ಭೂ ಕುಬೇರರ ರಾಜ್ಯವಾಗುವತ್ತ ಕರ್ನಾಟಕದ ದಾಪುಗಾಲು ಭೂಸುಧಾರಣಾ ತಿದ್ದುಪಡಿ!

ಕರ್ನಾಟಕದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಎಂದೂ ಕೇಸರಿ ಉಡುಗೆ ತೊಟ್ಟವರಲ್ಲ. ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮೂರು ಬಾರಿಯೂ ಅವರು ತಮ್ಮ ಬಿಳಿ ಸಫಾರಿ ಸೂಟಿನ ಮೇಲೆ ಹಸಿರು ಶಾಲು ಹೊದ್ದಿದ್ದರು. ಸಾಂಕೇತಿಕವಾದ ಆ ನಡೆಯ ಮೂಲಕ ತಮ್ಮ ಪಕ್ಷದ ಹಿಂದುತ್ವದ ಸಿದ್ಧಾಂತಕ್ಕಿಂತ ತಮಗೆ ರೈತರು ಮತ್ತು ಕೃಷಿಯೇ ಆದ್ಯತೆ ಎಂಬ ಸಂದೇಶ ರವಾನಿಸಿದ್ದರು.

ಲೋಲುಪ ಸಮಾಜವಾದಿಗಳು, ಲೋಹಿಯಾವಾದಿಗಳು ಮತ್ತು ಜಾತಿವಾದಿ ನಾಯಕರ ನಡುವೆ ಹೀಗೆ ಯಡಿಯೂರಪ್ಪ ಪರಸ್ಪರ ತಾಳೆಯಾಗದ ಬಣ್ಣಗಳನ್ನು ಕಲಸಿ ತಮ್ಮದೇ ಹೊಸ ವಿಶಿಷ್ಟ ಅಸ್ತಿತ್ವ ಕಟ್ಟಿಕೊಂಡಿದ್ದರು. ಹಾಗೆ ನೋಡಿದರೆ; ಸೈದ್ಧಾಂತಿಕವಾಗಿ ಯಡಿಯೂರಪ್ಪ ಯಾವ ಕಡೆಯೂ ಗಟ್ಟಿಯಾಗಿ ಸಲ್ಲುವವರಲ್ಲ. ಆದರೆ, 1980ರ ದಶಕದಲ್ಲಿ ರಾಜಕಾರಣದ ಮುನ್ನೆಲೆಗೆ ಬರುವ ಹೊತ್ತಿಗೆ ಯಡಿಯೂರಪ್ಪ ಅವರ ಈ ವಿಭಿನ್ನ ಬಣ್ಣಗಳ ಕಲೆಗಾರಿಕೆ ಪರಿಣಾಮಕಾರಿ ದಾಳವೇ ಆಗಿತ್ತು.

ಇಂದಿಗೂ ಕೃಷಿ ವಲಯಕ್ಕೆ ಸಂಬಂಧಿಸಿದಂತೆ ಐತಿಹಾಸಿಕ ಎನ್ನಬಹುದಾದ ಯಾವುದೇ ಸುಧಾರಣೆಗಾಗಿ ಯಡಿಯೂರಪ್ಪ ಹೆಸರಾಗಿಲ್ಲ. ಆದಾಗ್ಯೂ ಪ್ರತ್ಯೇಕ ಕೃಷಿ ಬಜೆಟ್, ರೈತರನ್ನು ಯೋಗಿ ಎಂದು ಬಣ್ಣಿಸಿದ ಪದ್ಯವನ್ನು ರೈತ ಗೀತೆ ಎಂದು ಘೋಷಿಸಿದ್ದು, ಮುಂತಾದ ಸಾಂಕೇತಿಕ ವರಸೆಗಳ ಮೂಲಕವೇ ಯಡಿಯೂರಪ್ಪ ರೈತ ನಾಯಕ ಎಂಬ ಹೆಚ್ಚುಗಾರಿಕೆ ಹೊತ್ತಿದ್ದಾರೆ. ಇಂತಹ ಸಾಂಕೇತಿಕ ವರಸೆಗಳ ಮೂಲಕ ತೊಟ್ಟಿದ್ದ ಮುಖವಾಡ ಇದೀಗ ಕರ್ನಾಟಕ ಭೂ ಸುಧಾರಣಾ ಕಾಯ್ದೆಯ ತಿದ್ದುಪಡಿಯ ಮೂಲಕ ಕಳಚಿಬಿದ್ದಿದೆ.

ಹಾಗಾಗಿಯೇ ಯಡಿಯೂರಪ್ಪ ಎಂದೂ ಕೇಸರಿಕರಣದ ಮುಖವಾಗಿರಲಿಲ್ಲ ಎಂಬುದು ಎಷ್ಟು ನಿಜವೋ, ಅಷ್ಟೇ ಅವರು ಹಸಿರೀಕರಣದ ಮುಖವೂ ಆಗಿಲ್ಲ ಎಂಬುದನ್ನು ಈ ತಿದ್ದುಪಡಿ ಜಗಜ್ಜಾಹೀರು ಮಾಡಿದೆ. ಈಗ ಅವರ ರಾಜಕೀಯ ಬದುಕಿನ ಹೆಚ್ಚುಗಾರಿಕೆ, ಬಳುವಳಿ ಎಂದರೆ ಅದು ಅವರ ಜಾತಿ ಧ್ರುವೀಕರಣ ಮತ್ತು ತಾವು, ತಮ್ಮ ಮಗ ಮತ್ತು ತಮ್ಮ ಸರ್ಕಾರದ ವಿರುದ್ಧದ ಪರಮ ಭಷ್ಟಾಚಾರ, ಸಾಲುಸಾಲು ಹಗರಣಗಳ ಕುರಿತ ಆರೋಪಗಳೇ.

ಮೋದಿವರ ಮೂರು ವಿವಾದಿತ ಕೃಷಿ ಮಸೂದೆಗಳಂತೆಯೇ, ಐತಿಹಾಸಿಕ ಭೂ ಸುಧಾರಣಾ ಕಾಯ್ದೆಗೆ ಯಡಿಯೂರಪ್ಪ ತಂದಿರುವ ತಿದ್ದುಪಡಿಗಳೂ ಕಳೆದ ವಾರ ಅಂಗೀಕಾರವಾಗಿವೆ ಮತ್ತು ಅದಕ್ಕೂ ಮುನ್ನ ಕರೋನಾ ಸಂಕಷ್ಟದ ಆತಂಕದ ನಡುವೆಯೇ ಸುಗ್ರೀವಾಜ್ಞೆಯ ವೇಷ ತೊಟ್ಟು ಜಾರಿಗೂ ಬಂದಿವೆ. ಆದರೆ, ಈ ಹೊತ್ತಲ್ಲಿ ಹೀಗೆ ಧಾವಂತಕ್ಕೆ ಬಿದ್ದು, ಇನ್ನಿಲ್ಲದ ತರಾತುರಿಯಲ್ಲಿ ಈ ತಿದ್ದುಪಡಿಗಳನ್ನು ಯಾಕೆ ಮಾಡಲಾಯಿತು ಎಂಬುದು ಯಾರೊಬ್ಬರಿಗೂ ಸ್ಟಷ್ಟವಾಗಿ ತಿಳಿದಿಲ್ಲ. ಆದರೆ, ಯಡಿಯೂರಪ್ಪ ಅವರ ತಿದ್ದುಪಡಿಯ ಹಿಂದೆ ಸ್ವ ಹಿತಾಸಕ್ತಿ ಕಾಯ್ದುಕೊಳ್ಳುವ ಅಜೆಂಡಾವೇ ಪ್ರಮುಖವಾಗಿದೆ ಎಂಬ ಪಿಸುಮಾತಿದೆ.

ಕಾಲ ಬದಲಾಗಿದೆ ನಿಜ. ಆದರೆ, ಬಡವರ ಪರವಾಗಿ ಅದು ಎಷ್ಟು ಬದಲಾಗಿದೆ ಎಂಬುದು ಮುಖ್ಯ. ಆ ಹಿನ್ನೆಲೆಯಲ್ಲಿ; ಇಂತಹ ತಿದ್ದುಪಡಿ ತಂದವರು ಮತ್ತು ಅದನ್ನು ವಿರೋಧಿಸುವ ನಾಟಕವಾಡುತ್ತಿರುವ ರಾಜಕಾರಣಿಗಳಿಬ್ಬರೂ ಅರಸು ಅವರ ಹೆಸರೆತ್ತುವ ಅರ್ಹತೆ ಕೂಡ ಕಳೆದುಕೊಂಡಿದ್ದಾರೆ. ಹಾಗೇ ಮೂರು ಕಾಸಿನ ಬೆಲೆ ಇಲ್ಲದ ಲೆಟರ್ ಹೆಡ್ ಬಳಸಿ, ಅರಸು ಅವರಿಗೆ ಭಾರತ ರತ್ನ ಕೊಡಿ ಎಂದು ಸರ್ಕಾರದ ಮುಂದೆ ಅಹವಾಲು ಸಲ್ಲಿಸುವುದನ್ನೂ ನಿಲ್ಲಿಸಬೇಕಿದೆ. ಏಕೆಂದರೆ, ಅರಸು ಅವರ ಹೆಚ್ಚುಗಾರಿಕೆ ಮತ್ತು ಬಳುವಳಿಯ ಅವಿಭಾಜ್ಯ ಅಂಗವನ್ನೇ ಈಗ ಈ ತಿದ್ದುಪಡಿಯ ಮೂಲಕ ಕಡಿದು ತುಂಡರಿಸಲಾಗಿದೆ!

ಜೊತೆಗೆ ಈಗಾಗಲೇ ಕೌಟುಂಬಿಕ ಉದ್ಯಮ ಸಾಮ್ರಾಜ್ಯ ಕುಸಿಯುತ್ತಿರುವ ಹಿರಿಯ ರಾಜಕಾರಣಿಯೊಬ್ಬರ ಮುಲಾಜು ಕೂಡ ಈ ತರಾತುರಿಯ ಹಿಂದೆ ಕೆಲಸ ಮಾಡಿದೆ ಎನ್ನಲಾಗುತ್ತಿದೆ. ಆದರೆ, ಇದಾವುದೂ ಮಾಧ್ಯಮಗಳ ಗಮನ ಸೆಳೆದಿಲ್ಲ. ಏಕೆಂದರೆ ಮಾದಕ ವ್ಯಸನ ಹಗರಣದಲ್ಲಿ ಸಿಲುಕಿರುವ ಕನ್ನಡ ಸಿನಿಮಾ ನಟ-ನಟಿಯರ ಹಿಂದೆ ಬಿದ್ದಿರುವ ಆ ಮಾಧ್ಯಮ, ಇಂತಹ ವಿಷಯಗಳತ್ತ ಕಣ್ಣುಹಾಯಿಸುವ ಗೋಜಿಗೇ ಹೋಗಿಲ್ಲ. ಬಾಲಿವುಡ್ ಟ್ರೆಂಡನ್ನೇ ಅನುಕರಿಸುತ್ತಿರುವ ಕನ್ನಡ ಸಿನಿಮಾ ರಂಗದಲ್ಲಿ ಕಂಗನಾ ರನಾವತ್ ಪಾತ್ರವನ್ನು ಗೌರಿ ಲಂಕೇಶರ ಸಹೋದರ ಇಂದ್ರಜಿತ್ ಲಂಕೇಶ್ ವಹಿಸಿದ್ದಾರೆ. ತಮ್ಮ ಸಹೋದರಿಯ ಹೋರಾಟದ ವಿಷಯದಲ್ಲಿ ಎಂದೂ ಆಸಕ್ತಿ ವಹಿಸದ ಆತ, ಮಾದಕ ವ್ಯಸನ ಪ್ರಕರಣದಲ್ಲಿ ಆಸಕ್ತಿ ತಾಳಿದ್ದು ವಿಶೇಷ.

ಅದೇನೇ ಇರಲಿ; 1961ರ ಭೂ ಸುಧಾರಣಾ ಕಾಯ್ದೆಗೆ ಯಡಿಯೂರಪ್ಪ ತಂದಿರುವ ತಿದ್ದುಪಡಿ ಏನೆಂದರೆ; ಮುಖ್ಯವಾಗಿ ಕೃಷಿ ಭೂಮಿ ಖರೀದಿಗೆ ಇದ್ದ ಆದಾಯ ಮಿತಿಯನ್ನು ತೆಗೆದುಹಾಕಿರುವುದು. ಹಾಗೇ ಕೃಷಿಯೇತರ ಕುಟುಂದವರು ಕೃಷಿ ಭೂಮಿ ಖರೀದಿಸಲು ಇದ್ದ ನಿರ್ಬಂಧವನ್ನೂ ಕೈಬಿಡಲಾಗಿದೆ. ಹಾಗೇ ಕೃಷಿಯೇತರ ಹಿನ್ನೆಲೆಯ ವ್ಯಕ್ತಿಗಳಿಗೆ ಕೃಷಿ ಭೂಮಿಯನ್ನು ಮಾರಾಟ, ಉಡುಗೊರೆ ಅಥವಾ ವಿನಿಮಯದ ರೂಪದಲ್ಲಿ ಕೃಷಿ ಭೂಮಿಯ ವರ್ಗಾವಣೆಗೆ ಇದ್ದ ನಿಷೇಧವನ್ನೂ ತೆಗೆದುಹಾಕಲಾಗಿದೆ. ಈ ಎಲ್ಲದರ ಒಟ್ಟಾರೆ ಪರಿಣಾಮ ಏನು ಎಂಬುದನ್ನು ಅರ್ಥಮಾಡಿಕೊಳ್ಳುವುದು ದೊಡ್ಡ ಮಹಾನ್ ಸವಾಲಿನ ಸಂಗತಿ ಏನಲ್ಲ.

ಬೆಂಗಳೂರು ಸುತ್ತಮುತ್ತಲಿನ ಹತ್ತನೇ ತರಗತಿ ಫೇಲಾದ ಯಾವುದೇ ರಿಯಲ್ ಎಸ್ಟೇಟ್ ಏಜೆಂಟ್ ಕೂಡ ಅದನ್ನು ವಿವರಿಸಬಲ್ಲ. ಕಾರ್ಪೊರೇಟ್ ಜಮೀನ್ದಾರಿಕೆಗೆ ಇದು ನೆರವಾಗುತ್ತದೆ ಎಂಬುದು ಸೈದ್ಧಾಂತಿಕ ವಾದ. ಆದರೆ, ಅಷ್ಟೇ ಅಲ್ಲ; ಬೇನಾಮಿ ಹೆಸರಿನಲ್ಲಿ ಭಾರೀ ಆಸ್ತಿಪಾಸ್ತಿ ಹೊಂದಿರುವವರಿಗೆ ಅಂತಹ ಅಕ್ರಮ ಸಂಪಾದನೆಯನ್ನು ಸಕ್ರಮಗೊಳಿಸಲು ಪ್ರಮುಖವಾಗಿ ಈ ತಿದ್ದುಪಡಿ ವರದಾನವಾಗುತ್ತದೆ ಎಂಬುದು ವಾಸ್ತವ. ಅಂತಹ ಕುಳಗಳ ಕುಟುಂಬದ ಅನಿಶ್ಚಿತತೆ, ಆತಂಕವನ್ನು ಈ ತಿದ್ದುಪಡಿ ದೂರ ಮಾಡುತ್ತದೆ. ಅದೇ ಹೊತ್ತಿಗೆ ಬಡ ಮತ್ತು ಮಧ್ಯಮ ವರ್ಗದ ರೈತರನ್ನು ಹಂತಹಂತವಾಗಿ ಅಳಿಸಿಹಾಕಲಾಗುತ್ತದೆ ಎಂಬುದು ಕೂಡ ಸತ್ಯ. ಹಾಗೆ ಭೂಮಿ ಕಳೆದುಕೊಂಡು, ಭೂರಹಿತರಾಗಿ ಬದಿಗೆ ಸರಿಯುವ ಆ ಮಂದಿ ಈಗಾಗಲೇ ಇರುವ ಅಂತಹ ಬಹುದೊಡ್ಡ ಸಂಖ್ಯೆಯ ಭೂವಂಚಿತರ ದಂಡಾಗಿ ಉಳಿಯುತ್ತಾರೆ ಮತ್ತು ನಿರ್ಜೀವ ದತ್ತಾಂಶವಾಗುತ್ತಾರೆ.

ಈ ಬೆಳವಣಿಗೆಯಿಂದ ತಕ್ಷಣಕ್ಕೆ ಲಾಭ ಪಡೆಯುವವರು ರಾಜಕೀಯ ವರ್ಗ. ಕಳೆದ ಕೆಲವು ದಶಕಗಳಲ್ಲಿ ತಮ್ಮ ರಿಯಲ್ ಎಸ್ಟೇಟ್ ಉದ್ಯಮ ಮತ್ತು ಬೇನಾಮಿ ಆಸ್ತಿಯ ರಕ್ಷಣೆ ಮತ್ತು ವೃದ್ಧಿಯ ಏಕೈಕ ಉದ್ದೇಶದಿಂದ ರಾಜಕೀಯ ರಂಗಕ್ಕೆ ಕಾಲಿಟ್ಟಿರುವವರ ಪ್ರಮಾಣ ಎಷ್ಟಿದೆ ಎಂಬುದನ್ನು ಗಮನಿಸಿದರೆ ಅಚ್ಚರಿಯಾಗದೇ ಇರದು. ಇದು ಪಕ್ಷಾತೀತವಾಗಿ ಎಲ್ಲಾ ಪಕ್ಷಗಳಲ್ಲೂ ಆಗಿದೆ ಎಂಬುದು ಗಮನಾರ್ಹ. ಸತ್ತ ಮೇಲೂ ಸಂಪತ್ತನ್ನು ಅನುಭವಿಸಬಹುದು. ಸೌರಮಂಡಲದಾಚೆಗೂ ಬ್ಯಾಂಕ್ ಖಾತೆಗಳನ್ನು ನಿರ್ವಹಿಸಬಹುದು ಎಂದು ಅವರ ಪರಮವಂಚಕ ಜ್ಯೋತಿಷಿಗಳು ಭವಿಷ್ಯ ನುಡಿದಿರಬಹುದು. ಈಗಾಗಲೇ ಇಂತಹ ಧನದಾಹಿ, ಭೂಗಳ್ಳರು ನಮ್ಮ ವಿಧಾನಸಭಾ ಮತ್ತು ಸಂಸತ್ತಿನ ಭಾಗವಾಗಿದ್ದಾರೆ.

ಬೆಂಗಳೂರು ವಿಮಾನನಿಲ್ದಾಣ ಅಥವಾ ಮೈಸೂರು ರಸ್ತೆ ಮತ್ತಿತರ ಆಯಕಟ್ಟಿನ ಪ್ರದೇಶಗಳಲ್ಲಿ ಇಂತಹ ಹಲವು ರಾಜಕಾರಣಿಗಳು ನೂರಾರು ಎಕರೆ ಭೂಮಿ ಖರೀದಿಸಿದ್ದಾರೆ. ಆ ಪೈಕಿ ಬಹುತೇಕ ಬೇನಾಮಿ ಆಸ್ತಿ ಎಂಬುದು ಗುಟ್ಟೇನಲ್ಲ. ಹಿಂದಿನ ಭೂ ಸುಧಾರಣಾ ಕಾಯ್ದೆಯ ಅನ್ವಯ ಅಕ್ರಮ ಎಂದಾಗಿದ್ದ ಇಂತಹ ಬೇನಾಮಿ ಆಸ್ತಿ, ಕಾನೂನುಬಾಹಿರ ಖರೀದಿಗೆ ಸಂಬಂಧಿಸಿದ ಸುಮಾರು 14 ಸಾವಿರ ಪ್ರಕರಣಗಳು ಬಾಕಿ ಇದ್ದವು. ಈಗ ಹೊಸ ತಿದ್ದುಪಡಿಯ ಮೂಲಕ ಈ ಎಲ್ಲಾ ಪ್ರಕರಣಗಳು ತಾನೇ ತಾನಾಗಿ ಸಕ್ರಮವಾಗಿಬಿಡುತ್ತವೆ. ಇದು ನಗ್ನ ಸತ್ಯ.

ಕರ್ನಾಟಕದಲ್ಲಿ ಬೃಹತ್ ಭೂ ಹಗರಣದ ವಿಷಯದಲ್ಲಿ ಯಾರಾದರೂ ಒಂದು ಮೈಲಿಗಲ್ಲು ಎಂದು ಪರಿಗಣಿಸುವುದಾದರೆ, ಅದು 1986ರ ರಾಮಕೃಷ್ಣ ಹೆಗಡೆಯ ಎನ್ ಆರ್ ಐ ಹೌಸಿಂಗ್ ಸ್ಕೀಂ ಹಗರಣವೇ. ಆ ಹಗರಣದ ತನಿಖೆ ನಡೆಸಿದ ಕುಲದೀಪ್ ಸಿಂಗ್ ಆಯೋಗ, ಅದೊಂದು ಸಂಪೂರ್ಣ ವಂಚನೆಯ ಪ್ರಕರಣ ಎಂದು ಸ್ಪಷ್ಟವಾಗಿ ಹೇಳಿದಂತೆ, ಮುಂಚೂಣಿ ಕಂಪನಿಯೊಂದನ್ನು ಇಟ್ಟುಕೊಂಡು ಬೆಂಗಳೂರಿನ ಹೊರವಲಯದ 110 ಎಕರೆ ಜಮೀನು ಪಡೆದದ್ದಲ್ಲದೆ, ಆ ಪೈಕಿ 40 ಎಕರೆ ಹಸಿರುವಲಯದ ಭೂಮಿಯನ್ನೂ ಕಬಳಿಸಲಾಗಿತ್ತು ಎಂಬುದನ್ನು ತನಿಖೆ ಸ್ಪಷ್ಟವಾಗಿ ಹೇಳಿತ್ತು. ಆಗಿನಿಂದಲೂ ಪ್ರಮುಖ ಐಟಿ ಕಂಪನಿಗಳೂ ಸೇರಿದಂತೆ ಎಲ್ಲಾ ಕಾರ್ಪೊರೇಟ್ ಕಂಪನಿಗಳು ತಮ್ಮದೇ ಆದ ಲ್ಯಾಂಡ್ ಬ್ಯಾಂಕ್ ಹೊಂದಲು ಪ್ರಯತ್ನಿಸುತ್ತಲೇ ಇವೆ.

ಹಿಂದಿನ ಭೂ ಸುಧಾರಣಾ ಕಾಯ್ದೆ ಇಂತಹ ಆಕಾಂಕ್ಷೆಗಳಿಗೆ ಕಡಿವಾಣ ಹಾಕಿದರೂ, ರಂಗೋಲಿ ಕೆಳಗೆ ತೂರುವ ವಂಚಕ ನಡೆಯ ಮೂಲಕ ಕಂಪನಿಗಳು ತಮ್ಮ ಕಾರ್ಯಸಾಧಿಸಿಕೊಳ್ಳುತ್ತಿದ್ದವು. ಆದರೆ, ಈಗ ಹೊಸ ತಿದ್ದುಪಡಿ ಮೂಲಕ ಎಲ್ಲವೂ ಮುಕ್ತ ಮತ್ತು ನ್ಯಾಯಸಮ್ಮತವೇ ಆಗಿಹೋಗಿದೆ. ಹೀಗೆ ಕಾರ್ಪೊರೇಟ್ ಕಂಪನಿಗಳ ಭೂದಾಹ ಮತ್ತು ರೈತರ ನಡುವೆ ಮಧ್ಯವರ್ತಿಗಳಾಗಿ ಇರುವವರು ಈ ರಿಯಲ್ ಎಸ್ಟೇಟ್ ರಾಜಕಾರಣಿಗಳು. ಈ ನಂಟಿನ ಹಿನ್ನೆಲೆಯಲ್ಲಿ ನೋಡಿದರೆ; ಈ ಹೊಸ ತಿದ್ದುಪಡಿ ಖಂಡಿತವಾಗಿಯೂ ಇದೊಂದು ಮ್ಯಾಚ್ ಫಿಕ್ಸಿಂಗ್ ಆಟದಂತೆ ಕಾಣಲಾರದೆ?

ಕರ್ನಾಟಕದಲ್ಲಿ ಭೂ ಸುಧಾರಣಾ ಕಾಯ್ದೆ 1961ರಿಂದಲೇ ಜಾರಿಯಲ್ಲಿದ್ದರೂ, 1974ರ ಮಾರ್ಚ್ ನಲ್ಲಿ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರು ಆ ಕಾಯ್ದೆಗೆ ತಂದ ಬದಲಾವಣೆ ಇಡೀ ಮಸೂದೆಗೆ ಕ್ರಾಂತಿಕಾರಕ ಚಹರೆ ತಂದುಕೊಟ್ಟಿತು. ಉಳುವವನೆ ಹೊಲದೊಡೆಯ ಎಂಬ ಘೋಷಣೆಯೊಂದಿಗೆ ಜಾರಿಗೆ ಬಂದ ಆ ಬದಲಾವಣೆ, ಗೇಣಿ ಪದ್ಧತಿ ಮತ್ತು ಬೆಳೆ ಹಂಚಿಕೆ ಪದ್ಧತಿ ರದ್ದುಪಡಿಸಿ, ಭೂಮಿಯ ನಿಜವಾದ ಸಾಗುವಳಿದಾರನಿಗೇ ಆ ಭೂಮಿಯ ಒಡೆತನದ ಹಕ್ಕು ನೀಡಿತು. ಅದರ ಪರಿಣಾಮವಾಗಿ 1979ರ ಹೊತ್ತಿಗೆ ರಾಜ್ಯದಲ್ಲಿ ಸುಮಾರು 1.25 ಮಿಲಿಯನ್(12.50 ಲಕ್ಷ) ಎಕರೆ ಭೂಮಿಯನ್ನು ಗೇಣಿ ರೈತರಿಗೆ ಮರು ಹಂಚಿಕೆ ಮಾಡಲಾಯಿತು. ಆ ಹೊತ್ತಿಗೆ ಜಾರಿಯಲ್ಲಿದ್ದ ತುರ್ತುಪರಿಸ್ಥಿತಿಯನ್ನು ಬಹಳ ರಚನಾತ್ಮಕವಾಗಿ ಈ ಉದ್ದೇಶಕ್ಕೆ ಬಳಸಿಕೊಳ್ಳಲಾಗಿತ್ತು. ಇದೀಗ ಕರೋನಾ ಸಂಕಷ್ಟದ ನಡುವೆ ಜಾರಿಗೆ ತಂದಿರುವ ಹೊಸ ತಿದ್ದುಪಡಿ ಆ ಎಲ್ಲವನ್ನೂ ತಿರುವುಮುರುವು ಮಾಡಲಿದೆ.

ಕಾಲ ಬದಲಾಗಿದೆ ನಿಜ. ಆದರೆ, ಬಡವರ ಪರವಾಗಿ ಅದು ಎಷ್ಟು ಬದಲಾಗಿದೆ ಎಂಬುದು ಮುಖ್ಯ. ಆ ಹಿನ್ನೆಲೆಯಲ್ಲಿ; ಇಂತಹ ತಿದ್ದುಪಡಿ ತಂದವರು ಮತ್ತು ಅದನ್ನು ವಿರೋಧಿಸುವ ನಾಟಕವಾಡುತ್ತಿರುವ ರಾಜಕಾರಣಿಗಳಿಬ್ಬರೂ ಅರಸು ಅವರ ಹೆಸರೆತ್ತುವ ಅರ್ಹತೆ ಕೂಡ ಕಳೆದುಕೊಂಡಿದ್ದಾರೆ. ಹಾಗೇ ಮೂರು ಕಾಸಿನ ಬೆಲೆ ಇಲ್ಲದ ಲೆಟರ್ ಹೆಡ್ ಬಳಸಿ, ಅರಸು ಅವರಿಗೆ ಭಾರತ ರತ್ನ ಕೊಡಿ ಎಂದು ಸರ್ಕಾರದ ಮುಂದೆ ಅಹವಾಲು ಸಲ್ಲಿಸುವುದನ್ನೂ ನಿಲ್ಲಿಸಬೇಕಿದೆ. ಏಕೆಂದರೆ, ಅರಸು ಅವರ ಹೆಚ್ಚುಗಾರಿಕೆ ಮತ್ತು ಬಳುವಳಿಯ ಅವಿಭಾಜ್ಯ ಅಂಗವನ್ನೇ ಈಗ ಈ ತಿದ್ದುಪಡಿಯ ಮೂಲಕ ಕಡಿದು ತುಂಡರಿಸಲಾಗಿದೆ!

ಕೃಪೆ; ಮುಂಬೈ ಮಿರರ್‌

ಕನ್ನಡ ಅನುವಾದ – ಶಶಿ ಸಂಪಳ್ಳಿ

the fil favicon

SUPPORT THE FILE

Latest News

Related Posts