ಬೆಂಗಳೂರು; ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಆಪ್ತ ಕಾರ್ಯದರ್ಶಿ(2) ಹುದ್ದೆಯಲ್ಲಿದ್ದ ವಿಶ್ವನಾಥ ಪಿ ಹಿರೇಮಠ ಅವರಿಗಷ್ಟೇ ಸೀಮಿತಗೊಳಿಸಿ ಗ್ರೂಪ್-ಎ (ಕೆಎಎಸ್ ಕಿರಿಯ ಶ್ರೇಣಿ) ಹುದ್ದೆಯನ್ನು ಕರುಣಿಸಿದ್ದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಇದೀಗ ನಿಯಮಾವಳಿಗಳನ್ನು ಗಾಳಿಗೆ ತೂರಿ ಬೆಂಗಳೂರು ಮಹಾನಗರ ಪಾಲಿಕೆಯ ಭೂ ಸ್ವಾಧೀನ ವಿಭಾಗದ ಸಹಾಯಕ ಆಯುಕ್ತರ ಹುದ್ದೆಯನ್ನೂ ಅವರಿಗೆ ದಯಪಾಲಿಸಿದೆ.
ವಿಶ್ವನಾಥ ಪಿ ಹಿರೇಮಠ ಅವರ ಪ್ರಕರಣದಲ್ಲಿ ಜುಲೈನಲ್ಲೇ ಒಟ್ಟು 2 ಆದೇಶಗಳು ಅತ್ಯಂತ ಕ್ಷಿಪ್ರಗತಿಯಲ್ಲಿ ಹೊರಬಿದ್ದಿವೆ. ಅಲ್ಲದೆ ಈ ಪ್ರಕರಣದಲ್ಲಿ ಅತ್ಯಾಸಕ್ತಿಯನ್ನು ಪ್ರದರ್ಶಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮತ್ತೊಮ್ಮೆ ಸ್ವಜಾತಿ ಪ್ರೇಮ ಮೆರೆದಿದ್ದಾರೆ ಎಂಬ ಬಲವಾದ ಆರೋಪಕ್ಕೆ ಗುರಿಯಾಗಿದ್ದಾರೆ.
2020ರ ಜುಲೈ 13ರನ್ವಯ ಕೆಎಎಸ್(ಕಿರಿಯ ಶ್ರೇಣಿ) ಪರೀಕ್ಷಾರ್ಥ (ಪ್ರೊಬೇಷನರಿ) ಅಧಿಕಾರಿ ಹುದ್ದೆಗೆ ನೇಮಕಗೊಂಡು ಸ್ಥಳ ನಿರೀಕ್ಷಣೆಯಲ್ಲಿದ್ದ ವಿಶ್ವನಾಥ ಹಿರೇಮಠ ಅವರಿಗೆ ಕೇವಲ 11 ದಿನಗಳ ಅಂತರದಲ್ಲಿ ಬಿಬಿಎಂಪಿಯ ಭೂ ಸ್ವಾಧೀನ ವಿಭಾಗದ ಸಹಾಯಕ ಆಯುಕ್ತರನ್ನಾಗಿ ನೇಮಿಸಿರುವ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯು 2020ರ ಜುಲೈ 24ರಂದು ಅಧಿಸೂಚನೆ ಹೊರಡಿಸಿದೆ. ಭೂ ಸ್ವಾಧೀನ ವಿಭಾಗದ ಸಹಾಯಕ ಆಯುಕ್ತ ಹುದ್ದೆಯಲ್ಲಿದ್ದ ಕವಿತಾ ಯೋಗಪ್ಪನವರ ಅವರನ್ನು ಬಿಬಿಎಂಪಿಯ ಚುನಾವಣೆ ವಿಭಾಗದ ಸಹಾಯಕ ಆಯುಕ್ತ ಹುದ್ದೆಗೆ ಎತ್ತಂಗಡಿ ಮಾಡಲಾಗಿದೆ.
ನಿಯಮ ಉಲ್ಲಂಘನೆ?
ಕರ್ನಾಟಕ ಗೆಜೆಟೆಡ್ ಪ್ರೊಬೇಷನರಿ ನೇಮಕಾತಿ ನಿಯಮ 1997ರಂತೆ ಒಬ್ಬ ಪರೀಕ್ಷಾರ್ಥಿ (ಪ್ರೊಬೇಷನರಿ) ಒಬ್ಬ ಜಿಲ್ಲಾಧಿಕಾರಿ ಅಡಿಯಲ್ಲಿ, ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಕಡ್ಡಾಯವಾಗಿ ಗರಿಷ್ಠ 2 ವರ್ಷದವರೆಗೆ ಕಾರ್ಯನಿರ್ವಹಿಸಬೇಕು.
ಪರೀಕ್ಷಾರ್ಥ ಅವಧಿಯಲ್ಲಿ ಸಹಾಯಕ ಆಯುಕ್ತರಿಗಿಂತ ಕಡಿಮೆ ದರ್ಜೆಯ ಅಂದರೆ ಗ್ರಾಮ ಲೆಕ್ಕಾಧಿಕಾರಿ, ಕಂದಾಯ ನಿರೀಕ್ಷಕ, ಉಪ ತಹಶೀಲ್ದಾರ್ ಮತ್ತು ತಹಶೀಲ್ದಾರ್ ಹುದ್ದೆಗಳನ್ನು ಸ್ವತಂತ್ರವಾಗಿ ನಿಭಾಯಿಸಬೇಕು. ಈ 2 ವರ್ಷ ಅವಧಿ ಮುಗಿದ ನಂತರ ಉಪ ವಿಭಾಗಾಧಿಕಾರಿ ಹುದ್ದೆಯ ಸ್ವತಂತ್ರ ಕಾರ್ಯನಿರ್ವಹಣೆ ಸಿಗಬೇಕು.
ಒಂದು ವೇಳೆ ಅಧಿಕಾರಿಗಳ ತೀವ್ರ ಕೊರತೆ ಇದ್ದಲ್ಲಿ ಮಾತ್ರ ಅದೂ ಪರೀಕ್ಷಾರ್ಥ ಅವಧಿಯ ಕೊನೆಯ ಅವಧಿಯಲ್ಲಿ ಸಹಾಯಕ ಆಯುಕ್ತರ ಹುದ್ದೆ ಸ್ವತಂತ್ರ ಪ್ರಭಾರದ ಮೇಲೆ ನೇಮಿಸಲಾಗುತ್ತದೆ. ಈ ನಿಯಮಗಳ ಪ್ರಕಾರ ವಿಶ್ವನಾಥ ಹಿರೇಮಠ ಅವರನ್ನು ನೇಮಿಸಬೇಕಿತ್ತು. ಆದರೆ ನಿಯಮಗಳನ್ನು ಉಲ್ಲಂಘಿಸಿ ನೇರವಾಗಿ ಸಹಾಯಕ ಆಯುಕ್ತರ ಹುದ್ದೆಗೆ ನೇಮಿಸಿ ಎಂದು ಖುದ್ದು ಯಡಿಯೂರಪ್ಪ ಅವರೇ ಟಿಪ್ಪಣಿಯಲ್ಲಿ ಸೂಚಿಸಿದ್ದಾರೆ. ಇದನ್ನಾಧರಿಸಿ ಅಧಿಸೂಚನೆ ಹೊರಡಿಸಿರುವ ಡಿಪಿಎಆರ್ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದೆ.
‘ರಾಜ್ಯದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ತಹಶೀಲ್ದಾರ್‌ಗಳಿದ್ದಾರೆ. ಈ ಪೈಕಿ ಹಲವರು ಮುಂಬಡ್ತಿ ಪಡೆದು ಸಹಾಯಕ ಆಯುಕ್ತರ ಹುದ್ದೆಯಲ್ಲಿದ್ದಾರೆ. ಅಲ್ಲದೆ ಕೆಪಿಎಸ್‌ಸಿ ಮೂಲಕ ನೇರವಾಗಿ ಸಹಾಯಕ ಆಯುಕ್ತರಾಗಿ ನೇಮಕಗೊಂಡವರಿದ್ದಾರೆ. ಆದರೆ ಇವರಾರನ್ನೂ ಪರಿಗಣಿಸದೆಯೇ ಕೇವಲ ವಿಶ್ವನಾಥ ಹಿರೇಮಠ ಅವರಿಗಷ್ಟೇ ಬಿಬಿಎಂಪಿ ಸಹಾಯಕ ಆಯುಕ್ತ ಹುದ್ದೆಗೆ ನೇಮಿಸಿರುವುದು ಸರಿಯಲ್ಲ. ಇದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸ್ವ ಜಾತಿ ಪ್ರೇಮವೇ ಕಾರಣವೇ ಹೊರತು ಬೇರೆ ಇನ್ನೇನೂ ಕಾರಣವಿಲ್ಲ,’ ಎಂದು ಸಹಾಯಕ ಆಯುಕ್ತ ಹುದ್ದೆಯ ಸ್ಥಳ ನಿರೀಕ್ಷಣೆಯಲ್ಲಿರುವ ಅಧಿಕಾರಿಯೊಬ್ಬರು ಹೇಳುತ್ತಾರೆ.
ಪ್ರಕರಣದ ಹಿನ್ನೆಲೆ
1998, 99 ಮತ್ತು 2004ನೇ ಸಾಲಿನ ಕೆಎಎಸ್ ಅಧಿಕಾರಿಗಳ ನೇಮಕಾತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ಹೈಕೋರ್ಟ್ ಮತ್ತು ಕರ್ನಾಟಕ ಆಡಳಿತ ನ್ಯಾಯ ಮಂಡಳಿ ನೀಡಿದ್ದ ಯಾವ ತೀರ್ಪನ್ನು ಪಾಲಿಸದೇ ನ್ಯಾಯಾಂಗ ನಿಂದನೆಗೆ ಗುರಿಯಾಗಿದ್ದ ರಾಜ್ಯ ಸರ್ಕಾರವು, ಲಾಕ್‌ಡೌನ್ ನಡುವೆಯೇ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಆಪ್ತ ಕಾರ್ಯದರ್ಶಿ (1)ಯಾಗಿರುವ ವಿಶ್ವನಾಥ ಪಿ ಹಿರೇಮಠ ಅವರಿಗಷ್ಟೇ ಸೀಮಿತಗೊಳಿಸಿ ಗ್ರೂಪ್-ಎ (ಕೆಎಎಸ್ ಕಿರಿಯ ಶ್ರೇಣಿ) ಹುದ್ದೆಯನ್ನು 2020ರ ಜುಲೈ 13ರಂದು ಕರುಣಿಸಿತ್ತು.
ಕರ್ನಾಟಕ ಆಡಳಿತ ನ್ಯಾಯ ಮಂಡಳಿಯ ನ್ಯಾಯಾಂಗ ನಿಂದನೆ ಪ್ರಕರಣವನ್ನು ಉಲ್ಲೇಖಿಸಿದ್ದ ರಾಜ್ಯ ಸರ್ಕಾರ, ಶಂಕರಗೌಡ ದೊಡ್ಡಮನಿ ಮತ್ತು ಪರಿಶಿಷ್ಟ ಜಾತಿಗೆ ಸೇರಿದ ಅಧಿಕಾರಿಯೊಬ್ಬರಿಗೆ ಗ್ರೂಪ್ ಎ ಹುದ್ದೆಯನ್ನು ನೀಡದೇ ಕೇವಲ ವಿಶ್ವನಾಥ ಪಿ ಹಿರೇಮಠ ಅವರಿಗಷ್ಟೇ ಗ್ರೂಪ್ ಎ ಹುದ್ದೆಯನ್ನು ಅನುಗ್ರಹಿಸಿರುವುದು ಸ್ವಜನಪಕ್ಷಪಾತ ಎಸಲಾಗಿತ್ತು ಎಂಬ ಆರೋಪವೂ ಕೇಳಿ ಬಂದಿತ್ತು.
ವಿಶ್ವನಾಥ ಪಿ ಹಿರೇಮಠ ಅವರು ಸೇರಿದಂತೆ ಒಟ್ಟು 5 ಅಭ್ಯರ್ಥಿಗಳನ್ನು 2009ರ ಮಾರ್ಚ್ 19ರಂದು ಶಾಖಾಧಿಕಾರಿ ಹುದ್ದೆಗಳಿಗೆ ನೇಮಕ ಮಾಡಿ ಅಧಿಸೂಚನೆ ಹೊರಡಿಸಿತ್ತು. ನಂತರದಲ್ಲಿ ಇವರು ಕೆಎಟಿಯಲ್ಲಿ ಸಲ್ಲಿಸಿದ್ದ ಅರ್ಜಿ( ಸಂಖ್ಯೆ 2121/2010)ಗೆ ಸಂಬಂಧಿಸಿದಂತೆ 2017ರ ಡಿಸೆಂಬರ್ 15ರಂದು ತೀರ್ಪು ನೀಡಿತ್ತು. ವಿಶೇಷವೆಂದರೆ ಕೆಎಟಿಯಲ್ಲಿ ಈ ಅರ್ಜಿ 10 ವರ್ಷಗಳಿಂದ ವಿಚಾರಣೆ ನಡೆಯುತ್ತಿದ್ದರೂ ರಾಜ್ಯ ಸರ್ಕಾರ ಆಕ್ಷೇಪಣೆಯನ್ನೇ ಸಲ್ಲಿಸದೇ ಇದ್ದದ್ದು ಹಲವು ಅನುಮಾನಗಳಿಗೂ ದಾರಿ ಮಾಡಿಕೊಟ್ಟಿತ್ತು.
ಅಲ್ಲದೆ ಪ್ರಕರಣವು ಕೆಎಟಿಯ ವಿಭಾಗೀಯ ಪೀಠದಲ್ಲಿ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಕೆಎಟಿಯ ಆಡಳಿತಾತ್ಮಕ ಸದಸ್ಯರೊಬ್ಬರು ಆಕ್ಷೇಪಣೆ ಎತ್ತಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಹಾಗೆಯೇ ಅವರು ರಜೆ ಮೇಲೆ ತೆರಳಿದ್ದ ಸಂದರ್ಭವನ್ನು ಬಳಸಿಕೊಂಡು ಅಂದಿನ ನ್ಯಾಯಾಂಗ ಸದಸ್ಯರೋರ್ವರು ಸರ್ಕಾರ ಆಕ್ಷೇಪಣೆ ಸಲ್ಲಿಸದೇ ಇದ್ದರೂ ಈ ಪ್ರಕರಣದಲ್ಲಿ ವಿಶ್ವನಾಥ ಪಿ ಹಿರೇಮಠ ಅವರಿಗೆ ಗ್ರೂಪ್ ಎ ಹುದ್ದೆಯನ್ನು ನೀಡಲು ತೀರ್ಪು ನೀಡಿದ್ದರು ಎನ್ನಲಾಗಿತ್ತು.
ಈ ಪ್ರಕರಣದಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೂಡ ಒಬ್ಬ ಪ್ರತಿವಾದಿಯಾಗಿದ್ದರೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಈವರೆವಿಗೂ ಮೇಲ್ಮನವಿಯನ್ನು ಸಲ್ಲಿಸದೇ ಇದ್ದದ್ದು ಹಲವು ಅನುಮಾನಗಳಿಗೆ ಕಾರಣವಾಗಿತ್ತು.
ಅದೇ ರೀತಿ 2017ರಲ್ಲಿ ಕೆಎಟಿ ನೀಡಿದ್ದ ತೀರ್ಪು 3 ವರ್ಷಗಳಾದರೂ ಅನುಷ್ಠಾನಕ್ಕೆ ಬಂದಿರಲಿಲ್ಲ. ಅಲ್ಲದೆ ಸರ್ಕಾರವೂ ಮೇಲ್ಮನವಿಯನ್ನೂ ಸಲ್ಲಿಸಿರಲಿಲ್ಲ. ಈ ಮಧ್ಯೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗುತ್ತಿದ್ದಂತೆ ವಿಶ್ವನಾಥ ಹಿರೇಮಠ ಅವರು 2019ರಲ್ಲಿ ಸರ್ಕಾರದ ವಿರುದ್ಧ ಕರ್ನಾಟಕ ನ್ಯಾಯ ಮಂಡಳಿಯಲ್ಲಿ ನ್ಯಾಯಾಂಗ ನಿಂದನೆ ಅರ್ಜಿ(104/2019) ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆಗೆ ಬಾಕಿ ಇದೆ. ಇದರ ಮಧ್ಯೆಯೇ ರಾಜ್ಯ ಸರ್ಕಾರ ಇವರಿಗೆ ಗ್ರೂಪ್ ಎ ಹುದ್ದೆಯನ್ನು ಕರುಣಿಸಿದ್ದು ಸಂಶಯಗಳಿಗೆಡೆ ಮಾಡಿಕೊಟ್ಟಿತ್ತು.
ಇದೇ ಪ್ರಕರಣದಲ್ಲಿ ರಾಜ್ಯದ ಅಡ್ವೋಕೇಟ್ ಜನರಲ್ ಅವರು ರಾಜ್ಯ ಸರ್ಕಾರವೇ ಹೊರಡಿಸಿರುವ ರೋಸ್ಟರ್ ಬಿಂದುವಿನ ಆದೇಶ ಮತ್ತು ಸುಪ್ರೀಂ ಕೋರ್ಟ್ ಕಾಲಕಾಲಕ್ಕೆ ನೀಡಿರುವ ಆದೇಶಗಳನ್ನು ಗಾಳಿಗೆ ತೂರಿದ್ದರು ಎಂಬ ಬಲವಾದ ಆರೋಪ ಕೇಳಿ ಬಂದಿತ್ತು.
1998, 99 ಹಾಗೂ 2004ನೇ ಸಾಲಿನಲ್ಲಿ ಒಟ್ಟು 60 ಕೆಎಎಸ್ ಸಹಾಯಕ ಆಯುಕ್ತರ ಹುದ್ದೆಗಳು ಲಭ್ಯವಿದ್ದವು. ಇದರಲ್ಲಿ ಸಂಖ್ಯಾತಿರಿಕ್ತ ಹುದ್ದೆಯನ್ನು ಸೃಜಿಸಲಾಗಿತ್ತು. ಆದರೆ ವಿಶ್ವನಾಥ ಪಿ ಹಿರೇಮಠ ಅವರು ಈ ಹುದ್ದೆಯನ್ನು ಪಡೆಯಲು ರೋಸ್ಟರ್ ಬಿಂದುವಾಗಲಿ, ಅರ್ಹತೆಯನ್ನಾಗಲಿ ಹೊಂದಿರಲಿಲ್ಲ ಎಂದು ದಾಖಲೆಯಿಂದ ತಿಳಿದು ಬಂದಿದೆ.
1995ರಲ್ಲಿ ರೂಪಿತವಾಗಿದ್ದ ಅಂಗವಿಕಲರ ಸಮಾನ ಹಕ್ಕುಗಳ ಕಾಯ್ದೆ 1996ರಲ್ಲಿ ಜಾರಿಗೆ ಬಂದಿತ್ತು. ಈ ಕಾಯ್ದೆ ಪ್ರಕಾರ ವೃಂದ ಬಲದಲ್ಲಿ ಶೇ. 3ಕ್ಕೆ ಕಡಿಮೆ ಇಲ್ಲದಂತೆ ಮೀಸಲಾತಿ ನೀಡಬೇಕಿತ್ತು. ಶೇ. 4ಕ್ಕೆ ಕಡಿಮೆ ಇಲ್ಲದಂತೆ ಮೀಸಲಾತಿ ನೀಡಬೇಕು ಎಂದು 2016ರಲ್ಲಿ ಇದೇ ಕಾಯ್ದೆಗೆ ತಿದ್ದುಪಡಿಯಾಗಿತ್ತು.
ಕರ್ನಾಟಕ ಸರ್ಕಾರ ಗೆಜೆಟೆಡ್ ಪ್ರೊಬೇಷನರಿ ನೇಮಕಾತಿ ನಿಯಮಗಳನ್ನು 1997ರ ಜುಲೈ 24ರಲ್ಲಿ ಜಾರಿಗೆ ತಂದಿತ್ತು. 1995ರ ಕಾಯ್ದೆ ನಂತರ 1998 ಮತ್ತು 1999ರಲ್ಲಿ ಗೆಜೆಟೆಡ್ ಪ್ರೊಬೇಷನರಿ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿತ್ತು. ತದ ನಂತರ 2004ರ ನವೆಂಬರ್ 4ರಂದು ಈ ಸಂಬಂಧ ಅಧಿಸೂಚನೆ ಹೊರಡಿಸಲಾಗಿತ್ತು.
1998ರ ನೇಮಕಾತಿ ಅಧಿಸೂಚನೆಯಲ್ಲಿ 20 ಸಹಾಯಕ ಆಯುಕ್ತರ ಹುದ್ದೆಯು, 1999 ಮತ್ತು 2004ರಲ್ಲೂ ತಲಾ 20 ಸಹಾಯಕ ಆಯುಕ್ತರ ಹುದ್ದೆಗಾಗಿ ಕೆಪಿಎಸ್‌ಸಿ ಅರ್ಜಿ ಕರೆದಿತ್ತು. ಸರ್ವೋಚ್ಛ ನ್ಯಾಯಾಲಯದ ಬೇರೆ ಬೇರೆ ತೀರ್ಪಿನ ಪ್ರಕಾರ 1996ರಿಂದಲೇ ಎಲ್ಲಾ ವೃಂದಗಳಲ್ಲೂ ವಿಕಲಚೇತನರಿಗೆ ಮೀಸಲಾತಿ ನೀಡಲೇಬೇಕಿತ್ತು.
ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯ 1999, 2002, 2005ರ ಆದೇಶಗಳಲ್ಲಿ ಪ್ರತಿ ವರ್ಗದ 19ನೇ ರೋಸ್ಟರ್ ಬಿಂದುಗಳನ್ನು ವಿವಿಧ ಪ್ರಕಾರದ ಅಂಗವಿಕಲ ಅಭ್ಯರ್ಥಿಗಳಿಗಾಗಿ ಮೀಸಲಿಡಬೇಕಿತ್ತು. ಆದರೆ ರಾಜ್ಯ ಸರ್ಕಾರ ಮೀಸಲಿಟ್ಟಿರಲಿಲ್ಲ. ಸಾಮಾನ್ಯ ವರ್ಗದ 19ನೇ ರೋಸ್ಟರ್ ಬಿಂದು 1998ನೇ ಸಾಲಿನಲ್ಲೂ ಬಂದಿತ್ತು. 2004ನೇ ಸಾಲಿಗೆ 19ನೇ ರೋಸ್ಟರ್ ಬಿಂದು ಲಭ್ಯಗೊಳಿಸಿರಲಿಲ್ಲ.