ವಿಶೇಷ ಅಭಿವೃದ್ಧಿ ಯೋಜನೆ; ಇಲಾಖೆಗಳ ಬಳಿ 603 ಕೋಟಿ ಖರ್ಚಿನ ವಿವರಗಳೇ ಇಲ್ಲ

ಬೆಂಗಳೂರು; ವಿಶೇಷ ಅಭಿವೃದ್ಧಿ ಯೋಜನೆಯಡಿ 2018-19 ಮತ್ತು 2019-20ನೇ ಸಾಲಿನಲ್ಲಿ ನೀಡಲಾದ ಅನುದಾನದ ಪೈಕಿ ಈಗಾಗಲೇ 603.22 ಕೋಟಿ ರು. ಖರ್ಚು ಮಾಡಿರುವ ಹಲವು ಇಲಾಖೆಗಳ ಬಳಿ ಅದರ ವಿವರಗಳೇ ಇಲ್ಲ. ಅಲ್ಲದೆ ಯೋಜನೆಯಡಿ ಹಂಚಿಕೆಯಾಗಿದ್ದ ಅನುದಾನ ಬಳಕೆ ಸಂಬಂಧ ಸಲ್ಲಿಕೆಯಾಗಿದ್ದ ಕ್ರಿಯಾ ಯೋಜನೆಗಳೂ ಹಲವು ತಪ್ಪುಗಳಿಂದ ಕೂಡಿರುವುದು ಬಹಿರಂಗವಾಗಿದೆ.

ಯೋಜನಾ ಇಲಾಖೆಯ ಎಡಿಬಿ ವಿಭಾಗ 2020ರ ಸೆ. 8ರಂದು ನಡೆದಿದ್ದ ಸಭೆಯಲ್ಲಿ ಇಲಾಖೆಗಳ ಬಳಿ ಖರ್ಚಿನ ವಿವರಗಳೇ ಇಲ್ಲದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ವಿಶೇಷ ಅಭಿವೃದ್ಧಿ ಯೋಜನೆಯಡಿ ಕೋಟ್ಯಂತರ ಮೊತ್ತದಲ್ಲಿ ಅನುದಾನ ನೀಡಿದ್ದರೂ ಹಲವು ಇಲಾಖೆಗಳು ಕ್ರಿಯಾ ಯೋಜನೆಗಳನ್ನು ಸಲ್ಲಿಸಿಲ್ಲ. ಅಲ್ಲದೆ ಸಲ್ಲಿಸಿರುವ ಕ್ರಿಯಾ ಯೋಜನೆಗಳು ವ್ಯತ್ಯಾಸಗಳಿಂದ ಕೂಡಿವೆ ಎಂಬುದು ಗೊತ್ತಾಗಿದೆ. ಸಭೆ ನಡವಳಿಯ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಹಾಗೆಯೇ ಕಳೆದ 3 ವರ್ಷದಲ್ಲಿ ಬಿಡುಗಡೆ ಮತ್ತು ವೆಚ್ಚದ ವಿವರಗಳನ್ನು ನೀಡದ ಬಹುತೇಕ ಇಲಾಖೆ ಅಧಿಕಾರಿಗಳು ಯೋಜನೆ ಇಲಾಖೆ ನಡೆಸುವ ಸಭೆಗಳಿಗೂ ಗೈರು ಹಾಜರಾಗುತ್ತಿದ್ದಾರೆ. ಸಭೆಗೆ ಗೈರಾಗುವ ಮೂಲಕ ಕರ್ತವ್ಯ ಲೋಪ ಆರೋಪಕ್ಕೂ ಅಧಿಕಾರಿಗಳು ಗುರಿಯಾಗಿದ್ದಾರೆ.

ಖರ್ಚಿನ ವಿವರ ನೀಡದ ಇಲಾಖೆಗಳ ಪೈಕಿ ಲೋಕೋಪಯೋಗಿ ಇಲಾಖೆ ಅಗ್ರ ಸ್ಥಾನದಲ್ಲಿದೆ. 370.70 ರು.ಗಳನ್ನು ಖರ್ಚು ಮಾಡಿದ್ದರೂ ಯಾವ ಯಾವ ಬಾಬ್ತುಗಳಿಗೆ ಖರ್ಚಾಗಿದೆ ಎಂಬ ವಿವರಗಳನ್ನು ಯೋಜನಾ ಇಲಾಖೆಗೆ ಸಲ್ಲಿಸಿಲ್ಲ ಎಂಬುದು ನಡವಳಿಯಿಂದ ತಿಳಿದು ಬಂದಿದೆ.

ಡಾ ನಂಜುಂಡಪ್ಪ ವರದಿಯನ್ವಯ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಸಂಬಂಧಿಸಿದಂತೆ 2017-18, 2018-19, 2019-20ನೇ ಸಾಲಿಗೆ ಬಿಡುಗಡೆಯಾದ ಅನುದಾನ ವೆಚ್ಚಗಳ ವಿವರಗಳನ್ನು ಅಧಿಕಾರಿಗಳು ಯೋಜನೆವಾರು ಸಲ್ಲಿಸಿಲ್ಲ. ಕೆಲವು ಇಲಾಖೆಗಳು ಅನುದಾನ ವೆಚ್ಚಗಳನ್ನು ವಿವರಗಳನ್ನು ಸಲ್ಲಿಸಿದ್ದರೂ ಸಹ ಹಲವು ವ್ಯತ್ಯಾಸಗಳಿಂದ ಕೂಡಿವೆ ಎಂಬುದು ನಡವಳಿಯಿಂದ ತಿಳಿದು ಬಂದಿದೆ.

ಸಾರಿಗೆ ಇಲಾಖೆಗೆ 2019-20ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಯೋಜನೆಯಡಿ 53 ಕೋಟಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಯೋಜನೆಯಡಿ 50 ಕೋಟಿ, ಬೆಂಗಳೂರು ಮಹಾನಗರ ಸಾರಿಗೆ (ಬಿಎಂಟಿಸಿ) ಯೋಜನೆಯಡಿ 4.27 ಕೋಟಿ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಯೋಜನೆಯಡಿ 40 ಕೋಟಿಯನ್ನು ಖರ್ಚು ಮಾಡಿರುವ ಅಧಿಕಾರಿಗಳು ವೆಚ್ಚದ ವಿವರಗಳನ್ನು ನೀಡಿಲ್ಲ ಎಂಬುದು ನಡವಳಿಯಿಂದ ಗೊತ್ತಾಗಿದೆ.

ಮೂಲಭೂತ ಸೌಕರ್ಯ ಅಭಿವೃದ್ಧಿ ಇಲಾಖೆಗೆ ರೈಲ್ವೆ ಯೋಜನೆಗಳ ವೆಚ್ಚ ಹಂಚಿಕೆಯಡಿ 2018-19ನೇ ಸಾಲಿನಲ್ಲಿ 87.37 ಕೋಟಿ, 2019-20ನೇ ಸಾಲಿನಲ್ಲಿ 35.51 ಕೋಟಿ ಖರ್ಚಾಗಿದೆಯಾದರೂ ಅದರ ವಿವರಗಳನ್ನು ನೀಡದ ಅಧಿಕಾರಿಗಳು 2019-20ನೇ ಸಾಲಿನ ಅನುದಾನಕ್ಕೂ ಯಾವುದೇ ಮಾಹಿತಿಗಳನ್ನೂ ಒದಗಿಸಿಲ್ಲ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸಂಬಂಧಿಸಿದಂತೆ 2019-20ನೇ ಸಾಲಿನಲ್ಲಿ 82.96 ಕೋಟಿ ರು.ನಲ್ಲಿ ಬಿಡುಗಡೆಯಾಗಿರುವ ಮಾಹಿತಿ ಹಾಗೂ ವೆಚ್ಚದ ಮಾಹಿತಿಯನ್ನೂ ಒದಗಿಸಿಲ್ಲ. ಅಲ್ಪಸಂಖ್ಯಾತರ ಇಲಾಖೆಗೆ ವಸತಿ ನಿಲಯ, ವಸತಿ ಶಾಲೆ, ಕಟ್ಟಡಗಳ ನಿರ್ಮಾಣ, ಕಚೇರಿ ಸಂಕೀರ್ಣಗಳು, ಉರ್ದು ಸಮಾವೇಶ ಮತ್ತು ಸಾಂಸ್ಕೃತಿಕ ಕೇಂಧ್ರ ಯೋಜನೆಯಡಿಯಲ್ಲಿ ನೀಡಲಾಗಿದ್ದ 50.00 ಕೋಟಿ ಖರ್ಚಿನ ಬಗ್ಗೆಯೂ ವಿವರಗಳನ್ನು ಒದಗಿಸಿಲ್ಲ.

2019-20ನೇ ಸಾಲಿನಲ್ಲಿ 370.70 ಕೋಟಿ ರು. ಅನುದಾನವನ್ನು ಪಡೆದಿರುವ ಲೋಕೋಪಯೋಗಿ ಇಲಾಖೆಯು ವೆಚ್ಚದ ಮಾಹಿತಿ ನೀಡಿಲ್ಲ ಎಂಬುದು ನಡವಳಿಯಿಂದ ತಿಳಿದು ಬಂದಿದೆ. ಅಲ್ಲದೆ 2020-21ನೇ ಸಾಲಿನಲ್ಲಿಯೂ 217.84 ಕೋಟಿ ನಿಗದಿಪಡಿಸಿದ್ದರೂ ಈ ಸಂಬಂಧ ಅಧಿಕಾರಿಗಳು ಸಲ್ಲಿಸಿರುವ ಕ್ರಿಯಾ ಯೋಜನೆಯು ತಪ್ಪುಗಳಿಂದ ಕೂಡಿವೆ ಎಂಬುದು ಗೊತ್ತಾಗಿದೆ.

ರಾಷ್ಟ್ರೀಯ ಸುಸ್ಥಿರ ಕೃಷಿ ಅಭಿಯಾನ ಯೋಜನೆಯಡಿಯಲ್ಲಿ 2019-20ನೇ ಸಾಲಿನಲ್ಲಿ 20.37 ಕೋಟಿ, ಸಮಗ್ರ ತೋಟಗಾರಿಕೆ ಯೋಜನೆಯಡಿಯಲ್ಲಿ 4.91 ಕೋಟಿ ರು.ಗಳನ್ನು ರಾಷ್ಟ್ರೀಯ ತೋಟಗಾರಿಕೆ ಮಿಷನ್‌ ಅಡಿಯಲ್ಲಿ ಒಟ್ಟು 24.05 ಕೋಟಿ ರು.ಗಳನ್ನು ಒದಗಿಸಿತ್ತು. ಅನುದಾನವನ್ನು ಖರ್ಚು ಮಾಡಿರುವ ಇಲಾಖೆ ಯಾವುದೇ ವೆಚ್ಚದ ವಿವರಗಳನ್ನೂ ನೀಡಿಲ್ಲ ಎಂದು ನಡವಳಿಯಿಂದ ಗೊತ್ತಾಗಿದೆ.

the fil favicon

SUPPORT THE FILE

Latest News

Related Posts