ಎನ್‌ ಆರ್‌ ಸಂತೋಷ್‌ ರಂಗಪ್ರವೇಶ; ಪಶು ವೈದ್ಯಕೀಯ ವಿಶ್ವವಿದ್ಯಾಲಯ ಮೀನಮೇಷ

ಬೆಂಗಳೂರು; ಕರ್ನಾಟಕ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ನಿಯೋಜನೆಯಡಿಯಲ್ಲಿ ಹಲವು ವರ್ಷಗಳಿಂದಲೂ ತಳವೂರಿರುವ ಮುಖ್ಯ ಪಶು ವೈದ್ಯಾಧಿಕಾರಿಗಳ ಸೇವೆ ಹಿಂಪಡೆಯಬೇಕು ಎಂದು ಹೊರಡಿಸಿದ್ದ ಅಧಿಸೂಚನೆ ಈವರೆವಿಗೂ ಅನುಷ್ಠಾನಗೊಂಡಿಲ್ಲ.


2020ರ ಜೂನ್‌ 17ರಂದು ವಿಶ್ವವಿದ್ಯಾಲಯದ ಕುಲಸಚಿವರು ಪಶು ವೈದ್ಯಾಧಿಕಾರಿಗಳನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಬೇಕು ಎಂದು ವಿಶ್ವವಿದ್ಯಾಲಯದ ಕುಲಸಚಿವರು ನೀಡಿದ್ದ ಸೂಚನೆಯನ್ನು ಪಾಲಿಸಲು ವಿಶ್ವವಿದ್ಯಾಲಯ ಮೀನಮೇಷ ಎಣಿಸುತ್ತಿದೆ.

ಈ ಪ್ರಕರಣದಲ್ಲಿ ಮಧ್ಯ ಪ್ರವೇಶಿಸಿರುವ ಸಚಿವ ಪ್ರಭು ಚೌವ್ಹಾಣ್‌ ಅವರ ಆಪ್ತ ಕಾರ್ಯದರ್ಶಿಯೊಬ್ಬರು ಅಧಿಸೂಚನೆಯನ್ನು ಸದ್ಯಕ್ಕೆ ತಡೆಹಿಡಿಯಬೇಕು ಎಂದು ಕುಲಪತಿಗಳ ಮೇಲೆ ಒತ್ತಡ ಹೇರಿರುವುದೆ ಇದಕ್ಕೆ ಮೂಲ ಕಾರಣ. ಹಾಗೆಯೇ ಪಶು ವೈದ್ಯಾಧಿಕಾರಿಗಳ ಗುಂಪೊಂದಕ್ಕೆ ಮಣಿದಿದ್ದಾರೆ ಎಂದು ಹೇಳಲಾಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಎನ್‌ ಸಂತೋಷ್‌ ಅವರೂ ಈ ಪ್ರಕರಣದಲ್ಲಿ ಮಧ್ಯ ಪ್ರವೇಶಿಸಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.


ಅಧಿಸೂಚನೆಯನ್ನು ರದ್ದುಗೊಳಿಸಲು ಭಗೀರಥ ಪ್ರಯತ್ನ ಮುಂದುವರೆಸಿರುವ ಮುಖ್ಯ ಪಶು ವೈದ್ಯಾಧಿಕಾರಿಗಳು ಪಶು ವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯಲ್ಲಿ ಶಾಶ್ವತವಾಗಿ ವಿಲೀನಗೊಳ್ಳಲು ಒಳ ಮಾರ್ಗಗಳಲ್ಲಿ ನುಸುಳಿದ್ದರೂ ಸಚಿವ ಪ್ರಭು ಚೌವ್ಹಾಣ್‌ ಅವರ ಮೌನ ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.


ಪ್ರಕರಣ ಹಿನ್ನೆಲೆ


ಪಶು ವೈದ್ಯಾಧಿಕಾರಿಗಳಾಗಿ ನೇಮಕ ಹೊಂದಿರುವವರ ಪೈಕಿ 36 ಮಂದಿ ಮುಖ್ಯ ಪಶುವೈದ್ಯಾಧಿಕಾರಿಗಳು, ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ, ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ, ಶಿವಮೊಗ್ಗದಲ್ಲಿರುವ ವನ್ಯಜೀವಿ ಘಟಕ ಬೆಂಗಳೂರಿನ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆ, ಶಿವಮೊಗ್ಗ, ಹಾಸನ, ಹೆಬ್ಬಾಳ, ಬೀದರ್‌ ಪಶು ವೈದ್ಯಕೀಯ ಕಾಲೇಜುಗಳಲ್ಲಿ 5 ವರ್ಷಗಳಿಗೂ ಮೀರಿ ನಿಯೋಜನೆಯಲ್ಲಿಯೇ ಮುಂದುವರೆದಿದ್ದಾರೆ. ಇವರಲ್ಲಿ 30 ಮಂದಿ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆ ಮತ್ತು ಕರ್ನಾಟಕ ಪಶು ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವುದು ತಿಳಿದು ಬಂದಿದೆ.


ಸರ್ಕಾರದ ಒಂದು ಇಲಾಖೆಯಿಂದ ಮತ್ತೊಂದು ಇಲಾಖೆ ಅಥವಾ ನಿಗಮ, ಮಂಡಳಿ, ವಿಶ್ವವಿದ್ಯಾಲಯದಲ್ಲಿ 5 ವರ್ಷ ಅವಧಿಯವರೆಗೆ ಮಾತ್ರ ನಿಯೋಜನೆಯಲ್ಲಿ ಕಾರ್ಯನಿರ್ವಹಿಸಲು ಅವಕಾಶವಿದೆ. ಆದರೆ ಪಶು ವೈದ್ಯಕೀಯ ಕಾಲೇಜು ಮತ್ತು ಪಶು ವಿಜ್ಞಾನಗಳ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಕಳೆದ 5 ವರ್ಷಗಳಿಗೂ ಮೀರಿ ನಿಯೋಜನೆಯಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಗೊತ್ತಾಗಿದೆ.


ಈ ವೈದ್ಯಾಧಿಕಾರಿಗಳ ಸೇವೆಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಮಾತೃ ಇಲಾಖೆಯಾಗಿರುವ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಗೆ ಹಿಂಪಡೆಯಲು 2020ರ ಜೂನ್‌ 9ರಂದು ಇಲಾಖೆ ಆದೇಶ ಹೊರಡಿಸಿತ್ತು. ಪಶು ವೈದ್ಯಾಧಿಕಾರಿಗಳ ತೀವ್ರ ಕೊರತೆಯಿಂದಾಗಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ ಹಲವು ಯೋಜನೆಗಳು ಮುಗ್ಗರಿಸಿ ಬಿದ್ದಿವೆ.


ತಳವೂರಿರುವರ ಪಟ್ಟಿ


ಮುಖ್ಯ ಪಶುವೈದ್ಯಾಧಿಕಾರಿ ಡಾ ರವಿ ಸಾಲಿಗೌಡ(ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ) ಡಾ ಡಿ ಎನ್‌ ನಾಗರಾಜು(ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶ), ಡಾ ವಿನಯ್‌ ಎಸ್‌ (ವನ್ಯಜೀವಿ ಘಟಕ, ಶಿವಮೊಗ್ಗ), ಡಾ ಎಂ ಎಲ್‌ ಕ್ಷಮಾ(ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ), ಡಾ ವಸಂತಕುಮಾರ್‌ ಶೆಟ್ಟಿ, ಡಾ ಗಣೇಶ್‌ ಹೆಗಡೆ, ಡಾ ರಾಜಶೇಖರ ಬಿ , ಡಾ ಲೋಹಿತ್‌ ಟಿ ಎಸ್‌, ಡಾ ಪ್ರವೀಣ್‌ಕುಮಾರ್ ಜಿ ಆರ್‌, ಡಾ ರಂಗನಾಥ್‌ ಎಸ್‌, ಡಾ ಸುಮಂತ್‌ಕುಮಾರ್‌ ಆರ್‌, ಡಾ ಶ್ರೀವತ್ಸ ವಿ, ಡಾ ರಶ್ಮಿ ಎಸ್‌, ಡಾ ಮಂಜುನಾಥ್‌ ವಿ., ಡಾ ಶಿವಮೂರ್ತಿ ವಕಾರೆ, ಡಾ ಕೆ ಪಿ ಮಂಜುನಾಥ, ಇವರು ಬೆಂಗಳೂರಿನ ಪಶು ಆರೋಗ್ಯ ಜೈವಿಕ ಸಂಸ್ಥೆಯಲ್ಲಿ ನಿಯೋಜನೆ ಮೇರೆಗೆ ಕಳೆದ 5 ವರ್ಷಗಳಿಗೂ ಮೀರಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಗೊತ್ತಾಗಿದೆ.


ಅದೇ ರೀತಿ ಡಾ ಎಸ್‌ ಸುಂದರೇಶನ್‌,ಡಾ ಬಿ ಎ ದೇಸಾಯಿ( ಪಶು ವೈದ್ಯಕೀಯ ಕಾಲೇಜು ಶಿವಮೊಗ್ಗ),ಡಾ ಕೆ ಎಲ್‌ ಫಣಿರಾಜ್‌, ಡಾ ಸಿ ಆರ್‌ ಗೋಪಿನಾಥ, ಡಾ ಪಿ ಎಂ ಗುರುರಾಜ ( ಪಶು ವೈದ್ಯಕೀಯ ಕಾಲೇಜು ಬೆಂಗಳೂರು), ಡಾ ಕೆ ಎನ್‌ ಪವನಕುಮಾರ್‌, ಡಾ ಚಂದ್ರಶೇಖರ್‌, ಡಾ ಚಂದ್ರೇಗೌಡ, ಡಾ ಅಶ್ವಥನಾರಾಯಣಪ್ಪ, ಡಾ ಎಂ ಎ ಸುನೀಲಕುಮಾರ, ಡಾ ಶಂಭುಲಿಂಗಪ್ಪ ಬಡ್ಡಿ ಅವರು ಹಾಸನದಲ್ಲಿರುವ ಪಶು ವೈದ್ಯಕೀಯ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ, ಡಾ ಮುತ್ತುರಾಜ್ ಪಚ್ಚನ್ನವರ, ಡಾ ಸುದರ್ಶನ ಗಡದ, ಡಾ ನಾಗಪ್ಪ ಭಾನುವಳ್ಳಿ, ಡಾ ಕೆ ಪಿ ಹರೀಶಕುಮಾರ, ಡಾ ಜಿ ಚಂದ್ರಶೇಖರ್, ಡಾ ಎಂ ಭರತಭೂಷಣ, ಡಾ ಎಂ ನವೀನ್‌, ಡಾ ವೈ ಮಧುರಾ ಶಿವಮೊಗ್ಗದಲ್ಲಿರುವ ಪಶು ವೈದ್ಯಕೀಯ ಕಾಲೇಜಿನಲ್ಲಿ ಮತ್ತು ಡಾ ಅನಂತರಾವ್ ದೇಸಾಯಿ(ಬೀದರ್‌ನ ಪಶುವೈದ್ಯಕೀಯ ಕಾಲೇಜು) ಕಾರ್ಯನಿರ್ವಹಿಸುತ್ತಿರುವುದು ಸರ್ಕಾರದ ಆದೇಶದಿಂದ ತಿಳಿದು ಬಂದಿದೆ.


5 ವರ್ಷಗಳಿಗೂ ಮೀರಿ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಅಧಿಕಾರಿಗಳಿಗೆ ಒಂದೊಮ್ಮೆ ಹಿಂಬಾಗಿಲಿನ ಮೂಲಕ ಶಾಶ್ವತವಾಗಿ ವಿಲೀನಗೊಂಡಿದ್ದೇ ಆದಲ್ಲಿ ನಿವೃತ್ತಿ ಆಗುವವರೆಗೂ ಈ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯುವುದಿಲ್ಲ. ಹೀಗಾಗಿ ಮೀಸಲಾತಿ ನೀತಿಗೂ ಭಾರೀ ಪೆಟ್ಟು ಬೀಳಲಿದೆ ಎಂದು ಹೇಳಲಾಗಿದೆ.


ಅಲ್ಲದೆ, ಪಶು ವೈದ್ಯಕೀಯ ವಿಜ್ಞಾನಗಳ ಪದವೀಧರರಿಗೆ ವಿಶ್ವವಿದ್ಯಾಲಯ ಮತ್ತು ಪಶು ವೈದ್ಯಕೀಯ ಕಾಲೇಜುಗಳಲ್ಲಿ ಉದ್ಯೋಗ ಅವಕಾಶಗಳಿಂದ ವಂಚಿತರಾಗಲಿದ್ದಾರೆ. ಇದರಿಂದ ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದ ಪದವೀಧರರಿಗೆ ಅನ್ಯಾಯವಾಗಲಿದೆ ಎಂಬ ಅರೋಪವೂ ಕೇಳಿ ಬಂದಿದೆ.

Your generous support will help us remain independent and work without fear.

Latest News

Related Posts