ಬೆಂಗಳೂರು; ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ಶಾಸಕ ಸುನೀಲ್‌ಕುಮಾರ್ ಪ್ರತಿನಿಧಿಸುವ ಕ್ಷೇತ್ರಗಳಲ್ಲಿ ಅಂದಾಜು 3,000 ಜನರಿಗೆ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಅಂಗೈಯಲ್ಲೇ ಅರಮನೆ ತೋರಿಸಿದ್ದ ರಾಜ್ಯ ಬಿಜೆಪಿ ಸರ್ಕಾರದ ಬಂಡವಾಳ ಇದೀಗ ಬಯಲಾಗಿದೆ.
ಈ ಎರಡೂ ಕ್ಷೇತ್ರಗಳಲ್ಲಿ ಜವಳಿ ಪಾರ್ಕ್ ಆರಂಭಿಸುವ ಮೂಲಕ 3,000 ಮಂದಿಗೆ ಉದ್ಯೋಗ ನೀಡಲಾಗುವುದು ಎಂದು ಹೇಳಿದ್ದ ಸರ್ಕಾರ, ಈ ಯೋಜನೆಗೆ ಯಾವುದೇ ಅನುದಾನವನ್ನು ನಿಗದಿಪಡಿಸಿಕೊಳ್ಳದಿರುವುದು ಇದೀಗ ಬಹಿರಂಗವಾಗಿದೆ.
ಹಾವೇರಿಯ ಶಿಗ್ಗಾಂವಿ ಮತ್ತು ಉಡುಪಿಯ ಕಾರ್ಕಳದಲ್ಲಿ ನೂತನ ಜವಳಿ ಪಾರ್ಕ್ ಸ್ಥಾಪಿಸಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅದಕ್ಕೊಂದು ಯೋಜನೆಯ ಪರಿಕಲ್ಪನೆಯನ್ನೇ ನೀಡಿರಲಿಲ್ಲ ಎಂಬುದು ಕೂಡ ಬಯಲಾಗಿದೆ. ಘೋಷಣೆಗೆ ಎದುರಾಗಿ ಯಾವುದೇ ಅನುದಾನ ನಿಗದಿಪಡಿಸಿಕೊಳ್ಳದ ಕಾರಣ ಆರ್ಥಿಕ ಇಲಾಖೆ ಇದನ್ನೂ ಒಂದು ಹೇಳಿಕೆ ಎಂದಷ್ಟೇ ದಾಖಲಿಸಿಕೊಂಡಿದೆ.
ನೂತನ ಜವಳಿ ಪಾರ್ಕ್ ಸ್ಥಾಪನೆಯಿಂದ ಆರ್ಥಿಕ ಹೊರೆ ಉಂಟಾಗುವುದಿಲ್ಲ ಎಂದು ಬಜೆಟ್‌ನಲ್ಲಿ ಹೇಳಲಾಗಿತ್ತು. ಆದರೆ 7 ತಿಂಗಳ ನಂತರ ರಾಗ ಬದಲಾಯಿಸಿರುವ ಇಲಾಖೆ, ಈ ವರ್ಷದಲ್ಲಿ ಆರ್ಥಿಕ ಹೊರೆ ಬೀಳದಿದ್ದರೂ ಮುಂದಿನ ವರ್ಷದಲ್ಲಿ ಆರ್ಥಿಕ ಹೊರೆ ಬೀಳುತ್ತದೆ ಎಂದು ವಾದವನ್ನು ಮುಂದೊಡ್ಡಿದೆ. ಇದಕ್ಕೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆಯ ಕೆಲವು ಟಿಪ್ಪಣಿ ಹಾಳೆಗಳು ‘ದಿ ಫೈಲ್’ಗೆ ಲಭ್ಯವಾಗಿದೆ.
‘ಹಾವೇರಿ ಜಿಲ್ಲೆಯ ಶಿಗ್ಗಾಂವಿ ಮತ್ತು ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ನೂತನ ಜವಳಿ ಪಾರ್ಕ್ ಆರಂಭಿಸುವುದು ಇದರಿಂದ ಸುಮಾರು 3,000 ಉದ್ಯೋಗ ಸೃಷ್ಟಿಯಾಗಲಿದೆ ಎಂಬ ಘೋಷಣೆಗೆ ಎದುರಾಗಿ ಯಾವುದೇ ಅನುದಾನವನ್ನು ನಿಗದಿಪಡಿಸಿಕೊಂಡಿರುವುದಿಲ್ಲ. ಇದನ್ನು ಒಂದು STATEMENT ಎಂದು ದಾಖಲಿಸಿಕೊಳ್ಳಲಾಗಿದೆ,’ ಎಂಬ ಮಾಹಿತಿ ಆರ್ಥಿಕ ಇಲಾಖೆಯ ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.
ಈ ಯೋಜನೆ ಅನ್ವಯ ಗಾರ್ಮೆಂಟ್ ಫ್ಯಾಕ್ಟರಿಯನ್ನು ಸ್ಥಾಪಿಸುವ ಉದ್ಯಮಿಗೆ 25 ಕೋಟಿ ರು ಅಥವಾ ಯೋಜನಾ ವೆಚ್ಚದ ಶೇ.25ರಷ್ಟು ಸಬ್ಸಿಡಿಯನ್ನು ದೊರೆಯಲಿತ್ತು. ವಿಶೇಷ ವಾಹಕ ರಚನೆಯಾದಲ್ಲಿ ಸಬ್ಸಿಡಿ ಮೊತ್ತ 40 ಕೋಟಿ ಅಥವಾ ಯೋಜನಾ ವೆಚ್ಚದಲ್ಲಿ ಶೇ.40ರಷ್ಟು ಸಬ್ಸಿಡಿ ಸಿಗಲಿತ್ತು. ಈ ಯೋಜನೆಗೆ ಯಾವುದೇ ಅನುದಾನ ನಿಗದಿಪಡಿಸಿಕೊಳ್ಳದ ಕಾರಣ ಯೋಜನೆಯನ್ನೇ ತಡೆಹಿಡಿಯಲಾಗಿತ್ತು ಎಂಬುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.
‘ಮೌಖಿಕವಾಗಿ ಚರ್ಚಿಸಿದ ಸಂದರ್ಭದ ಸೂಚನೆಯ ಅನುಸಾರ ಕಡತವನ್ನು ತಡೆಹಿಡಿಯಲಾಗಿತ್ತು. ಆಯವ್ಯಯ ಕಂಡಿಕೆಗಳನ್ನು ಕೈ ಬಿಡುವ ವಿಚಾರವಾಗಿ ತೀರ್ಮಾನವಾಗಿದೆಯೇ ಎಂಬುದು ತಿಳಿದುಬರುತ್ತಿಲ್ಲ. ಆದ್ದರಿಂದ ಇದನ್ನು ತಡೆಹಿಡಿಯುವುದೇ ಅಥವಾ ನಿರ್ಣಯ ಅಂತಿಮವಾಗಿದೆಯೇ,’ ಎಂಬ ಬಗ್ಗೆ ಆರ್ಥಿಕ ಇಲಾಖೆಯ ಅಧಿಕಾರಿಗಳು ಆದೇಶ ಕೋರಿರುವುದು ತಿಳಿದು ಬಂದಿದೆ.
ಆರ್ಥಿಕ ಹೊರೆ ಬೀಳಲಿದೆಯೇ?
ಜವಳಿ ಪಾರ್ಕ್ ಸ್ಥಾಪಿಸಲು ಆಸಕ್ತ ಉದ್ಯಮಿಗಳು ಎಸ್ ಪಿ ವಿ ರಚಿಸಿಕೊಂಡು ಅಗತ್ಯ ಜಮೀನನ್ನು ವಶಕ್ಕೆ ಪಡೆದ ನಂತಗರವೇ ಜವಳಿ ಪಾರ್ಕ್ ಸ್ಥಾಪನೆ ಪ್ರಕ್ರಿಯೆಗಳು ಆರಂಭಗೊಳ್ಳಲಿವೆ. ಹೀಗಾಗಿ 2020021ನೇ ಸಾಲಿನಲ್ಲಿ ಯಾವುದೇ ಆರ್ಥಿಕ ಹೊರೆ ಉಂಟಾಗುವುದಿಲ್ಲ ಎಂದು ಹೇಳಲಾಗಿದೆ. ಆಧರೆ ಜವಳಿ ನೀತಿ ಕಂಡಿಕೆ 12.1ರಲ್ಲಿ ನೂತನವಾಗಿ ಜವಳಿ ಪಾರ್ಕ್ ಅಭಿವೃದ್ಧಿಪಡಿಸಲು ಸಾಮಾನ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಅವಕಾಶವಿದೆ. ಸಿದ್ದ ಉಡುಪು ನೀತಿ 2019-24ರನ್ವಯ ರಿಯಾಯಿತಿ ಹಾಗೂ ಪ್ರೋತ್ಸಾಹ ಧನ ನೀಡಲಿದ್ದರೂ ಮುಂದಿನ ವರ್ಷಗಳಲ್ಲಿ ಆರ್ಥಿಕ ಹೊರೆ ಬೀಳುತ್ತದೆ ಎಂದು ಆರ್ಥಿಕ ಇಲಾಖೆ ಅಧಿಕಾರಿಗಳು ಅಭಿಪ್ರಾಯಿಸಿರುವುದು ಗೊತ್ತಾಗಿದೆ.
ಈ ಹಿಂದೆಯೂ ಕಲ್ಬುರ್ಗಿಯಲ್ಲಿ ಜವಳಿ ಪಾರ್ಕ್ ಸ್ಥಾಪಿಸಲಾಗುವುದು ಎಂದು ಘೋಷಿಸಿದ್ದ ಕೇಂದ್ರದ ಎನ್‌ಡಿಎ ಸರ್ಕಾರವೂ ಕಡೇಗಳಿಗೆಯಲ್ಲಿ ಯೋಜನೆಯನ್ನು ಕೈ ಬಿಟ್ಟಿತ್ತು. ಯುಪಿಎ ಸರ್ಕಾರ 2011ರಲ್ಲಿ ಕಲಬುರ್ಗಿಗೆ ಜವಳಿ ಪಾರ್ಕ್ ಮಂಜೂರು ಮಾಡಿತ್ತು. ಅದಕ್ಕಾಗಿ ಶಹಾಬಾದ್ ರಸ್ತೆಯ ಕೈಗಾರಿಕಾ ಪ್ರದೇಶದಲ್ಲಿ ಸ್ಥಳವನ್ನೂ ಮೀಸಲಿಡಲಾಗಿತ್ತು. ಜವಳಿ ಪಾರ್ಕ್ ಸ್ಥಾಪನೆಯಿಂದಾಗಿ ಸುಮಾರು 5 ಜನರಿಗೆ ಉದ್ಯೋಗಾವಕಾಶಗಳು ಸಿಗುವ ಸಾಧ್ಯತೆಗಳಿತ್ತು.
ಆದರೆ ಕೇಂದ್ರ ಸರ್ಕಾರ ಈ ಯೋಜನೆಯನ್ನು ಕೈಬಿಟ್ಟಿದ್ದರಿಂದಾಗಿ ಉದ್ಯೋಗ ಅವಕಾಶಗಳನ್ನು ಕಸಿದುಕೊಂಡಂತಾಗಿತ್ತು. ಜವಳಿ ಪಾರ್ಕ್ ಸ್ಥಾಪನೆ ಉದ್ದೇಶವನ್ನೇ ಕೈಬಿಟ್ಟಿದ್ದರಿಂದಾಗಿ ಹಿಂದುಳಿದ ಭಾಗದ ಜನರ ಗಾಯದ ಮೇಲೆ ಬರೆ ಎಳೆದಂತಾಗಿತ್ತು.