ಆರ್‌ಟಿಪಿಸಿಆರ್‌ ಖರೀದಿ ದರದಲ್ಲಿ ಮುಚ್ಚು ಮರೆ; ತೆಲಂಗಾಣ ಕಂಪನಿಯಿಂದ ವಂಚನೆ?

ಬೆಂಗಳೂರು; ಕೋವಿಡ್-19ರ ನಿರ್ವಹಣೆಗಾಗಿ ಆರ್‌ಟಿಪಿಸಿಆರ್‌ ಉಪಕರಣಗಳಿಗೆ ಕರ್ನಾಟಕ ಸ್ಟೇಟ್‌ ಡ್ರಗ್‌ ಲಾಜಿಸ್ಟಿಕ್‌ ಮತ್ತು ವೇರ್‌ಹೌಸಿಂಗ್‌ ಸೊಸೈಟಿಯು 4 ಪಟ್ಟು ಹೆಚ್ಚುವರಿ ದರ ತೆತ್ತು ಖರೀದಿಸಿರುವ ಪ್ರಕರಣದ ಮತ್ತೊಂದು ಮುಖವನ್ನು ‘ದಿ ಫೈಲ್‌’ ಇದೀಗ ಅನಾವರಣಗೊಳಿಸುತ್ತಿದೆ.


ಫ್ಯಾಬ್‌ ಫಾರ್ಮಾಸ್ಯುಟಿಕಲ್ಸ್‌ ಸರಬರಾಜುದಾರರ ಮೂಲಕ ಆರ್‌ಟಿಪಿಸಿಆರ್‌ ಸಾಧನಗಳನ್ನು ರಾಜ್ಯಕ್ಕೆ ದುಬಾರಿ ದರದಲ್ಲಿ ಸರಬರಾಜು ಮಾಡಿರುವ ತೆಲಂಗಾಣ ಮೂಲದ ಹುವೆಲ್‌ ಲೈಫ್‌ ಸೈನ್ಸ್‌ ಪ್ರೈವೈಟ್‌ ಲಿಮಿಟೆಡ್‌ ಕಂಪನಿಯು ಛತ್ತೀಸ್‌ಗಢ್‌, ರಾಜಸ್ಥಾನ, ಗುಜರಾತ್‌, ಒಡಿಶಾ ರಾಜ್ಯಕ್ಕೆ ಕಡಿಮೆ ದರದಲ್ಲಿ ಸರಬರಾಜು ಮಾಡಿರುವುದು ಬಹಿರಂಗವಾಗಿದೆ.


ಅಲ್ಲದೆ ಈ ರಾಜ್ಯಗಳ ಮೆಡಿಕಲ್‌ ಸರ್ವಿಸ್‌ ಕಾರ್ಪೋರೇಷನ್‌ಗಳಿಗೆ ನಮೂದಿಸಿದ್ದ ದರವನ್ನು ಮರೆಮಾಚಿ ದುಬಾರಿ ದರದಲ್ಲಿ ಆರ್‌ಟಿಪಿಸಿಆರ್‌ ಸಾಧನಗಳನ್ನು ಸರಬರಾಜು ಮಾಡುವ ಮೂಲಕ ಕರ್ನಾಟಕಕ್ಕೆ ವಂಚನೆ ಮಾಡಿದೆ ಎಂಬ ಬಲವಾದ ಆರೋಪಕ್ಕೆ ಈ ಕಂಪನಿ ಗುರಿಯಾಗಿದೆ.


ಹುವೈಲ್‌ ಲೈಫ್‌ ಸೈನ್ಸ್‌ಸ್‌ ಪ್ರೈವೈಟ್‌ ಲಿಮಿಟೆಡ್‌, ಕರ್ನಾಟಕದ ಫ್ಯಾಬ್‌ ಫಾರ್ಮಾಸ್ಯುಟಿಕಲ್ಸ್‌ ಸೇರಿದಂತೆ ವಿವಿಧ ಸರಬರಾಜುದಾರರ ಮೂಲಕ ದೇಶದ ಹಲವು ರಾಜ್ಯಗಳ ಮೆಡಿಕಲ್‌ ಕಾರ್ಪೋರೇಷನ್‌ನಿಂದ ಆರ್‌ಟಿಪಿಸಿಆರ್‌(ಆರ್‌ಎನ್‌ಎ ಕಿಟ್‌ ಒಳಗೊಂಡಂತೆ) ಸಾಧನಗಳ ಸರಬರಾಜಿಗೆ 2020ರ ಏಪ್ರಿಲ್‌, ಮೇ, ಜೂನ್‌ ಮತ್ತು ಜುಲೈ ತಿಂಗಳಲ್ಲಿ ವಿವಿಧ ದರಗಳಲ್ಲಿ ಖರೀದಿ ಆದೇಶ ಪಡೆದಿರುವುದು ದಾಖಲೆಯಿಂದ ತಿಳಿದು ಬಂದಿದೆ.


ಹುವೈಲ್‌ ಲೈಫ್‌ ಸೈನ್ಸ್‌ ಪ್ರೈವೈಟ್‌ ಲಿಮಿಟೆಡ್‌ನ ಸರಬರಾಜುದಾರ ಎಂದು ಹೇಳಲಾಗಿರುವ ಫ್ಯಾಬ್‌ ಫಾರ್ಮಾಸ್ಯುಟಿಕಲ್ಸ್‌ನಿಂದ ಕರ್ನಾಟಕ ಸ್ಟೇಟ್‌ ಡ್ರಗ್‌ ಲಾಜಿಸ್ಟಿಕ್ಸ್‌ ವೇರ್‌ ಹೌಸಿಂಗ್‌ ಸೊಸೈಟಿಯು 2020ರ ಮೇ 29 ಮತ್ತು ಜೂನ್‌ 8ರಂದು ಒಟ್ಟು 700 ಕಿಟ್‌ಗಳನ್ನು 7.84 ಕೋಟಿ ರು.ನಲ್ಲಿ ಖರೀದಿಸಿದೆ.


ಫ್ಯಾಬ್‌ ಫಾರ್ಮಾಸ್ಯುಟಿಕಲ್ಸ್‌ಗೆ ಸರಬರಾಜು ಆದೇಶ ನೀಡಿದ್ದ ಕರ್ನಾಟಕ ಸ್ಟೇಟ್‌ ಡ್ರಗ್‌ ಲಾಜಿಸ್ಟಿಕ್‌ ಮತ್ತು ವೇರ್‌ಹೌಸಿಂಗ್‌ ಸೊಸೈಟಿಯ ಅಧಿಕಾರಿಗಳು, ಇದೇ ಕಂಪನಿಯು ಉಳಿದ ರಾಜ್ಯಗಳಿಗೆ ಯಾವ ದರದಲ್ಲಿ ಉಪಕರಣಗಳನ್ನು ಸರಬರಾಜು ಮಾಡಿದೆ ಎಂಬುದನ್ನು ಪರಿಶೀಲಿಸದ ಪರಿಣಾಮ ಕಿಟ್‌ಗೆ ಹೆಚ್ಚುವರಿ ದರವನ್ನು ಪಾವತಿಸಿದಂತಾಗಿದೆ.

ಪ್ರತಿ ಟೆಸ್ಟ್‌ ದರದಲ್ಲಿನ ವ್ಯತ್ಯಾಸವೆಷ್ಟು?


ಒಡಿಶಾ ಮೆಡಿಕಲ್‌ ಕಾರ್ಪೋರೇಷನ್‌ಗೆ ತಲಾ 1,10,000 ರು.ನಂತೆ ಒಟ್ಟು 50 ಪ್ಯಾಕ್‌ಗಳನ್ನು 55,00,000 ರು., ಆರ್‌ಎನ್‌ಎ ಎಕ್ಷಾಟ್ರಾಕ್ಷನ್‌ನ 50 ಪ್ಯಾಕ್‌ಗಳನ್ನು ತಲಾ ಪ್ಯಾಕ್‌ಗೆ 20,000 ರು.ನಂತೆ ಒಟ್ಟು 10,00,000 ರು.ಸೇರಿದಂತೆ (ಜಿಎಸ್‌ಟಿ ಒಳಗೊಂಡಂತೆ) ಒಟ್ಟು 72,80,000 ರು.ಗಳಿಗೆ 2020ರ ಮೇ 6ರಂದು ಹುವೈಲ್‌ ಲೈಫ್‌ ಸೈನ್ಸ್‌ಸ್‌ ಪ್ರೈವೈಟ್‌ ಲಿಮಿಟೆಡ್‌ ನೇರವಾಗಿ ಆದೇಶ ಪಡೆದಿದೆ.

ಇದರ ಪ್ರಕಾರ ಪ್ರತಿ ಟೆಸ್ಟ್‌ಗೆ 650.00 ರು. ಮತ್ತು ಪ್ರತಿ ಕಿಟ್‌ಗೆ 65,000 ರು.ನಂತೆ (100 ಟೆಸ್ಟ್‌) ನಿಗದಿಪಡಿಸಿದೆ. ಆದರೆ ಇದೇ ಕಂಪನಿಯ ಬೆಂಗಳೂರು ಮೂಲದ ಸರಬರಾಜುದಾರ ಫ್ಯಾಬ್‌ ಫಾರ್ಮಾಸ್ಯುಟಿಕಲ್ಸ್‌ಗೆ ಪ್ರತಿ ಟೆಸ್ಟ್‌ಗೆ 1,120 ರು. ನಿಗದಿಪಡಿಸಿರುವುದು ಆದೇಶದಿಂದ ತಿಳಿದು ಬಂದಿದೆ. ರಾಜ್ಯದಲ್ಲಿ ನಡೆಸುವ ಪ್ರತಿ ಟೆಸ್ಟ್‌ಗೆ ಈ ಕಂಪನಿ ನಿಗದಿಪಡಿಸಿರುವ ದರದಲ್ಲಿ 470 ರು. ವ್ಯತ್ಯಾಸವಿದೆ. ಅಲ್ಲದೆ ಈ ಕಂಪನಿಗೆ ರಾಜ್ಯ ಸರ್ಕಾರ 700 ಕಿಟ್‌ಗಳಿಗೆ 3.29 ಕೋಟಿ ರು. ಹೆಚ್ಚುವರಿ ದರ ನೀಡಿದಂತಾಗಿದೆ. ಇದು ಸರ್ಕಾರಕ್ಕೆ ಆಗಿರುವ ನಷ್ಟ ಎಂದು ಹೇಳಲಾಗಿದೆ.

ಅದೇ ರೀತಿ ಇದೇ ಕಂಪನಿಯ ಸರಬರಾಜುದಾರ ದೆಹಲಿ ಮೂಲದ ಪಿ ಡಿ ಎಂಟರ್‌ಪ್ರೈಸೆಸ್‌, ಛತ್ತೀಸ್‌ಗಢ್‌ ರಾಜ್ಯಕ್ಕೆ ಪ್ರತಿ ಟೆಸ್ಟ್‌ಗೆ ಕೇವಲ 510 ರು. ಮತ್ತು ಶೇ.12ರ ಜಿಎಸ್‌ಟಿ ಸೇರಿದಂತೆ ಒಟ್ಟು 571.20 ರ. ನಮೂದಿಸಿ 2020ರ ಜುಲೈ 10ರಂದು ಕೊಟೇಷನ್‌ ನೀಡಿರುವುದು ಗೊತ್ತಾಗಿದೆ. ಇದರ ಪ್ರಕಾರ ಪ್ರತಿ ಟೆಸ್ಟ್‌ಗೆ (ಆರ್‌ಎನ್‌ಎ ಹೊರತುಪಡಿಸಿ) 548.80 ರು. ವ್ಯತ್ಯಾಸವಿದೆ. ಆರ್‌ಎನ್‌ಎ ಟೆಸ್ಟ್‌ಗೆ ಗರಿಷ್ಠ 200 ರು ಎಂದಿಟ್ಟುಕೊಂಡರೂ 771.20 ರು. ಆಗಲಿದೆ. ಇದರ ಪ್ರಕಾರ 348.80 ರು. ವ್ಯತ್ಯಾಸವಿದೆ.


ಅಂದರೆ ಕರ್ನಾಟಕಕ್ಕೆ ಒಂದು ಕಿಟ್‌ನಿಂದ 100 ಟೆಸ್ಟ್‌ನಂತೆ 700 ಕಿಟ್‌ಗಳಿಗೆ 70,000 ಟೆಸ್ಟ್‌ ಮಾಡಬಹುದು. ಆದರೆ ಒಡಿಶಾಕ್ಕೆ ನಿಗದಿಪಡಿಸಿರುವ ದರದ ಪ್ರಕಾರ 2.44 ಕೋಟಿ ರು. ಹೆಚ್ಚುವರಿಯಾಗಿ ಕರ್ನಾಟಕ ಪಾವತಿಸಿದಂತಾಗಿದೆ.

ಗುಜರಾತ್‌ ಮೆಡಿಕಲ್‌ ಸರ್ವಿಸ್‌ ಕಾರ್ಪೋರೇಷನ್‌ಗೆ 2020ರ ಮೇ 7ರಂದು ಪ್ರತಿ ಟೆಸ್ಟ್‌ಗೆ 179 ರು. ನಂತೆ ಒಟ್ಟು 25,000 ಟೆಸ್ಟ್‌ಗಳಿಗೆ 44,75,000 ರು. ದರದಲ್ಲಿ ಆರ್‌ಎನ್‌ಎ ಕಿಟ್‌ಗಳನ್ನು ಸರಬರಾಜು ಮಾಡಿದೆ. ಆರ್‌ಟಿಪಿಸಿಆರ್‌ ಹೊರತುಪಡಿಸಿದರೆ ಕೆಎಸ್‌ಡಿಎಲ್‌ಡಬ್ಲ್ಯೂಎಸ್‌ ಆರ್‌ಎನ್‌ಎ ಟೆಸ್ಟ್‌ಗೆ 941 ರು. ಹೆಚ್ಚುವರಿ ದರ ನೀಡಿದಂತಾಗಿದೆ. ಇದರ ಪ್ರಕಾರ ರಾಜ್ಯದಲ್ಲಿ ನಡೆಸುವ 70,000 ಆರ್‌ಎನ್‌ಎ ಟೆಸ್ಟ್‌ಗಳಿಗೆ 6.58 ಕೋಟಿ ರು. ಹೆಚ್ಚುವರಿ ಪಾವತಿಸಿದಂತಾಗಿದೆ.

ಹಾಗೆಯೇ ರಾಜಸ್ಥಾನ ಮೆಡಿಕಲ್‌ ಸರ್ವಿಸ್‌ ಕಾರ್ಪೋರೇಷನ್‌ಗೆ ಯೆಸ್‌ ಅಸೋಸಿಯೇಟ್ಸ್‌ ಆರ್‌ಟಿಪಿಸಿಆರ್‌ ಮತ್ತು ಆರ್‌ಎನ್‌ಎ ತಲಾ ಕಿಟ್‌ಗೆ 373 ರು. ನಮೂದಿಸಿದೆ. ಆದರೆ ಎಷ್ಟು ಪ್ರಮಾಣದಲ್ಲಿ ಟೆಸ್ಟ್‌ ಮಾಡಲಾಗುವುದು ಎಂಬ ಮಾಹಿತಿ ಅದರಲ್ಲಿ ಒದಗಿಸಿಲ್ಲ. ಯೆಸ್‌ ಅಸೋಸಿಯೇಟ್ಸ್‌ ನಮೂದಿಸಿರುವ ದರಕ್ಕೂ ಕರ್ನಾಟಕ ಸರ್ಕಾರ ನೀಡಿರುವ ದರಕ್ಕೆ ಹೋಲಿಸಿದರೆ ಒಟ್ಟು 746 ರು. ವ್ಯತ್ಯಾಸವಿದೆ. 70,000 ಟೆಸ್ಟ್‌ಗಳಿಗೆ 5.22 ಕೋಟಿ ರು. ಹೆಚ್ಚುವರಿ ಪಾವತಿಸಿದಂತಾಗಿದೆ.

ಅಲ್ಲದೆ ಟೆಸ್ಟ್‌ ಮಾಡುವುದಕ್ಕೆ ಸಂಬಂಧಿಸಿದಂತೆ ಈ ಕಂಪನಿಯು ತಯಾರಿಸಿರುವ ಆರ್‌ಟಿಪಿಸಿಆರ್‌ನ ಕೇವಲ 2 ಬ್ಯಾಚ್‌ಗಷ್ಟೇ ಐಸಿಎಂಆರ್‌ ಅನುಮೋದಿಸಿದೆ. (ಬ್ಯಾಚ್‌ ನಂ ಕ್ಯೂಎಲ್‌ಸಿಎನ್‌ವಿ 0620-ಕ್ಯೂಎಎಲ್‌ಸಿಎನ್‌ವಿ 0920) ಸಾಮಾನ್ಯವಾಗಿ ಪ್ರತಿ ಆರ್‌ಟಿಪಿಸಿಆರ್‌ ಮತ್ತು ಆರ್‌ಎನ್ಎ ಉಪಕರಣಗಳಿಗೆ ಪ್ರತ್ಯೇಕವಾಗಿ ಅನುಮೋದನೆ ನೀಡುತ್ತದೆ. ಹಾಗೆಯೇ ಎರಡೂ ಉಪಕರಣಗಳಿಗೆ ಒಮ್ಮೆಲೆ ಅನುಮೋದನೆ ನೀಡಿಲ್ಲ.


ಆದರೆ ಕರ್ನಾಟಕ ಸ್ಟೇಟ್‌ ಡ್ರಗ್‌ ಲಾಜಿಸ್ಟಿಕ್‌ ವೇರ್‌ಹೌಸಿಂಗ್‌ ಸೊಸೈಟಿಯು ಎರಡೂ ಉಪಕರಣಗಳನ್ನೂ ಸೇರಿಸಿ ಒಂದೇ ಆದೇಶ ನೀಡಿದೆ. ಆದರೆ ಈ ಪೈಕಿ ಯಾವ ಉಪಕರಣವನ್ನು ಐಸಿಎಂಆರ್‌ ಅನುಮೋದಿಸಿದೆ ಎಂಬ ವಿವರಗಳಿಲ್ಲ. ಅದೇ ರೀತಿ ಸೊಸೈಟಿ ಫ್ಯಾಬ್ ಫಾರ್ಮಾಸ್ಯುಟಿಕಲ್ಸ್‌ಗೆ ನೀಡಿರುವ ಖರೀದಿ ಆದೇಶದಲ್ಲಿ ಬ್ಯಾಚ್‌ ನಂಬರ್‌ಗಳನ್ನೂ ನಮೂದಿಸದಿರುವುದು ತಿಳಿದು ಬಂದಿದೆ.


ಈ ಕಿಟ್‌ಗಳನ್ನು 3.92 ಕೋಟಿ ರು. ದರದಲ್ಲಿ ಖರೀದಿಸಲು 2020ರ ಮೇ 29ರಂದು ಫ್ಯಾಬ್‌ ಫಾರ್ಮಾಸ್ಯುಟಿಕಲ್ಸ್‌ ಪ್ರೈವೈಟ್‌ ಲಿಮಿಟೆಡ್‌ಗೆ ಆದೇಶ ನೀಡಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ಆದೇಶವನ್ನುಅನುಮೋದಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts