ಸ್ಯಾನಿಟೈಸೇಷನ್‌; ಆರ್ಥಿಕ ಇಲಾಖೆಗೆ ಬರೆದಿರುವ ಪತ್ರ ಒದಗಿಸಲು ಕಾಲಾವಕಾಶ ತಂತ್ರ ಬಳಸಿದ ಸಚಿವಾಲಯ

ಬೆಂಗಳೂರು; ವಿಧಾನಸೌಧ ಮತ್ತು ಶಾಸಕರ ಭವನದ ಕೊಠಡಿಗಳನ್ನು ಸ್ಯಾನಿಟೈಸೇಷನ್‌ ಮಾಡಿಸುವ ಸಂಬಂಧ ಖಾಸಗಿ ಕಂಪನಿಗೆ ಅಂದಾಜು 11.76 ಕೋಟಿ ಮೊತ್ತದ ವಾರ್ಷಿಕ ಗುತ್ತಿಗೆ ನೀಡಲು ಅನುಮೋದನೆ ಕೋರಿ ಆರ್ಥಿಕ ಇಲಾಖೆಗೆ ಬರೆದಿದೆ ಎನ್ನಲಾಗಿರುವ ಪತ್ರವನ್ನು ಆರ್‌ಟಿಐ ಅಡಿ ಒದಗಿಸಲು ಮೀನಮೇಷ ಎಣಿಸುತ್ತಿರುವ ವಿಧಾನಸಭೆ ಸಚಿವಾಲಯವು ಇದೀಗ ಕಾಲಾವಕಾಶ ತಂತ್ರಗಾರಿಕೆಯನ್ನು ಬಳಸಿದೆ.

ಶಾಸಕರ ಭವನ ಮತ್ತು ವಿಧಾನಸೌಧದ ಕೊಠಡಿಗಳಿಗೆ ಸ್ಯಾನಿಟೈಸೇಷನ್‌ ಮಾಡಲು ತಿಂಗಳಿಗೆ 98.00 ಲಕ್ಷ ರು ಲೆಕ್ಕದಲ್ಲಿ ಒಂದು ವರ್ಷಕ್ಕೆ 11.76 ಕೋಟಿ ರು. ಮೊತ್ತಕ್ಕೆ ಗುತ್ತಿಗೆ ನೀಡಲು ಅನುಮೋದನೆಗಾಗಿ ಆರ್ಥಿಕ ಇಲಾಖೆಗೆ ಪತ್ರ ಬರೆದಿದೆ ಎಂದು ತಿಳಿದು ಬಂದಿದೆ. ಈ ಪತ್ರಕ್ಕಾಗಿ ‘ದಿ ಫೈಲ್‌’ 2020ರ ಜುಲೈ 9ರಂದು ಆರ್‌ಟಿಐ ಅಡಿ ಅರ್ಜಿ ಸಲ್ಲಿಸಿತ್ತು.

ಅರ್ಜಿ ಸಲ್ಲಿಕೆಯಾಗಿ 37 ದಿನಗಳ ನಂತರ ಉತ್ತರಿಸಿರುವ ವಿಧಾನಸಭೆ ಸಚಿವಾಲಯವು ಪತ್ರ ಒದಗಿಸುವ ಸಂಬಂಧ ‘ಪರಿಶೀಲನೆ’ ನಡೆಸುವ ನೆಪವೊಡ್ಡಿದೆ. ಅಲ್ಲದೆ ಪತ್ರ ಒದಗಿಸಲು ಕಾಲಾವಕಾಶವನ್ನೂ ಕೋರಿದೆ. ಸಚಿವಾಲಯದ ಈ ನಡೆ ಹಲವು ಸಂಶಯಗಳಿಗೆ ದಾರಿಮಾಡಿಕೊಟ್ಟಿದೆ.

ವಿಧಾನಸೌಧ ಮತ್ತು ಶಾಸಕರ ಭವನದಲ್ಲಿನ ಕೊಠಡಿಗಳನ್ನು ಸ್ಯಾನಿಟೈಸೇಷನ್‌ ಮಾಡಿಸಲು 11.76 ಕೋಟಿ ರು.ಮೊತ್ತದಲ್ಲಿ ಕೆಸಿಐಸಿ ಕಂಪನಿಗೆ ವಾರ್ಷಿಕ ಗುತ್ತಿಗೆ ನೀಡಲು ವಿಧಾನಸಭೆ ಸಚಿವಾಲಯವು ಮುಂದಾಗಿದೆ. ಈ ಕುರಿತು ಟೆಂಡರ್‌ ಪ್ರಕ್ರಿಯೆ ನಡೆಸಿಲ್ಲ ಮತ್ತು ವಿವಿಧ ಕಂಪನಿಗಳಿಂದ ದರ ಪಟ್ಟಿಯನ್ನೂ ಆಹ್ವಾನಿಸಿಲ್ಲ. ಏಕಪಕ್ಷೀಯವಾಗಿ ನಿರ್ದಿಷ್ಟ ಕಂಪನಿಗೆ ವಾರ್ಷಿಕ ಗುತ್ತಿಗೆ ನೀಡುವ ಸಂಬಂಧ 4(ಜಿ) ವಿನಾಯಿತಿ ಕೋರಿ ಆರ್ಥಿಕ ಇಲಾಖೆಗೆ ಪತ್ರ ಬರೆದಿದೆ ಎಂಬ ಬಲವಾದ ಆರೋಪಗಳು ಕೇಳಿ ಬಂದಿದ್ದವು.

ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ಕೋರಿ ಸಲ್ಲಿಸಿದ್ದ ಅರ್ಜಿಗೆ ಉತ್ತರಿಸಿರುವ ಸಚಿವಾಲಯವು ಆರ್ಥಿಕ ಇಲಾಖೆಗೆ ಪತ್ರವನ್ನು ಬರೆದಿದೆ ಎಂದು ತಾತ್ವಿಕವಾಗಿ ಒಪ್ಪಿಕೊಂಡಂತಿರುವ ಸಚಿವಾಲಯವು  ಪತ್ರ ಒದಗಿಸುವ ಮಾಹಿತಿಯನ್ನು ಪರಿಶೀಲಿಸಲಾಗುತ್ತಿದೆ ಎಂದು ನೀಡಿರುವ ಮಾಹಿತಿಯು ವಿಳಂಬ ಧೋರಣೆಗೆ ಹಿಡಿದ ಕೈಗನ್ನಡಿಯಾಗಿದೆ.

‘ಕೋವಿಡ್‌-19ರ ಹಿನ್ನೆಲೆಯಲ್ಲಿ ವಿಧಾನಸಭೆ ಸಚಿವಾಲಯ ಅಧೀನದಲ್ಲಿರುವ ವಿಧಾನಸೌಧ ಕೊಠಡಿ ಮತ್ತು ಶಾಸಕರ ಭವನದ ಸಮುಚ್ಛಯದಲ್ಲಿರುವ ಕೊಠಡಿಗಳಿಗೆ ಸ್ಯಾನಿಟೈಸೇಷನ್‌ ಮಾಡಿಸುವ ಸಂಬಂಧ ಕಾರ್ಯಕಾರಿ ಶಾಖೆಯಿಂದ ಆರ್ಥಿಕ ಇಲಾಖೆಗೆ ಬರೆದಿರುವ ಪತ್ರದ ಪ್ರತಿಯನ್ನು ಒದಗಿಸಬೇಕೆಂದು ಉಲ್ಲೇಖಿತ ಪತ್ರದಲ್ಲಿ ಕೋರಲಾಗಿದೆ. ಈ ಮಾಹಿತಿಯ ಬಗ್ಗೆ ಪರಿಶೀಲಿಸಲಾಗುತ್ತಿರುವುದರಿಂದ 15 ದಿನಗಳ ಕಾಲಾವಕಾಶಬೇಕಾಗುತ್ತದೆಂದು’ ಎಂದು ಸಚಿವಾಲಯದ ಅಧೀನ ಕಾರ್ಯದರ್ಶಿ ಜಯಲಕ್ಷ್ಮಮ್ಮ ಮಾಹಿತಿ ಒದಗಿಸಿದ್ದಾರೆ.

ಸ್ಯಾನಿಟೈಸೇಷನ್‌ ಮಾಡಿಸಲು ಕೆಸಿಐಸಿ ಕಂಪನಿಗೆ ಕಾರ್ಯಾದೇಶ ನೀಡಿದೆ ಎಂದು ಕೆಲ ದಿನಗಳ ಹಿಂದೆ ಮಾಹಿತಿ ನೀಡಿದ್ದ ಕರ್ನಾಟಕ ವಿಧಾನಸಭೆ ಸಚಿವಾಲಯ, ಸ್ಯಾನಿಟೈಸೇಷನ್‌ ಮಾಡಲು ನಿಗದಿಪಡಿಸಿರುವ ದರದ ಮಾಹಿತಿಯನ್ನು ಗೌಪ್ಯವಾಗಿರಿಸಿತ್ತು.

ಹಾಗೆಯೇ ಕೇವಲ ಕಂಪನಿ ಹೆಸರಿನ ಮಾಹಿತಿ ನೀಡಿ ಉಳಿದ ಯಾವ ವಿವರಗಳನ್ನೂ ಒದಗಿಸದೇ ಅರೆಬರೆ ಮಾಹಿತಿ ನೀಡಿ ನುಣುಚಿಕೊಂಡಿತ್ತು. ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆಗೆ ಬರೆದಿರುವ ಪತ್ರವನ್ನು ಒದಗಿಸಲು ಪರಿಶೀಲನೆ ನಡೆಸುವ ನೆಪ ಮತ್ತು ಪತ್ರವನ್ನು ಒದಗಿಸಲು 15 ದಿನಗಳ ಕಾಲಾವಕಾಶ ಕೋರುತ್ತಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

ಕೆಸಿಐಸಿ ಕಂಪನಿಗೆ ಕಾರ್ಯಾದೇಶ

‘ಕೋವಿಡ್‌-19ರ ಹಿನ್ನೆಲೆಯಲ್ಲಿ ವಿಧಾನಸಭೆ ಸಚಿವಾಲಯದ ಅಧೀನದಲ್ಲಿರುವ ವಿಧಾನಸೌಧ ಕೊಠಡಿಗಳನ್ನು ಸ್ಯಾನಿಟೈಸೇಷನ್‌ ಮಾಡಲು ಕೆಸಿಐಸಿ ಪ್ರೈವೈಟ್‌ ಲಿಮಿಟೆಡ್‌ಗೆ ಕಾರ್ಯಾದೇಶ ನೀಡಿದ್ದು, ಈ ಸಂಬಂಧದಲ್ಲಿ ಕಡತವು ಚಾಲ್ತಿಯಲ್ಲಿರುತ್ತದೆ,’ ಎಂದು ವಿಧಾನಸಭೆ ಸಚಿವಾಲಯದ ಸಾರ್ವಜನಿಕ ಮಾಹಿತಿ ಅಧಿಕಾರಿ ಜಯಲಕ್ಷ್ಮಮ್ಮ ಅವರು 2020ರ ಆಗಸ್ಟ್‌ 8ರಂದು ಮಾಹಿತಿ ನೀಡಿತ್ತು.

ಅರೆಬರೆ ಮಾಹಿತಿ

ವಿಧಾನಸೌಧದ ಕೊಠಡಿಗಳಿಗೆ ಸ್ಯಾನಿಟೈಸೇಷನ್‌ ಮಾಡಿಸುವುದಕ್ಕೆ ಸಂಬಂಧಿಸಿದಂತೆ ‘ದಿ ಫೈಲ್‌’ ಮಾಹಿತಿ ಹಕ್ಕಿನ ಅಡಿಯಲ್ಲಿ 2020ರ ಜುಲೈ 9ರಂದು ಮಾಹಿತಿ ಕೇಳಿತ್ತು. ಕೊಠಡಿವಾರು, ಚದುರ ಮೀಟರ್‌ ವಿಸ್ತೀರ್ಣವಾರು, ಕಂಪನಿ ನೀಡಿರುವ ದರ, ಸಚಿವಾಲಯ ನಿಗದಿಪಡಿಸಿರುವ ದರ ಮತ್ತು ಎಷ್ಟು ಮೊತ್ತ ಪಾವತಿಸಿದೆ ಅಥವಾ ಇಲ್ಲವೇ ಎಂಬ ಮಾಹಿತಿ ಕೇಳಿತ್ತು.

ಕಂಪನಿಯು ನಿರ್ವಹಿಸಬೇಕಾದ ಕಾಮಗಾರಿ ವಿವರ, ಪಾವತಿ ಸಂಬಂಧ ಸಲ್ಲಿಸಬೇಕಾದ ಬಿಲ್‌ಗಳ ವಿವರ ಕಾಮಗಾರಿ ನಿರ್ವಹಿಸಬೇಕಾದ ಕಾಲಮಿತಿ, ಕೆಲಸ ಪೂರ್ಣಗೊಂಡ ನಂತರ ಹಣ ಪಾವತಿ ಸಂಬಂಧ ಬಿಲ್‌ಗಳ ಒದಗಿಸುವ ಮಾಹಿತಿ ಕಾರ್ಯಾದೇಶದಲ್ಲಿರುತ್ತೆ. ಆದರೆ ಈ ಯಾವ ವಿವರಗಳನ್ನೂ ಒದಗಿಸದೆಯೇ ಕೇವಲ ಕಾರ್ಯಾದೇಶ ನೀಡಿದೆ ಎಂಬುದನ್ನು ಮಾತ್ರ ಬಹಿರಂಗಪಡಿಸಿ ಉಳಿದ ಈ ಯಾವ ಮಾಹಿತಿಗಳನ್ನೂ ನೀಡದಿರುವುದು ಸಂದೇಹಾಸ್ಪದವಾಗಿತ್ತು.

ಕಾಗೇರಿ ಮೌಖಿಕ ಸೂಚನೆ?

ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಮೌಖಿಕ ಸೂಚನೆ ಮೇರೆಗೆ ಸ್ಯಾನಿಟೈಸೇಷನ್‌ ಮಾಡಿಸಲಾಗಿದೆ ಎಂದು ಹೇಳಲಾಗಿದೆ. ಅಲ್ಪಾವಧಿ ಟೆಂಡರ್‌ ಕರೆಯಲು ಸಾಕಷ್ಟು ಅವಕಾಶಗಳು ಇದ್ದರೂ ಸಹ ಅದರ ಗೊಡವೆಗೆ ಹೋಗದ ವಿಧಾನಸಭೆ ಸಚಿವಾಲಯ ಆರ್ಥಿಕ ಇಲಾಖೆಯಿಂದ 4(ಜಿ) ಪಡೆದಿರುವುದು ಸಂಶಯಗಳಿಗೆ ದಾರಿಮಾಡಿಕೊಟ್ಟಿದೆ.

ಟೆಂಡರ್‌ ಕರೆಯಲಿಲ್ಲವೇಕೆ?

1.00 ಲಕ್ಷ ರು. ಮೊತ್ತದ ಒಳಗಿನ ಕಾಮಗಾರಿ ಸೇರಿದಂತೆ ಇನ್ನಿತರೆ ಚಟುವಟಿಕೆಗಳಿಗೆ ಹಣ ಬಿಡುಗಡೆ ಮಾಡುವ ಅಧಿಕಾರ ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿಗಿದೆ. ಅದೇ ರೀತಿ 5.00 ಲಕ್ಷ ರು. ಮಿತಿಯೊಳಗೆ ಅನುಮೋದನೆ ನೀಡಲು ಸ್ಪೀಕರ್‌ ಕಾರ್ಯಾದೇಶ ಹೊರಡಿಸಬಹುದು. ಆದರೆ ಸ್ಯಾನಿಟೈಸೇಷನ್‌ ಮಾಡಿಸಲು ತಿಂಗಳಿಗೆ 98.00 ಲಕ್ಷ ರು.ವೆಚ್ಚ ಎಂದು ಅಂದಾಜಿಸಿರುವಾಗ ಟೆಂಡರ್‌ ಇಲ್ಲದೆಯೇ ನಿರ್ದಿಷ್ಟ ಕಂಪನಿಯೊಂದಕ್ಕೆ ಒಂದು ವರ್ಷದ ಅವಧಿಗೆ ಗುತ್ತಿಗೆ ನೀಡಲು ಹೊರಟಿದೆ ಎಂಬ ಆರೋಪಕ್ಕೆ ಸಚಿವಾಲಯವು ಗುರಿಯಾಗಿದೆ.

ಟೆಂಡರ್‌ ಕರೆಯಲು ಕಾಲಾವಕಾಶ ಇಲ್ಲದೇ ಇದ್ದ ಪಕ್ಷದಲ್ಲಿ ಕಂಪನಿಗಳಿಂದ ದರಪಟ್ಟಿ ಕರೆಯಬಹುದಿತ್ತು. ಆದರೆ ಈ ಪ್ರಕ್ರಿಯೆಯೂ ನಡೆದಿಲ್ಲ ಎಂದು ಹೇಳಲಾಗುತ್ತಿದೆ. ಅಲ್ಪಾವಧಿ ಟೆಂಡರ್‌, ದರ ಪಟ್ಟಿ ಪಡೆಯದೇ ಏಕಪಕ್ಷೀಯವಾಗಿ ನಿರ್ದಿಷ್ಟ ಕಂಪನಿಗೆ ನೀಡಿರುವುದರ ಹಿಂದೆ ಕಮಿಷನ್‌ ವ್ಯವಹಾರ ನಡೆದಿರುವ ಸಾಧ್ಯತೆಗಳಿವೆ ಎಂಬ ಆರೋಪಗಳು ಕೇಳಿ ಬಂದಿದ್ದವು.

ಒಟ್ಟು 5 ಸಮುಚ್ಛಯಗಳನ್ನೊಂದಿರುವ ಶಾಸಕರ ಭವನದಲ್ಲಿ ಅಂದಾಜು 400 ಕೊಠಡಿಗಳಿವೆ ಎನ್ನಲಾಗಿದೆ. ಈ ಪೈಕಿ ವಿಧಾನಸಭೆ ಸದಸ್ಯರಿಗೆ 300 ಕೊಠಡಿಗಳು ಮೀಸಲಾಗಿವೆ. ಇಷ್ಟೂ ಕೊಠಡಿಗಳಿಗೆ ಅಡಿ ಲೆಕ್ಕದಲ್ಲಿ ಪ್ರತಿ ದಿನವೂ ಸ್ಯಾನಿಟೈಸೇಷನ್‌ ಮಾಡಿಸಲಿದೆ ಎಂದು ತಿಳಿದು ಬಂದಿದೆ.

SUPPORT THE FILE

Latest News

Related Posts