ಬೆಂಗಳೂರು; ಡ್ರಗ್ ಜಾಲದಲ್ಲಿ ನಿರತರಾಗಿದ್ದರು ಎಂಬ ಆರೋಪಕ್ಕೆ ಗುರಿಯಾಗಿರುವ ಬಿ ಕೆ ರವಿಶಂಕರ್ ಸೇರಿದಂತೆ ಇನ್ನಿತರೆ ಆರೋಪಿಗಳು ಲಾಕ್‌ಡೌನ್ ಜಾರಿಯಲ್ಲಿದ್ದ ದಿನಗಳಲ್ಲೇ ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ಪಾರ್ಟಿಯೂ ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸಿದ್ದರು ಎಂಬ ಮಾಹಿತಿ ಹೊರಬಿದ್ದಿದೆ.
ಬಿ ಕೆ ರವಿಶಂಕರ್ ಸೇರಿದಂತೆ ಒಟ್ಟು 12 ಆರೋಪಿಗಳು 2020ರ ಏಪ್ರಿಲ್ 11ರಿಂದ 2020ರ ಸೆ. 4 ರವರೆಗೆ ಕೃತ್ಯ ನಡೆಸಿದ್ದರು ಎಂದು ಎಫ್‌ಐಆರ್‌ನಲ್ಲಿ ನಮೂದಿಸಿರುವ ಚಿಕ್ಕಪೇಟೆ ಪೊಲೀಸರು ಪ್ರಕರಣದ ಮತ್ತೊಂದು ಮುಖವನ್ನು ತೆರೆದಿಟ್ಟಿದ್ದಾರೆ. ಡ್ರಗ್ ಪಾರ್ಟಿ ನಡೆದಿದ್ದ ಸ್ಥಳಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಿದ್ದ ಪೊಲೀಸ್ ಇನ್ಸ್‌ಪೆಕ್ಟರ್, ಸಿಬ್ಬಂದಿಯೂ ಸೇರಿದಂತೆ ಪೊಲೀಸ್ ಅಧಿಕಾರಿಗಳ ಕರ್ತವ್ಯಲೋಪವೂ ಇದೇ ಎಫ್‌ಐಆರ್‌ನಿಂದ ಬಹಿರಂಗಗೊಂಡಿದೆ.
ಕರ್ಫ್ಯೂ ಮಾದರಿಯ ಲಾಕ್‌ಡೌನ್ ಜಾರಿಯಲ್ಲಿದ್ದರೂ ಡ್ರಗ್ ಜಾಲದಲ್ಲಿ ತೊಡಗಿಸಿಕೊಂಡಿದ್ದ ಆರೋಪಿಗಳು ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ಏಪ್ರಿಲ್ 11ರಿಂದಲೂ ಪಾರ್ಟಿಗಳನ್ನು ಆಯೋಜಿಸುವ ಮೂಲಕ ಅಕ್ರಮವಾಗಿ ಹಣ ಗಳಿಸಿ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸಿದ್ದಾರೆ ಎಂದು ಸ್ವತಃ ಪೊಲೀಸ್ ಅಧಿಕಾರಿಯೇ ಎಫ್‌ಐಆರ್‌ನಲ್ಲಿ ಹೇಳಿರುವುದು ಲಾಕ್‌ಡೌನ್ ಅವಧಿಯಲ್ಲಿ ಬೆಂಗಳೂರು ಪೊಲೀಸರ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಹಾಗೆಯೇ ಡ್ರಗ್ ದಂಧೆಕೋರರೊಂದಿಗೆ ಪೊಲೀಸ್ ಅಧಿಕಾರಿಗಳು ಶಾಮೀಲಾಗಿರುವ ಸಾಧ್ಯತೆಗಳೂ ಇವೆ.
ಎಫ್‌ಐಆರ್‌ನಲ್ಲೇನಿದೆ?
‘ಬೆಂಗಳೂರು ನಗರದ ವಿವಿಧ ಸ್ಥಳಗಳಲ್ಲಿ ಮಾದಕ ವಸ್ತು ಸರಬರಾಜು ಸೇವನೆ, ಪಾರ್ಟಿ ಆಯೋಜನೆ ಇತ್ಯಾದಿ ಬಗ್ಗೆ ಮಾಹಿತಿ ಸಂಗ್ರಹಿಸುವಾಗ ಬಿ ಕೆ ರವಿಶಂಕರ್ ಎಂಬುವರನ್ನು ವಿಚಾರಣೆ ಮಾಡಿ ಮಾಹಿತಿ ಪಡೆದಿದ್ದು, ಆರೋಪಿ ಎ 1ರಿಂದ ಎ 12ರವರು ಒಳಸಂಚು ಮಾಡಿ ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ಪಾರ್ಟಿಗಳನ್ನು ಆಯೋಜಿಸಿ ಅನೇಕ ಗ್ರಾಹಕರನ್ನು ಕರೆಯಿಸಿ ಡ್ರಗ್ ಪೆಡ್ಲರ್‌ಗಳ ಮೂಲಕ ಪಾರ್ಟಿಗೆ ಬರುವ ಉದ್ಯಮಿಗಳು, ಸೆಲೆಬ್ರಿಟಿಗಳು, ಕೆಲವು ನಟ ನಟಿಯರು ಸಾಫ್ಟ್ವವೇರ್ ಉದ್ಯೋಗಿಗಳು ಹಾಗೂ ಇತರೆ ವ್ಯಕ್ತಿಗಳಿಂದ ಡ್ರಗ್ ಸರಬರಾಜು ಮಾಡಿ ಅಕ್ರಮವಾಗಿ ಹಣ ಗಳಿಸಿ ಕಾನೂನುಬಾಹಿರ ಚಟುವಟಿಕೆ ನಡೆಸಿರುತ್ತಾರೆ,’ ಎಂದು ವಿವರಿಸಲಾಗಿದೆ.
ವಿವಿಧ ಕೆಲಸಗಳಿಗಾಗಿ ರಸ್ತೆಗಿಳಿಯುತ್ತಿದ್ದ ನಾಗರಿಕರನ್ನು ಹಿಗ್ಗಾಮುಗ್ಗಾ ಥಳಿಸುತ್ತಿದ್ದ ಪೊಲೀಸರು, ಲಾಕ್‌ಡೌನ್ ಅವಧಿಯಲ್ಲಿ ಬೆಂಗಳೂರು ನಗರದ ವಿವಿಧ ಸ್ಥಳಗಳಲ್ಲಿ ಡ್ರಗ್ ಪಾರ್ಟಿಗಳು ನಡೆಯುತ್ತಿದ್ದರೂ ಕಣ್ಣುಮುಚ್ಚಿಕೊಂಡಿದ್ದಾದರೂ ಏಕೆ ಎಂಬ ಪ್ರಶ್ನೆಗಳು ಎದುರಾಗಿವೆ. ಅಲ್ಲದೆ ಪೊಲೀಸರೇ ಎಫ್‌ಐಆರ್‌ನಲ್ಲಿ ನಮೂದಿಸಿರುವ ವಿವರಗಳ ಪ್ರಕಾರ ಬೆಂಗಳೂರಿನಲ್ಲಿ ನಡೆದಿದ್ದ ಡ್ರಗ್ ಪಾರ್ಟಿಗಳಿಗೆ ಕೆಲವು ನಟ, ನಟಿಯರು ಲಾಕ್‌ಡೌನ್ ವೇಳೆಯಲ್ಲೇ ಹೇಗೆ ಪಾಲ್ಗೊಂಡರು, ಡ್ರಗ್ ಹೇಗೆ ಸರಬರಾಜಾಯಿತು ಎಂಬುದು ಹಲವು ಅಚ್ಚರಿಗಳಿಗೆ ಕಾರಣವಾಗಿದೆ.
‘ಏಪ್ರಿಲ್ 11, 2020ರಿಂದ 4ನೇ ಸೆಪ್ಟಂಬರ್‌ವರೆಗೆ ಈ ಕೃತ್ಯ ನಡೆಸಲಾಗಿದೆ ಎಂದು ಖುದ್ದು ಪೊಲೀಸ್ ಅಧಿಕಾರಿ ಗೌತಮ್ ಅವರು ಸಲ್ಲಿಸಿರುವ ದೂರಿನಲ್ಲಿ ವಿವರಿಸಲಾಗಿದೆ. ಹಾಗಾದರೆ ಏಪ್ರಿಲ್ ತಿಂಗಳಲ್ಲಿ ಜಾರಿಯಾಗಿದ್ದ ಲಾಕ್‌ಡೌನ್ ಬಿಗಿಯಾಗಿರಲಿಲ್ಲವೇ, ಮದ್ಯ ವ್ಯಸನಿಗಳು ಮದ್ಯಕ್ಕಾಗಿ ಪರದಾಡುತ್ತಿದ್ದಾಗ ಪ್ರತಿಷ್ಠಿತರಿಗೆ, ಸೆಲೆಬ್ರಿಟಿಗಳಿಗೆ ಡ್ರಗ್ಸ್ ಹೇಗೆ ದೊರೆಯಿತು, ಪಾರ್ಟಿಗಳನ್ನು ಹೇಗೆ ಆಯೋಜಿಸಲಾಯಿತು, ಇದು ಪೊಲೀಸರಿಗೆ ಗೊತ್ತಿತ್ತೇ, ಲಾಕ್‌ಡೌನ್ ಅವಧಿಯಲ್ಲಿ ಡ್ರಗ್ ಪಾರ್ಟಿ ನಡೆದಿದೆ ಎಂದು ಎಫ್‌ಐಆರ್‌ನಲ್ಲಿ ನಮೂದಿಸಿರುವುದು ನಿಜವೇ ಆದಲ್ಲಿ ಸರ್ಕಾರ ಮತ್ತು ಪೊಲೀಸ್ ಇಲಾಖೆಯು ವಿಫಲವಾಗಿರಬೇಕು. ಇಲ್ಲವೇ ದಂಧೆಕೋರರೊಂದಿಗೆ ಅಧಿಕಾರಿವರ್ಗ ಶಾಮೀಲಾಗಿರಬೇಕು,’
ಸೂರ್ಯ ಮುಕುಂದರಾಜ್,ವಕೀಲ
ಲಾಕ್‌ಡೌನ್ ಅವಧಿಯಲ್ಲೂ ಡ್ರಗ್ ಪಾರ್ಟಿ ನಡೆದಿತ್ತು ಎಂದು ಪೊಲೀಸ್ ಅಧಿಕಾರಿ ದೂರಿನಲ್ಲಿ ನಮೂದಿಸಿರುವಾಗ ಪಾರ್ಟಿ ನಡೆದಿದ್ದ ಸ್ಥಳಗಳ ವ್ಯಾಪ್ತಿಯಲ್ಲಿರುವ ಪೊಲೀಸ್ ಇನ್ಸ್‌ಪೆಕ್ಟರ್, ಸಿಬ್ಬಂದಿಯೂ ಸೇರಿದಂತೆ ಪೊಲೀಸ್ ಅಧಿಕಾರಿಗಳ ಕರ್ತವ್ಯ ಲೋಪದ ವಿರುದ್ಧ ಕ್ರಮ ಕೈಗೊಂಡಲ್ಲಿ ಇನ್ನಷ್ಟು ಸತ್ಯಾಂಶಗಳು ಹೊರಬರುವ ಸಾಧ್ಯತೆಗಳಿವೆ.
ಲಾಕ್‌ಡೌನ್ ಜಾರಿಯಲ್ಲಿದ್ದ ದಿನಗಳಲ್ಲೇ ಬೆಂಗಳೂರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯ ಬಾಟಲಿಗಳ ಬಾಕ್ಸ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಅಲ್ಲದೆ ಸಿಗರೇಟು ದಾಸ್ತಾನು ಮಳಿಗೆ ಮೇಲೆ ದಾಳಿ ನಡೆಸಿದ್ದ ಪೊಲೀಸ್ ಅಧಿಕಾರಿಗಳು ಲಂಚವನ್ನು ಪಡೆದಿದ್ದರು ಎಂಬ ಆರೋಪ ಸಂಬಂಧ ಎಸಿಪಿ ಪ್ರಭುಶಂಕರ್ ಸೇರಿದಂತೆ ಇನ್ನಿತರೆ ಆರೋಪಿತ ಅಧಿಕಾರಿಗಳನ್ನು ಅಮಾನತುಗೊಳಿಸಿದ್ದನ್ನು ಸ್ಮರಿಸಬಹುದು.