ಬೆಂಗಳೂರು ರೇಸ್‌ ಕೋರ್ಸ್‌ ಸ್ಥಳಾಂತರಕ್ಕೆ ಪಿಎಸಿ ಶಿಫಾರಸ್ಸು?

ಬೆಂಗಳೂರು; ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಬೆಂಗಳೂರು ರೇಸ್‌ ಕೋರ್ಸ್‌ನ್ನು ಸ್ಥಳಾಂತರಿಸಲು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯು ಶಿಫಾರಸ್ಸು ಮಾಡಿದೆ ಎಂದು ತಿಳಿದು ಬಂದಿದೆ.

ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ಬಾಕಿ ಇರುವ ಕಾರಣ ರೇಸ್‌ ಕೋರ್ಸ್‌ ಸ್ಥಳಾಂತರಿಸಲು ಸಾಧ್ಯವಿಲ್ಲ ಎಂದು ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಮೇಲ್ಮನೆಯಲ್ಲಿ ಹೇಳಿರುವ ಬೆನ್ನಲ್ಲೇ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಮಾಡಿದೆ ಎನ್ನಲಾಗಿರುವ ಈ ಶಿಫಾರಸ್ಸು ಮಹತ್ವ ಪಡೆದುಕೊಂಡಿದೆ.

ಎಚ್‌ ಕೆ ಪಾಟೀಲ್‌ ಅವರ ಅಧ್ಯಕ್ಷತೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಇದೇ ಅಧಿವೇಶನನದಲ್ಲಿ ಮಂಡಿಸುವ ಸಲುವಾಗಿ ಸಿದ್ಧಪಡಿಸಿರುವ ವರದಿಯಲ್ಲಿ ಈ ಶಿಫಾರಸ್ಸನ್ನು ಮಾಡಿದೆ ಎಂದು ಗೊತ್ತಾಗಿದೆ. ವರದಿಯನ್ನು ಸಲ್ಲಿಸಲು ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಈಗಾಗಲೇ ಹಸಿರು ನಿಶಾನೆ ತೋರಿದ್ದಾರೆ ಎಂದು ವಿಶ್ವಸನೀಯ ಮೂಲಗಳು ‘ದಿ ಫೈಲ್‌’ಗೆ ಖಚಿತಪಡಿಸಿವೆ.

36.61 ಕೋಟಿ ಬಾಕಿ ಉಳಿಸಿಕೊಂಡ ಟರ್ಫ್ ಕ್ಲಬ್‌

ಈ ಸಂಸ್ಥೆಯು ಒಟ್ಟಾರೆ ಆದಾಯದ ಶೇ.20ರಷ್ಟನ್ನು 2010-11ರಿಂದ 2018-19ರ ಮಾರ್ಚ್‌ವರೆಗೆ ಒಟ್ಟು 36.61 ಕೋಟಿ ರು.ಗಳನ್ನು ಬಾಕಿ ಉಳಿಸಿಕೊಂಡಿದೆ. ಈ ಮೊತ್ತವನ್ನು ಸಂಸ್ಥೆಯಿಂದ ವಸೂಲು ಮಾಡಲು ಅನುಮತಿ ಕೋರಿ ರಾಜ್ಯ ಸರ್ಕಾರ ಸವೋಚ್ಛ ನ್ಯಾಯಾಲಯಕ್ಕೆ ಮಧ್ಯಂತರ ಅರ್ಜಿ ಸಲ್ಲಿಸಿದೆ ಎಂದು ಗೊತ್ತಾಗಿದೆ.

ತೆರವುಗೊಳಿಸಲು ಆದೇಶಿಸಿದ್ದ ಹೈಕೋರ್ಟ್‌

ಅಲ್ಲದೆ ಈ ಟರ್ಫ್‌ ಕ್ಲಬ್‌ ಸಂಸ್ಥೆ 2009ರ ಗುತ್ತಿಗೆ ಅವಧಿ ಪೂರ್ಣಗೊಂಡ ನಂತರ ಜಮೀನನ್ನು ಹಸ್ತಾಂತರಿಸಿಲ್ಲ. ಬದಲಿಗೆ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ( 30663/2009) ಸಲ್ಲಿಸಿತ್ತು. ಈ ಕುರಿತು ಅರ್ಜಿಯನ್ನು ಆಲಿಸಿದ್ದ ಹೈಕೋರ್ಟ್‌ ರೇಸ್‌ ಕೋರ್ಸ್‌ ಆವರಣವನ್ನು ತೆರವುಗೊಳಿಸಿ ಪರಿಸರ ಸ್ನೇಹಿಯಾಗಿಸಲು 2010ರ ಮಾರ್ಚ್‌ 22ರಂದು ಆದೇಶಿಸಿತ್ತು.

ಆದರೆ ಈ ಅದೇಶವನ್ನು ಪ್ರಶ್ನಿಸಿದ್ದ ಟರ್ಫ್‌ ಕ್ಲಬ್‌ ಸಂಸ್ಥೆಯು ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಿತ್ತು. ಈ ಪ್ರಕರಣದ ವಿಚಾರಣೆ ಇನ್ನೂ ಬಾಕಿ ಇದೆ. ಆದರೆ ರಾಜ್ಯ ಸರ್ಕಾರ ಈ ತಡೆಯಾಜ್ಞೆಯನ್ನು ತೆರವಿಗಾಗಿ ಇನ್ನೂ ಕ್ರಮ ವಹಿಸುವುದರಲ್ಲೇ ಕಾಲಹರಣ ಮಾಡಿದೆ. ‘ ಸದ್ಯ ಪ್ರಕರಣದ ವಿಚಾರಣೆ ಇದೆ. ಇದರಿಂದಾಗಿ ಆ ಜಾಗವನ್ನು ವಶಕ್ಕೆ ತೆಗೆದುಕೊಳ್ಳುವ ಅಥವಾ ಸ್ಥಳಾಂತರಿಸುವ ವಿಚಾರ ಸರಕಾರದ ಮುಂದಿಲ್ಲ. ಹಾಲಿ ವಿಧೇಯಕವು ಪರವಾನಗಿ ನೀಡುವುದಕ್ಕೆ ಸೀಮಿತವಾಗಿದೆ,’ಎಂದು ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಪರಿಷತ್‌ನಲ್ಲಿ ಮಾಹಿತಿ ನೀಡಿದರು.

ವಾಣಿಜ್ಯ ತೆರಿಗೆ ದಾಳಿ ನಡೆದೇ ಇಲ್ಲ

ವಿಶೇಷವೆಂದರೆ ಬೆಂಗಳೂರು ಟರ್ಫ್‌ ಕ್ಲಬ್‌ ಸಂಸ್ಥೆಯ (GSTIN 29 AABCV 6217G 121) ಮೇಲೆ ವಾಣಿಜ್ಯ ತೆರಿಗೆ ಇಲಾಖೆಯು ತಪಾಸಣೆಯಾಗಲೀ ದಾಳಿಯನ್ನಾಗಲಿ ಮಾಡಿಲ್ಲ. ಆದರೆ ಈ ಕ್ಲಬ್‌ನಿಂದ ಪರವಾನಿಗೆ ಪಡೆದು ಜಿಎಸ್‌ಟಿ ಕಾಯ್ದೆ ಅಡಿಯಲ್ಲಿ ನೋಂದಾಯಿಸಿ ಟರ್ಫ್‌ ಕ್ಲಬ್‌ ಆವರಣದಲ್ಲಿ ಬೆಟ್ಟಿಂಗ್‌ ಕಾರ್ಯದಲ್ಲಿ ತೊಡಗಿಸಿಕೋಂಡಿದ್ದ 20 ಮಂದಿ ಬುಕ್‌ ಮೇಕರ್‌ಗಳ ಮೇಲೆ 2020ರ ಫೆ.7ರಂದು ವಾಣಿಜ್ಯ ತೆರಿಗೆ ಇಲಾಖೆಯು ಪರೀಕ್ಷಾರ್ಥ ಖರೀದಿ ಮತ್ತು ತಪಾಸಣೆ ಕೈಗೊಂಡಿತ್ತು.

73 ಎಕರೆ 34 ಗುಂಟೆ ಜಾಗ

ಬೆಂಗಳೂರು ಟರ್ಫ್‌ ಕ್ಲಬ್‌ಗೆ 73 ಎಕರೆ 34.99 ಗುಂಟೆ ಜಮೀನನ್ನು 1989 ಜನವರಿ 1ರಿಂದ ಪೂರ್ವಾನ್ವಯವಾಗುವಂತೆ 1999ರ ಡಿಸೆಂಬರ್‌ 31ರವರೆಗೆ ಒಟ್ಟು 20 ವರ್ಷಗಳ ಅವಧಿಗೆ ಗುತ್ತಿಗೆ ನೀಡಲಾಗಿದೆ. ವಾರ್ಷಿಕ 10 ಲಕ್ಷ ರು.ಗಳಂತೆ 2000ರ ಜನವರಿ 1ರಿಂದ 2009ರ ಡಿಸೆಂಬರ್‌ 31ರವರೆಗೆ ವಾರ್ಷಿಕ ಶೇ.10ರಷ್ಟು ದರವನ್ನು ಹೆಚ್ಚಿಸುವ ನಿಬಂಧನೆಗೊಳಿಗೆ ಒಳಪಟ್ಟು ಗುತ್ತಿಗೆ ನೀಡಲಾಗಿತ್ತು.

ತೆರವುಗೊಳಿಸಲು ಮೇಲ್ಮನೆಯಲ್ಲಿ ಮೂಡಿದ ಒಮ್ಮತ

ರೇಸ್‌ ಕೋರ್ಸ್‌ಗಳಿಗೆ ಪರವಾನಗಿ ನೀಡುವ (ತಿದ್ದುಪಡಿ) ವಿಧೇಯಕ-2020ನ್ನು ಬುಧವಾರ ಮಂಡನೆಯಾಯಿತು. ಈ ವೇಳೆ ಎಲ್ಲ ಪಕ್ಷಗಳಿಗೂ ಸೇರಿದ ಸದಸ್ಯರು ರೇಸ್‌ಕೋರ್ಸ್‌ನ್ನು ಸ್ಥಳಾಂತರಿಸಲು ಸರ್ಕಾರಕ್ಕೆ ಮನವಿ ಮಾಡಿದರು.

‘ವಿಧಾನಸೌಧದ ಕೂಗಳತೆ ದೂರದಲ್ಲಿರುವ ಬಹುಕೋಟಿ ರೂ. ಬೆಲೆಯ ಜಾಗವನ್ನು ಜೂಜಾಡುವುದಕ್ಕಾಗಿ ಮೀಸಲಿಡುವುದು ಸಲ್ಲದು. ಇದರ ಬದಲು ಸರಕಾರಿ ಕಚೇರಿಗಳ ಸಮುಚ್ಚಯ ಒಳಗೊಂಡಂತೆ ಉದ್ಯಾನ ಮಾಡಿ, ನಗರದಲ್ಲಿ ಹಸಿರು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು,’ ಎಂದು ಬಹುತೇಕ ಸದಸ್ಯರು ಪ್ರತಿಪಾದಿಸಿದರು.

‘ರೇಸ್‌ ಕೋರ್ಸ್‌ ಸ್ಥಳಾಂತರಿಸಬೇಕೆಂದು ಹಿಂದಿನಿಂದಲೂ ಒತ್ತಾಯವಿದೆ. ಸದ್ಯ ಪ್ರಕರಣದ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಇದೆ. ಇದರಿಂದಾಗಿ ಆ ಜಾಗವನ್ನು ವಶಕ್ಕೆ ತೆಗೆದುಕೊಳ್ಳುವ ಅಥವಾ ಸ್ಥಳಾಂತರಿಸುವ ವಿಚಾರ ಸರಕಾರದ ಮುಂದಿಲ್ಲ. ಹಾಲಿ ವಿಧೇಯಕವು ಪರವಾನಗಿ ನೀಡುವುದಕ್ಕೆ ಸೀಮಿತವಾಗಿದೆ. ಸಕ್ಷಮ ಪ್ರಾಧಿಕಾರದ ಅಧಿಕಾರಿಯಾಗಿ ಸರಕಾರದ ನಿರ್ದಿಷ್ಟ ಇಲಾಖೆಯ ಅಧಿಕಾರಿ ನಿಯೋಜನೆ ಹಾಗೂ ನಿಯಮ ಉಲ್ಲಂಘನೆಗೆ ದಂಡದ ಮೊತ್ತವನ್ನು 1000 ರೂ.ನಿಂದ ಒಂದು ಲಕ್ಷ ರೂ.ಗೆ ಹೆಚ್ಚಿಸಲಾಗುವುದು’ ಎಂದು ಉತ್ತರಿಸಿದರು.

ಬಹು ಕೋಟಿ ಮೌಲ್ಯದ ಜಾಗ ಜೂಜಾಟಕ್ಕೆ ಮೀಸಲು

ವಿಧಾನಸೌಧದ ಕೂಗಳತೆ ದೂರದಲ್ಲಿರುವ ಬಹುಕೋಟಿ ರೂ. ಬೆಲೆಯ ಜಾಗವನ್ನು ಜೂಜಾಡುವುದಕ್ಕಾಗಿ ಮೀಸಲಿಡುವುದು ಸರಿಯಲ್ಲ. ಇದರ ಬದಲು ಸರ್ಕಾರಿ ಕಚೇರಿಗಳ ಸಮುಚ್ಚಯ ಒಳಗೊಂಡಂತೆ ಉದ್ಯಾನ ನಿರ್ಮಾಣ ಮಾಡಿ, ನಗರದಲ್ಲಿ ಹಸಿರು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಪ್ರತಿಪಾದಿಸಿದರು.

ಅಲ್ಲದೆ ರೇಸ್‌ ಕೋರ್ಸ್‌ ಕ್ಲಬ್‌ ಸದಸ್ಯರಾಗುವುದು ಪ್ರತಿಷ್ಠೆಯಾಗಿದ್ದು, ಅಧ್ಯಕ್ಷ ಸ್ಥಾನಕ್ಕೇರಲು ನಡೆಯುವ ಪೈಪೋಟಿ ಪಾಲಿಕೆ ಚುನಾವಣೆಯನ್ನೂ ಮೀರಿಸುತ್ತದೆ. ಸರಕಾರದ ಜಾಗವನ್ನು ಬಳಸುತ್ತಿದ್ದರೂ, ಸರಕಾರಿ ಆದೇಶಗಳನ್ನು ಪಾಲಿಸದೆ ಉಲ್ಲಂಘನೆ ಪ್ರಕರಣಗಳು ಹೆಚ್ಚುತ್ತಿವೆ ಎಂದು ಸದಸ್ಯರು ಆರೋಪಿಸಿದರು.

the fil favicon

SUPPORT THE FILE

Latest News

Related Posts