎಂಎಂ ಇಸ್ಪಾತ್ ಲಿಮಿಟೆಡ್‌ನ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ದಿನೇಶ್ ಸಿಂಗಿ ಅವರನ್ನು ವನ್ಯಜೀವಿ ಮಂಡಳಿಗೆ ನಾಮನಿರ್ದೇಶನ ಮಾಡಲು ಉಪ ಮುಖ್ಯಮಂತ್ರಿ ಡಾ ಸಿ ಎನ್ ಅಶ್ವಥ್‌ನಾರಾಯಣ್ ಅವರು ಶಿಫಾರಸ್ಸು ಮಾಡಿದ್ದರು ಎಂಬುದು ಇದೀಗ ಬಹಿರಂಗವಾಗಿದೆ.
ವನ್ಯಜೀವಿ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದ ರಾಜ್ಯದಲ್ಲಿ ಹಲವರಿದ್ದರೂ ದಿನೇಶ್ ಸಿಂಗಿ ಅವರನ್ನೇ ನಾಮನಿರ್ದೇಶನ ಮಾಡುವ ಔಚಿತ್ಯವೇನಿತ್ತು ಎಂಬ ಆಕ್ಷೇಪ ಕೇಳಿ ಬಂದಿದೆ.
ಅದೇ ರೀತಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್ ಆರ್ ವಿಶ್ವನಾಥ್ ಅವರ ಪುತ್ರ ಅಲೋಕ್ ವಿಶ್ವನಾಥ್ ಸೇರಿದಂತೆ ಒಟ್ಟು 4 ಮಂದಿಯನ್ನು ಮಂಡಳಿಗೆ ನಾಮನಿರ್ದೆಶನ ಮಾಡಲು ಸಚಿವ ಸಿ ಸಿ ಪಾಟೀಲ್ ಮತ್ತು ಕಂದಾಯ ಸಚಿವ ಆರ್ ಅಶೋಕ್ ಅವರು ಶಿಫಾರಸ್ಸು ಮಾಡಿದ್ದರು ಎಂಬುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.
ಗಣ್ಯರ ಶಿಫಾರಸ್ಸನ್ನು ಪರಿಗಣಿಸಿ ನಾಮನಿರ್ದೇಶನ ಮಾಡಲು ಮಂಡಳಿಯ ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು 2019ರ ಡಿಸೆಂಬರ್ 17ರಂದು ಅನುಮೋದಿಸಿದ್ದರು. ಈ ಸಂಬಂಧ ‘ದಿ ಫೈಲ್’ಗೆ ಟಿಪ್ಪಣಿ ಹಾಳೆ, ಶಿಫಾರಸ್ಸು ಪತ್ರಗಳು ಲಭ್ಯವಾಗಿವೆ.
ಕಾನೂನುಬಾಹಿರವಾಗಿ ಅದಿರು ರಫ್ತು ಮಾಡಿದ್ದ ದಿನೇಶ್ ಸಿಂಗಿ
ದಿನೇಶ್ ಸಿಂಗಿ ಅವರು ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿರುವ ಭಾರತ್ ಮೈನ್ಸ್ ಅಂಡ್ ಮಿನರಲ್ಸ್ (ಬಿಎಂಎಂ) ಬೇಲೇಕೇರಿ ಬಂದರಿನಿಂದ 2.11 ಲಕ್ಷ ಟನ್‌ನಷ್ಟು ಕಬ್ಬಿಣದ ಅದಿರನ್ನು ರಫ್ತು ಮಾಡಿತ್ತು ಎಂದು ಲೋಕಾಯುಕ್ತ ವರದಿಯಲ್ಲಿ ಉಲ್ಲೇಖಿಸಲಾಗಿದೆ. 16,368 ಮೆಟ್ರಿಕ್ ಟನ್‌ನಷ್ಟು ಅದಿರನ್ನು ರಫ್ತು ಮಾಡಲು ಪರವಾನಿಗೆ ಪಡೆದಿದ್ದ ಈ ಕಂಪನಿಯು 2.11 ಲಕ್ಷ ಟನ್‌ನಷ್ಟು ಅದಿರನ್ನು ರಫ್ತು ಮಾಡಿತ್ತು. 1,27,566 ಮೆಟ್ರಿಕ್ ಟನ್ ಪ್ರಮಾಣದ ಅದಿರನ್ನು ಕಾನೂನುಬಾಹಿರವಾಗಿ ರಫ್ತು ಮಾಡಿದೆ ಎಂದು ಲೋಕಾಯುಕ್ತ ವರದಿಯಲ್ಲಿ ಹೇಳಲಾಗಿದೆ. ಆದರೂ ಉಪ ಮುಖ್ಯಮಂತ್ರಿ ಡಾ ಸಿ ಎನ್ ಅಶ್ವಥ್‌ನಾರಾಯಣ್ ಅವರು ದಿನೇಶ್ ಸಿಂಗಿ ಅವರನ್ನೇ ವನ್ಯಜೀವಿ ಮಂಡಳಿಗೆ ನಾಮನಿರ್ದೇಶನ ಮಾಡಲು ಶಿಫಾರಸ್ಸು ಮಾಡುವ ಮೂಲಕ ವಿವಾದಕ್ಕೆ ದಾರಿಮಾಡಿಕೊಟ್ಟಿದ್ದಾರೆ.
ಅಲ್ಲದೆ ರಾಜ್ಯ ವನ್ಯಜೀವಿ ಮಂಡಳಿಗೆ ಹೊಸದಾಗಿ ಅಧಿಕಾರೇತರ ಸದಸ್ಯರನ್ನು ನಾಮ ನಿರ್ದೇಶನ ಮಾಡಲು ಅವಕಾಶವಿಲ್ಲ ಎಂದು ಅರಣ್ಯ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೀಡಿದ್ದ ಅಭಿಪ್ರಾಯವನ್ನು ಬದಿಗೊತ್ತಿ ಸಚಿವ ಆರ್ ಅಶೋಕ್, ಸಿ ಸಿ ಪಾಟೀಲ್, ಉಪ ಮುಖ್ಯಮಂತ್ರಿ ಡಾ ಸಿ ಎನ್ ಅಶ್ವಥ್‌ನಾರಾಯಣ್ ಸೇರಿದಂತೆ ಗಣ್ಯ ವ್ಯಕ್ತಿಗಳು ಮಾಡಿದ್ದ ಶಿಫಾರಸ್ಸನ್ನು ಪರಿಗಣಿಸಿ ನಾಮ ನಿರ್ದೇಶನ ಮಾಡಿರುವುದೂ ಹಲವು ಆಕ್ಷೇಪಗಳಿಗೆ ಕಾರಣವಾಗಿದೆ.
ಬಿಎಸ್ಸಿ ಪದವೀಧರ ಚೇತನ್ ಬಿ ಅವರು ವನ್ಯಜೀವಿಗಳ ಬಗ್ಗೆ ಕಾಳಜಿ ಹೊಂದಿದ್ದು, ಮಾನವ ಪ್ರಾಣಿಗಳ ಸಂಘರ್ಷ, ಕಾಡಿನಂಚಿನ ಬುಡಕಟ್ಟು ಜನಾಂಗದವರಿಗೆ ಸರ್ಕಾರದಿಂದ ನೀಡುತ್ತಿರುವ ಸವಲತ್ತುಗಳು ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಹೀಗಾಗಿ ಇವರನ್ನು ವನ್ಯಜೀವಿ ಮಂಡಳಿಯ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಬೇಕು ಎಂದು ಸಿ ಸಿ ಪಾಟೀಲ್ ಅವರು 2019ರ ಅಕ್ಟೋಬರ್ 3ರಂದು ಶಿಫಾರಸ್ಸು ಮಾಡಿದ್ದರು.
ಅದೇ ರೀತಿ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣಾ ವಿಚಾರವಾಗಿ ಕನ್ಸರ್‌ವೇಷನ್ ಆವೇರ್‌ನೆಸ್ ಟ್ರಸ್ಟ್(ಸಿಎಟಿಟಿ) ಮತ್ತು ಬನ್ನೇರುಘಟ್ಟ ಕನ್ಸರ್‌ವೇಷನ್ ಟ್ರಸ್ಟ್(ಬಿಎನ್‌ಸಿಟಿ) ಕಾರ್ಯನಿರ್ವಹಿಸಿರುವ ಎಂಸಿಎ ಪದವೀಧರ ನವೀನ್ ಜೆ ಎಸ್ ಎಂಬುವರನ್ನು ನಾಮನಿರ್ದೇಶನ ಮಾಡಲು ಸಚಿವ ಅಶೋಕ್ ಅವರು 2019ರ ಅಕ್ಟೋಬರ್ 10ರಂದು ಶಿಫಾರಸ್ಸು ಮಾಡಿದ್ದರು ಎಂಬುದು ಗೊತ್ತಾಗಿದೆ.
ಅವಧಿಪೂರ್ವ ನಾಮನಿರ್ದೇಶನಕ್ಕೆ ನಡೆದಿತ್ತು ಯತ್ನ
ಹಾಗೆಯೇ ವನ್ಯ ಜೀವಿ ಮಂಡಳಿಗೆ ವನ್ಯಜೀವಿ (ಸಂರಕ್ಷಣಾ) ಕಾಯ್ದೆ 1972 ಸೆಕ್ಷನ್ 6(1)ರ ಅಧಿಕಾರದನ್ವಯ 2018ರ ಫೆ. 15ರಂದು 10 ಮಂದಿ ಅಧಿಕಾರೇತರ ಸದಸ್ಯರನ್ನು 3 ವರ್ಷದ ಅವಧಿಗೆ ನಾಮನಿರ್ದೇಶನ ಮಾಡಿ ಆದೇಶ ಹೊರಡಿಸಲಾಗಿತ್ತು. ಆದರೆ ಅಧಿಕಾರಾವಧಿ ಪೂರ್ಣಗೊಳ್ಳುವ ಮುನ್ನವೇ ಹೊಸದಾಗಿ ನಾಮನಿರ್ದೇಶನ ಮಾಡಲಾಗಿದೆ ಎಂದು ಗೊತ್ತಾಗಿದೆ.
ಸಂಜಯ್ ಗುಬ್ಬಿ ಸೇರಿದಂತೆ ಒಟ್ಟು 10 ಮಂದಿಯನ್ನು ರಾಜ್ಯ ವನ್ಯಜೀವಿ ಮಂಡಳಿಗೆ 2017ರಲ್ಲಿ ನಾಮನಿರ್ದೇಶನ ಮಾಡಲಾಗಿತ್ತು. ಆದರೂ ಹೊಸದಾಗಿ ಅಧಿಕಾರೇತರ ಸದಸ್ಯರನ್ನು ನಾಮನಿರ್ದೇಶನ ಮಾಡಲು ಯತ್ನಿಸಲಾಗಿತ್ತು ಎಂಬುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ. 2017ರಲ್ಲಿ ನಾಮನಿರ್ದೇಶನಗೊಂಡಿದ್ದ ಅಧಿಕಾರೇತರ ಸದಸ್ಯರ ಸದಸ್ಯತ್ವನ್ನು ರದ್ದುಗೊಳಿಸಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಅಲೋಕ್ ವಿಶ್ವನಾಥ್, ಚೇತನ ಬಿ ಅವರನ್ನು ನಾಮನಿರ್ದೇಶನಗೊಳಿಸಲು ಹಿಂದಿನ ಅರಣ್ಯ ಸಚಿವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕಡತ ಸಲ್ಲಿಸಿದ್ದರು ಎಂಬುದು ಗೊತ್ತಾಗಿದೆ.
ಸಚಿವರ ಒತ್ತಡಕ್ಕೆ ಮಣಿದಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಡಾ ಎನ್ ಸಿ ಶಿವಪ್ರಕಾಶ್, ಬಿ ಎಂ ಕಾಡಯ್ಯ, ರಾಮಚಂದ್ರಶೆಟ್ಟಿ, ಕೆ ಶ್ಯಾಮರಾಜು ಇವರ ಅಧಿಕಾರವಾಧಿಯನ್ನು ರದ್ದಗೊಳಿಸಿ ಇವರ ಬದಲಿಗೆ ಅಲೋಕ್ ವಿಶ್ವನಾಥ್, ನವೀನ್ ಜೆ ಎಸ್, ಚೇತನ ಬಿ, ದಿನೇಶ್ ಸಿಂಗಿ ಅವರನ್ನು ನಾಮನಿರ್ದೇಶನ ಮಾಡಲು ಅನುಮೋದಿಸಿದ್ದರು ಎಂಬುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.
ಆದರೆ ಕಡೇ ಗಳಿಗೆಯಲ್ಲಿ ಡಾ ಎನ್ ಸಿ ಶಿವಪ್ರಕಾಶ್ ಅವರು ಮುಂದುವರೆದಿದ್ದರು. ಮೈಸೂರಿನ ಸಂತೃಪ್ತ ಎಂ ಡಿ ಅವರನ್ನು ಕೈಬಿಟ್ಟು ಶಿವಪ್ರಕಾಶ್ ಅವರನ್ನು ಮುಂದುವರೆಸಿ ಆದೇಶ ಹೊರಡಿಸಲು ಹಿಂದಿನ ಅರಣ್ಯ ಸಚಿವ ಸಿ ಸಿ ಪಾಟೀಲ್ ಅವರು ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದರು.