ಪಿಪಿಇ ಕಿಟ್‌ ಖರೀದಿ; 150 ಕೋಟಿ ಮೊತ್ತಕ್ಕೂ ಟೆಂಡರ್‌ ಕರೆಯದ ಹಿಂದಿನ ಗುಟ್ಟೇನು?

ಬೆಂಗಳೂರು; ಅಂದಾಜು 150 ಕೋಟಿ ಮೊತ್ತದ ಪಿಪಿಇ ಕಿಟ್‌ ಖರೀದಿ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಸ್ಟೇಟ್‌ ಡ್ರಗ್‌ ಲಾಜಿಸ್ಟಿಕ್‌ ವೇರ್‌ಹೌಸಿಂಗ್‌ ಸೊಸೈಟಿಯು ಆಹ್ವಾನಿಸಿರುವ ದರ ಪಟ್ಟಿಯಲ್ಲಿ ನಡೆಯುತ್ತಿರುವ ಅಕ್ರಮಗಳಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಅಪಾರ ಪ್ರಮಾಣದ ನಷ್ಟಕ್ಕೆ ಕಾರಣವಾಗುತ್ತಿದೆ. ಸಾಕಷ್ಟು ಕಾಲಾವಕಾಶವಿದ್ದರೂ ಇ-ಪ್ರೊಕ್ಯೂರ್‌ಮೆಂಟ್‌ ಮೂಲಕ ಟೆಂಡರ್‌ ಕರೆಯದ ಕಾರಣ ಸಾರ್ವಜನಿಕರ ತೆರಿಗೆ ಹಣ ಕಾಳಸಂತೆಕೋರರ ಪಾಲಾಗುತ್ತಿದೆ ಎಂಬ ಬಲವಾದ ಆರೋಪಗಳು ಕೇಳಿ ಬಂದಿವೆ.

ಪಿಪಿಇ ಕಿಟ್‌ಗಳನ್ನು ಉತ್ಪಾದಿಸುವ ಕಂಪನಿಗಳು ಸ್ಪರ್ಧಾತ್ಮಕ ದರದಲ್ಲಿ ಸರಬರಾಜು ಮಾಡಲು ಆಸಕ್ತಿ ತೋರಿದ್ದರೂ ಸೊಸೈಟಿಯು ದರಪಟ್ಟಿಯನ್ನು ಆಹ್ವಾನಿಸುವ ಮೂಲಕ ಇಂತಹ ಕಂಪನಿಗಳನ್ನು ದೂರವಿಡುತ್ತಿದೆ ಎಂಬ ಗಂಭೀರ ಆರೋಪಕ್ಕೆ ಗುರಿಯಾಗಿದೆ. ಅಲ್ಲದೆ ದರ ಪಟ್ಟಿ ಆಹ್ವಾನಿಸುವ ಮುನ್ನವೇ ಸೊಸೈಟಿಯ ಉನ್ನತ ಅಧಿಕಾರಿಗಳು ನಿರ್ದಿಷ್ಟ ಸರಬರಾಜುದಾರರೊಂದಿಗೆ ಒಳ ಒಪ್ಪಂದ ಮಾಡಿಕೊಂಡಿರುವ ಪರಿಣಾಮ ಪಿಪಿಇ ಕಿಟ್‌ ತಯಾರಿಕೆ ಕಂಪನಿಗಳಿಗೆ ಅವಕಾಶವೇ ಇಲ್ಲದಂತಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಸೊಸೈಟಿಯು ಆಹ್ವಾನಿಸುತ್ತಿರುವ ದರಪಟ್ಟಿಯೇ ದೋಷಪೂರಿತವಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿದೆಯಲ್ಲದೆ ದೋಷಗಳನ್ನು ಸರಿಪಡಿಸಬೇಕು ಎಂದು ಹಲವು ತಯಾರಿಕೆ ಕಂಪನಿಗಳು ಇ-ಮೇಲ್‌ ಮೂಲಕ ಸಂಬಂಧಿಸಿದ ಅಧಿಕಾರಿಗಳ ಗಮನಸೆಳೆದರೂ ಕಿವಿಗೊಡುತ್ತಿಲ್ಲ ಎಂದು ಉತ್ಪಾದಕರೊಬ್ಬರು ‘ದಿ ಫೈಲ್‌’ಗೆ ಪ್ರತಿಕ್ರಿಯಿಸಿದ್ದಾರೆ.

ಇಲ್ಲಿದೆ ತಾಜಾ ನಿದರ್ಶನ

ಪಿಪಿಇ ಕಿಟ್‌ ಖರೀದಿ ಮತ್ತು ಸರಬರಾಜಿಗಾಗಿ 2020ರ ಆಗಸ್ಟ್‌ 5ರಂದು ದರಪಟ್ಟಿ ಆಹ್ವಾನಿಸುವ ಕೆಡಿಎಲ್‌ಡಬ್ಲ್ಯೂಎಸ್‌, 2020ರ ಆಗಸ್ಟ್‌ 6ರಂದು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಇದನ್ನು ಪ್ರಕಟಿಸಿದೆ. ಮೊದಲೇ ಗೊತ್ತುಪಡಿಸಿರುವ ಬಿಡ್‌ದಾರರೊಂದಿಗೆ ಚರ್ಚಿಸುವ ಅಧಿಕಾರಿಗಳು, ಅವರ ಅನುಕೂಲಕ್ಕೆ ತಕ್ಕಂತೆ ದರಪಟ್ಟಿಯನ್ನು ಪ್ರಕಟಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

ಆಸಕ್ತ ಕಂಪನಿಗಳು, ಸರಬರಾಜುದಾರರು ದರಪಟ್ಟಿಗಳನ್ನು ಅನ್‌ಲೈನ್‌ ಮತ್ತು ಮ್ಯಾನುಯಲ್‌ ಮೂಲಕ ಸಲ್ಲಿಸಲು 2020ರ ಆಗಸ್ಟ್‌ 14ರ ಸಂಜೆ 5 ಗಂಟೆವರೆಗೆ ಕಾಲಾವಕಾಶ ನೀಡಲಾಗಿದೆ. ಏಕಕಾಲಕ್ಕೆ ಆನ್‌ಲೈನ್‌ ಮತ್ತು ಮ್ಯಾನುಯಲ್‌ ಮೂಲಕ ದರಪಟ್ಟಿಗಳನ್ನು ಸಲ್ಲಿಸಲು ಅನುವು ಮಾಡಿಕೊಟ್ಟಿರುವ ಪ್ರಕ್ರಿಯೆಯೇ ಅಕ್ರಮಗಳಿಗೆ ದಾರಿಮಾಡಿಕೊಟ್ಟಿದೆ ಎಂಬ ಮಾತು ಕೇಳಿ ಬರುತ್ತಿದೆ.  ಇನ್ನು, ಮೊದಲು ಆಹ್ವಾನಿಸುವ ದರಪಟ್ಟಿಯಲ್ಲಿ 15,00,00,000.00 ಮೊತ್ತದಲ್ಲಿ 2,50,000 ಪಿಪಿಇ ಕಿಟ್‌ಗಳ ಖರೀದಿಸಲು ನಮೂದಿಸಲಾಗಿರುತ್ತದೆ.

ದರಪಟ್ಟಿ ಪ್ರಕಟಗೊಂಡ 6 ದಿನಗಳ ನಂತರ ಅಂದಾಜು ಮೊತ್ತ ರೂ 150,00,00,000.00 ರು. ಮೊತ್ತಕ್ಕೇರಿಸುವ ಅಧಿಕಾರಿಗಳು ಕಿಟ್‌ ಪ್ರಮಾಣವನ್ನೂ 25,00,000.00ಕ್ಕೇರಿಸಿ ತಿದ್ದುಪಡಿ ಸೂಚನೆ ಹೊರಡಿಸುತ್ತಾರೆ. ‘ಮೊದಲು 15 ಕೋಟಿಗೆ ದರಪಟ್ಟಿ ಆಹ್ವಾನಿಸಿ 6 ದಿನಗಳಾದ ನಂತರ ಉದ್ದೇಶಪೂರ್ವಕವಾಗಿಯೇ ಅದನ್ನು 150 ಕೋಟಿಗೇರಿಸಲಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಅಕ್ರಮಗಳು ನಡೆದಿದೆ ಎನ್ನುವುದಕ್ಕೆ ಇದಕ್ಕಿಂತ ಬೇರೆ ನಿದರ್ಶನವಿರಲಾರದು,’ ಎನ್ನುತ್ತಾರೆ ಅಧಿಕಾರಿಯೊಬ್ಬರು.

ದರಪಟ್ಟಿ ಸಲ್ಲಿಸಲು ಕಡಿಮೆ ಕಾಲಾವಕಾಶ ನೀಡುವುದು ನಂತರ ದರಪಟ್ಟಿ ಆಹ್ವಾನವನ್ನು ತಡವಾಗಿ ವೆಬ್‍ನಲ್ಲಿ ಪ್ರಕಟಿಸುವುದು, 6 ದಿನಗಳ ನಂತರ ಪಿಪಿಇ ಕಿಟ್‌ ಪ್ರಮಾಣವನ್ನು ಹತ್ತುಪಟ್ಟು ಅಧಿಕ ಮಾಡಿ ತಿದ್ದುಪಡಿ ಸೂಚನೆ ಹೊರಡಿಸುವ ಅಧಿಕಾರಿಗಳ ಚಾಲಾಕಿತನಕ್ಕೆ ಈಗಲೂ ತಡೆಬಿದ್ದಿಲ್ಲ.

ಕೋಟ್ಯಂತರ ಮೊತ್ತದ ಪರಿಕರಗಳನ್ನು ಖರೀದಿಸುವಾಗ ಟೆಂಡರ್ ಪ್ರಕ್ರಿಯೆ ಬಿಟ್ಟು ದರ ಪಟ್ಟಿಗೆ ಮೊರೆ ಹೋಗುವುದೇಕೆ, ಇ-ಪ್ರೊಕ್ಯೂರ್‌ಮೆಂಟ್‌ ವೇದಿಕೆಯನ್ನೇಕೆ ಬಳಸಿಕೊಳ್ಳುತ್ತಿಲ್ಲ, ಲಾಕ್‌ಡೌನ್‌ ತೆರವುಗೊಂಡು ಮೂರು ತಿಂಗಳಾಗಿದ್ದರೂ ದರಪಟ್ಟಿ ಆಹ್ವಾನಕ್ಕೆ ಸರ್ಕಾರ ಹೇಗೆ ಅನುಮತಿ ನೀಡುತ್ತಿದೆ ಎಂಬ ಪ್ರಶ್ನೆಗಳೂ ಕೇಳಿ ಬಂದಿವೆ.

ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯು ಇತ್ತಿಚೆಗಷ್ಟೆ ಪಿಪಿಇ ಕಿಟ್‌ ಖರೀದಿ ಸಂಬಂಧ ಅಲ್ಪಾವಧಿ ಟೆಂಡರ್ ಕರೆದಿದೆ. ಅದೇ ರೀತಿ 150 ಕೋಟಿ ಮೊತ್ತದ ಪಿಪಿಇ ಕಿಟ್‌ ಖರೀದಿಸಲು ಕೆಡಿಎಲ್‍ಡಬ್ಲ್ಯೂಎಸ್‍ನಿಂದ ಅಲ್ಪಾವಧಿ ಟೆಂಡರ್ ಕರೆಯದಿರುವುದು ಸಂಶಯಗಳಿಗೆ ಇನ್ನಷ್ಟು ಪುಷ್ಠಿ ನೀಡಿದಂತಾಗಿದೆ. ಇದಲ್ಲದೆ ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಮಂಗಳೂರು ಡೈರಿ, ಚಿತ್ರದುರ್ಗ, ಶಿವಮೊಗ್ಗ ಸೇರಿ ಹಲವು ಜಿಲ್ಲೆಗಳ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಗಳು ಟೆಂಡರ್ ಮೂಲಕವೇ ಮಾಸ್ಕ್‌, ಸ್ಯಾನಿಟೈಸರ್‌ ಖರೀದಿಸುತ್ತಿರುವ ನಿದರ್ಶನಗಳಿರುವಾಗ ಕೆಡಿಎಲ್‌ಡಬ್ಲ್ಯೂಎಸ್‌ ಇ-ಪೋರ್ಟಲ್‌ ಮೂಲಕ ಟೆಂಡರ್‌ ಪ್ರಕ್ರಿಯೆಗೆ ಹೋಗದಿರುವುದರ ಹಿಂದೆ ಅಧಿಕಾರಿಗಳು ನಿರ್ದಿಷ್ಟ ಸರಬರಾಜುದಾರರ ಮಧ್ಯೆ ಒಳ ಒಪ್ಪಂದವೇ ಮೂಲ ಕಾರಣ.

ಅಕ್ರಮ ಹೇಗೆ ನಡೆಯುತ್ತದೆ?

ದರಪಟ್ಟಿ ಆಹ್ವಾನದಲ್ಲಿ ಸಂಶಯಕ್ಕೆ ಆಸ್ಪದವಾಗುವ ನಿಯಮಗಳನ್ನು ಆಳವಡಿಸುವ ಅಧಿಕಾರಿಗಳು, ದರಪಟ್ಟಿ ಸಲ್ಲಿಸುವ ಅಂತಿಮ ಘಟ್ಟದಲ್ಲಿ ತಿದ್ದುಪಡಿ ಸೂಚನೆ ಹೊರಡಿಸುತ್ತಾರೆ. ಇಂತಹ ಬದಲಾವಣೆಯಿಂದ ಬಿಡ್ ಸಲ್ಲಿಸುವ ಬಹಳಷ್ಟು ಮಂದಿಗೆ ತತ್‌ಕ್ಷಣವೇ ಬದಲಾವಣೆಯನ್ನು ಸರಿಪಡಿಸಿ ಸಲ್ಲಿಸಲು ಸಮಯದ ಅವಕಾಶವಿರುವುದಿಲ್ಲ. ಆದರೆ ಕೆಲವೇ ಪರಿಚಿತ ಬಿಡ್‍ದಾರರಿಗೆ ಬದಲಾವಣೆಯ ಸೂಕ್ಷ್ಮ ಮೊದಲೇ ತಿಳಿದಿರುತ್ತದೆ. ಹಾಗೆಯೇ ಅವರ ಸೂಚನೆ ಮೇರೆಗೆ ತಿದ್ದುಪಡಿ ಸೂಚನೆ ಹೊರಡಿಸುವುದರಿಂದ ಅವರಿಗೆ ಖಚಿತವಾಗಿ ಖರೀದಿ ಆದೇಶ ದೊರೆಯುತ್ತದೆ ಎಂದು ಅಕ್ರಮದ ಒಳ ಸುಳಿಯನ್ನು ಬಿಚ್ಚಿಡುತ್ತಾರೆ ಉತ್ಪಾದಕರೊಬ್ಬರು.

ಅಸ್ಪಷ್ಟತೆಯ ನಿಯಮಗಳು

ಪಿಪಿಇ ಕಿಟ್‌ ಖರೀದಿ ಸಂಬಂಧ ಆಹ್ವಾನಿಸುವ ದರಪಟ್ಟಿಯಲ್ಲಿ ಸೂಚಿಸಿರುವ ನಿಯಮಗಳು ಅಸ್ಪಷ್ಟತೆಯಿಂದ ಕೂಡಿರುತ್ತವೆ. ಪಿಪಿಇ ಕಿಟ್‌ಗೆ ಜಿಎಎಸ್‌ಎಂ ಇಂತಿಷ್ಟೇ ಇರಬೇಕು. ಸರಬರಾಜುದಾರರು ನೀಡುವ ದರಪಟ್ಟಿಯನ್ನು ಪರಿಶೀಲಿಸುವ ಅಧಿಕಾರಿಗಳು, ಕಮಿಷನ್‌ ವ್ಯವಹಾರ ಕುದುರದಿದ್ದರೆ ಜಿಎಸ್‌ಎಂ 60-65 ಇರಬೇಕು ಎಂದು ತಿರಸ್ಕರಿಸುತ್ತಾರೆ.

ಅಲ್ಲದೆ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ ಇತ್ತೀಚೆಗಷ್ಟೇ ಪಿಪಿಇ ಕಿಟ್‌ ಖರೀದಿ ಸಂಬಂಧ ಕರೆದಿದ್ದ ಅಲ್ಪಾವಧಿ ಟೆಂಡರ್‌ನಲ್ಲಿ ಜಿಎಸ್‌ಎಂ ಪ್ರಮಾಣವನ್ನು ನಮೂದಿಸಿತ್ತು. ಆದರೆ ಕೆಡಿಎಲ್‌ಡಬ್ಲ್ಯೂಎಸ್‌ನಲ್ಲಿ ಪಿಪಿಇ ಕಿಟ್‌ ವಿಶಿಷ್ಟತೆಯಲ್ಲಿ ಜಿಎಸ್‌ಎಂ ಪ್ರಮಾಣವನ್ನು ನಮೂದಿಸಿಲ್ಲ. ವಿವಿಧ ಜಿಎಎಸ್‌ಎಂ ವಿವಿಧ ದರವಿರುತ್ತದೆ. 60 ಜಿಎಸ್‌ಎಂಗೆ ಒಂದು ದರ, 90 ಜಿಎಸ್‌ಎಂಗೆ ಮತ್ತೊಂದು ದರ ನಮೂದಿಸುವ ಮೂಲಕ ಸರಬರಾಜುದಾರರನ್ನೇ ಗೊಂದಲದಲ್ಲಿ ಮುಳುಗಿಸಿ ನಿರ್ದಿಷ್ಟ ಸರಬರಾಜುದಾರರಿಗೆ ಖರೀದಿ ಆದೇಶ ನೀಡಲಾಗುತ್ತಿದೆ. ಇದು ಒಳ ವ್ಯವಹಾರವಲ್ಲದೆ ಮತ್ತೇನು?

ಇನ್ನು, ಹುಬ್ಬಳ್ಳಿಯ ಕಿಮ್ಸ್‌ 5,000 ಪ್ರಮಾಣದ ಪಿಪಿಇ ಕಿಟ್‌ಗೆ ಟೆಂಡರ್‌ ಕರೆದಿದೆ. ಆದರೆ ಕೆಡಿಎಲ್‌ಡಬ್ಲ್ಯೂಎಸ್‌ 2500000 ಪ್ರಮಾಣದ ಕಿಟ್‌ ಖರೀದಿಗೆ ಟೆಂಡರ್‌ ಕರೆದಿಲ್ಲ. ನೆರೆಯ ಆಂಧ್ರ, ಒಡಿಶಾ, ಉತ್ತರ ಪ್ರದೇಶ ಮತ್ತು ಇತರೆ ರಾಜ್ಯಗಳು ಟೆಂಡರ್‌ ಮೂಲಕವೇ ಪಿಪಿಇ ಕಿಟ್‌ ಖರೀದಿಸಲಾಗುತ್ತಿದೆ. ಆದರೆ ಕೆಡಿಎಲ್‌ಡಬ್ಲ್ಯೂಎಸ್‌ ಮಾತ್ರ ಟೆಂಡರ್‌ ಪ್ರಕ್ರಿಯೆಗೆ ಹೋಗದೆ ದರ ಪಟ್ಟಿ ಮೂಲಕ ಖರೀದಿಸುತ್ತಿರುವುದೇ ಕಮಿಷನ್‌ ವ್ಯವಹಾರಕ್ಕಾಗಿ.

ಅಲ್ಲದೆ ಪಿಪಿಇ ಕಿಟ್‌ ಲ್ಯಾಮಿನೇಟ್‌ ಅಥವಾ ನಾನ್‌ ಲ್ಯಾಮಿನೇಟ್‌ ಎಂಬ ಬಗ್ಗೆ ಸ್ಪಷ್ಟತೆಯನ್ನು ಕೊಡುವುದಿಲ್ಲ. ಸಿಟ್ರಾ (SITRA- e South India Textile Research Association) ಡಿಆರ್‌ಡಿಓ (DRDO-Research& Development Organisation)ಬೆಂಚ್‌ ಮಾರ್ಕ್‌ನ ಪಿಪಿ ಕಿಟ್‌ ಬೇಕೆ ಅಥವಾ ಕಿಟ್‌ನ ವಿಶಿಷ್ಟತೆ, ನಿರ್ದಿಷ್ಟತೆಗಳನ್ನು ನಮೂದಿಸುವುದಿಲ್ಲ. ಅದೇ ರೀತಿ ಯುಜಿಸಿ ಕೋಡ್‌ ಬೇಕೆ ಬೇಡವೇ ಎಂಬ ಸ್ಪಷ್ಟತೆಯೂ ಇಲ್ಲ. ದರಪಟ್ಟಿಗಳನ್ನು ತೆರೆಯುವ ದಿನಾಂಕ ಮತ್ತು ಸ್ಥಳದ ವಿವರವನ್ನೂ ಒದಗಿಸುವುದಿಲ್ಲ.

ಪರೀಕ್ಷೆಗೆ ಒಳಪಡದ ಪಿಪಿಇ ಕಿಟ್‌ಗಳನ್ನು ಧರಿಸಿದರೆ ಕೋವಿಡ್‌ ಮುಂಚೂಣಿ ರಕ್ಷಕರಾದ ವೈದ್ಯರು ಸೇರಿದಂತೆ ಇನ್ನಿತರೆ ಆರೋಗ್ಯ ಕಾರ್ಯಕರ್ತರು ಅಪಾಯಕ್ಕೆ ಸಿಲುಕುವ ಸಾಧ್ಯತೆಗಳೇ ಹೆಚ್ಚು. ಇ-ಪ್ರೊಕ್ಯೂರ್‌ಮೆಂಟ್‌ ಮೂಲಕ 7 ದಿನಗಳ ಕಾಲಾವಕಾಶ ನೀಡಿ ಅಲ್ಪಾವಧಿ ಟೆಂಡರ್‌ ಕರೆದು 8ನೇ ದಿನದಂದು ತಾಂತ್ರಿಕ ಬಿಡ್‌ಗಳ ವಿಶ್ಲೇಷಣೆ ಮಾಡಬೇಕಿತ್ತು. ಅದೇ ದಿನದಂದೇ ಟಿಎಸಿ ಮತ್ತು ಟಿಎಎ ಸಭೆ ನಡೆಸಿ ನಿರ್ಣಯ ಕೈಗೊಂಡು ಟೆಂಡರ್‌ ಅವಾರ್ಡ್‌ ಮಾಡಿದ್ದರೆ ನಿಗದಿತ ಸಮಯದಲ್ಲಿ ಪಿಪಿಇ ಕಿಟ್‌ಗಳು ಸರಬರಾಜಾಗುತ್ತಿತ್ತು.

ಅಲ್ಲದೆ ಒಂದೊಮ್ಮೆ ಸರಬರಾಜುದಾರರು ಕಳಪೆ ಪಿಪಿಇ ಕಿಟ್‌ಗಳನ್ನು ಸರಬರಾಜು ಮಾಡಿದ್ದೇ ಅದರೆ ಟೆಂಡರ್‌ ನಿಯಮಾನುಸಾರ ಸರಬರಾಜುದಾರರ ಭದ್ರತಾ ಠೇವಣಿ ಮುಟ್ಟುಗೋಲು ಹಾಕಿಕೊಂಡು ಕಂಪನಿ, ಸರಬರಾಜುದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಅವಕಾಶವಿತ್ತು. ದರ ಪಟ್ಟಿ ಮೂಲಕ ಖರೀದಿಸಿದರೆ ಕಳಪೆ ಗುಣಮಟ್ಟದ ಕಿಟ್‌ಗಳನ್ನು ಸರಬರಾಜು ಮಾಡಿದರೂ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಆದರೆ ಇದರ ಗೊಡವೆಗೆ ಹೋಗದ ಸೊಸೈಟಿಯ ಅಧಿಕಾರಿಗಳು ದರಪಟ್ಟಿಗೆ ಜೋತುಬಿದ್ದು ತಮ್ಮ ಜೇಬುಗಳನ್ನು ಭರ್ತಿ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಕರ್ನಾಟಕ ಸ್ಟೇಟ್‌ ಡ್ರಗ್‌ ಲಾಜಿಸ್ಟಿಕ್‌ ವೇರ್‌ಹೌಸಿಂಗ್‌ ಸೊಸೈಟಿಯು ಈ ಹಿಂದಿನಿಂದಲೂ ಆನ್‌ಲೈನ್‌ ಇ-ಪೋರ್ಟಲ್‌ನಲ್ಲೇ ಮುಕ್ತ ಟೆಂಡರ್‌ ಕರೆಯುತ್ತಿತ್ತು. ಉಪಕರಣ, ಸಾಮಗ್ರಿ, ಔಷಧ ಪರಿಕರಗಳಿಗೆ ನಮೂದಿಸಿರುವ ದರ, ದಾಖಲೆ ಸೇರಿದಂತೆ ಮತ್ತಿತರ ವಿವರಗಳನ್ನು ಎಲ್ಲಾ ಬಿಡ್‌ದಾರರು ನೋಡಲು ಅವಕಾಶವಿರುವ ಮೂಲಕ ಪಾರದರ್ಶಕವಾಗಿರುತ್ತದೆ. ಆದರೆ ಫೆಬ್ರುವರಿಯಲ್ಲಿ ಮುಕ್ತ ಟೆಂಡರ್‌ಗೆ ಇತಿಶ್ರೀ ಹಾಡಿರುವ ಅಧಿಕಾರಿಗಳು ಮುಚ್ಚಿದ ಟೆಂಡರ್‌ (ಕ್ಲೋಸ್‌ ಟೆಂಡರ್‌)ನಲ್ಲಿ ಎಲ್ಲಾ ರೀತಿಯ ಒಳ ವ್ಯವಹಾರಗಳನ್ನು ಕುದುರಿಸಿಕೊಳ್ಳುತ್ತಿದ್ದಾರೆ. ಕ್ಲೋಸ್‌ ಟೆಂಡರ್‌ನಲ್ಲಿ ಯಾವ ವಿವರಗಳನ್ನೂ  ನೋಡಲು ಬಿಡ್‌ದಾರರಿಗೆ ಅವಕಾಶವಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.

the fil favicon

SUPPORT THE FILE

Latest News

Related Posts