ಚೀನಾದ ಬಿವೈಡಿ ಕಂಪನಿಯಿಂದ ಮಾಸ್ಕ್‌ ಖರೀದಿ ಮಾಹಿತಿ ಮುಚ್ಚಿಟ್ಟ ಆರೋಗ್ಯ ಇಲಾಖೆ

ಬೆಂಗಳೂರು; ಎನ್‌-95 ಮತ್ತು ಕೆಎನ್‌-95 ಮಾಸ್ಕ್‌ಗಳ ಖರೀದಿಯಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂಬ ಆರೋಪಗಳು ಕೇಳಿ ಬರುತ್ತಿರುವ ಬೆನ್ನಲ್ಲೇ ಚೀನಾ ಮೂಲದ ಕಂಪನಿಯೊಂದರಿಂದ ಖರೀದಿ ಮಾಡಿದ್ದ ವಿವರಗಳನ್ನೇ ಕರ್ನಾಟಕ ಡ್ರಗ್‌ ಅಂಡ್‌ ಲಾಜಿಸ್ಟಿಕ್‌ ವೇರ್‌ ಹೌಸಿಂಗ್‌ ಸೊಸೈಟಿ ಮತ್ತು ಆರೋಗ್ಯ ಇಲಾಖೆ ಮುಚ್ಚಿಟ್ಟಿರುವುದು ಇದೀಗ ಬಹಿರಂಗವಾಗಿದೆ.


ಚೀನಾ ಮೂಲದ ಬಿವೈಡಿ ಕಂಪನಿಯಿಂದ ನಾಲ್ಕೈದು ಪಟ್ಟು ಹೆಚ್ಚಿನ ದರದಲ್ಲಿ 5 ಲಕ್ಷ ನಕಲಿ ಮಾಸ್ಕ್‌ಗಳನ್ನು ಖರೀದಿಸಿದೆ ಎಂದು ಕರ್ನಾಟಕ ರಾಷ್ಟ್ರಸಮಿತಿ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ ಅವರು ಆಪಾದಿಸಿರುವ ಬೆನ್ನಲ್ಲೇ ಕೆಡಿಎಲ್‌ಡಬ್ಲ್ಯೂ ಈ ಕಂಪನಿಯ ವಿವರಗಳನ್ನು ಮುಚ್ಚಿಟ್ಟಿರುವುದು ಮುನ್ನೆಲೆಗೆ ಬಂದಿದೆ.


ಚೀನಾದ ಬಿವೈಡಿ ಕಂಪನಿಯಿಂದ 5 ಲಕ್ಷ ಮಾಸ್ಕ್‌ಗಳ ಖರೀದಿಗೆ ಕರ್ನಾಟಕ ಡ್ರಗ್‌ ಲಾಜಿಸ್ಟಿಕ್ ಮತ್ತು ವೇರ್‌ ಹೌಸಿಂಗ್‌ ಸೊಸೈಟಿ 2020ರ ಮಾರ್ಚ್‌ 21ರಂದು ಆದೇಶ ಹೊರಡಿಸಿತ್ತು. ಆದರೆ ಇದೇ ಸಂಸ್ಥೆಯ ಹೆಚ್ಚುವರಿ ನಿರ್ದೇಶಕರಾದ ಐಎಎಸ್‌ ಅಧಿಕಾರಿ ಮಂಜುಶ್ರೀ ಮತ್ತು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ಅವರು ಈ ಮಾಹಿತಿಯನ್ನು ಮುಚ್ಚಿಟ್ಟಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.


ಪಿಪಿಇ ಕಿಟ್‌ ಮತ್ತಿತರ ಉಪಕರಣಗಳ ಖರೀದಿಗೆ ಸಂಬಂಧಿಸಿದಂತೆ ಕೆಡಿಎಲ್‌ಡಬ್ಲ್ಯೂಎಸ್‌ನ ಹೆಚ್ಚುವರಿ ನಿರ್ದೇಶಕಿ ಮಂಜುಶ್ರೀ ಅವರು 2020ರ ಏಪ್ರಿಲ್‌ 24ರಂದು ಇಲಾಖೆ ಆಯುಕ್ತರಿಗೆ ನೀಡಿರುವ ವರದಿಯಲ್ಲಿ ಚೀನಾ ಮೂಲದ ಬಿವೈಡಿ ಕಂಪನಿಯಿಂದ ಖರೀದಿಸಿರುವ ಮಾಸ್ಕ್‌ಗಳ ಕುರಿತು ಮಾಹಿತಿ ಒದಗಿಸದಿರುವುದು ವರದಿಯಿಂದ ತಿಳಿದು ಬಂದಿದೆ.


ಅದೇ ರೀತಿ ಕೊರೊನಾ ಸಂಬಂಧ ಖರೀದಿಸಿರುವ ಉಪಕರಣಗಳಿಗೆ ಸಂಬಂಧಿಸಿದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ಅವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ 2020ರ ಜುಲೈ 9ರಂದು ನೀಡಿರುವ ಮಾಹಿತಿಯಲ್ಲೂ ಬಿವೈಡಿ ಕಂಪನಿಯಿಂದ ಖರೀದಿಸಿರುವ ಎನ್‌-95 ಮಾಸ್ಕ್‌ಗಳ ಕುರಿತು ಮಾಹಿತಿ ಒದಗಿಸಿಲ್ಲ.

2020ರ ಮಾರ್ಚ್‌ 9ರಿಂದ ಮೇ 14ರವರೆಗೆ ಎನ್‌-95 ಮಾಸ್ಕ್‌ ಖರೀದಿಸಿರುವ ಕುರಿತು ಮಾಹಿತಿ ನೀಡಿದೆ. ಎನ್‌-95 ಮಾಸ್ಕ್‌ಗೆ ತಲಾ 126 ರು.ದರದಲ್ಲಿ ಒಟ್ಟು 5 ಲಕ್ಷ ಮಾಸ್ಕ್‌ಗಳನ್ನು ಖರೀದಿಸಲು ಮಾರ್ಚ್‌ 21ರಂದು ಆದೇಶ ಹೊರಡಿಸಿದೆ. ಈ ಸಂಬಂಧ 6,30,00,000 ರು.ಗಳನ್ನು ಸರಬರಾಜುದಾರರಿಗೆ ಪಾವತಿಸಿದೆ. ಆದರೆ ಯಾವ ಕಂಪನಿಯಿಂದ, ಯಾವ ಸರಬರಾಜುದಾರರಿಂದ ಖರೀದಿಸಿತ್ತು ಎಂಬ ಮಾಹಿತಿಯನ್ನು ಸಿದ್ದರಾಮಯ್ಯ ಅವರಿಗೆ ಒದಗಿಸದ ಇಲಾಖೆ, ಮಾರ್ಚ್‌ 21ರಂದೇ ಚೀನಾ ಮೂಲದ ಬಿವೈಡಿ ಕಂಪನಿಗೆ ನೀಡಿದ್ದ ಖರೀದಿ ಆದೇಶದ ಮಾಹಿತಿಯನ್ನೂ ನೀಡದಿರುವುದು ದಾಖಲೆಯಿಂದ ಗೊತ್ತಾಗಿದೆ.


ಇನ್ನು 147 ರು. ದರದಲ್ಲಿ ಒಟ್ಟು 150000 ಮಾಸ್ಕ್‌ಗಳ ಖರೀದಿಗೆ 2020ರ ಮಾರ್ಚ್‌ 28ರಂದು ಆದೇಶ ನೀಡಿದೆಯಾದರೂ ಸರಬರಾಜುದಾರರು ಪೂರೈಕೆ ಮಾಡಿಲ್ಲ. ಹೀಗಾಗಿ ಆದೇಶವನ್ನು ರದ್ದುಗೊಳಿಸಲಾಗಿದೆ. 2020ರ ಮಾರ್ಚ್‌ 30ರಂದು 97.80 ರು.ದರದಲ್ಲಿ 83,040 ಮಾಸ್ಕ್‌ಗಳ ಖರೀದಿಯಾಗಿದೆ. ಸರಬರಾಜುದಾರರಿಗೆ ಒಟ್ಟು 81,28,786 ಪಾವತಿಯಾಗಿದೆ ಎಂದು ಜಾವೇದ್‌ ಅಖ್ತರ್‌ ಅವರು ಮಾಹಿತಿ ಒದಗಿಸಿದ್ದಾರೆ.


ಹಾಗೆಯೇ ಏಪ್ರಿಲ್‌ 21ರಂದು 147 ರು. ದರದಲ್ಲಿ 8,100 ಮಾಸ್ಕ್‌ಗಳನ್ನು ಖರೀದಿಸಿರುವ ಇಲಾಖೆ ಈ ಸಂಬಂಧ 11,90,700 ರು.ಗಳನ್ನು ಪಾವತಿಸಿರುವುದು ತಿಳಿದು ಬಂದಿದೆ.ಬಿವೈಡಿ ಇಂಡಿಯಾ ಪ್ರೈವೈಟ್‌ ಲಿಮಿಟೆಡ್‌ ಕಂಪನಿಯಿಂದ 5 ಲಕ್ಷ ಮಾಸ್ಕ್‌ಗಳನ್ನು ತಲಾ 147 ರು.ನಂತೆ ಕರ್ನಾಟಕ ಡ್ರಗ್‌ ಲಾಜಿಸ್ಟಿಕ್‌ ಮತ್ತು ವೇರ್‌ ಹೌಸಿಂಗ್‌ ಸೊಸೈಟಿ ಟೆಂಡರ್‌ ಕರೆದು ಖರೀದಿಸಿದೆ. ಎನ್‌-95 ಮಾಸ್ಕ್‌ ಬದಲು ಕಂಪನಿ ಕೆ ಎನ್‌ 95 ಮಾಸ್ಕ್‌ ಪೂರೈಸಿದೆ. ಇದರ ಮಾರುಕಟ್ಟೆ ಬೆಲೆ 25-40 ರು. ಇರಬಹುದು ಎಂದು ರವಿ ಕೃಷ್ಣಾರೆಡ್ಡಿ ಆರೋಪಿಸಿದ್ದನ್ನು ಸ್ಮರಿಸಬಹುದು.


ಎನ್- 95 ಮತ್ತು ಕೆಎನ್‌-95 ಮಾಸ್ಕ್‌ಗಳ ನಡುವೆ ಬಹಳ ವ್ಯತ್ಯಾಸವಿದೆ. ಎನ್-95 ಶ್ರೇಣಿಯ ಮಾಸ್ಕಗಳು ವೈದ್ಯಕೀಯ ಸಂಬಂಧಿತ ವಿಚಾರಗಳಲ್ಲಿ ಬಳಕೆಗೆ ಯೋಗ್ಯವಾಗಿದ್ದರೆ, ಕೆಎನ್-95 ಶ್ರೇಣಿಯ ಮಾಸ್ಕ್‌ಗಳು ಕೇವಲ ಸೂಕ್ಷ್ಮ ದೂಳು ಕಣಗಳಿಂದ ಮಾತ್ರ ರಕ್ಷಣೆ ಒದಗಿಸುತ್ತದೆ ಮತ್ತು ಕರೋನಾದಂತಹ ವೈರಾಣುವಿನಿಂದ ರಕ್ಷಣೆ ಒದಗಿಸುವುದಿಲ್ಲ ಹಾಗೂ ವೈದ್ಯಕೀಯ ಸಂಬಂಧಿತ ಸಂದರ್ಭಗಳಲ್ಲಿ ಬಳಸಲಾಗುವುದಿಲ್ಲ. ಈ ವಿಚಾರವು ಸ್ವತಃ BYD ಇಂಡಿಯಾ ಪ್ರೈ. ಲಿ.ನ ಉತ್ಪನ್ನಗಳಿಂದಲೇ ಸ್ಪಷ್ಟವಾಗುತ್ತದೆ ಎಂದು ರವಿ ಕೃಷ್ಣಾರೆಡ್ಡಿ ಅವರು ಆರೋಪಿಸಿದ್ದರು.


ಬಿವೈಡಿ ಇಂಡಿಯಾ ಪ್ರೈ. ಲಿ., ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳಿಂದ ಎನ್‌-95 ಮಾಸ್ಕ್‌ಗಳನ್ನು ಸರಬರಾಜು ಮಾಡಲು ಒಪ್ಪಿ, ಖರೀದಿ ಆದೇಶ ಸ್ವೀಕರಿಸಿದಾಗ (ಮಾರ್ಚ್ 2020), ಅವನ್ನು ತಯಾರಿಸಲು ಅತ್ಯಗತ್ಯವಾದ ಯೋಗ್ಯತಾ ಪ್ರಮಾಣಪತ್ರವನ್ನೇ ಅದು ಹೊಂದಿರಲಿಲ್ಲ ಎಂದು ಆಪಾದಿಸಿರುವ ರವಿ ಕೃಷ್ಣಾರೆಡ್ಡಿ, ಎನ್‌-95 ಮಾಸ್ಕ್ ತಯಾರಿಸಲು ಅಮೇರಿಕಾದ ನ್ಯಾಷನಲ್‌ ಇನ್ಸಿಟಿಟ್ಯೂಟ್‌ ಫಾರ್‌ ಆಕ್ಯುಪೇಷನಲ್‌ ಸೇಫ್ಟಿ ಅಂಡ್‌ ಹೆಲ್ತ್‌ (NIOSH)ನಿಂದ ಯೋಗ್ಯತಾ ಪ್ರಮಾಣ ಪತ್ರ ಪಡೆಯುವುದು ಅತ್ಯಗತ್ಯವಾಗಿರುತ್ತದೆ. NIOSHನಿಂದ ಈ ಯೋಗ್ಯತಾ ಪ್ರಮಾಣ ಪತ್ರವನ್ನು, BYD ಇಂಡಿಯಾ ಪ್ರೈ. ಲಿ. ಇತ್ತೀಚೆಗೆ, ಅಂದರೆ ಜೂನ್ 9, 2020 ರಂದು ಪಡೆದಿದೆ ಎಂಬ ಮಾಹಿತಿಯನ್ನು ಹೊರಗೆಡವಿದ್ದರು.


ಬಿವೈಡಿ ಇಂಡಿಯಾ ಪ್ರೈ. ಲಿ., ಸಂಪೂರ್ಣವಾಗಿ ಚೀನಾದಲ್ಲಿನ ತನ್ನ ಮೂಲ ಘಟಕದಿಂದ ಮಾಸ್ಕ್‌ಗಳಳನ್ನು ಆಮದು ಮಾಡಿ, ಅವುಗಳನ್ನು ರೀ ಪ್ಯಾಕ್‌ ಮಾಡಿ ಭಾರತದಲ್ಲಿ ಸರಬರಾಜು ಮಾಡುತ್ತದೆ. ಈ ಕಂಪನಿಗೆ ಮಾಸ್ಕ್‌ಗಳ ತಯಾರಿಕೆಯ ಯಾವುದೇ ಇತಿಹಾಸವಿರುವುದಿಲ್ಲ, ತೀರಾ ಇತ್ತೀಚೆಗೆ, ಅಂದರೆ ಪೆಭ್ರವರಿ, 2020 ರಿಂದ ಮಾಸ್ಕ್ ತಯಾರಿಕೆಯನ್ನು ಆರಂಭಿಸಿದೆ ಎಂದು ಆರೋಪಿಸಿದ್ದರು.


ಬಿವೈಡಿ ಇಂಡಿಯಾ ಪ್ರೈ. ಲಿ., ತಾನು ಸರಬರಾಜು ಮಾಡಿರುವ ಕೆಎನ್‌-95 ಮಾಸ್ಕ್‌ಗಳಿಗೆ ಎನ್-95 ಮಾಸ್ಕ್‌ಗಳಿಗೆ ಹೆಚ್ಚಿನ ಬೆಲೆ ವಿಧಿಸಿರುವುದು. ಕೇವಲ ರೂ 25/- ರಿಂದ ರೂ. 40 ಗಳಿಗೆ ಮಾರುಕಟ್ಟೆಯಲ್ಲಿ ದೊರಕುವ ಉತ್ಪನ್ನಕ್ಕೆ, ಮೂರರಿಂದ ಐದು ಪಟ್ಟು ಹೆಚ್ಚಿನ ದರದಲ್ಲಿ ಸರಬರಾಜು ಮಾಡಲಾಗಿದೆ.


ಬಿವೈಡಿ ಕಂಪನಿ ಲಿ., ವಿದ್ಯುತ್ ಚಾಲಿತ ವಾಹನಗಳ ತಯಾರಕರಾಗಿದ್ದು, ಅಮೇರಿಕಾದಲ್ಲಿ ಈ ಕಂಪನಿಯ ವಿಶ್ವಾಸಾರ್ಹತೆ ಬಗ್ಗೆ ಸಂದೇಹಗಳಿವೆ. ಆದ್ದರಿಂದ ಈ ಕಂಪನಿಯಿ ಬಗ್ಗೆ ಬಹಳ ವಿರೋಧವಿದೆ. ಸರ್ಕಾರವು ಸ್ವತಃ ತಾನೇ ನಕಲಿ ಮಾಸ್ಕ್‌ಗಳನ್ನು ಖರೀದಿಸಿ ತನ್ನ ಸಿಬ್ಬಂಧಿಗಳಿಗೆ ವಿತರಿಸಿದ್ದರೆ, ಸರ್ಕಾರದ ಅಧಿಕಾರಿಗಳು ಸ್ಥಳೀಯವಾಗಿ ತಯಾರಿಸಿದ್ದ ನಕಲಿ ಮಾಸ್ಕ್‌ಗಳ ಹಾವಳಿ ತಡೆಯುವಲ್ಲಿ ವಿಫಲರಾಗಿದ್ದರು.


ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿನ ವೈದ್ಯಕೀಯ ಸಿಬ್ಬಂಧಿಗಳಿಗೆ ಅಪಾರ ಪ್ರಮಾಣದಲ್ಲಿ ಕೋವಿಡ್ ಸೋಂಕು ತಗುಲಿರುವುದು, ಇಂತಹ ಕಳಪೆ ಗುಣಮಟ್ಟದ ರಕ್ಷಣಾ ಪರಿಕರಗಳ ಬಳಕೆಯಿಂದಾಗಿದೆ ಎಂದು ರವಿಕೃಷ್ಣಾರೆಡ್ಡಿ ಅವರು ಸಂದೇಹ ವ್ಯಕ್ತಪಡಿಸಿದ್ದಾರೆ.

the fil favicon

SUPPORT THE FILE

Latest News

Related Posts