ಪುಸ್ತಕಗಳ ಆಯ್ಕೆಗೆ ತರಾತುರಿ; ಕಮಿಷನ್‌ ಹೊಡೆಯಲು ನಡೆದಿದೆ ಭರ್ಜರಿ ತಯಾರಿ

ಬೆಂಗಳೂರು; ಪರಿಶಿಷ್ಟ ಜಾತಿ ಉಪ ಯೋಜನೆ ಹಾಗೂ ಗಿರಿಜನ ಉಪಯೋಜನೆ(ಎಸ್‌ಸಿಪಿ/ಟಿಎಸ್‌ಪಿ) ಅಡಿಯಲ್ಲಿ 2020ನೇ ಸಾಲಿನಲ್ಲಿ ಪ್ರಥಮ ಮುದ್ರಣಗೊಂಡ ಪುಸ್ತಕಗಳ ಆಯ್ಕೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿಯಮಾವಳಿಗಳನ್ನು ಗಾಳಿಗೆ ತೂರಿದೆ ಎಂಬ ಬಲವಾದ ಆರೋಪಕ್ಕೆ ಗುರಿಯಾಗಿದೆ.

ವಿಶೇಷವೆಂದರೆ ಪುಸ್ತಕಗಳ ಆಯ್ಕೆ ಸಮಿತಿಗೆ ವಿಧಾನಪರಿಷತ್‌ನ ಮಾಜಿ ಸದಸ್ಯ ಹಾಗೂ ಗೀತರಚನೆಕಾರ ಡಾ ದೊಡ್ಡರಂಗೇಗೌಡರ ಅಧ್ಯಕ್ಷರಾಗಿದ್ದರೂ ಇನ್ನೂ ಪೂರ್ಣ ಸಮಿತಿ ರಚನೆಯಾಗಿಲ್ಲ. ಪುಸ್ತಕಗಳ ಆಯ್ಕೆ ಸಮಿತಿಯೇ ಅಪೂರ್ಣವಾಗಿರುವುದು ಮತ್ತು ಕೊರೊನಾ ಸಂದರ್ಭವನ್ನೇ ದುರ್ಬಳಕೆ ಮಾಡಿಕೊಂಡಿರುವ ಅಧಿಕಾರಿಗಳು ಜೇಬು ತುಂಬಿಸಿಕೊಳ್ಳಲು ಹೊರಟಿರುವುದು ಇದೀಗ ಬಹಿರಂಗವಾಗಿದೆ.

ಅಧಿಕಾರಿಗಳ ವಲಯದಲ್ಲಿ ಇಷ್ಟೆಲ್ಲಾ ಬೆಳವಣಿಗೆಗಳು ನಡೆಯುತ್ತಿದ್ದರೂ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಹೊಣೆಗಾರಿಕೆ ಹೊತ್ತಿರುವ ಶಿಕ್ಷಣ ಸಚಿವ ಎಸ್‌ ಸುರೇಶ್‌ಕುಮಾರ್‌ ಅವರು ಈ ಬಗ್ಗೆ ಮೌನ ವಹಿಸಿರುವುದು ಸಂಶಯಗಳಿಗೆ ದಾರಿಮಾಡಿಕೊಟ್ಟಿದೆ.

ಅಧಿಕಾರಿಗಳ ತರಾತುರಿ

2020-21ನೇ ಸಾಲಿಗೆ ಪುಸ್ತಕಗಳ ಆಯ್ಕೆಗೆ ಸಂಬಂಧಿಸಿದಂತೆ ನಿರ್ದಿಷ್ಟ ಪ್ರಕಾಶಕರಿಗಷ್ಟೇ ಅನುಕೂಲವಾಗುವ ನಿಟ್ಟಿನಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆ ಅಧಿಕಾರಿಗಳು ತರಾತುರಿಯಲ್ಲಿ ಪುಸ್ತಕಗಳನ್ನು ಆಹ್ವಾನಿಸಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

ಪ್ರಸಕ್ತ ಸಾಲಿನಲ್ಲಿ ಅಂದಾಜು 1.00 ಕೋಟಿ ಮೊತ್ತದಲ್ಲಿ ಪುಸ್ತಕಗಳನ್ನು ಇಲಾಖೆ ಖರೀದಿಸಲಿದೆ ಎಂದು ಗೊತ್ತಾಗಿದೆ. ಆದರೆ ಪ್ರಕಾಶಕರು ಪುಸ್ತಕಗಳನ್ನು ಸಲ್ಲಿಸಲು ಆಗಸ್ಟ್‌ 17 ಕಡೆ ದಿನಾಂಕ ಎಂದು ಗೊತ್ತುಪಡಿಸುವ ಮೂಲಕ ಬೆಂಗಳೂರು ನಗರ ಹೊರತುಪಡಿಸಿ ರಾಜ್ಯದ ವಿವಿಧ ಜಿಲ್ಲೆಗಳ ಪ್ರಕಾಶಕರನ್ನು ಆಯ್ಕೆ ಪ್ರಕ್ರಿಯೆಯಿಂದ ಹೊರಗಿಡುವ ಸಂಚು ನಡೆದಿದೆ ಎಂದು ಹಲವು ಪ್ರಕಾಶಕರು ಆರೋಪಿಸಿದ್ದಾರೆ.

ಕೊರೊನಾ ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡಿರುವ ಸಾರ್ವಜನಿಕ ಗ್ರಂಥಾಲಯ ಇಲಾಖೆ ಅಧಿಕಾರಿಗಳು ನಿರ್ದಿಷ್ಟ ಪ್ರಕಾಶಕರಿಗಷ್ಟೇ ಲಾಭ ಮಾಡಿಕೊಡಲು ಹೊರಟಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಆಗಸ್ಟ್‌ 15 ಮತ್ತು 16ರ ಎರಡೂ ದಿನಗಳು ರಜಾ ದಿನಗಳಾಗಿವೆ. ಆದರೂ ಆಗಸ್ಟ್‌ 17 ಕಡೆ ದಿನಾಂಕ ಎಂದು ಅಧಿಕಾರಿಗಳೇ ಗೊತ್ತುಪಡಿಸಿದ್ದಾರೆ ಎಂದು ಗೊತ್ತಾಗಿದೆ. ರಜಾ ದಿನಗಳಂದು ರಾಜ್ಯದ ವಿವಿಧ ಜಿಲ್ಲೆ, ತಾಲೂಕುಗಳಲ್ಲಿರುವ ಪ್ರಕಾಶಕರು ಹೇಗೆ ತಾನೆ ಪುಸ್ತಕಗಳನ್ನು ಆಯ್ಕೆ ಸಮಿತಿಗೆ ತಲುಪಿಸಬಲ್ಲರು ಎಂಬ ಪ್ರಶ್ನೆಯೂ ಎದುರಾಗಿದೆ.

‘ದಿ ಫೈಲ್‌’ ಜತೆ ಮಾತನಾಡಿದ ಪ್ರಕಾಶಕರೊಬ್ಬರು ಈ ಉಪಯೋಜನೆ ಹೊಣೆ ಹೊತ್ತಿರುವ ಅಧಿಕಾರಿಯೊಬ್ಬರ ಸಂಪರ್ಕದಲ್ಲಿರುವ ಪ್ರಕಾಶಕರಿಗಷ್ಟೇ ಈ ಯೋಜನೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿದ್ದಾರೆ. ತರಾತುರಿಯಲ್ಲಿ ಅವರಿಂದ ಮಾತ್ರವೇ ಪುಸ್ತಕಗಳನ್ನು ಈ ಯೋಜನೆ ಅಡಿ ಆಯ್ಕೆ ಮಾಡಲು ಸಂಚು ರೂಪಿಸಲಾಗಿದೆ,’ ಎಂದು ಗುಮಾನಿ ವ್ಯಕ್ತಪಡಿಸಿದ್ದಾರೆ.

ಪ್ರಕಟಣೆ ಹೊರಡಿಸಿಲ್ಲ?

ಪುಸ್ತಕ ಆಯ್ಕೆಗೆ ಸಂಬಂಧಿಸಿದಂತೆ ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಣೆ ಹೊರಡಿಸಬೇಕು. ಆದರೆ ಈ ಬಾರಿ ಯಾವ ದಿನಪತ್ರಿಕೆಯಲ್ಲೂ ಪ್ರಕಟಣೆ ಹೊರಡಿಸದೇ ಅಧಿಕಾರಿಯೊಬ್ಬರ ನಿಕಟ ಸಂಪರ್ಕದಲ್ಲಿರುವ ಪ್ರಕಾಶಕರಿಗಷ್ಟೇ ಮಾಹಿತಿ ಒದಗಿಸಲಾಗಿದೆ. ಅಲ್ಲದೆ ಗ್ರಂಥಾಲಯ ಇಲಾಖೆಯ ಅಧಿಕೃತ ಜಾಲತಾಣದಲ್ಲೂ ಈ ಬಗ್ಗೆ ಯಾವುದೇ ಪ್ರಕಟಣೆಯನ್ನ ಪ್ರಕಟಿಸಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.

ಆರ್‌ಆರ್‌ಎಲ್‌ಎಫ್‌ ಯೋಜನೆಯಡಿಯಲ್ಲಿ ಸರಬರಾಜು ಮಾಡುವ ಪುಸ್ತಕಗಳ ಸ್ವೀಕೃತಿಗಾಗಿ 2020ರ ಮಾರ್ಚ್‌ 13 ಕಡೆ ದಿನಾಂಕ ಎಂಬ ಮಾಹಿತಿ ಮತ್ತು 2019ನೇ ಸಾಲಿನಲ್ಲಿ ಪ್ರಕಟಗೊಂಡು ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿಯಿಂದ ಆಯ್ಕೆಯಾದ ಪುಸ್ತಕಗಳ ಪಟ್ಟಿ ವಿವರ ಸೇರಿದಂತೆ 2017, 2018 ಮತ್ತು 2019ನೇ ಸಾಲಿಗೆ ಸಂಬಂಧಿಸಿದ ಕೆಲ ಪ್ರಕಟಣೆಗಳ ಹೊರತಾಗಿ 2020ನೇ ಸಾಲಿನ ಪುಸ್ತಕಗಳ ಆಯ್ಕೆ ಸಂಬಂಧ ಯಾವ ಅಧಿಸೂಚನೆಯೂ ಇಲ್ಲ.

ಹಂಪಿ ನಗರದಲ್ಲಿ ಶುರುವಾಗಿದೆಯೇ ಕಾರ್ಯಾಚರಣೆ?

ಈ ಬಗ್ಗೆ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಅಧಿಕೃತ ಜಾಲತಾಣಕ್ಕೆ ‘ದಿ ಫೈಲ್‌’ ಸಂಜೆ 7.58ಕ್ಕೆ ಭೇಟಿ ಕೊಟ್ಟಾಗಲೂ 2020ನೇ ಸಾಲಿನ ಪುಸ್ತಕ ಆಯ್ಕೆ ಕುರಿತು ಯಾವ ಪ್ರಕಟಣೆಯೂ ಕಂಡು ಬಂದಿಲ್ಲ. ಬೆಂಗಳೂರಿನ ಹಂಪಿನಗರದಲ್ಲಿರುವ ಗ್ರಂಥಾಲಯ ಕಚೇರಿಯಲ್ಲಿ ಪುಸ್ತಕಗಳ ಕಾಪಿರೈಟ್ ಮಾಡಿಸುವ ಮತ್ತು ಅಲ್ಲಿಯೇ ಆಯ್ಕೆಗೆ ಪುಸ್ತಕಗಳನ್ನು ಸಲ್ಲಿಸುವ ಪ್ರಕ್ರಿಯೆಗೆ ಸದ್ದಿಲ್ಲದೇ ಚಾಲನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

‘ಆಯ್ಕೆ ಪ್ರಕ್ರಿಯೆ ಆರಂಭವಾಗಿರುವ ಹಾಗೂ ಕೊನೆಯ ದಿನಾಂಕದ ವಿವರಗಳ ಬಗ್ಗೆ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಣೆ ಹೊರಡಿಸಬೇಕು. ಆದರೆ ಈ ಬಾರಿ ಯಾವ ಪ್ರಕಟಣೆಯೂ ಹೊರಡಿಸಿಲ್ಲ. ಕನಿಷ್ಠ ಇಲಾಖೆಯ ಅಧಿಕೃತ ಜಾಲತಾಣದಲ್ಲಾದರೂ ಈ ಬಗ್ಗೆ ಮಾಹಿತಿ ಒದಗಿಸಬೇಕು. ಅಧಿಕಾರಿಗಳ ಪ್ರಕಾರ ಜುಲೈ 3 ಮತ್ತು 4 ರಂದು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟಣೆ ಹೊರಡಿಸಲಾಗಿದೆ. ಆದರೆ ಪ್ರಕಟವಾದ ಪ್ರಜಾವಾಣಿ ಪತ್ರಿಕೆಯನ್ನೇ ಅಧಿಕಾರಿಗಳು ತೋರಿಸುತ್ತಿಲ್ಲ. ಹೀಗಾಗಿ ಪುಸ್ತಕ ಆಯ್ಕೆ ಸಮಿತಿ ಪಾರದರ್ಶಕವಾಗಿಲ್ಲ ಎಂದು ಮೇಲ್ನೋಟಕ್ಕೆ ಆರೋಪಿಸಬಹುದು,’ ಎನ್ನುತ್ತಾರೆ ಮತ್ತೊಬ್ಬ ಪ್ರಕಾಶಕರು.

ಪ್ರಭಾವಿ ಪ್ರಕಾಶಕರೊಂದಿಗೆ ಅಧಿಕಾರಿಗಳೂ ಶಾಮೀಲಾಗಿರುವ ಕಾರಣ ಹಲವು ಪ್ರಕಾಶಕರಿಗೆ, ಅದರಲ್ಲೂ ಗ್ರಾಮೀಣ ಭಾಗದ ಪ್ರಕಾಶಕರೂ ವಂಚನೆಗೊಳಗಾಗಲಿದ್ದಾರೆ ಎಂದು ಹೇಳಲಾಗಿದೆ.

the fil favicon

SUPPORT THE FILE

Latest News

Related Posts