ಕೋವಿಡ್-19ರ ಬಿಕ್ಕಟ್ಟು: ಪರಿಶಿಷ್ಟ ಜಾತಿ, ಪಂಗಡದ ಬಾಲಕಾರ್ಮಿಕರ ಸಂಖ್ಯೆಯಲ್ಲಿ ಹೆಚ್ಚಳ!

ಬೆಂಗಳೂರು; ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿರುವವರಲ್ಲಿ 3 ಪಟ್ಟು ಉದ್ಯೋಗಗಳನ್ನು ಕಸಿದುಕೊಂಡಿರುವ ಕೋವಿಡ್‌-19, ಇದೀಗ ಕರ್ನಾಟಕದಲ್ಲಿನ ಪ.ಜಾತಿ ಮತ್ತು ಪಂಗಡದ ಬಾಲಕಾರ್ಮಿಕರ ಸಂಖ್ಯೆಯ ಹೆಚ್ಚಳಕ್ಕೂ ಕಾರಣವಾಗಲಿದೆ.

ಪರಿಶಿಷ್ಟ ಜಾತಿ ಉಪ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿಯಲ್ಲಿ ಅನುಷ್ಠಾನಗೊಳಿಸಿರುವ ಅನುದಾನದ ಕ್ರಿಯಾ ಯೋಜನೆಗೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಇಲಾಖೆ ಆಯುಕ್ತರ ಅಧ್ಯಕ್ಷತೆಯಲ್ಲಿ 2020ರ ಸೆ. 2ರಂದು ನಡೆದಿರುವ ಸಭೆಯಲ್ಲಿ ಪರಿಶಿಷ್ಟ ಬಾಲಕಾರ್ಮಿಕರ ಸಂಖ್ಯೆಯಲ್ಲಿ ಹೆಚ್ಚಳವಾಗುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗಿದೆ.

‘ಕೋವಿಡ್‌-19 ಹಿನ್ನೆಲೆಯಲ್ಲಿ ಪ.ಜಾತಿ ಮತ್ತು ಪ.ಪಂಗಡದ ಬಾಲಕಾರ್ಮಿಕರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇರುವ ಕಾರಣ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು,’ ಎಂದು ಆಯುಕ್ತ ಡಾ ರವಿಕುಮಾರ್‌ ಸುರಪರ್‌ ಅವರು ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿರುವುದು ಸಭೆ ನಡವಳಿಯಿಂದ ತಿಳಿದು ಬಂದಿದೆ.

ವಿಪರ್ಯಾಸದ ಸಂಗತಿ ಎಂದರೆ ಬಾಲ ಕಾರ್ಮಿಕ ಪದ್ಧತಿ ಮುಕ್ತ ರಾಜ್ಯವನ್ನಾಗಿ ಮಾಡಲು ಇಟ್ಟುಕೊಂಡಿದ್ದ ಗುರಿಯನ್ನು ಕರ್ನಾಟಕ ಈವರೆವಿಗೂ ತಲುಪಿಲ್ಲ. ಹಾಗೆಯೇ ರಾಜ್ಯದಲ್ಲಿ ಬಾಲ ಕಾರ್ಮಿಕರ ಸಂಖ್ಯೆ ಎಷ್ಟಿದೆ ಎಂಬ ಬಗ್ಗೆ ಕರಾರುವಕ್ಕಾದ ಮಾಹಿತಿಯೂ ಇಲ್ಲ. 2011ರ ಜನಗಣತಿಗೂ ಮತ್ತು ಕಾರ್ಮಿಕ ಇಲಾಖೆ ನಡೆಸಿದ್ದ ಸಮೀಕ್ಷೆಗೂ ಅಜಗಜಾಂತರ ವ್ಯತ್ಯಾಸವಿದೆ.

2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ 2.49 ಲಕ್ಷ ಬಾಲ ಕಾರ್ಮಿಕರಿದ್ದರೆ, ಅದೇ ವರ್ಷದಲ್ಲಿ ಅಂದರೆ 2011-12ರಲ್ಲಿ ಕಾರ್ಮಿಕ ಇಲಾಖೆ ನಡೆಸಿದ್ದ ಸಮೀಕ್ಷೆ ಪ್ರಕಾರ ಬಾಲ ಕಾರ್ಮಿಕರ ಸಂಖ್ಯೆ 51 ಸಾವಿರ ಇತ್ತು. ಆದರೆ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಯಲ್ಲಿ ತೊಡಗಿಸಿಕೊಂಡಿರುವ ಸಂಘ ಸಂಸ್ಥೆಗಳ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ 3 ಲಕ್ಷ ಬಾಲಕಾರ್ಮಿಕರಿದ್ದಾರೆ.

ದೇಶದಾದ್ಯಂತ ಲಾಕ್‌ಡೌನ್‌ ನಂತರ ಉದ್ಯೋಗ ಕಳೆದುಕೊಂಡಿರುವ ಅಂದಾಜು 100-120 ದಶಲಕ್ಷದ ಪೈಕಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದವರೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕೂಡಿದ್ದಾರೆ ಎಂದು ಅಶೋಕ ವಿಶ್ವವಿದ್ಯಾಲಯದ ಅರ್ಥಶಾಸ್ತ್ರದ ಪ್ರಾಧ್ಯಾಪಕಿ ಅಶ್ವಿನಿ ದೇಶಪಾಂಡೆ ಅವರು ನಡೆಸಿರುವ ಸಂಶೋಧನೆ ಹೊರಗೆಡವಿತ್ತು.

ಆರ್ಥಿಕವಾಗಿ ದುರ್ಬಲ ವರ್ಗಗಳು ಮಾತ್ರವಲ್ಲದೆ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದವರ ಉದ್ಯೋಗದ ಮೇಲೆ ಲಾಕ್‌ಡೌನ್‌ ಹೆಚ್ಚಿನ ಪರಿಣಾಮ ಬೀರಿದೆ ಎಂದು ಇಂಡಿಯಾ ಸ್ಪೆಂಡ್‌ಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ವಿಸ್ತೃತವಾಗಿ ಚರ್ಚಿಸಿದ್ದರು.

ಲಾಕ್‌ಡೌನ್ ಪರಿಣಾಮಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಗುಂಪುಗಳ ಮೇಲೆ ಪ್ರಭಾವ ಬೀರಿದೆ ಎಂದು ಹೇಳಿರುವ ಅವರು ಮೇಲ್ವರ್ಗಗಳಲ್ಲಿ ಕಂಡು ಬಂದಿರುವ ಉದ್ಯೋಗ ನಷ್ಟಕ್ಕಿಂತ ಈ ವರ್ಗಗಳಲ್ಲಿ ಮೂರುಪಟ್ಟು ಹೆಚ್ಚು ನಷ್ಟವಾಗಿದೆ ಎಂದು ಅಧ್ಯಯನ ಮೂಲಕ ವಿವರಿಸಿದ್ದರು.

ಶಿಕ್ಷಣ, ಉದ್ಯೋಗ, ಬಾಲ್ಯದ ಆರೋಗ್ಯ ಸೂಚಕಗಳನ್ನಾಧರಿಸಿ ಉದ್ಯೋಗ ನಷ್ಟದ ಕುರಿತು ಸಂಶೋಧನೆ ಮಾಡಿರುವ ಅಶ್ವಿನಿ ದೇಶಪಾಂಡೆ ಅವರು ದೈನಂದಿನ ಮತ್ತು ವೇತನದ ಉದ್ಯೋಗಗಳು ಯಾವುದೇ ಸುರಕ್ಷತೆಯಿಲ್ಲದೇ ಅನಿಶ್ಚತೆಯಿಂದ ಕೂಡಿವೆ. ಶಿಕ್ಷಣದಲ್ಲಿ ಮೇಲ್ಜಾತಿಗಳಿಗೆ ಹೆಚ್ಚಿನ ಪ್ರವೇಶ ಇರುವ ಕಾರಣ ಉದ್ಯೋಗಗಳಲ್ಲಿ ಸುರಕ್ಷಿತವನ್ನು ಹೊಂದಿದ್ದಾರೆ. ಹೀಗಾಗಿ ಲಾಕ್‌ಡೌನ್‌ನಿಂದ ಮತ್ತು ಆ ನಂತರದ ಆರ್ಥಿಕ ಆಘಾತಗಳಿಗೆ ಕಡಿಮೆ ಗುರಿಯಾಗಿದ್ದಾರೆ ಎಂಬುದನ್ನು ಅಧ್ಯಯನ ಮೂಲಕ ಬೆಳಕಿಗೆ ತಂದಿದ್ದರು.

12 ವರ್ಷಗಳಿಗಿಂತ ಹೆಚ್ಚು ಶಾಲಾ ಶಿಕ್ಷಣವನ್ನು ಹೊಂದಿರುವ ವ್ಯಕ್ತಿಗಳ ಪಾಲು ಮೇಲ್ಜಾತಿಗಳಲ್ಲಿ ಶೇ.37ರಷ್ಟಿದ್ದರೆ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಶೇ.17ರಷ್ಟಿದೆ. ಮೇಲ್ಜಾತಿಗಳು ಶಿಕ್ಷಣಕ್ಕೆ ಹೆಚ್ಚಿನ ಪ್ರವೇಶವನ್ನು ಹೊಂದಿರುವುದರಿಂದಲೇ ಉದ್ಯೋಗಗಳಲ್ಲಿ ಹೆಚ್ಚಿನ ಸುರಕ್ಷತೆ ಹೊಂದಿದ್ದಾರೆ. ಹೀಗಾಗಿ ಲಾಕ್‌ಡೌನ್‌ನಿಂದ ಸಂಭವಿಸಿರುವ ಆರ್ಥಿಕ ಆಘಾತಗಳು ಈ ವರ್ಗಗಳ ಮೇಲೆ ದೊಡ್ಡಮಟ್ಟದಲ್ಲಿ ಪರಿಣಾಮ ಬೀರುವುದಿಲ್ಲ. ಒಂದು ವೇಳೆ ಪರಿಣಾಮ ಬೀರಿದ್ದರೆ ಕಡಿಮೆ ಪ್ರಮಾಣದಲ್ಲಿವೆ ಎಂದು ಅಧ್ಯಯನ ವರದಿಯಲ್ಲಿ ಹೇಳಿದ್ದರು.

the fil favicon

SUPPORT THE FILE

Latest News

Related Posts