3,322 ಕೋಟಿಯಲ್ಲಿ 853.90 ಕೋಟಿ ರು. ವೆಚ್ಚ; 2,469 ಕೋಟಿ ರು. ಖರ್ಚಿನ ವಿವರ ನಿಗೂಢ

ಬೆಂಗಳೂರು: ಪ್ರಸಕ್ತ ಹಣಕಾಸು ವರ್ಷದ 3 ತಿಂಗಳ ಅವಧಿಯಲ್ಲಿ 3,322 ಕೋಟಿ ಖರ್ಚು ಮಾಡಿದೆ ಎಂದು ಕರ್ನಾಟಕ ಪ್ರಗತಿ ಪರಿಶೀಲನೆ ಸಭೆಗೆ (ಕೆಡಿಪಿ) ಮಾಹಿತಿ ನೀಡಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ವೆಚ್ಚಕ್ಕೆ ಸಂಬಂಧಿಸಿದಂತೆ ಇದೀಗ ಕೇವಲ 853.90 ಕೋಟಿಯ ಲೆಕ್ಕ ತೋರಿಸಿದೆ.

853.90 ಕೋಟಿ ರು. ವೆಚ್ಚವಾಗಿದೆ ಎಂದು ಲೆಕ್ಕ ತೋರಿಸಿರುವ ಆರೋಗ್ಯ ಇಲಾಖೆಯು ಒಟ್ಟಾರೆ 3,322 ಕೋಟಿಯಲ್ಲಿ 2,469 ಕೋಟಿ ರು. ಯಾವ ಬಾಬ್ತಿಗೆ ಖರ್ಚಾಗಿದೆ ಎಂಬ ಮಾಹಿತಿ ಒದಗಿಸದೇ ನಿಗೂಢವಾಗಿರಿಸಿದೆ. ಅಲ್ಲದೆ ಪರಿಷ್ಕೃತ ಅಂದಾಜಿಗೆ ಸಂಬಂಧಿಸಿದಂತೆ ಆರ್‌ಟಿಐ ಅಡಿ ನೀಡಿರುವ ಮಾಹಿತಿಗೂ ಕೆಡಿಪಿ ಸಭೆಗೂ ನೀಡಿರುವ ಅಂಕಿ ಅಂಶದಲ್ಲಿ 2 ಸಾವಿರ ಕೋಟಿ ವ್ಯತ್ಯಾಸವಿದೆ. ವೆಚ್ಚದ ಬಗ್ಗೆ ನೀಡಿರುವ ಮಾಹಿತಿ ಏಕರೂಪವಾಗಿಲ್ಲ.

2020-21ರ ನಿಗದಿತ ಅನುದಾನ (ಆಯವ್ಯಯ ಅಂದಾಜು) ಮತ್ತು ಇದೇ ಸಾಲಿನ ಪರಿಷ್ಕೃತ ಅಂದಾಜಿನ ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಒಟ್ಟು 3,322.07 ಕೋಟಿ ವೆಚ್ಚಕ್ಕೆ ಸಂಬಂಧಿಸಿದಂತೆ ‘ದಿ ಫೈಲ್‌’ ಕೇಳಿದ್ದ ಆರ್‌ಟಿಐಗೆ 2020ರ ಆಗಸ್ಟ್‌ 10ರಂದು ಉತ್ತರಿಸಿರುವ ಇಲಾಖೆ, ಕೇವಲ 853.90 ಕೋಟಿ ಖರ್ಚಿನ ವಿವರಗಳನ್ನು ಬಾಬ್ತುವಾರು ಒದಗಿಸಿದೆ.

‘2020-21ನೇ ಸಾಲಿನ ಆಯವ್ಯಯದಲ್ಲಿ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಯೋಜನಾವಾರು ವಿವಿಧ ಲೆಕ್ಕ ಶೀರ್ಷಿಕೆಗಳಿಗೆ ಪರಿಷ್ಕೃತ ಅಂದಾಜಿನಲ್ಲಿ ಒಟ್ಟಾರೆ 681870.55 ಲಕ್ಷ ಅನುದಾನವನ್ನು ಒದಗಿಸಲಾಗಿರುತ್ತದೆ. ಈ ಪೈಕಿ ಮೇ 2020ರ ಅಂತ್ಯಕ್ಕೆ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಗೆ ಬಿಡುಗಡೆಯಾಗಿರುವ ಅನುದಾನದ ಪೈಕಿ ವಾಸ್ತವವಾಗಿ 85390.33 ಲಕ್ಷಗಳು ವಿವಿಧ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ವೆಚ್ಚವಾಗಿರುತ್ತದೆ,’ ಎಂದು ಇಲಾಖೆಯ ನಿರ್ದೇಶಕರು ಮಾಹಿತಿ ಒದಗಿಸಿದ್ದಾರೆ.

6,818.70 ಕೋಟಿಯಲ್ಲಿ 853.90 ಕೋಟಿ ಖರ್ಚು ಮಾಡಿರುವ ಇಲಾಖೆ ಬಳಿ ಇನ್ನೂ 5,964.80 ಕೋಟಿ ರು. ಉಳಿದಿರುವುದು ಇಲಾಖೆ ನೀಡಿರುವ ಮಾಹಿತಿಯಿಂದ ತಿಳಿದು ಬಂದಿದೆ.

2020-21ನೇ ಸಾಲಿನ ಇಲಾಖಾವಾರು (ಮೇ 2020ರವರೆಗೆ) ಪ್ರಗತಿ ಕುರಿತು ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ನಡೆದಿದ್ದ ಕೆಡಿಪಿ ಸಭೆಗೆ ಇಲಾಖೆ ನೀಡಿದ್ದ ಮಾಹಿತಿಗೂ, ಆರ್‌ಟಿಐನಲ್ಲಿ ಒದಗಿಸಿರುವ ಮಾಹಿತಿಗೂ ಸಾಕಷ್ಟು ವ್ಯತ್ಯಾಸವಿರವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಏಕರೂಪವಾಗಿರದ ಮಾಹಿತಿ

ಇಲಾಖಾವಾರು ಪ್ರಗತಿ ಕುರಿತು ನಡೆದಿದ್ದ ಕೆಡಿಪಿ ಸಭೆಯಲ್ಲಿ ಪ್ರಸಕ್ತ ಆರ್ಥಿಕ ವರ್ಷಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಆಯವ್ಯಯದಲ್ಲಿ ಒಟ್ಟು 10,032.08 ಕೋಟಿ ರು. ಅನುದಾನ ನಿಗದಿಗೊಳಿಸಿದೆ ಎಂದು ಹೇಳಿತ್ತು. ಅಲ್ಲದೆ ಪರಿಷ್ಕೃತ ಅಂದಾಜಿನ ಪ್ರಕಾರ 9,689.40 ಕೋಟಿ ಎಂದು ಅಂಕಿ ಅಂಶಗಳನ್ನು ಒದಗಿಸಿತ್ತು.

ಆದರೆ ‘ದಿ ಫೈಲ್‌’ ಗೆ 2020ರ ಆಗಸ್ಟ್‌ 10ರಂದು ಮಾಹಿತಿ ಒದಗಿಸಿರುವ ಪ್ರಕಾರ 2020-21ನೇ ಸಾಲಿನ ಆಯವ್ಯಯದಲ್ಲಿ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಯೋಜನೆವಾರು ವಿವಿಧ ಲೆಕ್ಕ ಶೀರ್ಷಿಕೆಗಳಿಗೆ ಪರಿಷ್ಕೃತ ಅಂದಾಜಿನಲ್ಲಿ ಒಟ್ಟಾರೆ 6,818.70 ಕೋಟಿ ರು. ಅನುದಾನ ಒದಗಿಸಿದೆ. ಪರಿಷ್ಕೃತ ಅಂದಾಜಿಗೆ ಸಂಬಂಧಿಸಿದಂತೆ ಕೆಡಿಪಿ ಸಭೆಗೆ ನೀಡಿರುವ ಮಾಹಿತಿಗೂ ಆರ್‌ಟಿಐ ಅಡಿ ಒದಗಿಸಿರುವ ಮಾಹಿತಿ ಮಧ್ಯೆ 2,871 ಕೋಟಿ ವ್ಯತ್ಯಾಸ ಕಂಡು ಬಂದಿದೆ.

ಅಲ್ಲದೆ ಕೆಡಿಪಿ ಸಭೆಯಲ್ಲಿ ಇಲಾಖೆಯು ಏಪ್ರಿಲ್‌ ತಿಂಗಳಲ್ಲಿ 1,554.00 ಕೋಟಿ ರು. ಮತ್ತು ಮೇ ತಿಂಗಳಲ್ಲಿ 1,768.07 ಕೋಟಿ ರು. ಸೇರಿದಂತೆ ಒಟ್ಟು 3,322.07 ಕೋಟಿ ರು ವೆಚ್ಚವಾಗಿದೆ ಎಂದು ಮಾಹಿತಿ ನೀಡಿತ್ತು. ಒಟ್ಟು ಬಿಡುಗಡೆಯಲ್ಲಿ ಶೇ.217.54ರಷ್ಟು ವೆಚ್ಚವಾಗಿದೆ ಎಂದು ಮಾಹಿತಿ ನೀಡಿದ್ದ ಇಲಾಖೆಯು ಯಾವ ಯಾವ ಬಾಬ್ತುಗಳಿಗೆ ಖರ್ಚಾಗಿದೆ ಎಂಬ ವಿವರಗಳನ್ನು ಇಲಾಖಾ ಮುಖ್ಯಸ್ಥರು ಸಭೆಯ ಮುಂದಿರಿಸಿರಲಿಲ್ಲ.

ಕರ್ನಾಟಕ ಸ್ಟೇಟ್‌ ಡ್ರಗ್‌ ಲಾಜಿಸ್ಟಿಕ್‌ ವೇರ್‌ಹೌಸಿಂಗ್‌ ಸೊಸೈಟಿಗೆ ಅನುದಾನ ಮತ್ತು ವೇತನಕ್ಕೆಂದು 136.00 ಲಕ್ಷ ರು.ಗಳನ್ನು ಒದಗಿಸಿದೆಯಾದರೂ ಮೇ 31ರ ಅಂತ್ಯಕ್ಕೆ ಈ ಹಣವನ್ನು ಖರ್ಚು ಮಾಡಿರಲಿಲ್ಲ ಎಂಬುದು ಇಲಾಖೆ ಒದಗಿಸಿರುವ ಮಾಹಿತಿಯಿಂದ ತಿಳಿದು ಬಂದಿದೆ.

ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರ, ತಾಲೂಕು ಆಸ್ಪತ್ರೆಗಳು, ಆರೋಗ್ಯ ಸಂಸ್ಥೆಗಳ ಕಟ್ಟಡಗಳ ನಿರ್ವಹಣೆ, ಸಂಜಯ್‌ಗಾಂಧಿ ಇನ್ಸಿಟಿಟ್ಯೂಟ್‌ ಆಫ್‌ ಟ್ರಾಮಾ ಕೇಂದ್ರ, ಶುಚಿ ಯೋಜನೆ, ಆಯುಷ್‌ ನಿರ್ದೇಶನಾಲಯ, ಆಯುಷ್‌ ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕಾರ್ಯಕ್ರಮ, ಡಯಾಗ್ನೋಸ್ಟಿಕ್‌, ಡಯಾಲಿಸಿಸ್‌ ಚಿಕಿತ್ಸೆ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಆಯುಷ್‌ ವೈದ್ಯಕೀಯ ಕಾಲೇಜುಗಳ ಆರಂಭ ಮತ್ತು ನಿರ್ವಹಣೆ, ಆಯುಷ್‌ ಔಷಧ ಉಪಕರಣಗಳ ತಯಾರಿಕೆ ಸಂಸ್ಥೆಗಳು ಮತ್ತು ಪ್ರಯೋಗಾಲಯ, ಔಷಧೀಯ ಸಸ್ಯಗಳು, ಸರ್ಕಾರಿ ಔಷಧ ಕಾಲೇಜುಗಳು, ರಾಷ್ಟ್ರೀಯ ಆಯುಷ್‌ ಅಭಿಯಾನ, ಕರ್ನಾಟಕ ರಾಜ್ಯ ಏಡ್ಸ್‌ ಪ್ರಿವೆನ್ಷನ್‌ ಸೊಸೈಟಿ, ಔಷಧ ನಿಯಂತ್ರಣ ಪ್ರಾಧಿಕಾರ, ಔಷಧ ಪ್ರಯೋಗಾಲಯ, ಆರೋಗ್ಯ ಸುರಕ್ಷತೆ ಮತ್ತು ಸಾರ್ವಜನಿಕ ಆರೋಗ್ಯ ಸಂಸ್ಥೆ, ರೆಡ್‌ ಕ್ರಾಸ್‌ ಸೊಸೈಟಿ, ಆಯುಷ್ಮಾನ್‌ ಭಾರತ್‌ , ಆರೋಗ್ಯ ಕವಚ, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದಂತೆ ಇಲಾಖೆಯ ಇನ್ನಿತರ ವಿಭಾಗಗಳ ಸಿಬ್ಬಂದಿ ವೇತನ, ಯೋಜನೆಗಳ ನಿರ್ವಹಣೆಗೆ 853 ಕೋಟಿ ರು. ವೆಚ್ಚ ಮಾಡಿರುವುದು ಮಾಹಿತಿಯಿಂದ ಗೊತ್ತಾಗಿದೆ.

the fil favicon

SUPPORT THE FILE

Latest News

Related Posts