ಮಹಿಳೆ, ಮಕ್ಕಳ ಅನೈತಿಕ ಸಾಗಾಣಿಕೆ; ವಿಮಾನ ನಿಲ್ದಾಣ ಪೊಲೀಸರಿಗೆ ಅರಿವೇ ಇಲ್ಲ!

ಬೆಂಗಳೂರು; ಮಹಿಳೆಯರು ಮತ್ತು ಮಕ್ಕಳ ಅನೈತಿಕ ಸಾಗಾಣಿಕೆಯನ್ನು ತಡೆಗಟ್ಟಲು ಬಿಗಿಯಾದ ಕ್ರಮಗಳನ್ನು ಕೈಗೊಂಡಿದೆ ಎಂದು ರಾಜ್ಯ ಸರ್ಕಾರ ಹೇಳುತ್ತಿದ್ದರೂ ವಿಮಾನ ನಿಲ್ದಾಣಗಳ ಮೂಲಕ ಮಹಿಳೆಯರು ಮತ್ತು ಮಕ್ಕಳನ್ನು ಈಗಲೂ ಅನೈತಿಕವಾಗಿ ಸಾಗಾಣಿಕೆ ಮಾಡಲಾಗುತ್ತಿದೆ. ಆದರೂ ವಿಮಾನ ನಿಲ್ದಾಣದ ಪೊಲೀಸರಿಗೆ ಈ ಬಗ್ಗೆ ಅರಿವೇ ಇಲ್ಲ. ಅಲ್ಲದೆ ಯಾವುದೇ ಸಾಗಾಣಿಕೆದಾರರ ಮೇಲೂ ಕ್ರಮ ಜರುಗಿಸಿಲ್ಲ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ.

ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆಗಟ್ಟುವಿಕೆಗೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ನಿರ್ದೇಶಿಸಿರುವ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಉಮಾಶಂಕರ್‌ ಅವರು ಸರ್ಕಾರಕ್ಕೆ ವರದಿಯನ್ನು ಸಲ್ಲಿಸಬೇಕು ಎಂದು 2020ರ ಜುಲೈ 28ರಂದು ಬರೆದಿರುವ ಪತ್ರದಲ್ಲಿ ಸೂಚಿಸಿದ್ದಾರೆ.

 

 

ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ 2020ರ ಫೆ.1ರಂದು ನಡೆದ ಸಭೆಯಲ್ಲಿ ವಿವಿಧ ಇಲಾಖೆಗಳ ಮುಖ್ಯಸ್ಥರ ಸಭೆ ನಡೆದಿತ್ತು. ಸಭೆಯಲ್ಲಿ ಹೊರಗೆಡವಿರುವ ಮಾಹಿತಿಗಳು ಸರ್ಕಾರದ ವೈಫಲ್ಯಕ್ಕೆ ಕನ್ನಡಿ ಹಿಡಿದಿವೆ. ಸಭೆಯ ನಡವಳಿ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಸಾಗಾಣಿಕೆಗೆ ಒಳಪಟ್ಟ ಮಹಿಳೆಯರು ಮತ್ತು ಮಕ್ಕಳನ್ನು ರಕ್ಷಿಸಲು ರೈಲ್ವೇ ನಿಲ್ದಾಣ ಮತ್ತು ಬಸ್‌ ನಿಲ್ದಾಣಗಳಲ್ಲಿ ಸ್ವಯಂಸೇವಾ ಸಂಸ್ಥೆಗಳು ಮತ್ತು ಪೊಲೀಸರು ಕರ್ತವ್ಯ ನಿರತರಾಗಿದ್ದಾರೆ. ಆದರೆ ವಿಮಾನ ನಿಲ್ದಾಣಗಳಲ್ಲಿ ಈ ಬಗ್ಗೆ ಯಾವುದೇ ಅರಿವು ಇಲ್ಲದೇ ಇರುವುದರಿಂದ ಹೊರ ರಾಜ್ಯ/ದೇಶಗಳ ಮಹಿಳೆಯರು ಮತ್ತು ಮಕ್ಕಳು ಅನೈತಿಕ ಸಾಗಾಣಿಕೆಗೆ ಒಳಗಾಗುತ್ತಿದ್ದಾರೆ ಎಂಬ ಮಾಹಿತಿಯನ್ನು ಸಭೆಯಲ್ಲಿ ಭಾಗವಹಿಸಿದ್ದ ಪೊಲೀಸ್‌ ಆಯುಕ್ತರು ಹೊರಗೆಡವಿರುವುದು ನಡವಳಿಯಿಂದ ತಿಳಿದು ಬಂದಿದೆ.

 

 

ರೈಲ್ವೆ ನಿಲ್ದಾಣ ಮತ್ತು ಬಸ್‌ ನಿಲ್ದಾಣಗಳಲ್ಲಿ ಸಾಗಾಣಿಕೆಗೊಳಗಾದ ಹಲವಾರು ಮಕ್ಕಳನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಲಾಗುತ್ತಿದೆಯಾದರೂ ಇದುವರೆಗೂ ಯಾವುದೇ ಪ್ರಕರಣಗಳಲ್ಲಿ ಎಫ್‌ಐಆರ್‌ ಕೂಡ ದಾಖಲಾಗಿಲ್ಲ. ಅಲ್ಲದೆ ಯಾವುದೇ ಸಾಗಾಣಿಕೆದಾರರ ಮೇಲೂ ಕ್ರಮ ಜರುಗಿಸಿಲ್ಲ ಎಂಬುದು ಸಭೆ ನಡವಳಿಯಿಂದ ಗೊತ್ತಾಗಿದೆ.

‘ಮಕ್ಕಳ ಸಹಾಯವಾಣಿ ಮೂಲಕ ಮಕ್ಕಳನ್ನು ರಕ್ಷಿಸಲಾಗುತ್ತಿದೆ. ಎಫ್‌ಐಆರ್‌ ದಾಖಲಿಸಿದ್ದಲ್ಲಿ ಪೊಲೀಸ್‌ ಠಾಣೆ ಮತ್ತು ನ್ಯಾಯಾಲಯಕ್ಕೆ ಹಾಜರಾಗಲು ಅವಶ್ಯವಿರುವ ಪ್ರಯಾಣ ಭತ್ಯೆಯನ್ನು ಪಡೆಯಲು ಅವಕಾಶವೂ ಇಲ್ಲ. ಆದ್ದರಿಂದ ಸ್ವಯಂ ಸೇವಾ ಸಂಸ್ಥೆಗಳು ಎಫ್‌ಐಆರ್‌ ದಾಖಲಿಸುತ್ತಿಲ್ಲ,’ ಎಂಬ ಮಾಹಿತಿ ತಿಳಿದು ಬಂದಿದೆ.

‘ಇತರೆ ದೇಶಗಳಿಂದ ಅನೈತಿಕ ಸಾಗಾಣಿಕೆಗೊಳಗಾದ ಮಹಿಳೆಯರನ್ನು ಅವರ ಮಾತೃದೇಶಕ್ಕೆ ಕಳಿಸಿಕೊಡಲು ನವದೆಹಲಿಯಲ್ಲಿರುವ ಹೈಕಮಿಷನ್‌ ಮೂಲಕವೇ ಪುನರ್ವಸತಿ ಪ್ರಕ್ರಿಯೆ ಮಾಡಬೇಕು. ಈ ಪ್ರಕ್ರಿಯೆಯಲ್ಲಿ ಹಲವು ಅಡೆತಡೆಗಳಿರುವುದರಿಂದ ಮಹಿಳೆಯರನ್ನು ಮಾತೃ ದೇಶಕ್ಕೆ ಕಳಿಸಿಕೊಡಲು ವರ್ಷಕ್ಕಿಂತ ಅಧಿಕ ಸಮಯವಾಗುತ್ತಿದೆ,’ ಎಂದು ಸಭೆಯಲ್ಲಿ ಭಾಗವಹಿಸಿದ್ದ ಪೊಲೀಸ್‌ ಇಲಾಖೆ ಅಧಿಕಾರಿಗಳು ತಿಳಿಸಿರುವುದು ಗೊತ್ತಾಗಿದೆ.

ಪ್ರತ್ಯೇಕ ಸುರಕ್ಷತೆ ವ್ಯವಸ್ಥೆಯೇ ಇಲ್ಲ

ಅನೈತಿಕ ಚಟುವಟಿಕೆಗಳ ಸ್ಥಳಗಳ ಮೇಲೆ ದಾಳಿ ಮಾಡಿದ ಸಂದರ್ಭಗಳಲ್ಲಿ ರಕ್ಷಿಸಲ್ಪಟ್ಟ ಮಹಿಳೆಯರನ್ನು ತಾತ್ಕಾಲಿಕ ವಸತಿಗಾಗಿ ರಾಜ್ಯ ಮಹಿಳಾ ನಿಲಯಕ್ಕೆ ಕಳಿಸಲಾಗುತ್ತಿದೆಯಾದರೂ ಆದರೆ ಅಲ್ಲಿ ಪ್ರತ್ಯೇಕ ಸುರಕ್ಷತೆ ವ್ಯವಸ್ಥೆಯೇ ಇಲ್ಲದಿರುವುದು ಸಭೆಯ ನಡವಳಿಯಿಂದ ತಿಳಿದು ಬಂದಿದೆ. ಅದೇ ರೀತಿ ಮಹಿಳಾ ನಿಲಯಕ್ಕೆ ಕೆಲವೊಮ್ಮೆ ಕೊಲೆ ಅಪರಾಧಿಗಳನ್ನು ಕಳಿಸುತ್ತಿದ್ದರೂ ಮಹಿಳಾ ನಿಲಯಗಳಲ್ಲಿ ಇಂತಹ ಮಹಿಳೆಯರಿಗೆ ಪ್ರತ್ಯೇಕ ಸುರಕ್ಷತೆ ವ್ಯವಸ್ಥೆ ಇಲ್ಲ.

ಒಳಾಡಳಿತ ಇಲಾಖೆಯಲ್ಲೂ ಸೂಕ್ತ ವ್ಯವಸ್ಥೆಯಿಲ್ಲ

ಅನೈತಿಕವಾಗಿ ಸಾಗಾಣಿಕೆಗೆ ಒಳಗಾಗುವ ಮಹಿಳೆಯರಿಗೆ ಪ್ರತ್ಯೇಕ ವಸತಿ ನೀಡಲು ಒಳಾಡಳಿತ ಇಲಾಖೆಯಲ್ಲಿ ಸೂಕ್ತ ವ್ಯವಸ್ಥೆ ಇಲ್ಲ. ಮಹಿಳಾ ನಿಲಯಗಳಿಗೆ ಕೆಲವೊಮ್ಮೆ ಕೊಲೆ ಅಪರಾಧಿಗಳನ್ನೂ ಕಳಿಸುತ್ತಿರುವ ಕಾರಣ ಮಹಿಳಾ ನಿಲಯಗಳಲ್ಲಿರುವ ಇತರೆ ನಿವಾಸಿಗಳ ಮೇಲೂ ಪ್ರಭಾವ ಬೀರುತ್ತಿದ್ದಾರೆ ಎಂಬುದು ಸಭೆಯ ನಡವಳಿಯಿಂದ ತಿಳಿದು ಬಂದಿದೆ.

‘ಮಹಿಳೆಯರು ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ಕುರಿತಂತೆ ಬಿಗಿಯಾದ ಕ್ರಮ ಕೈಗೊಳ್ಳಬೇಕಿದ್ದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಈ ಸಂಬಂಧ ಕಾರ್ಯೋನ್ಮುಖವಾಗಿಲ್ಲ. ಇನ್ನಾದರೂ ಕ್ರಮಕ್ಕೆ ಮುಂದಾಗಬೇಕು,’ ಎನ್ನುತ್ತಾರೆ ಅಧಿಕಾರಿಯೊಬ್ಬರು.

ಮಾನವ ಕಳ್ಳ ಸಾಗಾಣಿಕೆಗೆ ಸಂಬಂಧಿಸಿದಂತೆ ಸಿಐಡಿ ಘಟಕವು 2011-17ರ ಮಧ್ಯೆ ಒಟ್ಟು 1,680 ಪ್ರಕರಣಗಳನ್ನು ದಾಖಲಿಸಿಕೊಂಡಿದೆಯಲ್ಲದೆ ಪ್ರಕರಣಗಳಿಗೆ ಸಂಬಂಧಿಸಿದಂತೆ 5,577 ಆರೋಪಿಗಳನ್ನು ಬಂಧಿಸಿಲಾಗಿದೆ ಎಂದು ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts