ಲಾಕ್‌ಡೌನ್‌ ತೆರವಿನ ನಂತರ ಸೋಂಕಿತರ ಪ್ರಮಾಣದಲ್ಲಿ ದಿಢೀರ್‌ ಏರಿಕೆ; ಯಾರ ಅಂಕೆಗೂ ಸಿಗದ ಕೊರೊನಾ

ಬೆಂಗಳೂರು; ಕರ್ನಾಟಕದಲ್ಲಿ ಮೇ ವರೆಗೆ ನಿಯಂತ್ರಣದಲ್ಲಿದ್ದ ಮಹಾಮಾರಿ ಜೂನ್ ನಂತರ ಅಂಕೆಗೆ ಸಿಗುತ್ತಿಲ್ಲ. ಇನ್ನು ಬೆಂಗಳೂರು, ಚೆನ್ನೈನಲ್ಲಿ ಲಾಕ್‌ಡೌನ್‌ ತೆರವಿನ ನಂತರ ಸೋಂಕಿತರ ಪ್ರಮಾಣದಲ್ಲಿ ದಿಢೀರ್ ಏರಿಕೆ ಆಗುತ್ತಿರುವುದು ಜನರಲ್ಲಿ‌ ಭೀತಿ ಹುಟ್ಟಿಸಿದೆ.


ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಮತ್ತೊಮ್ಮೆ ಬೆಂಗಳೂರು ಸೇರಿ ಇತರ ಕೆಲ ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಜಾರಿಗೊಳಿಸಿದ್ದರೂ ದೃಢಪಡುತ್ತಿರುವ ಪ್ರಕರಣಗಳ ಸಂಖ್ಯೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಜಗತ್ತಿನ ಎಲ್ಲೆಡೆ ವ್ಯಾಪಕವಾಗಿ ಹರಡಿ ಲಕ್ಷಾಂತರ ಮಂದಿಯನ್ನು ಬಲಿ ಪಡೆದಿರುವ ಕೊವೀಡ್-19 ಕಾಯಿಲೆ ಭಾರತದಲ್ಲೂ ತನ್ನ ಕಬಂಧ ಬಾಹು ಚಾಚಿ, ಅಮಾಯಕ ಜೀವಿಗಳನ್ನು ಬಲಿ ಪಡೆಯುತ್ತಲೇ ಇದೆ.


ಆರಂಭದಲ್ಲಿ ಕೊರೊನಾ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ನಿರ್ಲಕ್ಷ್ಯ, ನಿಧಾನಗತಿಯ ಟೆಸ್ಟ್ ನಿಂದಾಗಿ ದೇಶದಲ್ಲಿ ಜು.17ರಂದು ಹತ್ತು ಲಕ್ಷ ಕೊವೀಡ್ 19 ಪ್ರಕರಣಗಳು ವರದಿಯಾಗುವ ಮೂಲಕ ವಿಶ್ವದ ಅತೀ ಹೆಚ್ಚು ಸೋಂಕು ಪೀಡಿತ ದೇಶಗಳ ಪೈಕಿ ಮೂರನೇ ಸ್ಥಾನ ಭಾರತ ತನ್ನದಾಗಿಸಿಕೊಂಡಿದೆ.


ಮೊದಲ ಸ್ಥಾನದಲ್ಲಿ ಅಮೆರಿಕವಿದ್ದರೆ ಎರಡನೇ ಸ್ಥಾನದಲ್ಲಿ ಬ್ರೆಜಿಲ್ ಇದೆ. ದೇಶದಲ್ಲಿ ಒಂದೇ ದಿನ (ಜು.16)ರಂದು ದಾಖಲೆಯ 34,956 ಪ್ರಕರಣಗಳು ಪತ್ತೆಯಾಗುವ ಮೂಲಕ ಸೋಂಕಿತರ 1003832 ಗಡಿ ದಾಟಿತು. ಕಳೆದ 21 ದಿನಗಳಿಂದ ಸೋಂಕಿತರ ಹೆಚ್ಚುತ್ತಲೇ ಸಾಗಿದೆ. ಈ ಸಂಖ್ಯೆ ಹೀಗೆ ಸಾಗಿದರೆ ಆಗಸ್ಟ್ ನೊಳಗೆ ಇನ್ನು ಇಪ್ಪತ್ತು ಲಕ್ಷ ಮಂದಿಗೆ ಸೋಂಕು ತಗುಲುವ ಸಾಧ್ಯತೆಯಿದೆ ಎಂದು ವರದಿಯೊಂದು ತಿಳಿಸಿದೆ.


ಇನ್ನು ಕೊರೊನಾದಿಂದ ಅತೀ ಹೆಚ್ಚು ಬಾಧೆಗೆ ಒಳಗಾದ ರಾಜ್ಯಗಳ ಪೈಕಿ ದೆಹಲಿ, ಮಹಾರಾಷ್ಟ್ರ, ತಮಿಳುನಾಡು ಸೇರಿವೆ. ಅದರಲ್ಲೂ ದೆಹಲಿಯನ್ನು ಮಹಾಮಾರಿ ವೈರಸ್ ನಡುಗಿಸಿ ಬಿಟ್ಟಿದೆ. ಆರಂಭದಲ್ಲಿ ಏರುಗತಿಯಲ್ಲಿ ಸಾಗಿ ಪ್ರಸ್ತುತ ಇಳಿಮುಖವಾಗ ತೊಡಗಿದೆ. ಜು.16ರ ಕೇಂದ್ರ ಆರೋಗ್ಯ ಇಲಾಖೆ ಪ್ರಕಾರ ದೇಶದಲ್ಲಿ 25 ಸಾವಿರಕ್ಕೂ ಅಧಿಕ ಮಂದಿ ಕೊರೊನಾ ಹೆಮ್ಮಾರಿಗೆ ಬಲಿಯಾಗಿದ್ದಾರೆ.


ಇನ್ನು ಕೊರೊನಾದಿಂದ ದೇಶದಲ್ಲಿ ಉಂಟಾಗುವ ಕೆಟ್ಟ ಪರಿಣಾಮ ಹಾಗೂ ಜನರ ಆರೋಗ್ಯ, ಆಸ್ಪತ್ರೆಗಳಲ್ಲಿನ ಸೌಲಭ್ಯ, ವಲಸೆ ಕಾರ್ಮಿಕರ ಸಮಸ್ಯೆ, ಮಕ್ಕಳ ಹಾಗೂ ಪರಿಸರದಲ್ಲಿ ಉಂಟಾಗುವ ಕೆಟ್ಟ ಪರಿಣಾಮಗಳ ಕುರಿತು ಮಾಧ್ಯಮಗಳು ಸತತ ವರದಿ ಮಾಡುವ ಮೂಲಕ ದೇಶದಲ್ಲಿ ಕೊರೊನಾ ಸೃಷ್ಟಿಸಿದ ಅವಾಂತರವನ್ನು ತೆರದಿಟ್ಟಿದೆ. ಇನ್ನು ಮಾರಣಾಂತಿಕ ವೈರಸ್ ತಡೆಗೆ ಕೇಂದ್ರ ಸರ್ಕಾರ ಮಾ.25ರಂರಿಂದ ದೇಶಾದ್ಯಂತ ಲಾಕ್ಡೌನ್ ಘೋಷಣೆ ಮಾಡಿತ್ತು. ಈ ವೇಳೆ ಮಹಾಮಾರಿ ಹರಡುವಿಕೆ ನಿಯಂತ್ರಣದಲ್ಲಿ ಇತ್ತು.


ಲಾಕ್‌ಡೌನ್‌ ತೆರವಿನ ಬಳಿಕ ಅಂದರೆ ಜೂ.1ರ ಬಳಿಕ ದೇಶದಲ್ಲಿ ಸೋಂಕಿತರ ಸಂಖ್ಯೆ ಏರುಗತಿಯಲ್ಲಿ ಸಾಗಿದೆ. ಜತೆಗೆ ಸಾವಿನ ಸಂಖ್ಯೆ ಕೂಡ ಹೆಚ್ಚ ತೊಡಗಿದೆ. ಅಲ್ಲದೇ ಕೆಲ ದಿನಗಳಿಂದ ಭಾರತದಲ್ಲಿ 25 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿ ಆಗುತ್ತಿವೆ. ದೇಶದ ಸುಮಾರು ಇಪ್ಪತ್ತೈದು ರಾಜ್ಯ ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳು ಕೊರೊನಾದಿಂದ ಅಧಿಕ ಸಂಕಷ್ಟಕ್ಕೆ ಒಳಗಾಗಿವೆ. ಈ ರಾಜ್ಯಗಳಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ರಾಷ್ಟ್ರ ರಾಜಧಾನಿ ದೆಹಲಿಯಂತೂ ಕೊರೊನಾ ಆರ್ಭಟಕ್ಕೆ ನಲುಗಿ ಹೋಗಿದೆ.


ಸದ್ಯ ಸೋಂಕಿತರ ಪ್ರಕರಣಗಳ ಇಳಿಕೆಯತ್ತ ಸಾಗಿದೆ. ಜೂ.23ರಂದು ದಾಖಲೆಯ 3,947 ಪ್ರಕರಣಗಳು ಪತ್ತೆಯಾಗಿ ಜನರಲ್ಲಿ ಭೀತಿ ಸೃಷ್ಟಿಸಿತು. ದೆಹಲಿಯ ಪರಿಸ್ಥಿತಿ ಕೈಮೀರುತ್ತದ್ದರಿಂದ ಕೇಂದ್ರ ಸರ್ಕಾರ ನೆರವಿನ ಹಸ್ತ ಚಾಚಿತು. ಇನ್ನು ದೆಹಲಿಯಲ್ಲಿ ಜುಲೈನಲ್ಲಿ ಪ್ರತಿದಿನ 1975 ಸರಾಸರಿಯಲ್ಲಿ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸ್ವಲ್ಪ ಮೆಟ್ಟಿಗೆ ನಿಯಂತ್ರಣಕ್ಕೆ ಬಂದಿದೆ.
ದೇಶದಲ್ಲಿ ಮೊದಲ ಕೊರೊನಾ ಪಾಸಿಟಿವ್ ಪ್ರಕರಣ ಕಾಣಿಸಿಕೊಂಡಿದ್ದು ಕೇರಳದಲ್ಲಿ ಅದು ಜ.30ರಂದು. ಅಲ್ಲಿಂದ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಹೋಯಿತು. ಮಾ.14ರಂದು 100 ಪ್ರಕರಣಗಳು ದೇಶದಲ್ಲಿ ಕಾಣಿಸಿಕೊಂಡವು. ಮೇ 18 ಹೊತ್ತಿಗೆ ದೇಶದಲ್ಲಿ ಲಕ್ಷ ಪ್ರಕರಣಗಳು ವರದಿ ಆದವು.


ಭಾರತದಲ್ಲಿ ಹೀಗೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದರೂ ಮತ್ತೊಂದೆಡೆ ಕೇಂದ್ರಾಡಳಿತ ಪ್ರದೇಶ ಲಕ್ಷದೀಪದಲ್ಲಿ ಮಾತ್ರ ಯಾವುದೇ ಪ್ರಕರಣಗಳು ಪತ್ತೆ ಯಾಗಿಲ್ಲ. ಈ ಮೂಲಕ ಲಕ್ಷದ್ವೀಪ ಕೊವೀಡ್ ಮುಕ್ತ ಪ್ರದೇಶವಾಗಿದೆ. ಆರಂಭದಲ್ಲಿ ಗೋವಾ ಮತ್ತು ಮಣಿಪುರ ಕೊರೊನಾ ಮುಕ್ತ ರಾಜ್ಯಗಳೆಂದು ಘೋಷಿಸಲಾಗಿತ್ತು.


ಆದರೆ, ಹೆಮ್ಮಾರಿ ಏಪ್ರಿಲ್ 20ರ ಹೊತ್ತಿಗೆ ಗೋವಾಕ್ಕೆ ಕಾಲಿಟ್ಟಿತ್ತು ಈ ಮೂಲಕ 1272 ಸಕ್ರಿಯ ಪ್ರಕರಣಗಳು ಗೋವಾದಲ್ಲಿ ಹಾಗೂ 635 ಸೋಂಕು ಪ್ರಕರಣಗಳು ಜು.17ರಂದು ಮಣಿಪುರದಲ್ಲಿ ಕಾಣಿಸಿಕೊಂಡವು. ಸಿಕ್ಕಿಂ, ನಾಗಲ್ಯಾಂಡ್ ಅರುಣಾಚಲ ಪ್ರದೇಶ, ತ್ರಿಪುರಗಳನ್ನು ಕೊರೊನಾ ಮುಕ್ತ ರಾಜ್ಯಗಳೆಂದು ಏ.28ರಂದು ಘೋಷಿಸಲಾಯಿತು. ಆದರೀಗ ಈ ನಾಲ್ಕು ರಾಜ್ಯಗಳಲ್ಲಿ ಹಲವು ಪ್ರಕರಣಗಳು ಪತ್ತೆ ಆಗಿವೆ. ಕೊರೊನಾವೀಗ ದೇಶದ ಯಾವ ಪ್ರದೇಶವನ್ನು ಬಿಡುತ್ತಿಲ್ಲ. ವೈರಸ್ ನಿಯಂತ್ರಣಕ್ಕೆ ಸರ್ಕಾರಗಳು ಶಕ್ತಿಮೀರಿ ಪ್ರಯತ್ನಿಸುತ್ತಿವೆ. ಆದರೂ ಹಿಡಿತಕ್ಕೆ ಸಿಗುತ್ತಿಲ್ಲ.


ಹೀಗಾಗಿ, ಸದ್ಯ ದಿನವೊಂದಕ್ಕೆ 3 ಲಕ್ಷ ಟೆಸ್ಟ್ ಸ್ಯಾಂಪಲ್ ಗಳನ್ನು ಪರೀಕ್ಷಿಸಲಾಗುತ್ತಿದೆ. ದೃಢಪಟ್ಟ ಪ್ರಕರಣಗಳು ಮೇ 5 ಕ್ಕೆ ಐದರಷ್ಟು ಇದ್ದರೆ ಜುಲೈನಲ್ಲಿ ಶೇಕಡ ಹತ್ತರಷ್ಟು ಆಗಿದೆ. ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಪರೀಕ್ಷೆ ಪ್ರಮಾಣ ಸಾವಿರಕ್ಕೆ 8.99 ಇದೆ. ಇದು ರಷ್ಯಾ, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ಪಾಕಿಸ್ತಾನಕ್ಕಿಂತ ಕಡಿಮೆ. ಇನ್ನು ರಷ್ಯಾದಲ್ಲಿ ಸಾವಿರ ಜನರಿಗೆ ಶೇ.164.8 ಟೆಸ್ಟ್ ಮಾಡಲಾಗುತ್ತಿದೆ ಅದೇ ರೀತಿ ದಕ್ಷಿಣ ಆಫ್ರಿಕಾದಲ್ಲಿ ಶೇ.38.4 ಟೆಸ್ಟ್ ಮಾಡಲಾಗುತ್ತದೆ. ಇನ್ನು ಇತ್ತಿಚೇಗೆ ಭಾರತದಲ್ಲೂ ಪರೀಕ್ಷೆಗಳನ್ನು ತ್ವರಿತಗೊಳಿಸಲಾಗಿದೆ.


ಯುರೋಪಿಯನ್ ದೇಶಗಳಾದ ಬ್ರಿಟನ್, ಇಟಲಿ, ಫ್ರಾನ್ಸ್, ಸ್ಪೇನ್ ಗಳಲ್ಲಿ ಆರಂಭದಲ್ಲಿ ಸೋಂಕಿತರ ಪ್ರಮಾಣ ಹೆಚ್ಚಿದ್ದರೂ ಈಚೆಗೆ ಕಡಿಮೆಯಾಗುತ್ತಾ ಬರುತ್ತಿದೆ. ಆರಂಭದಲ್ಲಿ ಭಾರತದಲ್ಲಿ ಕಡಿಮೆ ಇದ್ದ ಸೋಂಕಿತರ ಸಂಖ್ಯೆ ಈಗ ಮಿತಿ ಮೀರಿದೆ. ಈ ಮೂಲಕ ವಿಶ್ವದಲ್ಲಿ ಕೊರೊನಾ ಬಾಧೆಗೆ ತತ್ತರಿಸಿದ ಮೂರನೇ ರಾಷ್ಟ್ರವಾಗಿದೆ.


ಶರಣು ಮುಸ್ಟೂರು

the fil favicon

SUPPORT THE FILE

Latest News

Related Posts