ವಸೂಲು ಮಾಡದೇ 66 ಕೋಟಿ ಬಾಕಿ ಉಳಿಸಿಕೊಂಡ ಬೆಂಗಳೂರು ವಿ ವಿ.; ಸಿಎಜಿ ಅಕ್ಷೇಪಣೆ

ಬೆಂಗಳೂರು; ವಿಶ್ವವಿದ್ಯಾಲಯಗಳಿಗೆ ಹಂಚಿಕೆಯಾಗುವ ಅನುದಾನ ಮತ್ತು ಬಳಕೆ ಮಾಡಿರುವ ವಿಧಾನದಲ್ಲಿ ಲೋಪಗಳಿಂದ ಉಂಟಾಗಿರುವ ನಷ್ಟ ಮತ್ತು ಹಣವನ್ನು ವಸೂಲು ಮಾಡುವ ಸಂಬಂಧ ಬೆಂಗಳೂರು ವಿಶ್ವವಿದ್ಯಾಲಯವು ಕಳೆದ 20-25 ವರ್ಷಗಳಿಂದಲೂ ಕೋಟ್ಯಂತರ ರುಪಾಯಿ ಬಾಕಿ ಉಳಿಸಿಕೊಳ್ಳುತ್ತಲೇ ಬಂದಿರುವುದು ಇದೀಗ ಬಹಿರಂಗವಾಗಿದೆ.

1990-91ರಿಂದ 2014-19ರವರೆಗೆ ಒಟ್ಟು 66,35,07,140 ಕೋಟಿ ರು.ಗಳನ್ನು ವಸೂಲು ಮಾಡಲು ಸಿಎಜಿ ವರದಿ ಸೂಚಿಸಿತ್ತು. ಅಲ್ಲದೆ 36,66,78,695 ರು.ಮೊತ್ತವನ್ನು ಆಕ್ಷೇಪಣೆಯಲ್ಲಿಟ್ಟಿದೆ.  ಬೆಂಗಳೂರು ವಿಶ್ವವಿದ್ಯಾಲಯವು  ವಸೂಲು ಮಾಡುವ ಗೋಜಿಗೆ ಹೋಗಿಲ್ಲ. ಈ ಕುರಿತು ವಿಶ್ವವಿದ್ಯಾಲಯದ ಕುಲಸಚಿವರು 2020ರ ಸೆ.9ರಂದು ಉನ್ನತ ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಸಿಎಜಿ ವರದಿಯಲ್ಲಿ ಆಕ್ಷೇಪಣೆ ಕಂಡಿಕೆಗಳಿಗೆ ಉತ್ತರಿಸುವುದು ಮತ್ತು ಸೂಚಿಸಿರುವ ಹಣವನ್ನು ಕಾಲಮಿತಿಯೊಳಗೆ ವಸೂಲು ಮಾಡಬೇಕು. ಆದರೆ ಬೆಂಗಳೂರು ವಿಶ್ವವಿದ್ಯಾಲಯವೂ ಸೇರಿದಂತೆ ರಾಜ್ಯದ ಬಹುತೇಕ ವಿಶ್ವವಿದ್ಯಾಲಯಗಳು ಹತ್ತು ಹಲವು ವರ್ಷಗಳಿಂದಲೂ ಬಾಕಿ ಉಳಿಸಿಕೊಳ್ಳುತ್ತಲೇ ಬಂದಿವೆ. ಮಹಾಲೇಖಪಾಲರು ಈ ಕುರಿತು ವಿಶ್ವವಿದ್ಯಾಲಯಗಳಿಗೆ ಬರೆಯುವ ನೆನಪೋಲೆ ಪತ್ರಗಳಿಗೆ ವಿಶ್ವವಿದ್ಯಾಲಯದ ಅಧಿಕಾರಿಗಳು ಉತ್ತರಿಸುತ್ತಲೂ ಇಲ್ಲ, ಕ್ರಮ ಕೈಗೊಳ್ಳುತ್ತಿಲ್ಲ. ಅಧಿಕಾರಿಗಳ ಕರ್ತವ್ಯಲೋಪದಿಂದ ನಷ್ಟವಾಗಿರುವ ಕೋಟ್ಯಂತರ ರುಪಾಯಿ ವಿಶ್ವವಿದ್ಯಾಲಯದ ಬೊಕ್ಕಸಕ್ಕೆ ಜಮೆಯಾಗುತ್ತಿಲ್ಲ.

ಈ ಕುರಿತು ಉನ್ನತ ಶಿಕ್ಷಣದ ಹಾಲಿ ಸಚಿವ ಡಾ ಸಿ ಎನ್‌ ಅಶ್ವಥ್‌ ನಾರಾಯಣ್‌ ಮತ್ತು ಹಿಂದಿನ ಸಚಿವರು, ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ್ದ ಪ್ರಧಾನ ಕಾರ್ಯದರ್ಶಿಗಳು, ಕುಲಪತಿಗಳು, ಕುಲಸಚಿವರು ಬಿಗಿಯಾದ ಕ್ರಮ ಕೈಗೊಳ್ಳದ ಕಾರಣದಿಂದಾಗಿಯೇ ಕೋಟ್ಯಂತರ ರುಪಾಯಿ ಬಾಕಿ ಉಳಿದುಕೊಂಡಿದೆ ಎನ್ನಲಾಗಿದೆ.

 

ಈ ಪೈಕಿ ಬೆಂಗಳೂರು ವಿಶ್ವವಿದ್ಯಾಲಯವು ಕೇವಲ 49ಕಂಡಿಕೆಗಳಿಗೆ ಕಂಡಿಕೆವಾರು ಪರಿಷ್ಕೃತ ಉತ್ತರಗಳನ್ನು 2020ರ ಆಗಸ್ಟ್‌ 18ರಂದು ಸಲ್ಲಿಸಿದೆ. 13 ಕಂಡಿಕೆಗಳಿಗೆ ವಜಾಪಟ್ಟು (Write Off) ಪ್ರಸ್ತಾವನೆಯನ್ನು ಸಲ್ಲಿಸಿರುವುದು ಪತ್ರದಿಂದ ತಿಳಿದು ಬಂದಿದೆ. ‘1990-91ರಿಂದ 2013-14ರವರೆಗಿನ ಇನ್ನೂ ಬಾಕಿಯಿರುವ 20-25 ವರ್ಷಗಳ ತುಂಬಾ ಹಳೆಯ 48 ಕಂಡಿಕೆಗಳಿಗೆ ಸಂಬಂಧಪಟ್ಟ ವಿಭಾಗಗಳಿಂದ ಕಂಡಿಕೆವಾರು ಉತ್ತರಗಳನ್ನು ಪಡೆದು ಮಹಾಲೇಖಪಾಲರಿಗೆ ಸಲ್ಲಿಸುವ ಕ್ರಮ ವಹಿಸಲಾಗುವುದು,’ ಎಂದು ಕುಲಸಚಿವರು ಪತ್ರದಲ್ಲಿ ಇಲಾಖೆ ಮುಖ್ಯಸ್ಥರಿಗೆ ತಿಳಿಸಿದ್ದಾರೆ.

ವಸೂಲು ಆಗಬೇಕಿರುವುದೆಷ್ಟು?

1990-91ರಿಂದ 1993-94ರವರೆಗೆ 1,19,954 ರು., 1994-95ರಲ್ಲಿ 63,28,545 ರು., 1995-98ರಲ್ಲಿ 1,83,5,642 ರು., 1998-2002ರಲ್ಲಿ 10,82,31,655 ರು., 2002-08ರಲ್ಲಿ 3,47,20,071 ರು., 2008-09ರಿಂದ 2012-13ರಲ್ಲಿ 15,38,86,097 ರು., 2013-14ರಲ್ಲಿ 21,30,39,000 ರು., 2014-15ರಿಂದ 2018-19ರವರೆಗೆ 14,53,46,176 ರು. ಸೇರಿದಂತೆ ಒಟ್ಟು 66,35,07,140 ರು.ಗಳು ವಸೂಲಾಗಬೇಕಿತ್ತು.

ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದಂತೆ ಮಹಾಲೇಖಪಾಲರು 2020ರ ಮೇ 6ರಂದು ಪತ್ರ ಬರೆದಿದ್ದರು. 2014-15ರಿಮದ 2018-19ರವರೆಗಿನ ಲೆಕ್ಕಪತ್ರ ತಪಾಸಣೆ ಪರವಿವೀಕ್ಷಣ ವರದಿ ಸಲ್ಲಿಸಲು ಸೂಚಿಸಿದ್ದರಲ್ಲದೆ ವರದಿ ತಲುಪಿದ ಒಂದು ತಿಂಗಳೊಳಗಾಗಿ ಅನುಸರಣಾ ವರದಿ ಸಲ್ಲಿಸಲು ನಿರ್ದೇಶಿಸಿತ್ತು. ಅಲ್ಲದೆ 1990-91ರಿಂದ 2013-14ನೇ ಸಾಲಿನವರೆಗೂ ತೀರುವಳಿಯಾಗದೇ ಬಾಕಿ ಉಳಿದಿರುವ 110 ಕಂಡಿಕೆಗಳಿಗೆ ಉತ್ತರವನ್ನು ಸಲ್ಲಿಸಲು ಸೂಚಿಸಿತ್ತು.

the fil favicon

SUPPORT THE FILE

Latest News

Related Posts