ಕೆಡಿಪಿ; ರಮೇಶ್‌ ಜಾರಕಿಹೊಳಿ ಸೇರಿ 11 ಸಚಿವರ ಅದಕ್ಷತೆ, ಶೂನ್ಯ ಸಂಪಾದನೆ ಬಹಿರಂಗ

ಬೆಂಗಳೂರು; ಪ್ರಮುಖ ಖಾತೆ ದೊರೆಯಲಿಲ್ಲ ಮತ್ತು ಸಮರ್ಪಕವಾಗಿ ಅನುದಾನ ಹಂಚಿಕೆ ಆಗುತ್ತಿಲ್ಲ ಎಂಬ ಕಾರಣವವನ್ನು ಮುಂದೊಡ್ಡಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟ ಸರ್ಕಾರವನ್ನು ಪತನಗೊಳಿಸಿದವರು ಬಿಜೆಪಿ ಸರ್ಕಾರದಲ್ಲಿ ಪ್ರಮುಖ ಖಾತೆ ಹೊಂದಿದ್ದರೂ ಆ ಇಲಾಖೆಗಳೇ ‘ಅದಕ್ಷತೆ, ಮೈಗಳ್ಳತನ, ಶೇ.20ಕ್ಕಿಂತಲೂ ಕಡಿಮೆ ಪ್ರಗತಿಯಲ್ಲದೆ ಶೂನ್ಯ ಸಂಪಾದನೆಯನ್ನು ಪ್ರದರ್ಶಿಸಿವೆ.

ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ರಮೇಶ್‌ ಜಾರಕಿಹೊಳಿ, ವಿ ಸೋಮಣ್ಣ ಸೇರಿದಂತೆ 11 ಸಚಿವರ ಇಲಾಖೆಗಳು ವಿಶೇಷ ಅಭಿವೃದ್ಧಿ ಯೋಜನೆಯಡಿ ಯೋಜನೆ ಇಲಾಖೆಗೆ ಈವರೆವಿಗೂ ಕ್ರಿಯಾ ಯೋಜನೆಯನ್ನೇ ಸಲ್ಲಿಸಿಲ್ಲ. ಅಲ್ಲದೆ ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಗಿರಿಜನ ಉಪಯೋಜನೆಗಳಿಗೆ ಸಂಬಂಧಿಸಿದಂತೆ ಬಹುತೇಕ ಇಲಾಖೆಗಳು ಶೂನ್ಯ ಪ್ರಗತಿ ಸಾಧಿಸಿರುವುದು ಇದೀಗ ಬಹಿರಂಗವಾಗಿದೆ.

ಜುಲೈ ಅಂತ್ಯಕ್ಕೆ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಕುರಿತು ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ 2020ರ ಆಗಸ್ಟ್‌ 24ರಂದು ನಡೆಸಿದ್ದ ವಿಡಿಯೋ ಸಂವಾದದಲ್ಲಿ ಇಲಾಖೆ ಮುಖ್ಯಸ್ಥರ ಅದಕ್ಷತೆ ಅನಾವರಣಗೊಂಡಿದೆ. ಸಭೆ ನಡವಳಿಗಳ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯೂ ಸೇರಿದಂತೆ ಬಹುತೇಕ ಇಲಾಖೆಗಳು ಅಲ್ಲದೆ ಆಗಸ್ಟ್‌ ತಿಂಗಳ ಅಂತ್ಯದವರೆಗೂ ಯೋಜನಾ ಇಲಾಖೆಗೆ ಕ್ರಿಯಾ ಯೋಜನೆಯನ್ನೇ ಸಲ್ಲಿಸದ ಹಲವು ಇಲಾಖೆಗಳ ಮುಖ್ಯಸ್ಥರು ಲಾಕ್‌ಡೌನ್‌ ತೆರವಾದರೂ ಮೈಗಳ್ಳತನದಿಂದ ಹೊರಬಂದಿಲ್ಲ.

ಕಳೆದ ಒಂದು ವರ್ಷದಿಂದಲೂ ಯೋಜನೆಗಳ ಅನುಷ್ಠಾನದಲ್ಲಿ ಹಲವು ಇಲಾಖೆಗಳ ಮುಖ್ಯಸ್ಥರು ಮುಗ್ಗುರಿಸಿ ಬೀಳುತ್ತಿದ್ದಾರೆ. ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್‌ ಅಧ್ಯಕ್ಷತೆಯಲ್ಲಿ ಪ್ರತಿ ತಿಂಗಳು ಸಭೆ ನಡೆಯುತ್ತಿದೆಯಾದರೂ ಇಲಾಖೆಗಳ ಮುಖ್ಯಸ್ಥರು ಮಾತ್ರ ನಿದ್ರೆಯಿಂದ ಇನ್ನೂ ಎಚ್ಚೆತ್ತಿಲ್ಲ. ಅಧಿಕಾರಿಶಾಹಿಯ ಈ ಭಂಡ ನಿರ್ಲಕ್ಷ್ಯದಿಂದಾಗಿಯೇ ಮಹತ್ವಾಕಾಂಕ್ಷೆಯ ಯೋಜನೆಗಳು ಜನರಿಗೆ ತಲುಪುತ್ತಿಲ್ಲ.

ವಿಶೇಷ ಅಭಿವೃದ್ಧಿ ಕಥೆ ಇದು

2020-21ನೇ ಸಾಲಿನ ವಿಶೇಷ ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದಂತೆ ಲಕ್ಷ್ಮಣ ಸವದಿ (ಸಾರಿಗೆ) ಸಚಿವ ಬಸವರಾಜ ಬೊಮ್ಮಾಯಿ (ಒಳಾಡಳಿತ) ಕೆ ಎಸ್‌ ಈಶ್ವರಪ್ಪ (ಗ್ರಾಮೀಣಾಭಿವೃದ್ಧಿ) ರಮೇಶ್‌ ಜಾರಕಿಹೊಳಿ(ಜಲ ಸಂಪನ್ಮೂಲ) ಸೋಮಣ್ಣ(ವಸತಿ), ಬಿ ಶ್ರೀರಾಮುಲು (ಹಿಂದುಳಿದ ವರ್ಗಗಳ ಕಲ್ಯಾಣ) ಶಶಿಕಲಾ ಜೊಲ್ಲೆ (ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ)ಅಲ್ಪಸಂಖ್ಯಾತರ ಕಲ್ಯಾಣ, ವಸತಿ, ಲೋಕೋಪಯೋಗಿ, ಜಲಸಂಪನ್ಮೂಲ, ಸಣ್ಣ ನೀರಾವರಿ ಮತ್ತು ಆರೋಗ್ಯ ಇಲಾಖೆಗಳು ಕ್ರಿಯಾ ಯೋಜನೆಯನ್ನೇ ತಯಾರಿಸಿಲ್ಲದಿರುವುದು ನಡವಳಿಯಿಂದ ತಿಳಿದು ಬಂದಿದೆ.

ಶೇ.20ಕ್ಕಿಂತ ಕಡಿಮೆ ಪ್ರಗತಿ

ಪರಿಶಿಷ್ಟ ವರ್ಗಗಳ ಕಲ್ಯಾಣ, ಮಾಹಿತಿ ತಂತ್ರಜ್ಞಾನ, ಮೂಲಭೂತ ಸೌಕರ್ಯ, ವಸತಿ, ಅಲ್ಪಸಂಖ್ಯಾತರ, ಯುವ ಸಬಲೀಕರಣ, ಹಿಂದುಳಿದ ವರ್ಗಗಳು, ಪ್ರವಾಸೋದ್ಯಮ, ಕನ್ನಡ ಸಂಸ್ಕೃತಿ, ಸಮಾಜ ಕಲ್ಯಾಣ, ಕೃಷಿ, ನಗರಾಭಿವೃದ್ಧಿ ಇಲಾಖೆಗಳೂ ಸೇರಿದಂತೆ ಇತರೆ ಇಲಾಖೆಗಳು ಶೇ.20ಕ್ಕಿಂತಲೂ ಕಡಿಮೆ ಪ್ರಗತಿ ಮಾಡಿದೆ.

ಶೂನ್ಯ ಸಂಪಾದನೆ

ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಗಿರಿಜನ ಉಪಯೋಜನೆಗಳಿಗೆ ಸಂಬಂಧಿಸಿದಂತೆ ಕಳೆದ 4 ತಿಂಗಳೂ ಕಳೆದರೂ ಬಹುತೇಕ ಇಲಾಖೆಗಳು ಶೂನ್ಯ ಪ್ರಗತಿ ಸಾಧಿಸಿದೆ. ಬಾಹ್ಯ ಅನುದಾನ ಯೋಜನೆಗಳಡಿಯಲ್ಲಿ ನಗರಾಭಿವೃದ್ಧಿ ಇಲಾಖೆ ವ್ಯಾಪ್ತಿಇಯ ಬಿಡಬ್ಲ್ಯೂಎಸ್‌ಎಸ್‌ಬಿ, ಸಮಗ್ರ ಜಲ ನಿರ್ವಹಣೆ, ವಿಶ್ವ ಬ್ಯಾಂಕ್‌ ಮತ್ತು ಇತರೆ ಇಲಾಖೆಯ ಯೋಜನೆಗಳ ಪ್ರಗತಿಯಲ್ಲೂ ಶೂನ್ಯ ಸಂಪಾದನೆ ಆಗಿರುವುದು ನಡವಳಿಯಿಂದ ಗೊತ್ತಾಗಿದೆ.

ಹಾಸ್ಟೆಲ್‌ ಸಿಬ್ಬಂದಿಗೂ ವೇತನವಿಲ್ಲ

ಹೊರಗುತ್ತಿಗೆ ಆಧಾರದ ಮೇರೆಗೆ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆದಾರರು, ಹಾಸ್ಟೆಲ್‌ ಸಿಬ್ಬಂದಿ, ದಿನಗೂಲಿ ನೌಕರರಿಗೂ ವೇತನ ದೊರೆತಿಲ್ಲ. ಕೇಂದ್ರ ಪುರಸ್ಕೃತ ಮತ್ತು ಕೇಂದ್ರ ವಲಯ ಯೋಜನೆಗಳಡಿ ಈವರೆವಿಗೂ ಕೇಂದ್ರ ಸರ್ಕಾರದಿಂದ ಅನುದಾನವನ್ನು ಬಹುತೇಕ ಇಲಾಖೆಗಳು ಬಿಡುಗಡೆ ಮಾಡಿಸಿಕೊಂಡಿಲ್ಲ. ಹೀಗಾಗಿ ಕೇಂದ್ರದಿಂದ ರಾಜ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಅನುದಾನ ಬಿಡುಗಡೆಯಾಗದಿರುವುದು ತಿಳಿದು ಬಂದಿದೆ.

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿಕೂಟ ಸರ್ಕಾರದ ಭಾಗವಾಗಿದ್ದ ಉಭಯ ಪಕ್ಷಗಳ ಶಾಸಕರು ಮುಖ್ಯಮಂತ್ರಿಯಾಗಿದ್ದ ಎಚ್‌ ಡಿ ಕುಮಾರಸ್ವಾಮಿ ಅವರು ಅನುದಾನ ಹಂಚಿಕೆ ಮಾಡುವಲ್ಲಿ ತಾರತಮ್ಯ ಎಸಗುತ್ತಿದ್ದಾರೆ ಎಂದು ಬಲವಾಗಿ ಆರೋಪಿಸಿದ್ದರು. ಅಲ್ಲದೆ ಇದನ್ನೇ ನೆಪವಾಗಿರಿಸಿಕೊಂಡಿದ್ದ ಉಭಯ ಪಕ್ಷಗಳ ಶಾಸಕರು ಸಿಡಿದು ಬಿಜೆಪಿ ಪಾಳೆಯ ಸೇರಿದ್ದರಲ್ಲದೆ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚನೆಗೂ ಕಾರಣರಾಗಿದ್ದರು.

ಪಕ್ಷಾಂತರ ಮಾಡಿದ ನಂತರ ಪ್ರಭಾವಿ ಖಾತೆಗಳನ್ನು ಪಡೆದು ಸಚಿವರಾಗಿ ಒಂದು ವರ್ಷ ಕಳೆದಿದ್ದಾರೆಯೇ ಹೊರತು ಯೋಜನೆಗಳ ಅನುಷ್ಠಾನದಲ್ಲಿ ಮುಗ್ಗುರಿಸಿ ಬಿದ್ದಿದ್ದಾರೆ. ಇಲಾಖೆಗಳ ಮುಖ್ಯಸ್ಥರ ಮೇಲೆ ಸಚಿವರ ಹಿಡಿತವಾಗಲೀ, ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್‌ ಅವರ ಕಾರ್ಯಕ್ಷಮತೆಯೂ ಪರಿಣಾಮಕಾರಿಯಾಗಿಲ್ಲ ಎಂಬುದು ಕೆಡಿಪಿ ಸಭೆಯಲ್ಲಿ ಹೊರಬಿದ್ದ ಫಲಿತಾಂಶಗಳೇ ಕೈಗನ್ನಡಿಯಾಗಿವೆ.

SUPPORT THE FILE

Latest News

Related Posts