ಹೊಸ ಪದ್ಧತಿ; ರಾಷ್ಟ್ರೀಯ ಭಾವನೆ ಹೆಸರಿನಲ್ಲಿ ‘ಜೈ ಹಿಂದ್‌’ ಹೇಳಲು ಪೊಲೀಸರಿಗೆ ವಿಚಿತ್ರ ಸೂಚನೆ

ಬೆಂಗಳೂರು; ಹಿರಿಯ ಅಧಿಕಾರಿಗಳಿಗೆ ಸೆಲ್ಯೂಟ್ ಮಾಡಿದ ನಂತರ ಕೊನೆಯಲ್ಲಿ ‘ಜೈ ಹಿಂದ್’ ಹೇಳಬೇಕೆಂದು ಬೆಂಗಳೂರಿನ ಎಚ್‌ಎಎಲ್‌ ಠಾಣೆ ಇನ್‌ಸ್ಪೆಕ್ಟರ್, ತಮ್ಮ ಠಾಣೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ವಿಚಿತ್ರವಾದ ಸೂಚನೆ ನೀಡಿದ್ದಾರೆ.


ರಾಜ್ಯದ ಎಲ್ಲಾ ಪೊಲೀಸ್‌ ಠಾಣೆಗಳಿಗೆ ಈ ಸೂಚನೆ ಹೊರಡಿಸಿರುವ ಬಗ್ಗೆ ತಿಳಿದು ಬಂದಿಲ್ಲವಾದರೂ ಎಚ್‌ಎಎಲ್‌ ಠಾಣೆ ಇನ್ಸ್‌ಪೆಕ್ಟರ್‌ ಅವರು ತಮ್ಮ ಹಂತದಲ್ಲೇ ಇಂತಹದ್ದೊಂದು ಜ್ಞಾಪನಾ ಪತ್ರ ಹೊರಡಿಸಿದ್ದಾರೆ. ಇದರ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

2020ರ ಜೂನ್ 5ರಂದು ಹೊರಡಿಸಿರುವ ಜ್ಞಾಪನಾ ಪತ್ರದಲ್ಲಿ ಠಾಣೆಯ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿ ಈ ಸೂಚನೆಯನ್ನು ಪಾಲಿಸಬೇಕು ಎಂದು ಆದೇಶಿಸಿದ್ದಾರೆ. ಆದರೆ ಈ ಸೂಚನೆಯನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ, ಒಳಾಡಳಿತ ಇಲಾಖೆ ಮತ್ತು ಬೆಂಗಳೂರು ಪೊಲೀಸ್‌ ಕಮಿಷನರ್‌ ಭಾಸ್ಕರರಾವ್‌ ಹೊರಡಿಸಿಲ್ಲ.


‘ಹಿರಿಯ ಅಧಿಕಾರಿಗಳಿಗೆ ಸೆಲ್ಯೂಟ್ ಮಾಡಿ ರಾಷ್ಟ್ರೀಯ ಭಾವನೆ ಅಂಗವಾಗಿ ಜೈ ಹಿಂದ್ ಹೇಳುವ ಹೊಸ ಪದ್ಧತಿಯನ್ನು ರೂಢಿಸಿಕೊಳ್ಳಲು ಈ ಮೂಲಕ ಸೂಚಿಸಲಾಗಿದೆ. ನಿಮ್ಮಿಂದ (ಠಾಣೆ ಅಧಿಕಾರಿ ಹಾಗೂ ಸಿಬ್ಬಂದಿ) ಮೇಲಿನ ರ‍್ಯಾಂಕ್ ಅಧಿಕಾರಿಗಳಿಗೆ ಸೆಲ್ಯೂಟ್ ಮಾಡಿದ ನಂತರ ಜೈ ಹಿಂದ್ ಹೇಳಲು ಸೂಚಿಸಲಾಗಿದೆ’ ಎಂದು ಎಚ್‌ಎಎಲ್‌ ಠಾಣೆ ಇನ್ಸ್‌ಪೆಕ್ಟರ್‌ ಜ್ಞಾಪನ ಪತ್ರದಲ್ಲಿ ಸೂಚಿಸಿದ್ದಾರೆ.


ಮಧ್ಯ ಪ್ರದೇಶದ ಸರಕಾರಿ ಶಾಲೆಗಳಲ್ಲಿ ಶಿಕ್ಷಕರು ಹಾಜರಿ ಕರೆಯುವಾಗ ‘ಜೈ ಹಿಂದ್‌’ ಎಂದು ಕೂಗಬೇಕು ಎಂದು ವಿಚಿತ್ರ ನೋಟಿಸ್‌ ಜಾರಿ ಮಾಡಲಾಗಿತ್ತು. ರಾಜ್ಯ ಸರಕಾರ ನಡೆಸುವ ಎಲ್ಲ ಶಾಲೆಗಳಲ್ಲಿ ಕಡ್ಡಾಯ ಆದೇಶ ಹೊರಡಿಸಿತ್ತು.  2 ವರ್ಷಗಳ ಹಿಂದೆಯೇ ಶಾಲೆಯ ವಿದ್ಯಾರ್ಥಿಗಳು ಹಾಜರಾತಿ ಹೇಳುವಾಗ `ಯಸ್ ಸಾರ್’ ಬದಲಿಗೆ `ಜೈ ಹಿಂದ್’ ಎಂದು ಹೇಳಬೇಕು ಎಂದು ಅಲ್ಲಿನ ಶಿಕ್ಷಕ ಕುನ್ವಾರ್ ವಿಜಯ್ ಶಾ ಕೂಡ ಸೂಚಿಸಿದ್ದನ್ನು ಸ್ಮರಿಸಬಹುದು.


ಪ್ರಾಯೋಗಿಕವಾಗಿ ಈ ಬದಲಾವಣೆ ಸತ್ನಾ ಜಿಲ್ಲೆಯ ಶಾಲೆಗಳಲ್ಲಿ ಮಾತ್ರ ಜಾರಿ ಮಾಡಲಾಗಿತ್ತು. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಶಾಲೆಗಳಲ್ಲೂ ಜೈ ಹಿಂದ್ ಹೇಳುವುದನ್ನು ಕಡ್ಡಾಯ ಮಾಡಲಾಗುವುದು ಎಂದು ಹೇಳಿದ್ದರು.
ಮಕ್ಕಳು ದೇಶದ ಭವಿಷ್ಯ. ಅವರಲ್ಲಿ ದೇಶದ ಮೇಲೆ ಪ್ರೀತಿ ಗೌರವ ಹಾಗೂ ಭಕ್ತಿಯನ್ನು ಬೆಳಸಬೇಕು. ಆದ್ದರಿಂದ ಜೈ ಹಿಂದ್ ಹೇಳಬೇಕು ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು.


ಅಲ್ಲದೆ ಏರ್ ಇಂಡಿಯಾ ಸಂಸ್ಥೆಯು ತನ್ನ ವಿಮಾನ ಸೇವಾ ಸಿಬ್ಬಂದಿಗೆ ವಿಮಾನದಲ್ಲಿ ಪ್ರಯಾಣಿಕರಿಗೆ ಸೂಚನೆಗಳ ನಂತರ ‘ಜೈ ಹಿಂದ್’ ಎಂದು ಹೇಳುವಂತೆ ಒಂದು ವರ್ಷದ ಹಿಂದೆಯೇ ಆದೇಶಿಸಿತ್ತು. ಏರ್‌ ಇಂಡಿಯಾ ನಿರ್ದೇಶಕ ಅಮಿತಾಬ್ ಸಿಂಗ್ ಅವರು ಈ ಆದೇಶ ಹೊರಡಿಸಿದ್ದು, ವಿಮಾನ ಸೇವಾ ಸಿಬ್ಬಂದಿ ಮಾತ್ರವೇ ಅಲ್ಲದೆ ಕಾಕ್‌ಪೀಟ್‌ನಿಂದ ಹೊರಡುವ ಸೂಚನೆಗಳ ನಂತರವೂ ‘ಜೈ ಹಿಂದ್’ ಎಂದು ಹೇಳುವಂತೆ ಆದೇಶಿಸಲಾಗಿತ್ತು.


2016 ರಲ್ಲಿ ಏರ್‌ ಇಂಡಿಯಾದ ಚೇರ್‌ಮನ್ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಅಶ್ವಿನಿ ಲೋಹಾನಿ ಅವರು ಇದೇ ರೀತಿಯ ಆದೇಶವನ್ನು ಹೊರಡಿಸಿದ್ದರು. ಆದರೆ ಅದು ವಿವಿಧ ಕಾರಣಗಳಿಗಾಗಿ ಪಾಲಿಸಲಾಗಿರಲಿಲ್ಲ. 2019ರಲ್ಲಿ ಪುನಃ ಆದೇಶ ಹೊರಡಿಸಲಾಗಿತ್ತು.


ವಿಮಾನದ ಕ್ಯಾಪ್ಟನ್, ಸೇವಾ ಸಿಬ್ಬಂದಿಗಳು ಪ್ರಯಾಣಿಕರ ಜೊತೆ ಸದಾ ಪರಸ್ಪರ ಸಂಪರ್ಕ ಹೊಂದಿರಲೇಬೇಕಾಗಿರುತ್ತದೆ. ಪ್ರತಿ ಸೂಚನೆಯ ನಂತರ ಜೈ ಹಿಂದ್ ಹೇಳುವುದರಿಂದ ಉತ್ತಮ ವಾತಾವರಣ ವಿಮಾನದಲ್ಲಿ ಉಂಟಾಗುತ್ತದೆ. ಪ್ರಯಾಣಿಕರ, ವಿಮಾನ ಸಿಬ್ಬಂದಿಯ ನಡುವೆ ಬಂಧ ಏರ್ಪಡುತ್ತದೆ ಎಂದು ಏರ್‌ ಇಂಡಿಯಾ ಹೇಳಿತ್ತು.

SUPPORT THE FILE

Latest News

Related Posts