ಬೆಂಗಳೂರು; ಸ್ವಾತಂತ್ರ್ಯ ದಿನಾಚರಣೆಯಂದು ಏಕಪಕ್ಷೀಯವಾಗಿ ಧ್ವಜಾರೋಹಣ ಮಾಡಿದ್ದಾರೆ ಎಂಬ ಆರೋಪದ ಮೇರೆಗೆ ದಲಿತ ಶಿಕ್ಷಕ ಶ್ರೀನಿವಾಸನ್ ಎಂಬುವರಿಗೆ ಬೆಂಗಳೂರು ತಮಿಳ್ ಸಂಘಂ ಕಾರಣ ಕೇಳಿ ನೋಟೀಸ್ ಜಾರಿಗೊಳಿಸಿದೆ.
ಬೆಂಗಳೂರಿನ ಕೆ ಜಿ ಹಳ್ಳಿಯಲ್ಲಿ ತಮಿಳು ಸಂಘಂ ನಡೆಸುತ್ತಿರುವ ಶಾಲೆಯಲ್ಲಿ ಹಲವು ವರ್ಷಗಳಿಂದ ಶ್ರೀನಿವಾಸನ್ ಅವರು ಸಹ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ಆಗಸ್ಟ್‌ನಲ್ಲಿ ಕೆ ಜಿ ಹಳ್ಳಿ ಗಲಭೆಗೀಡಾಗಿದ್ದರಿಂದ 144 ಸೆಕ್ಷನ್ ಮತ್ತು ಕೆಲವು ಪ್ರದೇಶಗಳಲ್ಲಿ ಕರ್ಫ್ಯೂ ವಿಧಿಸಿತ್ತು.
ಆದರೂ ಆಗಸ್ಟ್ 15ರ ಸ್ವಾತಂತ್ರೋತ್ಸವ ದಿನದಂದು ಶಾಲೆಯ ಹಿರಿಯ ಸಹ ಶಿಕ್ಷಕ ಶ್ರೀನಿವಾಸನ್ ಅವರು ಧ್ವಜಾರೋಹಣ ಮಾಡಿದ್ದರು. ಇದಕ್ಕೆ ಶಾಲೆಯ ಮುಖ್ಯ ಶಿಕ್ಷಕಿ (ಪ್ರಭಾರ) ರಾಜೇಶ್ವರಿ ಎಂಬುವರು ಆಕ್ಷೇಪ ಎತ್ತಿದ್ದರು. ಅಲ್ಲದೆ ಮುಖ್ಯ ಶಿಕ್ಷಕರ ಅನುಮತಿ ಪಡೆಯದೇ ಏಕಪಕ್ಷೀಯವಾಗಿ ಧ್ವಜಾರೋಹಣ ಮಾಡಿದ್ದಾರೆ ಎಂದು ಶ್ರೀನಿವಾಸನ್ ಅವರಿಗೆ 2020ರ ಆಗಸ್ಟ್ 21ರಂದು ಕಾರಣ ಕೇಳಿ ನೋಟೀಸ್ ಜಾರಿಗೊಳಿಸಿದ್ದರು. ಇದರ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.
‘ಸ್ವಾತಂತ್ರ್ಯ ದಿನಾಚರಣೆಯನ್ನು ಮುಖ್ಯ ಶಿಕ್ಷಕರ ನೇತೃತ್ವದಲ್ಲಿ ಆಚರಿಸುವುದು ಕ್ರಮಬದ್ಧವಾಗಿದೆ. ಆದರೆ ಮುಖ್ಯ ಶಿಕ್ಷಕರ ಅನುಮತಿ ಪಡೆಯದೇ ಏಕಪಕ್ಷೀಯವಾಗಿ ಧ್ವಜಾರೋಹಣವನ್ನು ಮಾಡಿದ್ದೀರಿ. ಮುಖ್ಯ ಶಿಕ್ಷಕರು ಬೆಳಗ್ಗೆ 6.30ಕ್ಕೆ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಲು ಇತರ ಸಿಬ್ಬಂದಿಯೊಂದಿಗೆ ಶಾಲೆಗೆ ಬಂದಾಗ ನೀವು ಮುಂಚಿತವಾಗಿಯೇ ಬಂದು ಅನುಮತಿ ಇಲ್ಲದೆ ಧ್ವಜಾರೋಹಣ ಮಾಡಿ ಸಹ ಶಿಕ್ಷಕರ ಕರ್ತವ್ಯದ ಉಲ್ಲಂಘನೆ ಮಾಡಿ ಅಶಿಸ್ತಿನಿಂದ ವರ್ತಿಸಿದ್ದೀರಿ. ನಿಮ್ಮ ಈ ದುರ್ವರ್ತನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಮುಖ್ಯ ಶಿಕ್ಷಕರ ಅನುಮತಿ ಇಲ್ಲದೆಯೇ ಏಕಪಕ್ಷೀಯವಾಗಿ ಧ್ವಜಾರೋಹಣ ಮಾಡುವ ಮೂಲಕ ಶಾಲೆಯ ಶಿಸ್ತನ್ನು ಉಲ್ಲಂಘಿಸಿದ್ದೀರಿ,’ ಎಂದು ನೋಟೀಸ್‌ನಲ್ಲಿ ಹೇಳಲಾಗಿದೆ.
ಈ ನೋಟೀಸ್ ಸಂಬಂಧ ಸಂಘದ ಆಡಳಿತಾಧಿಕಾರಿ ಮಂಜುನಾಥ್ ಸಿಂಗ್ ಅವರಿಗೆ 2020ರ ಆಗಸ್ಟ್ 31ರಂದು ಶ್ರೀನಿವಾಸನ್ ಲಿಖಿತ ಹೇಳಿಕೆಯನ್ನೂ ನೀಡಿದ್ದಾರೆ. ‘ಕೊರೊನಾ ಕಾಯಿಲೆ ನಿಮಿತ್ತವಾಗಿ ಶಾಲೆ ಹಾಗೂ ಇತರೆ ಸಂಸ್ಥೆಗಳು ರಜೆ ಘೋಷಿಸಿದೆ. ಇದಲ್ಲದೆ ಮುಖ್ಯವಾಗಿ ಆಗಸ್ಟ್ 15ರಂದು ನಮ್ಮ ಶಾಲೆ ಇರುವ ಪ್ರದೇಶಗಳು ಮತೀಯ ಗಲಭೆಯಿಂದ ತಲ್ಲಣಗೊಂಡು ಈ ಪ್ರದೇಶಗಳು 144 ಸೆಕ್ಷನ್ ಮತ್ತು ಕರ್ಫ್ಯೂ ಜಾರಿಯಲ್ಲಿದ್ದರಿಂದ ಇಡೀ ಪ್ರದೇಶವೇ ಬಂದ್ ಆಗಿತ್ತು. ಇಂತಹ ಪರಿಸ್ಥಿತಿಯಲ್ಲಿಯೂ ಮತ್ತು ಶಾಲೆ ಗಲಭೆ ಪೀಡಿತ ಪ್ರದೇಶದಲ್ಲಿದ್ದರೂ ಶಾಲೆಯ ಹಿರಿಯ ಶಿಕ್ಷಕನಾಗಿರುವ ನಾನು ದೇಶದ ಪ್ರಜೆಯಾಗಿ ಸ್ವಾತಂತ್ರ್ಯ ದಿನಾಚರಣೆಯಂದು ಧ್ವಜಾರೋಹಣ ಮಾಡಿ ನನ್ನ ದೇಶ ಪ್ರೇಮವನ್ನು ವ್ಯಕ್ತಪಡಿಸಿ ನನ್ನ ಕರ್ತವ್ಯವನ್ನು ಮಾಡಿದ್ದೇನೆ. ಇದರಲ್ಲಿ ತಪ್ಪೇನಿದೆ,’ ಎಂದೂ ಲಿಖಿತ ಹೇಳಿಕೆಯಲ್ಲಿ ಪ್ರಶ್ನಿಸಿದ್ದಾರೆ.
ಅಲ್ಲದೆ ಬೆಂಗಳೂರು ತಮಿಳ್ ಸಂಘಂ ಆಡಳಿತಾಧಿಕಾರಿ ಮಂಜುನಾಥ್ ಸಿಂಗ್ ಅವರೂ ಧ್ವಜಾರೋಹಣ ಮಾಡಿಲ್ಲ ಎಂದೂ ಶ್ರೀನಿವಾಸನ್ ಅವರು ಲಿಖಿತ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
ಹಾಗೆಯೇ ಬೆಂಗಳೂರು ತಮಿಳ್ ಸಂಘಂನ ಕಾರ್ಯವೈಖರಿ ಕುರಿತು ಶ್ರೀನಿವಾಸನ್ ಅವರು 2020ರ ಸೆಪ್ಟಂಬರ್ 2ರಂದು ಸಹಕಾರ ಸಂಘಗಳ ನಿಬಂಧಕರಿಗೂ ಲಿಖಿತ ದೂರು ಸಲ್ಲಿಸಿದ್ದಾರೆ. ಸಂಘದ ಆಡಳಿತ ಮಂಡಳಿಯಲ್ಲಿರುವ ಮಾಜಿ ಪದಾಧಿಕಾರಿಗಳಾದ ಜಿ ದಾಮೋದರನ್ ಮತ್ತು ರಾಮಸುಬ್ರಮಣಿಯನ್, ಶಾಲೆಯ ಶಿಕ್ಷಕಿ ಬಿ ಆರ್ ರಾಜೇಶ್ವರಿ, ಆಮುದ, ಭಾರತಿ ಮತ್ತು ಶ್ರೀಕಂಠಮೂರ್ತಿ ಎಂಬುವರು 2016ರಿಂದ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ತಮಿಳ್ ಸಂಘಂನಲ್ಲಿ ಹಲವು ಹಗರಣಗಳು ನಡೆದಿವೆ. ಸಂಘದ ಹಲವು ಅಜೀವ ಸದಸ್ಯರು ದೂರು ನೀಡಿದ್ದಾರೆ. ಕರ್ನಾಟಕ ಉಚ್ಛ ನ್ಯಾಯಾಲಯದ ತೀರ್ಪಿನಂತೆ ವಿಚಾರಣೆ ನಡೆಸಿ ಕಾರ್ಯಕಾರಿ ಸಮಿತಿಗೆ ಚುನಾವಣೆ ನಡೆಸಬೇಕಿತ್ತು. ಇದಕ್ಕಾಗಿ ನೇಮಕಗೊಂಡಿದ್ದ ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಡಾ ಅಶ್ವಥ್ ಅವರು ವಿಚಾರಣೆ ನಡೆಸಿ ಇಬ್ಬರು ಪದಾಧಿಕಾರಿಗಳಿಗೆ ದಂಡನೆ ವಿಧಿಸಿದ್ದಾರೆ ಎಂದೂ ದೂರಿನಲ್ಲಿ ವಿವರಿಸಿದ್ದಾರೆ.
ಅಶ್ವಥ್ ಅವರ ನಂತರ ನೇಮಕಗೊಂಡಿರುವ ಯಶಸ್ವಿನಿ ಮತ್ತು ಮಂಜುನಾಥ್ ಸಿಂಗ್ ಅವರು ನ್ಯಾಯಾಲಯದ ತೀರ್ಪನ್ನು ಉಲ್ಲಂಘಿಸಿದ್ದಾರಲ್ಲದೆ ಸಂಘದ ಕೆಲ ಪದಾಧಿಕಾರಿಗಳೊಂದಿಗೆ ಕೈಜೋಡಿಸಿದ್ದಾರೆ ಎಂದು ಶ್ರೀನಿವಾಸನ್ ಅವರು ಸಂದೇಹ ವ್ಯಕ್ತಪಡಿಸಿದ್ದಾರೆ. ಇದೇ ದೂರನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೂ ಕಳಿಸಿದ್ದಾರೆ.