ಸ್ಯಾನಿಟೈಸರ್‌ ಖರೀದಿಯಲ್ಲಿ 13 ಕೋಟಿ ನಷ್ಟ ; ದಾಖಲೆ ಬಿಡುಗಡೆ ನಂತರವೂ ಹೊರಬಿತ್ತು ಅಕ್ರಮ

ಬೆಂಗಳೂರು; ಕೋವಿಡ್‌-19ರ ನಿರ್ವಹಣೆ ಹೆಸರಿನಲ್ಲಿ ನಡೆದಿದೆ ಎನ್ನಲಾಗಿರುವ ಸ್ಯಾನಿಟೈಸರ್‌ ಖರೀದಿ ಪ್ರಕ್ರಿಯೆಗಳ ಮತ್ತೊಂದು ಮುಖ ಇದೀಗ ಅನಾವರಣಗೊಂಡಿದೆ. ಈ ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮಗಳು ನಡೆದಿಲ್ಲ ಎಂದು ಬಿಜೆಪಿ ಸರ್ಕಾರ ಎದೆ ತಟ್ಟಿಕೊಂಡು ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ್ದರ ಬೆನ್ನಲ್ಲೇ ಹೇಗೆಲ್ಲಾ ಅಕ್ರಮ ನಡೆದಿದೆ ಎಂಬುದನ್ನು ‘ದಿ ಫೈಲ್‌’ ಇದೀಗ ಎಳೆಎಳೆಯಾಗಿ ಹೊರಗೆಳೆದಿದೆ.


ಆರೋಗ್ಯ ತುರ್ತು ಪರಿಸ್ಥಿತಿ ಸಂದರ್ಭದಲ್ಲೇ ರಾಜ್ಯದ ಜಿಲ್ಲಾ ಮಟ್ಟದಲ್ಲಿರುವ ಸರ್ಕಾರಿ ಆಸ್ಪತ್ರೆಗಳು ಮತ್ತು ಸರ್ಕಾರಿ ವೈದ್ಯಕೀಯ ವಿಜ್ಞಾನ ಸಂಸ್ಥೆಗಳು ಸ್ಯಾನಿಟೈಸರ್‌ನ್ನು ಖರೀದಿಸಿರುವ ದರಕ್ಕೂ ಕರ್ನಾಟಕ ಸ್ಟೇಟ್‌ ಡ್ರಗ್‌ ಲಾಜಿಸ್ಟಿಕ್‌ ಮತ್ತು ವೇರ್‌ ಹೌಸಿಂಗ್‌ ಸೊಸೈಟಿ ಖರೀದಿಸಿರುವ ದರದಲ್ಲಿ ಭಾರೀ ವ್ಯತ್ಯಾಸವಿದೆ ಎಂಬುದನ್ನು ದಾಖಲೆ ಸಮೇತ ಬಹಿರಂಗಗೊಳಿಸಿದೆ.


ಹಾಗೆಯೇ ಎಸ್‌ ಎಂ ಫಾರ್ಮಾಸ್ಯುಟಿಕಲ್ಸ್‌ ಜತೆ ಮಾಡಿಕೊಂಡಿದ್ದ ಒಪ್ಪಂದದಲ್ಲಿ ನಿಗದಿಪಡಿಸಿದ್ದ ದರಕ್ಕೂ ಆ ನಂತರ ಸರ್ಕಾರ ಹೆಚ್ಚುವರಿ ದರ ಪಾವತಿಸಿರುವುದನ್ನು ‘ದಿ ಫೈಲ್‌’ ಒರೆಗೆ ಹಚ್ಚಿ ನೋಡಿದಾಗ ಅಂದಾಜು 13 ಕೋಟಿ ರು. ವ್ಯತ್ಯಾಸ ಕಂಡು ಬಂದಿದೆ.
ಸ್ಯಾನಿಟೈಸರ್‌ಗೆ ಹೆಚ್ಚಿನ ಬೇಡಿಕೆ ಇದ್ದ ಕಾರಣ ಅನಿವಾರ್ಯವಾಗಿ ದುಬಾರಿ ದರದಲ್ಲಿ ಖರೀದಿಸಬೇಕಾಯಿತು ಎಂದು ಸುದ್ದಿಗೋಷ್ಠಿಯಲ್ಲಿ ಸಚಿವರು ಮಾಡಿಕೊಂಡಿದ್ದ ಸಮರ್ಥನೆಗಳಲ್ಲಿ ಯಾವುದೇ ಹುರುಳಿಲ್ಲ ಎಂಬುದನ್ನು ವಿವಿಧ ಜಿಲ್ಲೆಗಳಲ್ಲಿರುವ ಸರ್ಕಾರಿ ಸಂಸ್ಥೆಗಳು ಸ್ಥಳೀಯ ವಿತರಕರಿಗೆ ನೀಡಿರುವ ಖರೀದಿ ಆದೇಶಗಳು ನಿರೂಪಿಸಿವೆ.


ಎಸ್‌ ಎಂ ಫಾರ್ಮಾಸ್ಯುಟಿಕಲ್ಸ್‌, ಮಹಿಂದ್ರ ಲ್ಯಾಬ್ಸ್‌ , ಚರಣ್‌ ಅಸೋಸಿಯೇಟ್ಸ್‌, ಎಸ್‌ ಪಿ ವೈ ಆಗ್ರೋ, ಸುಜಲ್‌ ಫಾರ್ಮಾ, ದಿನೇಶ್‌ ಫಾರ್ಮಾದಿಂದ ಆರೋಗ್ಯ ತುರ್ತು ಪರಿಸ್ಥಿತಿ ಸಂದರ್ಭದಲ್ಲೇ 1,65,000 ಬಾಟಲ್‍ ಮತ್ತು ತಲಾ 5 ಲೀಟರ್ ಲೆಕ್ಕದಲ್ಲಿ ಒಟ್ಟು 75,000 ಕ್ಯಾನ್‍ಗಳಿಗೆ ಒಟ್ಟು 20.78 ಕೋಟಿ ರು. ವೆಚ್ಚವಾಗಿದೆ ಎಂದು ಸರ್ಕಾರ ಸುದ್ದಿಗೋಷ್ಠಿಯಲ್ಲಿ ದಾಖಲೆ (ಅನುಬಂಧ-6) ಬಿಡುಗಡೆ ಮಾಡಿತ್ತು.

ಇದರ ಬೆನ್ನಲ್ಲೇ ಬೆಂಗಳೂರು, ಮಂಗಳೂರು ಮತ್ತು ಕೊಪ್ಪಳ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಸರ್ಕಾರಿ ಆಸ್ಪತ್ರೆ ಮತ್ತು ವೈದ್ಯಕೀಯ ವಿಜ್ಞಾನ ಸಂಸ್ಥೆಗಳು 117 ರು.ನಿಂದ 142 ರು. ದರದಲ್ಲಿ 500 ಎಂ ಎಲ್‌ ಪ್ರಮಾಣದ ಸ್ಯಾನಿಟೈಸರ್‌ನ್ನು ಖರೀದಿಸಿರುವುದು ಬಹಿರಂಗವಾಗಿದೆ.


ಮಂಗಳೂರಿನ ವೆನ್‍ಲಾಕ್‌ ಜಿಲ್ಲಾ ಆಸ್ಪತ್ರೆಯು 2020ರ ಮಾರ್ಚ್‌ 16ಕ್ಕೆ 500 ಎಂ ಎಲ್ ಪ್ರಮಾಣದ ಬಾಟಲ್‌ವೊಂದಕ್ಕೆ 117.01 ರು.ದರದಲ್ಲಿ (ಜಿಎಸ್‌ಟಿ ಸೇರಿದಂತೆ) ಒಟ್ಟು 2,37,395 ರು.ನಲ್ಲಿ 2,000 ಬಾಟಲ್‍ಗಳನ್ನು ಖರೀದಿಗೆ ಆದೇಶ ನೀಡಿದೆ.

ಅದೇ ರೀತಿ ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆಯು ರಮಣ್ ಅಂಡ್ ವೇಲ್ ಕಂಪನಿಯಿಂದ 500 ಎಂ ಎಲ್ ಒಂದು ಬಾಟಲ್‍ಗೆ 121.97 ರು.ನಲ್ಲಿ ಒಟ್ಟು 50 ಬಾಟಲ್‌ಗಳನ್ನು 6,098 ರು.ದರದಲ್ಲಿ ಖರೀದಿಸಲು 2020ರ ಮಾರ್ಚ್‌ 16ರಂದೇ ಆದೇಶ ಹೊರಡಿಸಿದೆ.

ಬೆಂಗಳೂರಿನಲ್ಲಿರುವ ರಾಜೀವ್‌ಗಾಂಧಿ ಎದೆ ರೋಗಗಳ ಸಂಸ್ಥೆಯು 500 ಎಂ ಎಲ್‌ ಬಾಟಲ್‌ನ್ನು 142.24 ರು. ದರದಂತೆ ಒಟ್ಟು 2,300 ಬಾಟಲ್‌ಗಳನ್ನು 3,27,152 ರು.ದರದಲ್ಲಿ ಖರೀದಿಸಲು 2020ರ ಮಾರ್ಚ್‌ 7 ಮತ್ತು 17ರಂದು ಖರೀದಿ ಆದೇಶ ಹೊರಡಿಸಿದೆ.

1,65,000 ಬಾಟಲ್‌ಗಳಿಗೆ 2.51 ಕೋಟಿ ಹೆಚ್ಚುವರಿ ಪಾವತಿ?


ಆರೋಗ್ಯ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ 1,65,000 ಬಾಟಲ್‍ಗಳನ್ನು ಖರೀದಿಸಿದೆ ಎಂದು ದಾಖಲೆ ಬಿಡುಗಡೆ ಮಾಡಿರುವ ಸರ್ಕಾರ, ಇದಕ್ಕೆ 4.12 ಕೋಟಿ ರು. ವೆಚ್ಚವಾಗಿದೆ ಎಂದು ತೋರಿಸಿದೆ. ಆದರೆ ಎಸ್‌ ಎಂ ಫಾರ್ಮಾಸ್ಯುಟಿಕಲ್ಸ್‌ ಜತೆ ಮಾಡಿಕೊಂಡಿದ್ದ 97.44 ರು. ದರ ಒಪ್ಪಂದದಂತೆ 1,65,000 ಬಾಟಲ್‍ಗಳನ್ನು ಖರೀದಿಸಿದ್ದರೆ ಕೇವಲ 1.60 ಕೋಟಿ ರು. ವೆಚ್ಚವಾಗುತ್ತಿತ್ತು. 500 ಎಂ ಎಲ್‍ನ ಒಂದು ಬಾಟಲ್‍ಗೆ 152.56 ಪೈಸೆ ತಗುಲುತ್ತಿತ್ತು. ಹೀಗಾಗಿ 1,65,000 ಬಾಟಲ್‍ಗೆ 2.51 ಕೋಟಿ ರು. ಹೆಚ್ಚುವರಿ ಪಾವತಿಸಿದಂತಾಗಿದೆ. ಈ ಲೆಕ್ಕಾಚಾರದ ಪ್ರಕಾರ ಸರ್ಕಾರಕ್ಕೆ ನಷ್ಟವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.


75,00 ಕ್ಯಾನ್‌ಗಳಿಗೆ 11.44 ಕೋಟಿ ರು.ಹೆಚ್ಚುವರಿ ಪಾವತಿ


500 ಎಂ ಎಲ್‍ಗೆ 97.44 ರು. ದರದ ಪ್ರಕಾರ ಒಂದು ಎಂ ಎಲ್‍ಗೆ 19.00 ಪೈಸೆ ಆಗುತ್ತೆ. ಹಾಗೆಯೇ 19 ಪೈಸೆ ಪ್ರಕಾರ 5,000 ಎಂ ಎಲ್‍ಗೆ (5 ಲೀಟರ್) 974.40 ರು. ಆಗುತ್ತೆ. ಈ ದರದ ಪ್ರಕಾರ 1,525.56 ವ್ಯತ್ಯಾಸವಿರುವುದು ಕಂಡು ಬರುತ್ತದೆ. 974 ರು. ದರ ಪ್ರಕಾರ 5 ಲೀಟರ್‌ನ 75,000 ಕ್ಯಾನ್‍ಗಳಿಗೆ 7.30 ಕೋಟಿ ಆಗುತ್ತೆ. ಈಗ ಸರ್ಕಾರ ಪಾವತಿಸಿರುವ 18.75 ಕೋಟಿ ರು. ನಲ್ಲಿ 11.44 ಕೋಟಿ ರು. ಹೆಚ್ಚುವರಿಯಾಗಿ ಪಾವತಿಸಿದೆ ಎಂದು ಸುಲಭವಾಗಿ ಹೇಳಬಹುದು.


ಇನ್ನು ‘ಕೊಪ್ಪಳ, ಬೆಂಗಳೂರು ಮತ್ತು ಮಂಗಳೂರಿಗೆ ಸರಬರಾಜು ಮಾಡಿರುವುದು ವಿತರಕರು. ನೇರವಾಗಿ ಕಂಪನಿ ಸರಬರಾಜು ಮಾಡಿಲ್ಲ. ವಿತರಕರು ಕನಿಷ್ಠ ಶೇ.15ರಷ್ಟು ಲಾಭಾಂಶವಿಟ್ಟುಕೊಂಡು ಸರಬರಾಜು ಮಾಡಿದ್ದಾರೆ. ಹೀಗಾಗಿ 500 ಎಂ ಎಲ್ ನ ಬಾಟಲ್‍ನ ಮೂಲ ಬೆಲೆ 97 ರು.ಗಿಂತಲೂ ಕಡಿಮೆ ಇರುತ್ತದೆ,’ ಎನ್ನುತ್ತಾರೆ ಅಧಿಕಾರಿಯೊಬ್ಬರು.


ಪಾಲನೆ ಆಗಿದೆಯೇ ಕೇಂದ್ರ ಸರ್ಕಾರದ ಮಾರ್ಗಸೂಚಿ?


200 ಎಂ ಎಲ್ ಬಾಟಲ್‍ಗೆ ರೀಟೇಲ್ ದರ 100 ರು. ಮೀರದಂತೆ( ಪ್ರತಿ ಎಂ ಎಲ್ ಗೆ 50 ಪೈಸೆ) ಖರೀದಿ ಮಾಡಬಾರದು ಎಂದು 2020ರ ಮಾರ್ಚ್‌ 21ರಂದು ಕೇಂದ್ರ ಸರ್ಕಾರದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಇಲಾಖೆಯು ಮಾರ್ಗಸೂಚಿ ಹೊರಡಿಸಿತ್ತು. ಇದನ್ನೇ ಮುಂದಿರಿಸಿ ಸ್ಯಾನಿಟೈಸರ್‌ ಖರೀದಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದರು.

ಆದರೆ ಕೆಎಸ್‍ಡಿಎಲ್‍ಡಬ್ಲ್ಯೂಎಸ್ ರೀಟೇಲ್‌ ದರದ ಪ್ರಕಾರ ಸ್ಯಾನಿಟೈಸರ್‌ನ್ನು ಖರೀದಿಸಿಲ್ಲ. ಬದಲಿಗೆ ಸಗಟು ರೂಪದಲ್ಲಿ ಖರೀದಿಸಿದೆ. ಸಚಿವ ಬಿ ಶ್ರೀರಾಮುಲು ನೀಡಿರುವ ಅಂಕಿ ಅಂಶದ ಪ್ರಕಾರ ಒಟ್ಟು 20.78 ಕೋಟಿ ರು.ದರದಲ್ಲಿ ಸ್ಯಾನಿಟೈಸರ್ ಖರೀದಿಸಲಾಗಿದೆ.


ಔಷಧ ಮಳಿಗೆಯಲ್ಲಿ 200 ಎಂ ಎಲ್‌ ಪ್ರಮಾಣದ ಸ್ಯಾನಿಟೈಸರ್‌ನ್ನು 100 ರು.ಗಿಂತಲೂ ಹೆಚ್ಚಿನ ದರದಲ್ಲಿ ಮಾರಾಟ ಮಾಡಬಾರದು ಎಂದೂ ಕೇಂದ್ರ ಸರ್ಕಾರ ಸೂಚಿಸಿತ್ತು. ರೀಟೇಲ್‌ ದರದ ಪ್ರಕಾರ 500 ಎಂ ಎಲ್‌ ಗೆ 250.00 ರು. ಆಗಲಿದೆ. ಅಲ್ಲದೆ 500 ಎಂ ಎಲ್‌ ಪ್ರಮಾಣದ ಸ್ಯಾನಿಟೈಸರ್‌ ಬಾಟಲ್‌ನ್ನು 250 ರು.ಗಿಂತ ಕಡಿಮೆ ದರದಲ್ಲಿ ಖರೀದಿಸಬಾರದು ಎಂದು ಎಲ್ಲಿಯೂ ಸೂಚಿಸಿಲ್ಲ.


ಇಲ್ಲಿದೆ ಹೆಚ್ಚುವರಿ ರಹಸ್ಯ


ಕೆಡಿಎಲ್‍ಡಬ್ಲಯೂಸ್‌ ಕರೆದಿದ್ದ ಟೆಂಡರ್‌ನಲ್ಲಿ ಮೂಲತಃ ಸ್ಯಾನಿಟೈಸರ್ ಉತ್ಪಾದಕರಾದ ಎಸ್ ಎಂ ಫಾರ್ಮಾಸ್ಯುಟಿಕಲ್ಸ್‌ (ಇಂಡೆಂಟ್ ನಂಬರ್ 628) 500 ಎಂಎಲ್‍ಗೆ 97.44 ರು. (ಜಿಎಸ್‍ಟಿ ಸೇರಿ) ನಮೂದಿಸಿ ಎಲ್ 1 ಆಗಿತ್ತು. ಖರೀದಿ ಆದೇಶ ಪಡೆದಿದ್ದ ಈ ಕಂಪನಿ ಸ್ಯಾನಿಟೈಸರ್‌ನ್ನು ಸರಬರಾಜು ಮಾಡಲಿಲ್ಲ. ಹೀಗಾಗಿ ಟೆಂಡರ್ ಷರತ್ತಿನ ಪ್ರಕಾರ ಎಲ್ 2 ರಮಣ್ ಅಂಡ್ ವೇಲ್ ಕಂಪನಿ (99 ರು.ಗೆ ಕೋಟ್ ಮಾಡಿತ್ತು) ಗೆ ಖರೀದಿ ಆದೇಶ ಕೊಡಬೇಕಿತ್ತು.


ಅಧಿಕಾರಿಗಳು ಪುನಃ ಎಸ್ ಎಂ ಫಾರ್ಮಾಸ್ಯುಟಿಕಲ್ಸ್‌ಗೆ 500 ಎಂಎಲ್‍ಗೆ ದರ ಹೆಚ್ಚಳ ಮಾಡಿ 108 ರು. ಗೆ ಖರೀದಿ ಆದೇಶ ನೀಡಿದರು. ಆದರೆ ಕಂಪನಿ ಈ ದರದಲ್ಲೂ ಸರಬರಾಜು ಮಾಡಲಿಲ್ಲ. ಪುನಃ 138 ರು.ಗೆ ಆದೇಶ ಪಡೆದುಕೊಂಡರು. ಆಗಲೂ ಸರಬರಾಜು ಮಾಡಲಿಲ್ಲ. ಕಡೆಗೆ 250 ರು.ಗೆ ಖರೀದಿ ಆದೇಶ ಹೊರಬೀಳುತ್ತಿದ್ದಂತೆ ಸ್ಯಾನಿಟೈಸರ್‌ ಸರಬರಾಜು ಮಾಡಿದೆ.
ಇನ್ನು, ಈ ಕಂಪನಿ ಜತೆ ಮಾಡಿಕೊಂಡಿದ್ದ ದರ ಒಪ್ಪಂದ 15 ತಿಂಗಳವರೆಗೆ ಚಾಲ್ತಿಯಲ್ಲಿದ್ದರೂ ಅದನ್ನು ಉಲ್ಲಂಘಿಸಿತ್ತು. ಆದರೂ 152.56 ಪೈಸೆಗೆ ಹೆಚ್ಚುವರಿ ದರದಲ್ಲಿ ಇದೇ ಕಂಪನಿಯಿಂದಲೇ ಸ್ಯಾನಿಟೈಸರ್‌ ಖರೀದಿಸಿದೆ. ದರ ಒಪ್ಪಂದವನ್ನು ಉಲ್ಲಂಘಿಸಿದ್ದರೂ ಕಪ್ಪು ಪಟ್ಟಿಗೆ ಸೇರಿಸದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.


ಅಲ್ಲದೆ, ರಾಮನಗರ ಮತ್ತು ಕಲ್ಬುರ್ಗಿಗೆ ಇದೇ ಕಂಪನಿ ಸರಬರಾಜು ಮಾಡಿದ್ದ ಸ್ಯಾನಿಟೈಸರ್‌ ಗುಣಮಟ್ಟದಿಂದ ಕೂಡಿಲ್ಲ ಎಂದು ಔಷಧ ನಿಯಂತ್ರಣ ಪ್ರಾಧಿಕಾರದ ಪರೀಕ್ಷೆಯಿಂದ ದೃಢಪಟ್ಟಿತ್ತು. ಕನಿಷ್ಠ 2 ಬ್ಯಾಚ್‌ನಲ್ಲಿ ಕಳಪೆ ಎಂದು ಕಂಡು ಬಂದರೆ ಟೆಂಡರ್‌ ಷರತ್ತುಗಳ ಪ್ರಕಾರ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ಆದರೂ ಈ ಕಂಪನಿಯನ್ನೂ ಈವರೆವಿಗೂ ಕಪ್ಪು ಪಟ್ಟಿಗೆ ಸೇರಿಸಿಲ್ಲ.


ಎಸ್‌ ಪಿ ವೈ ಕಥೆ ಏನು?


ಎಸ್‍ಪಿವೈ ಆಗ್ರೋ ಇಂಡಸ್ಟ್ರೀಸ್‍ನಿಂದ ಕೆಡಿಎಲ್‍ಡಬ್ಲ್ಯೂಸ್ 5 ಲೀಟರ್ ಪ್ರಮಾಣದ ಸ್ಯಾನಿಟೈಸರ್ ಕ್ಯಾನ್‍ನ್ನು ತಲಾ 2,500 ರು. ದರದಲ್ಲಿ ಖರೀದಿಸಿದೆ. ಇದೇ ಕಂಪನಿ ಆಂಧ್ರಪ್ರದೇಶಕ್ಕೆ 520 ರು. ದರದಲ್ಲಿ ತಲಾ 5 ಲೀಟರ್ ಕ್ಯಾನ್ ಸರಬರಾಜು ಮಾಡಿದೆ. ಆಂಧ್ರ ಮತ್ತು ಕರ್ನಾಟಕ ಸರ್ಕಾರದ ದರ ವ್ಯತ್ಯಾಸ 1,980 ರು. ಇದೆ.


‘ಇಲ್ಲಿನ ದಾಖಲೆಗಳನ್ನು ನೋಡಿದರೆ ಒಂದೇ ಕಂಪನಿ ಒಂದೇ ಮಾದರಿಯ ಉತ್ಪನ್ನವನ್ನು ಆಂಧ್ರ ಪ್ರದೇಶದಲ್ಲಿ ಒಂದು ಬೆಲೆಗೆ ಮತ್ತು ಅದರ 5 ಪಟ್ಟು ಹೆಚ್ಚಳ ದರದಲ್ಲಿ ಕರ್ನಾಟಕಕ್ಕೆ ಮಾರಿರುವುದನ್ನು ಗಮನಿಸಿದರೆ ಇಲ್ಲಿ ದೊಡ್ಡ ಮಟ್ಟದಲ್ಲಿ ಭ್ರಷ್ಟಾಚಾರವಾಗಿದೆ ಎನ್ನುವುದನ್ನು ಎಂತಹ ಮುಠ್ಠಾಳನೂ ಹೇಳಬಲ್ಲ. ಅಲ್ಲದೆ ಕೋವಿಡ್‌ ತುರ್ತು ಪರಿಸ್ಥಿತಿ ಸಂದರ್ಭದಲ್ಲೇ ರಾಜ್ಯದ ಜಿಲ್ಲೆಗಳು ಕೆಎಸ್‌ಡಿಎಲ್‌ಡಬ್ಲ್ಯೂಎಸ್‌ಗಿಂತಲೂ ಕಡಿಮೆ ದರದಲ್ಲಿ ಸ್ಥಳೀಯ ವಿತರಕರಿಂದ ಖರೀದಿ ಮಾಡಿವೆ. ಇದು ಸಂಸ್ಥೆಯಲ್ಲಿನ ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಇಲ್ಲಿ ಭ್ರಷ್ಟಾಚಾರ ನಡೆದೇ ಇಲ್ಲ ಎಂದು ಸಮರ್ಥಿಸುತ್ತಿರುವವರು ಈ ಹಗರಣದಲ್ಲಿ ನೇರವಾಗಿ ಭಾಗಿ ಆಗಿರುತ್ತಾರೆ ಇಲ್ಲವೇ ಫಲಾನುಭವಿ ಆಗಿರುತ್ತಾರೆ. ಹಾಗಾಗಿ ಈ ವ್ಯವಹಾರದಲ್ಲಿ ಭಾಗಿ ಆಗಿರುವ ಎಲ್ಲಾ ಅಧಿಕಾರಿಗಳನ್ನು ರಜೆ ಮೇಲೆ ಕಳಿಸಿ ಎಲ್ಲಾ ದಾಖಲೆಗಳನ್ನು ವಶಪಡಿಸಿಕೊಂಡು ಸಿಐಡಿ ತನಿಖೆಗೆ ಆದೇಶಿಸಬೇಕು,’ ಎನ್ನುತ್ತಾರೆ ಕರ್ನಾಟಕ ರಾಷ್ಟ್ರಸಮಿತಿಯ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ.

the fil favicon

SUPPORT THE FILE

Latest News

Related Posts