ಸಭಾಧ್ಯಕ್ಷರ ಪೀಠಕ್ಕೆ ಧಕ್ಕೆ; ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಸ್ಪೀಕರ್‌ ಕಾಗೇರಿ ಪತ್ರ?

ಬೆಂಗಳೂರು; ಪಿಪಿಇ ಕಿಟ್‌, ಸ್ಯಾನಿಟೈಸರ್‌ ಸೇರಿದಂತೆ ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿನ ಅವ್ಯವಹಾರಗಳ ತನಿಖೆಗೆ ತಡೆ ನೀಡಿ ವಿವಾದಕ್ಕೆ ಕಾರಣವಾಗಿದ್ದ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪ್ರಕರಣವನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಅಂಗಳಕ್ಕೆ ಕೊಂಡೊಯ್ದಿದ್ದಾರೆ.


ಕರ್ನಾಟಕ ರಾಷ್ಟ್ರ ಸಮಿತಿ ನೀಡಿದ್ದ ದೂರನ್ನಾಧರಿಸಿ ಚರ್ಚೆಗೆ ಕೈಗೆತ್ತಿಕೊಂಡಿದ್ದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಎಚ್‌ ಕೆ ಪಾಟೀಲ್‌ ಅವರ ಕಾರ್ಯವೈಖರಿ ಕುರಿತು ತಕರಾರು ತೆಗೆದಿದ್ದ ಕಾಗೇರಿ ಅವರು ಸಿದ್ದರಾಮಯ್ಯ ಅವರಿಗೆ 2020ರ ಜೂನ್‌ 19ರ ಶುಕ್ರವಾರದಂದು ಮುಚ್ಚಿದ ಲಕೋಟೆಯಲ್ಲಿ ಪತ್ರವನ್ನು ಕಳಿಸಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ಪತ್ರ ಈಗಾಗಲೇ ಸಿದ್ದರಾಮಯ್ಯ ಅವರ ಕೈ ಸೇರಿದೆ. ಈ ಪತ್ರಕ್ಕೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲ ಎಂದು ಗೊತ್ತಾಗಿದೆ. ಪತ್ರ ತಲುಪಿದೆ ಎಂದು ವಿಪಕ್ಷ ನಾಯಕರ ಕಚೇರಿಯೂ ‘ದಿ ಫೈಲ್‌’ಗೆ ಖಚಿತಪಡಿಸಿದೆ.


ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಎಚ್‌ ಕೆ ಪಾಟೀಲ್‌ ಅವರ ಕಾರ್ಯವೈಖರಿಯಿಂದ ವಿಧಾನಸಭಾಧ್ಯಕ್ಷರ ಪೀಠದ ಘನತೆಗೆ ಧಕ್ಕೆ ಬಂದಿದೆ. ಅಲ್ಲದೆ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿಯೂ ಈ ಬಗ್ಗೆ ವರದಿಯಾಗಿದೆ. ಇದರಿಂದ ಮುಜುಗರವಾಗುತ್ತಿದೆ. ಹೀಗಾಗಿ ಪ್ರಕರಣದಲ್ಲಿ ಮಧ್ಯ ಪ್ರವೇಶಿಸುವ ಮೂಲಕ ಅವರಿಗೆ ತಿಳಿ ಹೇಳಿ ಎಂದು ಸ್ಪೀಕರ್‌ ಕಾಗೇರಿ ಅವರು ಪತ್ರ ಮುಖೇನ ಹೇಳಿದ್ದಾರೆ ಎಂದು ಸ್ಪೀಕರ್ ಕಚೇರಿ ಮೂಲಗಳು ತಿಳಿಸಿವೆ.


ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಅಧ್ಯಕ್ಷ ಎಚ್‌.ಕೆ.ಪಾಟೀಲ್‌ ಬರೆದ ಪತ್ರಕ್ಕೆ ಸ್ಪೀಕರ್‌ ಸ್ಪಂದಿಸದಿರುವ ಹಿನ್ನೆಲೆಯಲ್ಲಿ ಸಮಿತಿ ಸಭೆಯಲ್ಲಿಯೂ ಈ ಬಗ್ಗೆ ಗಂಭೀರ ಚರ್ಚೆಯಾಗಿತ್ತು. ಜತೆಗೆ ಕೋವಿಡ್‌ ನಿಯಂತ್ರಣ ಸಂಬಂಧದ ಉಪಕರಣ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಕುರಿತು ಬಂದಿರುವ ದೂರು ಹಾಗೂ ಪುರಾವೆ ಸಹಿತ ಸ್ಪೀಕರ್‌ ಅವರಿಗೆ ಮತ್ತೊಂದು ಪತ್ರ ಬರೆದಿತ್ತು.


‘ಸದನ ಸಮಿತಿ ಕಾರ್ಯಭಾರಕ್ಕೆ ಇಲ್ಲಿಯವರೆಗೆ ಅಡ್ಡಿಯಾಗಿರಲಿಲ್ಲ. ಇದೇ ಮೊದಲ ಬಾರಿಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಡ್ಡಿಪಡಿಸಿದ್ದು, ಪಿಪಿಇ ಉಪಕರಣಗಳ ಖರೀದಿಯಲ್ಲಿನ ಅವ್ಯವಹಾರ ತನಿಖೆಗೆ ತಡೆ ನೀಡಿದ ಕಾರಣ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧವೇ ಹಕ್ಕುಚ್ಯುತಿ ಮಂಡನೆಗೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ನಿರ್ಧರಿಸಿದೆ,’ ಎಂದು ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್ ಹೇಳಿದ್ದರು.


ಅವ್ಯವಹಾರಗಳ ಬಗ್ಗೆ ತನಿಖೆ ಮಾಡಲು ಸ್ವಾತಂತ್ರ್ಯ ದೊರೆಯುತ್ತಿಲ್ಲ ಎಂದು ಎಚ್‌ ಕೆ ಪಾಟೀಲ್‌ ಅವರು ಆರೋಪಿಸಿದ್ದರಲ್ಲದೆ, ಇದರಿಂದ ಕರ್ತವ್ಯ ನಿರ್ವಹಣೆಗೆ ಚ್ಯುತಿಯಾಗಿದೆ ಎಂದು ಸ್ಪೀಕರ್‌ ಅವರಿಗೆ ಪತ್ರ ಬರೆದಿದ್ದರು. ಆ ನಂತರ ನಡೆದ ಸಮಿತಿ ಸಭೆಯಲ್ಲಿ ಬಿಜೆಪಿ ಸದಸ್ಯರು ಇದಕ್ಕೆ ಆಕ್ಷೇಪ ಎತ್ತಿದ್ದನ್ನು ಸ್ಮರಿಸಬಹುದು.


ಪಿಪಿಇ ಕಿಟ್ ಖರೀದಿ ಸೇರಿದಂತೆ ವೈದ್ಯಕೀಯ ಸಲಕರಣೆಗಳ ಖರೀದಿ ಪ್ರಕ್ರಿಯೆಗಳ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯಿಂದ ವರದಿ ಸಲ್ಲಿಸಲು ಸಮಿತಿ ಸೂಚಿಸಿತ್ತು. ಆದರೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ನಿಗದಿತ ಅವಧಿಯಲ್ಲಿ ವರದಿಯನ್ನು ಸಲ್ಲಿಸದ ಕಾರಣ, ವರದಿ ಸಲ್ಲಿಸಬೇಕು ಎಂದು ಮುಖ್ಯ ಕಾರ್ಯದರ್ಶಿಗೆ ಸಮಿತಿ ಆದೇಶಿಸಿತ್ತು.


500 ಎಂ.ಎಲ್ ಸ್ಯಾನಿಟೈಸರ್ ಗೆ 90 ರೂ.ಗೆ ಟೆಂಡರ್ ಕರೆದು ನಂತರ ಇದೇ ಟೆಂಡರ್ ಅನ್ನು ರದ್ದು ಮಾಡಿ ಬಳಿಕ ಇದನ್ನೇ 250 ರೂ.ಗೆ ಖರೀದಿ ಮಾಡಲಾಗಿತ್ತು. ವೆಂಟಿಲೇಟರ್‌, ಮಾಸ್ಕ್‌, ಡಯಾಲಿಸಿಸ್‌ ಉಪಕರಣಗಳ ಖರೀದಿಯಲ್ಲಿಯೂ ನಡೆದಿದೆ ಎನ್ನಲಾಗಿರುವ ಅಕ್ರಮಗಳ ಕುರಿತು ಪ್ರಶ್ನಿಸಿದ್ದ ಎಚ್‌ ಕೆ ಪಾಟೀಲ್‌ ಅವರು, ಖರೀದಿ ಮೊತ್ತವನ್ನು ಸಾರ್ವಜನಿಕರ ಮುಂದೆ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದ್ದರು.


ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಜೂನ್‌ 2 ರಂದು ನಡೆದಿದ್ದ ಸಮಿತಿ ಸಭೆಯಲ್ಲಿ ಭಾಗಿಯಾಗಿದ್ದ ಬಿಜೆಪಿ ಶಾಸಕರು ”ರಾಜಕೀಯ ದುರುದ್ದೇಶದಿಂದ ಈ ಬಗ್ಗೆ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದೀರಿ. ಸ್ಪೀಕರ್‌ ವಿರುದ್ಧ ಹಕ್ಕುಚ್ಯುತಿ ಮಂಡಿಸುವ ನಿಮ್ಮ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಬೇಕಾಗುತ್ತದೆ” ಎಂದು ಆಕ್ಷೇಪಿಸಿದ್ದರೆಂದು ಹೇಳಲಾಗಿತ್ತು.


ಬಳಿಕ ಸ್ಪೀಕರ್‌ ಭೇಟಿಯಾಗಿ ಈ ಬಗ್ಗೆ ಚರ್ಚಿಸಬೇಕು ಎಂಬ ನಿಲುವಿಗೆ ಬರಲಾಗಿತ್ತು. ಇದರ ಬೆನ್ನಿಗೇ ಭೇಟಿಗೆ ಸಮಯ ಕೋರಿ ಸ್ಪೀಕರ್‌ ಅವರಿಗೆ ಪತ್ರ ಬರೆಯಲಾಗಿತ್ತು. ಈ ಪತ್ರಕ್ಕೆ ಸ್ಪೀಕರ್‌ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.


ಈ ಕುರಿತು ‘ದಿ ಫೈಲ್‌’ಗೆ ಪ್ರತಿಕ್ರಿಯಿಸಿರುವ ಕರ್ನಾಟಕ ರಾಷ್ಟ್ರಸಮಿತಿಯ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ ‘ಸಭಾಧ್ಯಕ್ಷರ ಪೀಠದ ಘನತೆಗೆ ಧಕ್ಕೆ ಬಂದಿದೆ ಎಂದು ಸಭಾಧ್ಯಕ್ಷರೇ ಪತ್ರ ಬರೆದಿದ್ದಾರೆ ಎನ್ನುವುದರ ವಿಚಾರವಾಗಿ ಹೇಳುವುದಾದರೆ ದೊಡ್ಡಮಟ್ಟದಲ್ಲೇ ಧಕ್ಕೆ ಆಗಿದೆ ಮತ್ತು ಅದಕ್ಕೆ ಸಭಾಧ್ಯಕ್ಷರೇ ಜವಾಬ್ದಾರರಾಗಿದ್ದಾರೆ. ನಾನು ಈಗಾಗಲೇ ಸಭಾಧ್ಯಕ್ಷರಿಗೆ ಬರೆದಿರವ ಪತ್ರದಲ್ಲಿ ಭ್ರಷ್ಟರನ್ನು ರಕ್ಷಿಸುವ ಉದ್ದೇಶವಿಲ್ಲದೆ ನೀವು ಪಿಎಸಿ ಪರಿಶೀಲನೆಗೆ ಅನುಮತಿ ನೀಡಿಲ್ಲ. ನೀವು ಸಭಾಧ್ಯಕ್ಷರ ಹುದ್ದೆಯ ಘನತೆಯನ್ನು ಹಾಳು ಮಾಡಿರುವುದರ ಹಿಂದೆ ರಾಜೀನಾಮೆ ಆಗ್ರಹಿಸಿದ್ದೆ. ನಮ್ಮ ಪತ್ರಕ್ಕೆ ಯಾವುದೇ ಉತ್ತರ ನೀಡದ ಸಭಾಧ್ಯಕ್ಷರು ವಿಪಕ್ಷ ನಾಯಕರ ಹತ್ತಿರ ಆಲಾಪನೆ ಮಾಡುವುದು ಶೋಚನೀಯ,’ ಎಂದು ಹೇಳಿದ್ದಾರೆ.

the fil favicon

SUPPORT THE FILE

Latest News

Related Posts