ಆರ್ಥಿಕ ಮುಗ್ಗಟ್ಟಿನಲ್ಲೂ ಅನುದಾನ ರಹಿತ ಸಂಸ್ಕೃತ ಪಾಠಶಾಲೆಗಳಿಗೆ ಅನುದಾನ?

ಬೆಂಗಳೂರು; ಹಣಕಾಸಿನ ಕೊರತೆಯನ್ನು ನೆಪವಾಗಿಟ್ಟುಕೊಂಡು ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ, ಪ್ರೋತ್ಸಾಹ ಧನ, ವಿದ್ಯಾರ್ಥಿ ವೇತನವನ್ನು ಸ್ಥಗಿತಗೊಳಿಸಿದ್ದ ರಾಜ್ಯ ಬಿಜೆಪಿ ಸರ್ಕಾರ, ಅನುದಾನರಹಿತ ಸಂಸ್ಕೃತ ಪಾಠಶಾಲೆಗಳಿಗೆ ಅನುದಾನ ನೀಡಲು ಚಿಂತನೆ ನಡೆಸಿದೆ.


ರಾಜ್ಯದಲ್ಲಿ ಈಗಾಗಲೇ ಇರುವ ಸಂಸ್ಕೃತ ಪಾಠಶಾಲೆಗಳ ಪಟ್ಟಿಗೆ ಹೊಸದಾಗಿ 47 ಪಾಠಶಾಲೆಗಳನ್ನು ಸೇರ್ಪಡೆ ಮಾಡಿ ಅನುದಾನ ಒದಗಿಸಲು ಸಂಸ್ಕೃತ ವಿಶ್ವವಿದ್ಯಾಲಯ ಸಲ್ಲಿಸಿರುವ ಪ್ರಸ್ತಾವನೆಗೆ ಸರ್ಕಾರ ಹಸಿರು ನಿಶಾನೆ ತೋರಿಸಿದೆ ಎಂದು ತಿಳಿದು ಬಂದಿದೆ.
ಸಂಸ್ಕೃತ ಪಾಠಶಾಲೆಗಳಿಗೆ ಒದಗಿಸುತ್ತಿರುವ ಅನುದಾನಕ್ಕೆ ಸಂಬಂಧಿಸಿದಂತೆ ವಿಧಾನಪರಿಷತ್‌ ಸದಸ್ಯ ಅ ದೇವೇಗೌಡ ಅವರು ಕೇಳಿದ್ದ ಚುಕ್ಕೆ ರಹಿತ ಪ್ರಶ್ನೆಗೆ ಉತ್ತರಿಸಿರುವ ಸಂಸ್ಕೃತ ವಿಶ್ವವಿದ್ಯಾಲಯ, ಅನುದಾನ ರಹಿತ ಸಂಸ್ಕೃತ ಪಾಠಶಾಲೆಗಳಿಗೆ ಅನುದಾನ ಒದಗಿಸಲು ಚಿಂತನೆ ನಡೆಸಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ 2020ರ ಮಾರ್ಚ್‌ 13ರಂದು ಪತ್ರ ಬರೆದಿದೆ. ಈ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ರಾಜ್ಯದಲ್ಲಿ ಒಟ್ಟು 277 ಅನುದಾನಿತ ಸಂಸ್ಕೃತ ಪಾಠಶಾಲೆಗಳಿವೆ. 349 ಅನುದಾನ ರಹಿತ ಸಂಸ್ಕೃತ ಪಾಠಶಾಲೆ ಸೇರಿದಂತೆ ಒಟ್ಟು 626 ಪಾಠಶಾಲೆಗಳಿರುವುದು ಪತ್ರದಿಂದ ಗೊತ್ತಾಗಿದೆ. ಅನುದಾನ ರಹಿತ ಪಟ್ಟಿಗೆ ಹೊಸದಾಗಿ 47 ಪಾಠಶಾಲೆಗಳನ್ನು ಸೇರಿಸಿರುವುದು ತಿಳಿದು ಬಂದಿದೆ.


ಸಂಪನ್ಮೂಲ ಸಂಗ್ರಹ ಸ್ಥಗಿತದಿಂದಾಗಿ ಹಲವು ಯೋಜನೆಗಳಿಗೆ ನೀಡಲಾಗುತ್ತಿದ್ದ ಅನುದಾನದಲ್ಲಿ ಕಡಿತ ಮಾಡಲಾಗಿತ್ತು. ಅದರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೂ ಅನುದಾನ ಕಡಿತ ಮಾಡಲು ಸರ್ಕಾರ ಕೈಗೊಂಡಿದ್ದ ನಿರ್ಧಾರವು, ಕನ್ನಡ ಮಾಧ್ಯಮದಲ್ಲಿ 10 ತರಗತಿಯಲ್ಲಿ ಉತ್ತಮ ಸಾಧನೆ ತೋರಿರುವ ವಿದ್ಯಾರ್ಥಿಗಳ ಪ್ರೋತ್ಸಾಹ ಧನಕ್ಕೂ ಕತ್ತರಿ ಬಿದ್ದಿತ್ತು.
ಮೂಲತಃ ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪನೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಹೆಜ್ಜೆ ಹೆಜ್ಜೆಗೊಂದು ವಿಶ್ವವಿದ್ಯಾಲಯ ಸ್ಥಾಪಿಸಿರುವ ಸರ್ಕಾರ ಇದೀಗ ಅನುದಾನ ಒದಗಿಸಲು ಪರದಾಡುತ್ತಿದೆ.


ಅದರಲ್ಲೂ ಕೋವಿಡ್‌ 19ರ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ಲಾಕ್‌ಡೌನ್‌ನಿಂದಾಗಿ ಸಂಪನ್ಮೂಲ ಸಂಗ್ರಹ ಸ್ಥಗಿತದಿಂದಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿಯೇ ಚಿಂತಾಜನಕವಾಗಿದೆ. ಈ ಹೊತ್ತಿನಲ್ಲೇ ಅನುದಾನ ರಹಿತ ಸಂಸ್ಕೃತ ಪಾಠಶಾಲೆಗಳಿಗೆ ಅನುದಾನ ಒದಗಿಸಲು ಮುಂದಾಗಿರುವುದು ಸರ್ಕಾರ ತೀವ್ರ ವಿರೋಧವನ್ನು ಎದುರಿಸುವ ಸಾಧ್ಯತೆಗಳಿವೆ.


ರಾಜ್ಯ ಸರ್ಕಾರವು ವಾರ್ಷಿಕ ಅನುದಾನವನ್ನು ಕಡಿತ ಮಾಡಿದ ಪರಿಣಾಮ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ವಿವಿಧ ಪ್ರಶಸ್ತಿಗಳು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನವನ್ನು ಸ್ಥಗಿತ ಮಾಡಿದ್ದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು.

ಪ್ರತಿ ವರ್ಷ ಸರ್ಕಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ₹ 8 ಕೋಟಿ ಅನುದಾನ ನೀಡುತ್ತಿತ್ತು. ಆದರೆ, 2020–21ನೇ ಸಾಲಿನಲ್ಲಿ ಕೇವಲ ₹ 2 ಕೋಟಿ ಅನುದಾನ ನೀಡಿದೆ. ಇದರಿಂದ ಪ್ರಾಧಿಕಾರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತಲ್ಲದೆ, ನೀಡಲಾದ ಅನುದಾನವು ಸಿಬ್ಬಂದಿ ವೇತನ ಹಾಗೂ ಕಾರ್ಯಕ್ರಮಗಳಿಗೆ ಸರಿಹೋಗಲಿದೆ.

 

ಹಾಗಾಗಿ ಸರ್ವಸದಸ್ಯರ ಸಭೆಯಲ್ಲಿ ‘ಕನ್ನಡ ಮಾಧ್ಯಮ ಪ್ರಶಸ್ತಿ’, ‘ನ್ಯಾಯಾಂಗದಲ್ಲಿ ಕನ್ನಡ ಪ್ರಶಸ್ತಿ’ ಹಾಗೂ ಹೊರ ರಾಜ್ಯಗಳ ವಿಶ್ವವಿದ್ಯಾಲಯಗಳಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವವರಿಗೆ ನೀಡುವ ವಿದ್ಯಾರ್ಥಿ ವೇತನವನ್ನು ಪ್ರಾಧಿಕಾರ ಸ್ಥಗಿತ ಮಾಡಲು ಸಮರ್ಥಿಸಿಕೊಂಡಿತ್ತು.


ಪ್ರಾಧಿಕಾರ ತನ್ನ ನಿರ್ಧಾರವನ್ನು ಬದಲಾಯಿಸಿ, ಪ್ರಶಸ್ತಿಗಳು ಹಾಗೂ ವಿದ್ಯಾರ್ಥಿ ವೇತನವನ್ನು ಮುಂದುವರೆಸಬೇಕೆಂಬ ಅಭಿಪ್ರಾಯ ಸಾಂಸ್ಕೃತಿಕ ವಲಯದಲ್ಲಿ ವ್ಯಕ್ತವಾಗಿತ್ತು. ಸರ್ಕಾರ ಅಗತ್ಯ ಅನುದಾನ ಬಿಡುಗಡೆ ಮಾಡಬೇಕೆಂಬ ಒತ್ತಾಯವೂ ಕೇಳಿಬಂದಿತ್ತು.


‘ಅನುದಾನವನ್ನು ಏಕಾಏಕಿ ಕಡಿತ ಮಾಡಿರುವುದರಿಂದ ನಾವು ಅಸಹಾಯಕರಾಗಿದ್ದೇವೆ. ₹ 2 ಕೋಟಿ ಅನುದಾನದಲ್ಲಿ ಸಿಬ್ಬಂದಿಯ ವೇತನಕ್ಕೆ ₹ 1 ಕೋಟಿ ಬೇಕು. ಪ್ರಶಸ್ತಿಗಳಿಗೆ ₹ 4.5 ಕೋಟಿ ಅನುದಾನ ಬೇಕಾಗುತ್ತದೆ. ಈ ಹಣವನ್ನು ಎಲ್ಲಿಂದ ತರುವುದು’ ಎಂದು ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಪ್ರಶ್ನಿಸಿದ್ದರು.


ಹೊರ ರಾಜ್ಯಗಳಲ್ಲಿ ಕನ್ನಡದಲ್ಲಿ ಎಂ.ಎ ವ್ಯಾಸಂಗ ಮಾಡುತ್ತಿರುವವರಲ್ಲಿ ಪ್ರತಿ ವರ್ಷ ನೂರಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಗುರುತಿಸಿ, ತಲಾ ₹ 25 ಸಾವಿರದಿಂದ ₹ 35 ಸಾವಿರದ ವರೆಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿತ್ತು.
ಕಳೆದ ವರ್ಷ 130 ವಿದ್ಯಾರ್ಥಿಗಳಿಂದ ₹ 80 ಲಕ್ಷ ಹಣ ನೀಡಲಾಗಿತ್ತಲ್ಲದೆ, ‘ನ್ಯಾಯಾಂಗದಲ್ಲಿ ಕನ್ನಡ ಪ್ರಶಸ್ತಿ’ಗೆ ಕಳೆದ ಸಾಲಿನಲ್ಲಿ ₹ 2.95 ಕೋಟಿ ವೆಚ್ಚವಾಗಿತ್ತು. 1,305 ವಿದ್ಯಾರ್ಥಿಗಳಿಗೆ ‘ಕನ್ನಡ ಮಾಧ್ಯಮ ಪ್ರಶಸ್ತಿ’ ನೀಡಿದ್ದ ಪ್ರಾಧಿಕಾರ, ಇದಕ್ಕೆ ₹ 1.80 ಕೋಟಿ ವೆಚ್ಚ ಮಾಡಿತ್ತು.

the fil favicon

SUPPORT THE FILE

Latest News

Related Posts