20 ಲಕ್ಷ ಕೋಟಿ ‌; ರಾಜ್ಯಕ್ಕೆ ಬಿಡುಗಡೆಯಾಗಿರುವ ವಿವರ ಆರ್ಥಿಕ ಇಲಾಖೆ ಬಳಿ ಇಲ್ಲ!;

ಬೆಂಗಳೂರು; ಕೊರೊನಾ ವೈರಾಣು ಪಿಡುಗಿನಿಂದಾಗಿ ತತ್ತರಿಸಿರುವ ಅರ್ಥ ವ್ಯವಸ್ಥೆಯನ್ನು ಪುನಶ್ಚೇತನಗೊಳಿಸುವ ಭಾಗವಾಗಿ ಕೇಂದ್ರ ಸರ್ಕಾರ ಘೋಷಿಸಿದ್ದ 20 ಲಕ್ಷ ಕೋಟಿ ಮೊತ್ತದ ಪ್ಯಾಕೇಜ್‌ನ ಪೈಕಿ ರಾಜ್ಯಕ್ಕೆ ಎಷ್ಟು ಮೊತ್ತ ಬಿಡುಗಡೆ ಆಗಿದೆ ಎಂಬ ವಿವರಗಳು ಆರ್ಥಿಕ ಇಲಾಖೆಯ ಬಳಿ ಇಲ್ಲವಾಗಿದೆ!.

20 ಲಕ್ಷ ಕೋಟಿ ಮೊತ್ತದ ಪರಿಹಾರ ಪ್ಯಾಕೇಜ್‌ನಲ್ಲಿ ರಾಜ್ಯಕ್ಕೆ ಎಷ್ಟು ಹಂಚಿಕೆಯಾಗಿದೆ ಮತ್ತು ಈವರೆವಿಗೆ ಯಾವ ಯಾವ ಇಲಾಖೆಗಳಿಗೆ ಎಷ್ಟು ಮೊತ್ತ ಬಿಡುಗಡೆ ಆಗಿದೆ ಎಂಬ ಕ್ರೋಢಿಕೃತ ವಿವರಗಳು ಆರ್ಥಿಕ ಇಲಾಖೆ ಬಳಿ ಇಲ್ಲದಿರುವುದು ಆರ್‌ಟಿಐನಿಂದ ಬಹಿರಂಗವಾಗಿದೆ.

ಪರಿಹಾರ ಪ್ಯಾಕೇಜ್‌ಗೆ ಸಂಬಂಧಿಸಿದಂತೆ ‘ದಿ ಫೈಲ್‌’ ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ಉತ್ತರಿಸಿರುವ ಆರ್ಥಿಕ ಇಲಾಖೆ ‘ ಪ್ಯಾಕೇಜ್‌ ಪರಿಹಾರಕ್ಕೆ ಸಂಬಂಧಿಸಿದಂತೆ ಹಲವಾರು ಇಲಾಖೆಗಳು ಭಾಜನವಾಗಿದ್ದು ಯಾವ ಯಾವ ಇಲಾಖೆಗೆ ಎಷ್ಟೆಷ್ಟು ಹಣ ಬಿಡುಗಡೆ ಮಾಡಲಾಗಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಪ್ರತಿಯೊಂದು ಇಲಾಖೆಯಿಂದ ಪಡೆಯುವ ಸಲುವಾಗಿ ಪ್ರತಿ ಇಲಾಖೆಗೆ ಪ್ರತ್ಯೇಕ ಅರ್ಜಿ ಸಲ್ಲಿಸಬೇಕು,’ ಎಂದು ಮಾಹಿತಿ ಒದಗಿಸಿದೆ.

ಲಾಕ್‌ಡೌನ್‌ ಜಾರಿಯಲ್ಲಿದ್ದ ಮೇ ತಿಂಗಳಲ್ಲಿ ಕೇಂದ್ರ ಸರ್ಕಾರ 20 ಲಕ್ಷ ಕೋಟಿ ಮೊತ್ತದ ಪ್ಯಾಕೇಜ್‌ ಘೋಷಿಸಿ 2 ತಿಂಗಳು ಗತಿಸಿದರೂ ರಾಜ್ಯಕ್ಕೆ ಎಷ್ಟು ಮೊತ್ತ ಬಿಡುಗಡೆ ಆಗಿದೆ ಎಂಬುದರ ವಿವರವನ್ನು ಸಾರ್ವಜನಿಕವಾಗಿ ಈವರೆವಿಗೂ ಬಹಿರಂಗಗೊಳಿಸದಿರುವುದು ಹಲವು ಸಂಶಯಗಳಿಗೆ ದಾರಿಮಾಡಿಕೊಟ್ಟಿದೆ.

ಅಲ್ಲದೆ ಈ ಪ್ಯಾಕೇಜ್‌ನಲ್ಲಿ ರಾಜ್ಯಕ್ಕೆ ಎಷ್ಟು ಮೊತ್ತ ಹಂಚಿಕೆಯಾಗಿದೆ ಮತ್ತು ಬಿಡುಗಡೆಯಾಗಿದೆ ಎಂಬ ಮಾಹಿತಿಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಸಾರ್ವಜನಿಕವಾಗಿ ಹಂಚಿಕೊಂಡಿಲ್ಲ.

ಸರ್ಕಾರದ ಎಲ್ಲಾ ಇಲಾಖೆಗಳಿಗೆ ಹಂಚಿಕೆಯಾಗುವ ವಿವಿಧ ರೀತಿಯ ಅನುದಾನ ಮತ್ತು ಪರಿಹಾರ ಪ್ಯಾಕೇಜ್‌ನ ಮೊತ್ತದ ವಿವರ ಆರ್ಥಿಕ ಇಲಾಖೆ ಬಳಿ ಇರಲಿದೆ. ಅನುದಾನದ ಹಂಚಿಕೆ ಮತ್ತು ಬಿಡುಗಡೆ ಮಾಡುವ ಮಹತ್ವದ ಹೊಣೆಗಾರಿಕೆಯೂ ಆರ್ಥಿಕ ಇಲಾಖೆ ಮೇಲಿರುತ್ತೆ. ಅದರ ಎಲ್ಲ ವಿವರಗಳೂ ಆರ್ಥಿಕ ಇಲಾಖೆ ಬಳಿಯೇ ಇರುತ್ತದೆ. ಆದರೆ 20 ಲಕ್ಷ ಕೋಟಿ ಪ್ಯಾಕೇಜ್‌ನ ಮೊತ್ತದ ವಿವರಗಳನ್ನು ಆರ್ಥಿಕ ಇಲಾಖೆ ಏಕೆ ಇಟ್ಟುಕೊಂಡಿಲ್ಲ ಎಂಬ ಪ್ರಶ್ನೆ ಎದುರಾಗಿದೆ.

ಕೇಂದ್ರ ಸರ್ಕಾರವು 20 ಲಕ್ಷ ಕೋಟಿ ಮೊತ್ತದ ಪ್ಯಾಕೇಜ್‌ನ್ನು ಒಮ್ಮೆಲೆ ರಾಜ್ಯಗಳಿಗೆ ಬಿಡುಗಡೆ ಮಾಡಿಲ್ಲ. ಆರಂಭಿಕ ಹಂತದಲ್ಲಿ ₹ 6 ಲಕ್ಷ ಕೋಟಿ ಮೊತ್ತದ ಪರಿಹಾರ ಪ್ಯಾಕೇಜ್‌ ಅನ್ನು ಕೇಂದ್ರ ಸರ್ಕಾರ ಮೇ ತಿಂಗಳಲ್ಲಿ ಪ್ರಕಟಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಪ್ರಸ್ತಾವನೆಗಳನ್ನು ಕೇಂದ್ರ ಸಂಪುಟ ಜೂನ್‌ನಲ್ಲಿ ಅನುಮೋದಿಸಿತ್ತು.
ಆರಂಭಿಕ ಹಂತದಲ್ಲಿ ಪ್ರಕಟಿಸಿದ್ದ ಒಟ್ಟು 6 ಲಕ್ಷ ಕೋಟಿ ಪೈಕಿ ₹ 3 ಲಕ್ಷವನ್ನು ಸಣ್ಣ ಉದ್ಯಮಗಳಿಗೆ ಖಾತರಿರಹಿತ ಸಾಲ ನೀಡಲು ಬಳಸಿಕೊಳ್ಳಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದರು.

ಮಾರ್ಚ್‌ 25ರಿಂದ ದೇಶದಲ್ಲಿ ಲಾಕ್‌ಡೌನ್‌ ಜಾರಿಯಲ್ಲಿತ್ತು. ಹೀಗಾಗಿ ಆರ್ಥಿಕ ಚಟುವಟಿಕೆಗಳೆಲ್ಲ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದವು. ಲಾಕ್‌ಡೌನ್‌ನ ಹಲವು ನಿರ್ಬಂಧಗಳನ್ನು ಸಡಿಲಿಸಿದ್ದ ಕೇಂದ್ರ ಸರ್ಕಾರ ಆರ್ಥಿಕ ಚಟುವಟಿಕೆಗಳನ್ನು ಪುನರಾರಂಭಿಸುವ ಭಾಗವಾಗಿ 20 ಲಕ್ಷ ಕೋಟಿ ಪ್ಯಾಕೇಜ್‌ ಅನುಕೂಲವಾಗಲಿದೆ ಎಂದು ಹೇಳಲಾಗಿತ್ತು.

ಅತ್ಯಂತ ತಳಮಟ್ಟಕ್ಕೆ ಕುಸಿದಿದ್ದ ಭಾರತದ ಅರ್ಥ ವ್ಯವಸ್ಥೆಗೆ ಚೈತನ್ಯ ತುಂಬುವುದು ಈಗಿನ ಪರಿಹಾರ ‍ಪ್ಯಾಕೇಜ್‌ನ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದ್ದ ಕೇಂದ್ರ ಸರ್ಕಾರ ಭಾರೀ ಪ್ರಚಾರ ಪಡೆದುಕೊಂಡಿತ್ತು.
ಲಾಕ್‌ಡೌನ್‌ನಿಂದಾಗಿ 12.2 ಕೋಟಿ ಜನರು ಉದ್ಯೋಗ ಕಳೆದುಕೊಂಡಿದ್ದರಿಂದಾಗಿ ಗ್ರಾಹಕ ಬೇಡಿಕೆಯಲ್ಲಿ ಭಾರಿ ಕುಸಿತ ಕಂಡು ಬಂದಿತ್ತು. ಹೀಗಾಗಿ ಸಣ್ಣ ಉದ್ಯಮಗಳಿಗೆ ಖಾತರಿರಹಿತ ಸಾಲ ನೀಡುವುದಕ್ಕಾಗಿ ₹ 3 ಲಕ್ಷ ಕೋಟಿ ಬಳಸಲು ಕೇಂದ್ರ ಸರ್ಕಾರ ಉದ್ದೇಶಿಸಿತ್ತು. ಈ ಪ್ಯಾಕೇಜ್‌ನಿಂದಾಗಿ 45 ಲಕ್ಷ ಸಣ್ಣ ಉದ್ಯಮಗಳಿಗೆ ಅನುಕೂಲ ಆಗಲಿದೆ ಎಂದು ಕೇಂದ್ರ ಹೇಳಿತ್ತು.

ಇದಲ್ಲದೆ ಬ್ಯಾಂಕೇತರ ಹಣಕಾಸು ಕಂಪನಿಗಳು (ಎನ್‌ಬಿಎಫ್‌ಸಿ), ಗೃಹ ಹಣಕಾಸು ಕಂಪನಿಗಳಿಗೆ (ಎಚ್‌ಎಫ್‌ಸಿ) ₹ 30 ಸಾವಿರ ಕೋಟಿ ಮೊತ್ತದ ನೆರವು ದೊರೆಯಲಿದೆ ಎಂದು ಹೇಳಿದ್ದ ಕೇಂದ್ರ, ಸಾಲ ಮಾರುಕಟ್ಟೆಯಿಂದ ಹಣ ಪಡೆದುಕೊಳ್ಳಲು ಸಾಧ್ಯವಾಗದ ಬ್ಯಾಂಕೇತರ ಹಣಕಾಸು ಕಂಪನಿಗಳು, ಗೃಹ ಹಣಕಾಸು ಕಂಪನಿಗಳು, ಸಣ್ಣ ಹಣಕಾಸು ಕಂಪನಿಗಳಿಗೆ (ಎಂಎಫ್‌ಐ) ಈ ಮೂಲಕ ನಗದು ಪೂರೈಕೆ ಆಗಲಿದೆ ಎಂದು ವಿವರಿಸಿತ್ತು.

ಸಾಲದ ಶ್ರೇಯಾಂಕ ಕಡಿಮೆ ಇರುವ ಕಂಪನಿಗಳು ಜನರಿಗೆ ಮತ್ತು ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (ಎಂಎಸ್‌ಎಂಇ) ಸಾಲ ನೀಡಲು ಅನುಕೂಲವಾಗುವಂತೆ ₹45 ಸಾವಿರ ಕೋಟಿ ನಗದು ಹರಿವಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ಘೋಷಿಸಿಕೊಂಡಿತ್ತು.

ಆರ್ಥಿಕ ಸಂಕಷ್ಟದಲ್ಲಿರುವ ಅಥವಾ ಸುಸ್ತಿದಾರ ‘ಎಂಎಸ್‌ಎಂಇ’ಗಳ ಪುನಶ್ಚೇತನಕ್ಕೆ ₹ 20 ಸಾವಿರ ಕೋಟಿ ನೀಡಲಾಗುವುದಲ್ಲದೆ, ಇದರಿಂದ ಎರಡು ಲಕ್ಷ ಉದ್ಯಮಗಳು ಪ್ರಯೋಜನ ದೊರೆಯಲಿದೆ ಎನ್ನಲಾಗಿತ್ತು.
ಅದೇ ರೀತಿ ವಿದ್ಯುತ್‌ ವಿತರಣಾ ಕಂಪನಿಗಳಿಗೆ (ಡಿಸ್ಕಾಂ) ₹ 90 ಸಾವಿರ ಕೋಟಿ ನಗದು ಪೂರೈಕೆ ಆಗಲಿದೆ ಎಂದು ಹೇಳಿದ್ದ ಕೇಂದ್ರ, ರಾಜ್ಯ ಸರ್ಕಾರಗಳ ಸ್ವಾಮ್ಯದ ವಿದ್ಯುತ್‌ ಹಣಕಾಸು ನಿಗಮ (ಪಿಎಫ್‌ಸಿ) ಮತ್ತು ಗ್ರಾಮೀಣ ವಿದ್ಯುದೀಕರಣ ನಿಗಮ (ಆರ್‌ಇಸಿ) ಮೂಲಕ ಈ ನಗದು ಪೂರೈಕೆಯ ಉದ್ದೇಶ ಹೊಂದಿತ್ತು.

ಗುತ್ತಿಗೆ, ವೃತ್ತಿಪರ ಶುಲ್ಕ, ಬಡ್ಡಿ, ಬಾಡಿಗೆ, ಡಿವಿಡೆಂಡ್‌, ಕಮಿಷನ್‌, ಬ್ರೋಕರ್‌ ಶುಲ್ಕ ಪಡೆಯುವವರಿಗೆ ನೆರವಾಗುವ ಅರ್ಥ ವ್ಯವಸ್ಥೆಗೆ ₹ 50 ಸಾವಿರ ಕೋಟಿ ನಗದು ಹರಿಯಲಿದೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅಂದಾಜಿಸಿದ್ದರು.

ಎಂಎಸ್‌ಎಂಇಗಳನ್ನು ಬಿಟ್ಟರೆ, ಬಡ ಕಾರ್ಮಿಕರಿಗೆ ಏನನ್ನೂ ಕೊಟ್ಟಿಲ್ಲ. ಉಳಿದ ₹ 16.4 ಲಕ್ಷ ಕೋಟಿ ಎಲ್ಲಿದೆ? ತಾನೇ ಸೃಷ್ಟಿಸಿದ ಅಜ್ಞಾನ, ಭಯದಲ್ಲಿ ಸರ್ಕಾರ ಬಂದಿಯಾಗಿದೆ ಎಂದು ಮಾಜಿ ಸಚಿವ ಪಿ. ಚಿದಂಬರಂ ಟೀಕಿಸಿದ್ದನ್ನು ಸ್ಮರಿಸಬಹುದು.

ಅದೇ ರೀತಿ ಕೇಂದ್ರದ ಆರ್ಥಿಕ ಪ್ಯಾಕೇಜ್‌ ಒಂದು ದೊಡ್ಡ ಸೊನ್ನೆ. ಜನರ ಕಣ್ಣೊರಸಿ, ಮೂರ್ಖರನ್ನಾಗಿಸುವ ತಂತ್ರ. ರಾಜ್ಯಗಳಿಗೆ ಈ ಪ್ಯಾಕೇಜ್‌ನಿಂದ ಏನೇನೂ ಉಪಯೋಗವಾಗುವುದಿಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಟೀಕಿಸಿದ್ದರು.

SUPPORT THE FILE

Latest News

Related Posts