33 ಕೋಟಿ ಖೋತಾ!; ತೆರಿಗೆ ವಿನಾಯಿತಿ ಪ್ರಸ್ತಾವನೆಯೇ ಯಡಿಯೂರಪ್ಪ, ಸವದಿ ಮಧ್ಯೆ ಬಿರುಕಿಗೆ ಕಾರಣ?

ಬೆಂಗಳೂರು; ರಾಜ್ಯದ ಬೊಕ್ಕಸಕ್ಕೆ ಅಂದಾಜು 33 ಕೋಟಿ ರು. ನಷ್ಟಕ್ಕೆ ಕಾರಣವಾಗಲಿದೆ ಎನ್ನಲಾಗಿರುವ ಕಬ್ಬು ಕಟಾವು ವಾಹನಗಳಿಗೆ ತೆರಿಗೆ ವಿನಾಯಿತಿ ನೀಡುವ ಪ್ರಸ್ತಾವನೆ, ಇದೀಗ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ನಡುವೆ ಬಿರುಕು ಮೂಡಿಸಿದೆ!


ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ಹಿಂದೆಯೇ ತೆರಿಗೆ ವಿನಾಯಿತಿ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರೂ ಪುನಃ ಅದಕ್ಕೆ ಅನುಮೋದನೆ ದೊರಕಿಸಿಕೊಳ್ಳಲು ಹಿಡಿದಿರುವ ಪಟ್ಟು, ರಾಜಕೀಯ ವಲಯದಲ್ಲಿ ಮುನ್ನೆಲೆಗೆ ಬಂದಿದೆ. ಕಳೆದ 9 ತಿಂಗಳಿಂದಲೂ ಈ ಪ್ರಸ್ತಾವನೆಯನ್ನು ಬೆನ್ನು ಹತ್ತಿರುವ ಲಕ್ಷ್ಮಣ ಸವದಿ ಅವರು ಮುಖ್ಯಮಂತ್ರಿ ಯಡಿಯೂರಪ್ಪರಿಂದ ಅನುಮೋದನೆ ದೊರಕಿಸಿಕೊಳ್ಳಲು ನಡೆಸಿದ್ದ ಯತ್ನಗಳೆಲ್ಲವೂ ವಿಫಲರಾಗಿದ್ದರು. ಇದರಿಂದ ಅಸಮಾಧಾನಿತರಾಗಿದ್ದ ಸವದಿ, ಭಿನ್ನಮತೀಯ ಗುಂಪಿನಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.


ಬಿಜೆಪಿ ಸರ್ಕಾರ ಒಂದು ವರ್ಷ ಪೂರೈಸಿರುವ ಸಂಭ್ರಮದಲ್ಲಿರುವಾಗಲೇ ಭಿನ್ನಮತ ಬಣ್ಣ ಪಡೆದುಕೊಂಡಿರುವ ಇಬ್ಬರ ನಡುವಿನ ಮುಸುಕಿನ ಗುದ್ದಾಟ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.


ತೆರಿಗೆ ವಿನಾಯಿತಿ ಪ್ರಸ್ತಾವನೆಗೆ ಮುಖ್ಯಮಂತ್ರಿಯ ಅಸಮ್ಮತಿ ನಡುವೆಯೂ ಅನುಮೋದನೆ ದೊರಕಿಸಿಕೊಳ್ಳಲು ಲಕ್ಷ್ಮಣ ಸವದಿ ಹಿಡಿದಿರುವ ಬಿಗಿ ಪಟ್ಟು ಹೈಕಮಾಂಡ್‌ವರೆಗೂ ತಲುಪಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ಕಬ್ಬು ಕಟಾವು ವಾಹನಗಳಿಗೆ ತೆರಿಗೆ ವಿನಾಯಿತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ‘ದಿ ಫೈಲ್‌’ಗೆ ಹಲವು ದಾಖಲೆಗಳು ಲಭ್ಯವಾಗಿವೆ.


ಆರ್ಥಿಕ ಇಲಾಖೆ ಅಸಮ್ಮತಿ


ಕೋವಿಡ್‌-19ರ ಹಿನ್ನೆಲೆಯಲ್ಲಿ ಉದ್ಭವವಾಗಿರುವ ಆರ್ಥಿಕ ಸಂಕಷ್ಟ, ರಾಜ್ಯದ ಬೊಕ್ಕಸದ ಮೇಲೆ ಭಾರೀ ಪರಿಣಾಮ ಬೀರಿದೆ. ಇದೇ ಹೊತ್ತಿನಲ್ಲಿ ಸಲ್ಲಿಕೆಯಾಗಿರುವ ಕಬ್ಬು ಕಟಾವು ವಾಹನಗಳಿಗೆ ತೆರಿಗೆ ವಿನಾಯಿತಿ ನೀಡುವ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಸೂಚನೆ ಮೇರೆಗೆ ಸಾರಿಗೆ ಇಲಾಖೆ ಸಲ್ಲಿಸಿರುವ ಪ್ರಸ್ತಾವನೆಗೆ ಆರ್ಥಿಕ ಇಲಾಖೆ ಅಸಮ್ಮತಿ ವ್ಯಕ್ತಪಡಿಸಿರುವುದು ತಿಳಿದು ಬಂದಿದೆ.


ಕಬ್ಬು ಕಟಾವು ವಾಹನಗಳಿಗೆ ತೆರಿಗೆ ವಿನಾಯಿತಿ ನೀಡುವ ಪ್ರಸ್ತಾವನೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು 2020ರ ಫೆಬ್ರುವರಿಯಲ್ಲೇ ತಿರಸ್ಕರಿಸಿದ್ದಾರೆ. ಪುನಃ ಇದೇ ಕಡತವನ್ನು 2020ರ ಜೂನ್‌ 15ರಂದು ಲಕ್ಷ್ಮಣ ಸವದಿ ಅವರ ಸೂಚನೆ ಮೇರೆಗೆ ಸಾರಿಗೆ ಇಲಾಖೆ ಪುನಃ ಅನುಮೋದನೆಗೆ ಮಂಡಿಸಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

ಕಬ್ಬು ಕಟಾವು ಕಾರ್ಮಿಕರ ಕೊರತೆಯನ್ನು ಮುಂದಿಟ್ಟುಕೊಂಡು ಪ್ರಸ್ತುತ ವಾಹನ ಮೌಲ್ಯದ ಆಧಾರದ ಮೇಲೆ ಶೇ.6ರ ಜೀವಾವಧಿ ತೆರಿಗೆ ವಿಧಿಸುವುದನ್ನು ಕಡಿಮೆ ಮಾಡಿ ಶೇ.3ರಷ್ಟು ತೆರಿಗೆ ವಿಧಿಸಲು ಸಾರಿಗೆ ಸಚಿವ ಲಕ್ಷ್ಮಣ ಸವದಿ ಅಧ್ಯಕ್ಷತೆಯಲ್ಲಿ 2019ರ ಸೆಪ್ಟಂಬರ್‌ 20ರಂದು ನಡೆದಿದ್ದ ಸಭೆ ನಿರ್ಣಯಿಸಿತ್ತು. ಆದರೆ ಇದಕ್ಕೆ ಸಾರಿಗೆ ಇಲಾಖೆ ಆಯುಕ್ತರು ತಕರಾರು ಎತ್ತಿದ್ದರು ಎಂಬ ಅಂಶ ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.


33 ಕೋಟಿ ನಷ್ಟ


‘ರಾಜ್ಯದಲ್ಲಿ ಈವರೆವಿಗೂ ಒಟ್ಟು 500 ಕಂಬೈನ್ಡ್‌ ಹಾರ್ವೆಸ್ಟರ್‌ ವಾಹನಗಳಿವೆ. ಪ್ರತಿ ವಾಹನಕ್ಕೆ ಶೇಕಡ ಮೌಲ್ಯದ ಆಧಾರದ ಮೇಲೆ ಶೇ.6ರಷ್ಟು ತೆರಿಗೆ ಮತ್ತು ಶೇ.11ರಷ್ಟು ಸೆಸ್‌ ವಿಧಿಸಲಾಗುತ್ತದೆ. ಅದರಂತೆ ರು. 1.00 ಕೋಟಿ ಬೆಲೆ ಬಾಳುವ ಕಂಬೈನ್ಡ್‌ ಹಾರ್ವೆಸ್ಟರ್‌ ವಾಹನಕ್ಕೆ ನೋಂದಣಿ ಮಾಡಿಸಲು 6,60,000 ತೆರಿಗೆ ಆಗುತ್ತದೆ. ಪ್ರತಿ ವಾಹನದ ನೋಂದಣಿಯಿಂದ ಸರ್ಕಾರದ ಬೊಕ್ಕಸಕ್ಕೆ 6,60,000 ರು. ಲೆಕ್ಕದಲ್ಲಿ ಒಟ್ಟು 33.00 ಕೋಟಿ ರು. ತೆರಿಗೆ ಪಾವತಿಸಬೇಕಾಗುತ್ತದೆ. ಈ ವಾಹನಗಳಿಗೆ ತೆರಿಗೆ ವಿನಾಯಿತಿ ನೀಡಿದ್ದಲ್ಲಿ 33.30 ಕೋಟಿ ರು. ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟಾಗಲಿದೆ,’ ಎಂದು ಸಾರಿಗೆ ಆಯುಕ್ತರು ಅಭಿಪ್ರಾಯ ವ್ಯಕ್ತಪಡಿಸಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

ಸಾರಿಗೆ ಇಲಾಖೆ ಆಯುಕ್ತರು ಸ್ಪಷ್ಟ ಅಭಿಪ್ರಾಯ ನೀಡಿದ್ದರೂ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ‘ ರಾಜ್ಯದಲ್ಲಿ ಕಬ್ಬು ಕಟಾವು ವಾಹನಗಳು ಕೇವಲ 180 ಇದ್ದು, ಈ ವಾಹನಗಳಿಗೆ ಪ್ರಸ್ತುತ ವಿಧಿಸಲಾಗುತ್ತಿರುವ ಶೇ.6ರಷ್ಟು ಜೀವಾವಧಿ ತೆರಿಗೆ ಬದಲು ಶೇ.3ರಷ್ಟು ತೆರಿಗೆ ಮಾತ್ರ ವಿಧಿಸಲು ಮತ್ತು ಈ ಅವಕಾಶವನ್ನು ಕೇವಲ ಕಬ್ಬು ಕಟಾವು ವಾಹನಗಳಿಗೆ ಮಾತ್ರ ಪರಿಗಣಿಸಿ ಆರ್ಥಿಕ ಇಲಾಖೆಯಿಂದ ಸಹಮತಿ ದೊರಕಿಸಿಕೊಳ್ಳಬೇಕು,’ ಎಂದು ಅಧಿಕಾರಿಗಳಿಗೆ ಸೂಚಿಸಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.


ಪ್ರಸ್ತಾವನೆಗೆ ಯಡಿಯೂರಪ್ಪ ವಿರೋಧ


‘ಈ ಹಿಂದೆ ಇದೇ ಪ್ರಸ್ತಾವನೆ ಸ್ವೀಕೃತವಾಗಿದ್ದ ವೇಳೆಯಲ್ಲಿ ಮುಖ್ಯಮಂತ್ರಿ ಅವರ ಅನುಮೋದನೆಯೊಂದಿಗೆ ಪ್ರಸ್ತಾವನೆ ಒಪ್ಪಲು ಸಾಧ್ಯವಿಲ್ಲ. ಈ ಹಂತದಲ್ಲಿ ವಿನಾಯಿತಿ ನೀಡಿದಲ್ಲಿ ರಾಜಸ್ವ ಸಂಗ್ರಹದಲ್ಲಿ ಕೊರತೆ ಆಗುವುದರಿಂದ ಹಾಗೂ ಈಗಾಗಲೇ ಮುಖ್ಯಮಂತ್ರಿಗಳು ಪ್ರಸ್ತಾವನೆ ತಿರಸ್ಕರಿಸಿರುವುದರಿಂದ 2020ರ ಮಾರ್ಚ್‌ 3ರಂದು ನೀಡಿರುವ ಹಿಂಬರಹವನ್ನೇ ಪುನರುಚ್ಛರಿಸಬಹುದು,’ ಎಂದು ಆರ್ಥಿಕ ಇಲಾಖೆ ಅಭಿಪ್ರಾಯ ನೀಡಿರುವುದು ತಿಳಿದು ಬಂದಿದೆ.


ಆರ್ಥಿಕ ಇಲಾಖೆ ಅಭಿಪ್ರಾಯ ನೀಡಿದ ನಂತರವೂ ಅದೇ ಪ್ರಸ್ತಾವೆಯನ್ನೇ ಸಾರಿಗೆ ಇಲಾಖೆ ಮಂಡಿಸಿರುವುದು ಸಂಶಯಗಳಿಗೆ ಕಾರಣವಾಗಿದೆ. ಈ ಸಂಬಂಧ ಆರ್ಥಿಕ ಇಲಾಖೆಯು ಹಿಂದಿನ ಹಿಂಬರಹವನ್ನೇ 2020ರ ಜೂನ್‌ 15ರಂದು ಪುನರುಚ್ಛರಿಸಿರುವುದು ಗೊತ್ತಾಗಿದೆ.


ಕಬ್ಬು ಕಟಾವು ಕಾರ್ಮಿಕರ ಕೊರತೆಯಿಂದ ಕಬ್ಬು ಬೆಳೆಯುವ ರೈತರಿಗೆ ಆಗುತ್ತಿರುವ ತೊಂದರೆಯನ್ನು ಕಡಿಮೆ ಮಾಡಿ ಅವರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಪ್ರಸ್ತುತ ವಾಹನ ಮೌಲ್ಯದ ಆಧಾರದ ಮೇಲೆ ಶೇ.6ರಷ್ಟು ಜೀವಾವಧಿ ತೆರಿಗೆ ವಿಧಿಸುವುದನ್ನು ಕಡಿಮೆ ಮಾಡಿ ಶೇ.3ರಷ್ಟು ತೆರಿಗೆಯನ್ನು ವಿಧಿಸಬಹುದು ಎಂದು ಸಾರಿಗೆ ಇಲಾಖೆ ತೀರ್ಮಾನಿಸಿತ್ತು. ಅಲ್ಲದೆ ಈ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆ ಅನುಮೋದನೆಗೆ ಕಳಿಸಲಾಗಿತ್ತು.

SUPPORT THE FILE

Latest News

Related Posts