ಕೋವಿಡ್ ಭ್ರಷ್ಟಾಚಾರ ಬೆನ್ನೆತ್ತಿದ ಮಾಜಿ ಶಾಸಕ ಬಗಲಿ; ಲೋಕಾಯುಕ್ತಕ್ಕೆ ಸಲ್ಲಿಸಿದ ಹೆಚ್ಚುವರಿ ದಾಖಲೆಯಲ್ಲಿ ನಿರಾಣಿ ಪೆನ್‌ ಡ್ರೈವ್‌ ಪ್ರಸ್ತಾಪ

ಬೆಂಗಳೂರು; ಕೋವಿಡ್-19ರ ನಿರ್ವಹಣೆಗಾಗಿ ವೈದ್ಯಕೀಯ ಪರಿಕರಗಳ ಖರೀದಿಯಲ್ಲಿ ನಡೆದಿದೆ ಎನ್ನಲಾಗಿರುವ ಅಕ್ರಮಗಳಿಗೆ ಸಂಬಂಧಿಸಿದಂತೆ ಬಿಜೆಪಿ ಮಾಜಿ ಶಾಸಕ ಡಾ ಸಾರ್ವಭೌಮ ಬಗಲಿ ಅವರು ಲೋಕಾಯುಕ್ತಕ್ಕೆ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸಿದ್ದಾರೆ. ಕಳೆದ ಕೆಲ ದಿನಗಳ ಹಿಂದೆಯಷ್ಟೇ ವೆಂಟಿಲೇಟರ್ ಖರೀದಿಯಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದ ಬಗಲಿ ಅವರು, ಇದೀಗ ಪಿಪಿಇ ಕಿಟ್ ಖರೀದಿಯಲ್ಲಿನ ಅಕ್ರಮಗಳ ಕುರಿತು ದೂರು ಸಲ್ಲಿಸಿದ್ದಾರೆ.

 

ವಿಶೇಷವೆಂದರೆ ಈ ದೂರಿನಲ್ಲಿ ಬಿಜೆಪಿ ಶಾಸಕ ಮುರುಗೇಶ್ ನಿರಾಣಿ ಅವರ ಬಳಿ ಇದೆ ಎನ್ನಲಾಗಿರುವ ಪೆನ್ ಡ್ರೈವ್ ಕುರಿತು ಪ್ರಸ್ತಾಪಿಸಿದ್ದಾರೆ. ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಭೆ ನಡವಳಿಯಲ್ಲಿ ದಾಖಲಾಗಿರುವ ಹೇಳಿಕೆಯನ್ನೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ದೂರಿನ ಪ್ರತಿ “ದಿ ಫೈಲ್’ಗೆ ಲಭ್ಯವಾಗಿದೆ.

 

ಹೆಚ್ಚುವರಿ ದಾಖಲೆ ಸಮೇತ ಸಲ್ಲಿಸಿರುವ ದೂರಿನಲ್ಲಿ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಮತ್ತು ಕರ್ನಾಟಕ ಸ್ಟೇಟ್ ಡ್ರಗ್ ಲಾಜಿಸ್ಟಿಕ್ ಮತ್ತು ವೇರ್‍ಹೌಸಿಂಗ್ ಸೊಸೈಟಿಯ ಹೆಚ್ಚುವರಿ ನಿರ್ದೇಶಕಿ ಮಂಜುಶ್ರೀ ಅವರನ್ನು ಪ್ರತಿವಾದಿಯನ್ನಾಗಿಸಿದ್ದಾರೆ.

 

ಎಚ್‍ಎಲ್‍ಎಲ್ ಲೈಫ್ ಕೇರ್‌ ಪ್ರೈವೈಟ್ ಲಿಮಿಟೆಡ್, ಪ್ಲಾಸ್ಟಿ ಸರ್ಜಿ, ಎ ಟೆಕ್ ಟ್ರಾನ್, ರುದ್ರಾಂಶ್ ವಿಗ್ ಆಗ್ರೋ ಇಂಡಿಯಾ, ಇಂಡಸ್ ಬಯೋ ಸೈನ್ಸ್, ಡಿ ಎಚ್ ಬಿ ಗ್ಲೋಬಲ್, ಬಿಗ್ ಫಾರ್ಮಾಸ್ಯುಟಿಕಲ್ಸ್, ಮನೋಜ್ ಫಾರ್ಮಾ ಕಂಪನಿ ಸರಬರಾಜು ಮಾಡಿರುವ ಕಿಟ್‌ಗಳಿಗೆ ನೀಡಿರುವ ದರದ ಕುರಿತು ದೂರಿನಲ್ಲಿ ಪ್ರಸ್ತಾಪಿಸಿರುವುದು ತಿಳಿದು ಬಂದಿದೆ.

ಪ್ಲಾಸ್ಟಿ ಸರ್ಜಿ ಇಂಡಸ್ಟ್ರೀಸ್ ಪ್ರೈವೈಟ್ ಲಿಮಿಟೆಡ್ 3.5 ಲಕ್ಷ ಪಿಪಿಇ ಕಿಟ್ ಸರಬರಾಜು ಮಾಡಿತ್ತು. ಆದರೆ ಈ ಕಂಪನಿ ಸರಬರಾಜು ಮಾಡಿದ್ದ ಒಟ್ಟು ಪಿಪಿಇ ಕಿಟ್‌ಗಳ ಪೈಕಿ 1.25 ಲಕ್ಷ ಕಿಟ್‌ಗಳು ಗುಣಮಟ್ಟದಿಂದ ಕೂಡಿರಲಿಲ್ಲ. ಆ ನಂತರ ಕಿಟ್‌ಗಳ ಬಳಕೆಯನ್ನು ತಡೆಹಿಡಿಯಲಾಗಿತ್ತು. ಪ್ರತಿವಾದಿ ಅಧಿಕಾರಿಗಳು 2.25 ಲಕ್ಷ ಪಿಪಿಇ ಕಿಟ್‌ಗಳನ್ನು ಆಂತರಿಕವಾಗಿ ಬಳಕೆ ಮಾಡಿಕೊಂಡಿದ್ದರು ಎಂದು ದೂರಿನಲ್ಲಿ ವಿವರಿಸಲಾಗಿದೆ.

 

ಅದೇ ರೀತಿ ಒಪೆರಾನ್ ಬಯೋಟೆಕ್ ಹೆಲ್ತ್ ಕೇರ್, ನೋವಾ ಕ್ರಾಫ್ಟ್ ಅಪರೇಲ್ಸ್ ಇಂಡಿಯಾ ಪ್ರೈವೈಟ್ ಲಿಮಿಟೆಡ್, ಗೋಕುಲ್‍ದಾಸ್ ಇಮೇಜಸ್, ಸುವಸ್ತ್ರ ಇಂಡಿಯಾ, ರಾಯ್‍ಮಂಟ್ ನ್ಯಾಚುರಲ್ ಕೇರ್ ಎಕ್ಸಲೆನ್ಸಿ, ಸಾರ್ವರೈಟ್ ಫಾರ್ಮಾಸ್ಯುಟಿಕಲ್ಸ್ ಸರಬರಾಜು ಮಾಡಿರುವ ಪಿಪಿಇ ಕಿಟ್‌ಗಳ ಬಗ್ಗೆಯೂ ದೂರಿನಲ್ಲಿ ವಿವರಿಸಲಾಗಿದೆ. ಈ ಕಂಪನಿಗಳು 330.40 ರು.ನಿಂದ 2,049.84 ರು.ದರದಲ್ಲಿ ಕಿಟ್‌ಗಳನ್ನು ಸರಬರಾಜು ಮಾಡಿವೆ. ಈ ದರದಲ್ಲಿ ಭಾರೀ ವ್ಯತ್ಯಾಸವಿದೆ ಎಂದು ದೂರಿನಲ್ಲಿ ಬಗಲಿ ಅವರು ತಿಳಿಸಿದ್ದಾರೆ.

 

ನಿರಾಣಿ ಪೆನ್ ಡ್ರೈವ್ ಪ್ರಸ್ತಾಪಿಸಿದ ಬಗಲಿ

 

ಲೋಕಾಯುಕ್ತಕ್ಕೆ ನೀಡಿರುವ ಹೆಚ್ಚುವರಿ ದೂರಿನಲ್ಲಿ ಬಿಜೆಪಿ ಶಾಸಕ ಮುರುಗೇಶ್ ನಿರಾಣಿ ಅವರ ಬಳಿ ಇದೆ ಎನ್ನಲಾಗಿರುವ ಪೆನ್‌ ಡ್ರೈವ್‌ ಮತ್ತು ಅದರಲ್ಲಿ ಇರಬಹುದಾದ 125 ಪುಟಗಳ ದಾಖಲೆಗಳ ಬಗ್ಗೆಯೂ ಬಗಲಿ ಅವರು ಪ್ರಸ್ತಾಪಿಸಿದ್ದಾರೆ.

ವಿಜಯಪುರದಿಂದ ತಮ್ಮ ಜತೆಗೆ ಬಂದಿದ್ದ ಅಧಿಕಾರಿಯೊಬ್ಬರು ಪೆನ್ ಡ್ರೈವ್ ತಂದಿದ್ದರು. ಅದರಲ್ಲಿ 125 ಪುಟಗಳ ದಾಖಲೆಗಳಿದ್ದವು. 70-80 ರು.ನಲ್ಲಿ ದೊರೆಯಬಹುದಾಗಿದ್ದ ಸಾಮಗ್ರಿಗಳಿಗೆ 500 ರು.ಗಿಂತಲೂ ಹೆಚ್ಚಿನ ದರವನ್ನು ಪಾವತಿಸಿದ್ದಾರೆ. ಪೆನ್‍ಡ್ರೈವ್‍ನ್ನು ನಾನು ನಿಮಗೆ ಕಳಿಸುತ್ತೇನೆ ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಮುರುಗೇಶ್ ನಿರಾಣಿ ಅವರು ತಿಳಿಸಿದ್ದರು ಎಂಬುದನ್ನು ಬಗಲಿ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

the fil favicon

SUPPORT THE FILE

Latest News

Related Posts