ವಿಜಯೇಂದ್ರ ವಿರುದ್ಧ ಎಫ್‌ಐಆರ್‌ ದಾಖಲಿಸದ ಇನ್ಸ್‌ಪೆಕ್ಟರ್‌, ಡಿಸಿಪಿ ಅನುಚೇತ್‌ ವಿರುದ್ಧ ದೂರು

ಬೆಂಗಳೂರು; ಸುಲಿಗೆ ಪ್ರಕರಣದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ ಅವರ ವಿರುದ್ಧ ಐಪಿಸಿ ಸೆಕ್ಷನ್‌ಗಳನ್ನು ಉಲ್ಲೇಖಿಸಿ ಜನಾಧಿಕಾರ ಸಂಘರ್ಷ ಪರಿಷತ್‌ ದಾಖಲಿಸಿದ್ದ ದೂರನ್ನಾಧರಿಸಿ ಎಫ್‌ಐಆರ್‌ ದಾಖಲಿಸದ ಶೇಷಾದ್ರಿಪುರಂ ಠಾಣೆಯ ಇನ್ಸ್‌ಪೆಕ್ಟರ್‌ ಎಂ ಎಲ್‌ ಕೃಷ್ಣಮೂರ್ತಿ ಮತ್ತು ಡಿಸಿಪಿ ಅನುಚೇತ್‌ ವಿರುದ್ಧವೇ ದೂರು ದಾಖಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿ 120 ಗಂಟೆಗಳಾದರೂ ಶೇಷಾದ್ರಿಪುರಂ ಠಾಣೆಯ ಇನ್ಸ್‌ಪೆಕ್ಟರ್‌ ಕೃಷ್ಣಮೂರ್ತಿ ಅವರು ಎಫ್‌ಐಆರ್‌ ದಾಖಲಿಸಿರಲಿಲ್ಲ. ಹೀಗಾಗಿ ಜನಾಧಿಕಾರ ಸಂಘರ್ಷ ಪರಿಷತ್‌ ಐಪಿಸಿ ಕಲಂ 217ರ ಪ್ರಕಾರ ಅವರ ವಿರುದ್ಧವೇ ದೂರು ದಾಖಲಿಸಿದೆ. ದೂರಿನ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಐಪಿಸಿ ಕಲಂ 217ರಲ್ಲೇನಿದೆ?

ಯಾವುದೇ ಸರ್ಕಾರಿ ನೌಕರರು ಕಾನೂನಿನ ನಿರ್ದೇಶನ ಉಲ್ಲಂಘಿಸಿ ಯಾರನ್ನಾದರೂ ಶಿಕ್ಷೆಯಿಂದ ರಕ್ಷಿಸಲು ಅಥವಾ ಆಸ್ತಿ ಮುಟ್ಟುಗೋಲು ಅದನ್ನು ತಡೆದರೆ ಅಂತಹ ಒಂದು ಕೃತ್ಯವು ಐಪಿಸಿ ಕಲಂ 217ರ ಪ್ರಕಾರ ಸಂಜ್ಞೆಯ ಅಪರಾಧ ಎಂದು ಐಪಿಸಿ ಕಲಂ 217ರಲ್ಲಿ ವಿವರಿಸಲಾಗಿದೆ. ಈ ಅಂಶವನ್ನು ದೂರಿನಲ್ಲಿ ಪ್ರಸ್ತಾಪಿಸಿರುವ ಜನಾಧಿಕಾರ ಸಂಘರ್ಷ ಪರಿಷತ್‌, ಸಂವಿಧಾನದ ಅನುಚ್ಛೇಧ 142ನ್ನೂ ಉಲ್ಲೇಖಿಸಿದೆ.

ಅನುಚ್ಛೇಧ 142ರಲ್ಲೇನಿದೆ?

ಸರ್ವೋಚ್ಛ ನ್ಯಾಯಾಲಯವು ತನ್ನ ಅಧಿಕಾರ ವ್ಯಾಪ್ತಿಯನ್ನು ಚಲಾಯಿಸಿ, ತನ್ನ ಮುಂದೆ ಇತ್ಯರ್ಥದಲ್ಲಿರುವ ಯಾವುದೇ ವ್ಯಾಜ್ಯದ ಬಗ್ಗೆ ಅಥವಾ ಇತರ ವಿಷಯದ ಬಗ್ಗೆ ಪೂರ್ಣ ನ್ಯಾಯವನ್ನು ದೊರಕಿಸುವುದಕ್ಕೆ ಅವಶ್ಯವಾದಂಥ ಡಿಕ್ರಿಯನ್ನು ಹೊರಡಿಸಬಹುದು ಅಥವಾ ಆದೇಶವನ್ನು ನೀಡಬಹುದು ಮತ್ತುಹಾಗೆ ಹೊರಡಿಸಿದ ಡಿಕ್ರಿ ಅಥವಾ ಹಾಗೆ ನೀಡಿದ ಆದೇಶವು ಸಂಸತ್ತು ಮಾಡಿದ ಯಾವುದೇ ಕಾನೂನಿನ ಮೂಲಕ ಅಥವಾ ಅದರ ಮೇರೆಗೆ ನಿಯಮಿಸಬಹುದಾದಂತಹ ರೀತಿಯಲ್ಲಿ ಮತ್ತು ಹಾಗೆ ಉಪಬಂಧವನ್ನು ಮಾಡುವವರೆಗೂ ರಾಷ್ಟ್ರಪತಿಯು ಆದೇಶದ ಮೂಲಕ ನಿಯಮಿಸಬಹುದಾದಂತಹ ರೀತಿಯಲ್ಲಿ ಭಾರತದ ರಾಜ್ಯ ಕ್ಷೇತ್ರಾದ್ಯಂತ ಜಾರಿಗೊಳಿಸುವಂತದ್ದಾಗಿರತಕ್ಕದ್ದು ಎಂದು ಹೇಳಲಾಗಿದೆ.

ಶಿಕ್ಷೆಯಿಂದ ರಕ್ಷಿಸಲು ಯತ್ನಿಸಿದರೇ ಇನ್ಸ್‌ಪೆಕ್ಟರ್‌?

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ ಮತ್ತು ಅವರ ಮೊಮ್ಮಗ ಶಶಿಧರ್‌ ಮರಡಿ ಸೇರಿದಂತೆ ಇತರ ಸಹಚರರ ವಿರುದ್ಧದ 7.40 ಕೋಟಿ ಸುಲಿಗೆ ಪ್ರಕರಣದಲ್ಲಿ ದೂರು ಸಲ್ಲಿಕೆಯಾಗಿ 120 ಗಂಟೆಗಳಾದರೂ ಎಫ್‌ಐಆರ್‌ ದಾಖಲಿಸಿರಲಿಲ್ಲ. ಅಲ್ಲದೆ ಪೊಲೀಸ್‌ ಅಧಿಕಾರಿಗಳು, ಇದೀಗ ಪ್ರಕರಣವನ್ನು ಠಾಣೆ ಹಂತದಲ್ಲೇ ಮುಕ್ತಾಯಗೊಳಿಸಲು ಯತ್ನಿಸುವ ಮೂಲಕ ವಿಜಯೇಂದ್ರ, ಶಶಿಧರ್ ಮರಡಿ ಎಂಬುವರನ್ನು ಶಿಕ್ಷೆಯಿಂದ ರಕ್ಷಿಸಲು ಯತ್ನಿಸಿದ್ದಾರೆ ಎಂಬ ಆರೋಪ ಇನ್ಸ್‌ಪೆಕ್ಟರ್‌ ವಿರುದ್ಧ ಕೇಳಿ ಬಂದಿದ್ದವು.

ದೂರಿನ ಆಧಾರದ ಮೇಲೆ ಎಫ್‌ಐಆರ್‌ ದಾಖಲಿಸದಿರುವುದು ಅಪರಾಧದ ಸಮಯವನ್ನು ಅದಲು-ಬದಲು ಮಾಡುವ ಅಥವಾ ವಿಳಂಬ ಮಾಡುವ ಮೂಲಕ ಕೇಸಿನ ವಿಷಯವನ್ನೇ ತಿರುಚುವ ಸಾಧ್ಯತೆಗಳೂ ಇರುತ್ತವೆ ಎಂಬ ಅಭಿಪ್ರಾಯಗಳು ಕಾನೂನು ತಜ್ಞರ ವಲಯದಲ್ಲಿ ವ್ಯಕ್ತವಾಗಿದ್ದವು.

ಸಿಆರ್‌ಪಿಸಿಯೂ ಉಲ್ಲಂಘನೆ?

ಲಲಿತಾಕುಮಾರಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನಂತೆ ಸಿಆರ್‌ಪಿಸಿ ಸೆಕ್ಷನ್‌ 154ರಡಿಯಲ್ಲಿ ಠಾಣಾಧಿಕಾರಿಗಳು ಕಡ್ಡಾಯವಾಗಿ ಎಫ್‌ಐಆರ್‌ ದಾಖಲಿಸಬೇಕು. ಅಲ್ಲದೆ ದೂರಿನಲ್ಲಿರುವ ಮಾಹಿತಿಯು ಸಂಜ್ಞೆ ಅಪರಾಧವನ್ನು ಬಹಿರಂಗಪಡಿಸಿದರೆ ಎಫ್‌ಐಆರ್‌ನ್ನು ದಾಖಲಿಸಲೇಬೇಕು. ಹಾಗೆಯೇ ಇಂತಹ ಸಂದರ್ಭದಲ್ಲಿ ಪೂರ್ವ ವಿಚಾರಣೆಯನ್ನುಮಾಡಲು ಪೊಲೀಸರಿಗೆ ಅವಕಾಶವಿಲ್ಲ ಎಂಬುದು ಸುಪ್ರೀಂ ಕೋರ್ಟ್‌ನ ತೀರ್ಪಿನಿಂದ ಗೊತ್ತಾಗಿದೆ. ಆದರೆ ಈ ಪ್ರಕರಣದಲ್ಲಿ ಪೊಲೀಸ್‌ ಅಧಿಕಾರಿಗಳು ಸಿಆರ್‌ಪಿಸಿಯನ್ನೂ ಉಲ್ಲಂಘಿಸಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.

ಪ್ರಕರಣದ ಹಿನ್ನೆಲೆ

ಬಹುಮಹಡಿ ವಸತಿ ಸಮುಚ್ಛಯ ಕಂಪನಿ ನಿರ್ದೇಶಕ ಚಂದ್ರಕಾಂತ್‌ ರಾಮಲಿಂಗಂ ಎಂಬುವರಿಂದ 7.40 ಕೋಟಿಯನ್ನು ಸುಲಿಗೆ ಮಾಡಿದ್ದಾರೆ ಎಂದು ಐಪಿಸಿ ಸೆಕ್ಷನ್‌ 384, 120(ಬಿ) ಮತ್ತು 34ನ್ನು ಉಲ್ಲೇಖಿಸಿ ಜನಾಧಿಕಾರ ಸಂಘರ್ಷ ಪರಿಷತ್‌ ದೂರು ದಾಖಲಿಸಿತ್ತು.

ಶಶಿಧರ್‌ ಮರಡಿ ಅವರು ಹೊಂದಿರುವ ಬ್ಯಾಂಕ್‌ ಖಾತೆಗೆ 7.4 ಕೋಟಿ ರು.ಗಳನ್ನು ನಿರ್ಮಾಣ ಕಂಪನಿ ಆರ್‌ಟಿಜಿಎಸ್‌ ಮೂಲಕ ಸಂದಾಯ ಮಾಡಿದೆ ಎಂದು ದೂರಿನಲ್ಲಿ ಉಲ್ಲೇಖಿಸಿತ್ತು. ಅದೇ ರೀತಿ ವಾಟ್ಸಾಪ್‌ ಸಂಭಾಷಣೆಯಲ್ಲಿ ನಮೂದಿಸಿದ್ದ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಶೇಷಾದ್ರಿಪುರಂ ಶಾಖೆಯಲ್ಲಿ ಶಶಿಧರ್‌ ಮರಡಿ ಹೊಂದಿರುವ ಉಳಿತಾಯ ಖಾತೆಗೆ ಜನಾಧಿಕಾರ ಸಂಘರ್ಷ ಪರಿಷತ್‌ 100 ರು. ನಗದನ್ನು ಪಾವತಿಸಿ ಖಾತೆಯನ್ನು ಖಚಿತಪಡಿಸಿಕೊಂಡಿರುವುದನ್ನೂ ದೂರಿನಲ್ಲಿ ಉಲ್ಲೇಖಿಸಿತ್ತು.

ಅಧಿಕಾರಿಯೊಬ್ಬರು ಮುಖ್ಯಮಂತ್ರಿ ಹೆಸರು ಬಳಸಿಕೊಂಡು ನಿರ್ಮಾಣ ಕಂಪನಿಯಿಂದ ಲಂಚ ಪಡೆದಿರುವುದು ತಿಳಿದಿದ್ದರೂ ಸಹ ಆ ಅಧಿಕಾರಿ ಮೇಲೆ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ ಅಡಿಯಲ್ಲಿ ದೂರು ದಾಖಲಿಸದಿರುವುದು ಬಿ ವೈ ವಿಜಯೇಂದ್ರ ಅವರ ಮೇಲೆ ಅನುಮಾನಕ್ಕೆ ಕಾರಣವಾಗಿದೆ. ಈ ಅನುಮಾನದ ಹಿನ್ನೆಲೆಯಲ್ಲಿ ನಿರ್ಮಾಣ ಕಂಪನಿಗೆ ಬೆದರಿಕೆ ಹಾಕಿ ಹಣ ನೀಡಲು ಒತ್ತಡ ಹೇರಿ ನಿರ್ಮಾಣ ಕಾರ್ಯಕ್ಕೆ ತಡೆ ಹಾಕಿರುವುದು ಸುಲಿಗೆ ಪ್ರಕರಣಕ್ಕೆ ಬಲವಾದ ಸಾಕ್ಷಿಯಾಗಿದೆ ಎಂದು ದೂರಿನಲ್ಲಿ ಪರಿಷತ್‌ ವಿವರಿಸಿತ್ತು.

ವಾಟ್ಸಾಪ್‌ ಚಾಟ್‌ಗಳಲ್ಲಿ ಶಶಿಧರ್‌ ಮರಡಿ ಎಂಬುವರು ಹಣಕ್ಕಾಗಿ ಬೇಡಿಕೆ ಇಟ್ಟಿರುವುದು ನಂತರ ಹಣ ಪಡೆದಿರುವುದು, ನಗದು ಹಾಗೂ ಆರ್‌ಟಿಜಿಎಸ್‌ ಮೂಲಕ ತಮ್ಮ ಖಾತೆಗೆ ಹಣ ವರ್ಗಾವಣೆ ಆಗಿರುವುದು ಮತ್ತು ತಮ್ಮ ಸಹಚರರ ಮೂಲಕ ಸಮನ್ವಯ ಮಾಡಲು ತಿಳಿಸಿರುವುದು ಹಾಗೂ ಹಣ ಪಡೆದಿರುವ ಬಗ್ಗೆಯೂ ಖಚಿತಪಡಿಸಿರುವುದು ಈ ಪ್ರಕರಣಕ್ಕೆ ಹೆಚ್ಚಿನ ಪುಷ್ಠಿ ನೀಡುತ್ತದೆ ಎಂದು ದೂರಿನಲ್ಲಿ ಹೇಳಲಾಗಿದೆ.

the fil favicon

SUPPORT THE FILE

Latest News

Related Posts