ಬಳಕೆಯಾಗದ ಹಣಕಾಸು ಆಯೋಗದ ಅನುದಾನ; 1,967 ಕೋಟಿ ರು. ಖರ್ಚೇ ಆಗಿಲ್ಲ

ಬೆಂಗಳೂರು; ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಅನುಷ್ಠಾನಗೊಳಿಸಲು 14ನೇ ಹಣಕಾಸು ಆಯೋಗ ಒದಗಿಸಿದ್ದ ಒಟ್ಟು ಅನುದಾನದ ಪೈಕಿ 1,967 ಕೋಟಿ ರು.ಗಳನ್ನು ರಾಜ್ಯ ಸರ್ಕಾರ ಖರ್ಚು ಮಾಡಿಲ್ಲ. ಖರ್ಚು ಮಾಡದೇ ಹಾಗೆ ಇಟ್ಟುಕೊಂಡಿರುವ ಈ ಹಣವನ್ನೀಗ ಗ್ರಾಮಗಳಲ್ಲಿ ಕ್ವಾರಂಟೈನ್‌ ಕೇಂದ್ರ ಮತ್ತು ಪಂಚಾಯ್ತಿ ಭವನಗಳನ್ನು ನಿರ್ಮಿಸಲು ಬಳಸಲು ಕೇಂದ್ರ ಸರ್ಕಾರ ಪತ್ರ ಬರೆದಿದೆ.


14ನೇ ಹಣಕಾಸು ಆಯೋಗದಡಿ ಸಾವಿರಾರು ಕೋಟಿ ರು. ಅನುದಾನವಿದ್ದರೂ ಅದನ್ನು ಬಳಸಿಕೊಳ್ಳಬೇಕಿದ್ದ ಅಧಿಕಾರಿಗಳು, ಯಾವುದೇ ಕ್ರಿಯಾ ಯೋಜನೆ ರೂಪಿಸದಿರುವುದೇ ಬಳಕೆ ಆಗದಿರಲು ಮೂಲ ಕಾರಣ. ದೇಶದ ಯಾವ ರಾಜ್ಯಗಳೂ 14ನೇ ಹಣಕಾಸು ಆಯೋಗದಡಿ ಒದಗಿಸಿರುವ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಂಡಿಲ್ಲ. ಅನುದಾನ ಬಳಕೆ ಸಂಬಂಧ ಕ್ರಿಯಾ ಯೋಜನೆ ರೂಪಿಸದ ಅಧಿಕಾರಿಗಳ ವಿರುದ್ಧ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈವರೆವಿಗೂ ಯಾವ ಕ್ರಮವನ್ನೂ ಕೈಗೊಂಡಿಲ್ಲ.


ಕರ್ನಾಟಕ ಸೇರಿದಂತೆ ದೇಶದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 2020ರ ಏಪ್ರಿಲ್‌ 1ರ ಅಂತ್ಯಕ್ಕೆ ಒಟ್ಟು 29,422 ಕೋಟಿ ರು.ಗಳನ್ನು ಖರ್ಚು ಮಾಡಿಲ್ಲ. ಕೊರೊನಾ ವೈರಸ್‌ ಹರಡುವುದನ್ನು ತಡೆಯುವ ಗ್ರಾ.ಪಂ.ಗಳ ಪ್ರಯತ್ನಗಳಿಗೆ ಇನ್ನಷ್ಟು ಬಲ ನೀಡಲು 14ನೇ ಹಣಕಾಸು ಆಯೋಗದ ಅನುದಾನ ಬಳಸಿಕೊಳ್ಳಲು ಅವಕಾಶ ಮಾಡಿಕೊಟ್ಟಿರುವ ಬೆನ್ನಲ್ಲೇ ದೇಶದಲ್ಲಿ 29,422 ಕೋಟಿ ರು. ಬಳಸದಿರುವ ವಿಚಾರ ಮುನ್ನೆಲೆಗೆ ಬಂದಿದೆ.


ಕೋವೀಡ್‌-19ರ ಹಿನ್ನೆಲೆಯಲ್ಲಿ ವಿವಿಧ ರಾಜ್ಯಗಳಿಗೆ ಹಿಂತಿರುಗಿರುವ ವಲಸಿಗ ಕಾರ್ಮಿಕರಿಗೆ ಕೆಲಸ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಸುನೀಲ್‌ಕುಮಾರ್‌ ಅವರು ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳಿಗೆ 2020ರ ಜೂನ್ 10ರಂದು ಬರೆದಿರುವ ಪತ್ರದಲ್ಲಿ 14ನೇ ಹಣಕಾಸು ಆಯೋಗದಲ್ಲಿ ಬಳಕೆ ಆಗದೇ ಇರುವ ಮೊತ್ತದ ವಿವರಗಳಿವೆ. ಈ ಪತ್ರದ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.

14ನೇ ಹಣಕಾಸು ಆಯೋಗದಡಿಯಲ್ಲಿ ಒದಗಿಸಿರುವ ಒಟ್ಟು ಅನುದಾನದ ಪೈಕಿ 4,314 ಕೋಟಿ ರು.ಗಳನ್ನು ಖರ್ಚು ಮಾಡದೇ ಹಾಗೆ ಉಳಿಸಿಕೊಂಡಿರುವ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದೆ. ತಮಿಳುನಾಡು 3,908 ಕೋಟಿ ರು., ಮಹಾರಾಷ್ಟ್ರ ಸರ್ಕಾರ 3,673 ಕೋಟಿ ರು., ರಾಜಸ್ಥಾನ ಸರ್ಕಾರ 3,258 ಕೋಟಿ ರು.ಗಳನ್ನು ಬಳಸದೇ ಕ್ರಮವಾಗಿ 2, 3 ಮತ್ತು 4ನೇ ಸ್ಥಾನದಲ್ಲಿದೆ.


ಇನ್ನುಳಿದಂತೆ ಆಂಧ್ರ ಪ್ರದೇಶ 715 ಕೋಟಿ ರು., ಅಸ್ಸಾಂ 2,398 ಕೋಟಿ ರು., ಛತ್ತೀಸ್‌ಗಢ್‌ ಸರ್ಕಾರ 780 ಕೋಟಿ ರು., ಗೋವಾ 55 ಕೋಟಿ ರು., ಹರ್ಯಾಣ 570 ಕೋಟಿ ರು., ಹಿಮಾಚಲ ಪ್ರದೇಶ 658 ಕೋಟಿ ರು., ಜಮ್ಮು ಕಾಶ್ಮೀರ 768 ಕೋಟಿ ರು., ಜಾರ್ಖಂಡ್‌ 958 ಕೋಟಿ ರು., ಲಡಾಖ್‌ 14 ಕೋಟಿ ರು., ಮಧ್ಯಪ್ರದೇಶ 979 ಕೋಟಿ ರು., ಮಣಿಪುರ 19 ಕೋಟಿ ರು., ಒಡಿಶಾ 2,889 ಕೋಟಿ ರು., ಪಂಜಾಬ್‌ 216 ಕೋಟಿ ರು., ಸಿಕ್ಕಿಂ 52 ಕೋಟಿ ರು., ತೆಲಂಗಾಣ 915 ಕೋಟಿ ರು., ತ್ರಿಪುರ 58 ಕೋಟಿ ರು., ಉತ್ತರಾಖಂಡ್‌ 258 ಕೋಟಿ ರು. ಸೇರಿದಂತೆ ಒಟ್ಟು 29,422 ಕೋಟಿ ರು. ಖರ್ಚಾಗದೇ ಉಳಿದುಕೊಂಡಿರುವುದು ಪತ್ರದಿಂದ ತಿಳಿದು ಬಂದಿದೆ.

ಲಾಕ್‌ಡೌನ್‌ನಿಂದಾಗಿ ಆಯಾ ರಾಜ್ಯಗಳಿಗೆ ತೆರಳಿರುವ ವಲಸಿಗ ಕಾರ್ಮಿಕರ ಪೈಕಿ ಬಹುತೇಕರು ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ದುಡಿದವರಿದ್ದಾರೆ. ಇವರಿಗೆ ನರೇಗಾ ಯೋಜನೆಯಡಿ ಕೆಲಸ ನೀಡಲು ಸೂಚಿಸಿರುವ ಕೇಂದ್ರ ಸರ್ಕಾರ, ಪಂಚಾಯ್ತಿ ಭವನಗಳನ್ನು ನಿರ್ಮಾಣ ಮಾಡಲು 14ನೇ ಹಣಕಾಸು ಆಯೋಗದಡಿ ಒದಗಿಸಿರುವ ಅನುದಾನವನ್ನು ಬಳಸಿಕೊಳ್ಳಲು ರಾಜ್ಯ ಸರ್ಕಾರಗಳ ಮುಖ್ಯಕಾರ್ಯದರ್ಶಿಗಳಿಗೆ ಕೇಂದ್ರ ಸರ್ಕಾರದ ಕಾರ್ಯದರ್ಶಿ ಸೂಚಿಸಿರುವುದು ಪತ್ರದಿಂದ ಗೊತ್ತಾಗಿದೆ.


ದೇಶದಲ್ಲಿ ಒಟ್ಟು 60,346 ಗ್ರಾಮ ಪಂಚಾಯ್ತಿಗಳಲ್ಲಿ ಪಂಚಾಯ್ತಿ ಭವನಗಳಿಲ್ಲ. 14ನೇ ಹಣಕಾಸು ಆಯೋಗದಡಿ ಒದಗಿಸಿರುವ ಅನುದಾನದಲ್ಲಿ ತಲಾ 20 ಲಕ್ಷ ರು.ಗಳನ್ನು ಪಂಚಾಯ್ತಿ ಭವನಗಳನ್ನು ನಿರ್ಮಿಸಲು ಬಳಸಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರದ ಕಾರ್ಯದರ್ಶಿ ನಿರ್ದೇಶಿಸಿದ್ದಾರೆ.


ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳನ್ನು ಕ್ವಾರಂಟೈನ್‌ ಮತ್ತು ಐಸೊಲೇಶನ್‌ ಕೇಂದ್ರಗಳನ್ನಾಗಿ ಪರಿವರ್ತಿಸಲಾಗಿದೆಯಾದರೂ ಶಾಲೆಗಳು ಪುನರಾರಂಭಗೊಂಡಾಗ ಶಾಲೆಗಳನ್ನು ತೆರವುಗೊಳಿಸುವುದು ಅನಿವಾರ್ಯವಾಗಿದೆ. ಹೀಗಾಗಿ ಪಂಚಾಯ್ತಿ ಮಟ್ಟದಲ್ಲಿ ಕ್ವಾರಂಟೈನ್‌ ಕೇಂದ್ರಗಳನ್ನು ಸ್ಥಾಪಿಸುವುದು ಭವಿಷ್ಯದ ದೃಷ್ಟಿಯಿಂದ ಉತ್ತಮ ಎಂದು ಮುಖ್ಯ ಕಾರ್ಯದರ್ಶಿಗಳಿಗೆ ಕೇಂದ್ರ ಸರ್ಕಾರ ತಿಳಿಸಿದೆ.


ಅಲ್ಲದೆ ಪಂಚಾಯ್ತಿಗಳ ಮಟ್ಟದಲ್ಲಿ ಪ್ರಾಥಮಿ, ಮಾಧ್ಯಮಿಕ ಶಾಲೆಗಳ ನಿರ್ಮಾಣ, ಆರೋಗ್ಯ ಉಪ ಕೇಂದ್ರಗಳು, ಬೀಜ ಮತ್ತು ಗೊಬ್ಬರ ಮಾರಾಟ ಕೇಂದ್ರಗಳನ್ನು ತೆರೆಯಲು ಹಣಕಾಸು ಆಯೋಗದಡಿಯಲ್ಲಿ ಒದಗಿಸಿರುವ ಅನುದಾನವನ್ನು ಬಳಸಿಕೊಳ್ಳಬಹುದು ಎಂದು ಸೂಚಿಸಿರುವುದು ಪತ್ರದಿಂದ ತಿಳಿದು ಬಂದಿದೆ.


ಒಂದು ವೇಳೆ ಅನುದಾನ ಕೊರತೆ ಕಂಡು ಬಂದಲ್ಲಿ ಗ್ರಾಮ ಪಂಚಾಯ್ತಿ ಸ್ವಂತ ಸಂಪನ್ಮೂಲ ಮತ್ತು ರಾಜ್ಯದ ಹಲವು ಯೋಜನೆಗಳಲ್ಲಿ ಹಂಚಿಕೆಯಾಗಿರುವ ಹಣವನ್ನು ಮರು ಹೊಂದಾಣಿಕೆ ಮಾಡಿಕೊಂಡು ಅನುದಾನದ ಕೊರತೆಯನ್ನು ನೀಗಿಸಬಹುದು ಎಂದೂ ಹೇಳಿದೆ.


ಗ್ರಾ. ಪಂ. ಗಳಿಗೆ 14ನೇ ಹಣಕಾಸು ಆಯೋಗದ 2019-20ನೇ ಸಾಲಿನ ಸಾಮಾನ್ಯ ಮೂಲ ಅನುದಾನವನ್ನು ಕೋವಿಡ್-19 ವೈರಸ್‌ ಸೋಂಕು ಹರಡುವುದನ್ನು ತಡೆಗಟ್ಟುವ ಭಾಗವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮೂಲ ಸೌಲಭ್ಯ ಒದಗಿಸಲು ಅದರಲ್ಲೂ ಮುಖ್ಯವಾಗಿ ನೈರ್ಮಲ್ಯ ವ್ಯವಸ್ಥೆಯನ್ನು ರೂಪಿಸಲು ಆದ್ಯತೆಯ ಮೇರೆಗೆ ವೆಚ್ಚ ಮಾಡುವುದಕ್ಕಾಗಿ ಅವಕಾಶ ಕಲ್ಪಿಸಿತ್ತು.


ರಾಜ್ಯದ 6,021 ಗ್ರಾ.ಪಂ.ಗಳಿಗೆ 14ನೇ ಹಣಕಾಸು ಆಯೋಗದ 2019-20ನೇ ಸಾಲಿನ ಸಾಮಾನ್ಯ ಮೂಲ ಅನುದಾನ 1,251 ಕೋ.ರೂ. ಗಳಂತೆ 2019ರ ಜೂ.13 ಮತ್ತು ನ.4ರಂದು ಎರಡು ಕಂತುಗಳಲ್ಲಿ ಸುಮಾರು 2,500 ಕೋ.ರೂ.ಗಳನ್ನು ಕೇಂದ್ರ ಸರಕಾರ ಈಗಾಗಲೇ ಬಿಡುಗಡೆ ಮಾಡಿದೆ. ಈ ಅನುದಾನವನ್ನು ಕೋವಿಡ್‌-19 ತಡೆಗಟ್ಟಲು ಆದ್ಯತೆಯ ಮೇಲೆ ಬಳಸಿಕೊಳ್ಳುವಂತೆ ಸೂಚಿಸಿ ಗ್ರಾಮೀಣಾಭಿವೃದ್ಧಿ ಇಲಾಖೆ ಎಲ್ಲ ಗ್ರಾ.ಪಂ.ಗಳಿಗೆ ಸುತ್ತೋಲೆ ಹೊರಡಿಸಿತ್ತು.


ರಸ್ತೆ ಮತ್ತು ರಸ್ತೆ ಬದಿಯ ತ್ಯಾಜ್ಯಗಳನ್ನು ಹೊರಗಡೆ ಸಾಗಿಸುವುದು. ರಸ್ತೆ ಮತ್ತು ಚರಂಡಿಗಳ ಮೇಲೆ ಕ್ರಿಮಿನಾಶಕ ಹಾಗೂ ವೈರಾಣು ನಾಶಕಗಳನ್ನು ಸಿಂಪಡಿಸುವುದು. ಶಾಲಾ ಕಾಲೇಜುಗಳ ಕಟ್ಟಡ, ಅಂಗನವಾಡಿ ಕೇಂದ್ರ, ಗ್ರಂಥಾಲಯ, ಸಮುದಾಯ ಭವನ, ಪಂಚಾಯತ್‌ ಕಚೇರಿ, ಮಾರುಕಟ್ಟೆ, ಅಂಚೆ ಕಚೇರಿ ಮೊದಲಾದೆಡೆ ಕ್ರಿಮಿನಾಶಕ ಸಿಂಪಡಿಸುವ ಕೆಲಸಗಳನ್ನು ಕೈಗೆತ್ತಿಕೊಳ್ಳಬಹುದು.


ಸ್ವಚ್ಛತೆಯನ್ನು ನಿರ್ವಹಿಸುವ ಸ್ವತ್ಛತಾಗಾರರಿಗೆ ಮಾಸ್ಕ್, ಕನ್ನಡಕ, ಗನ್‌ಬೂಟ್‌ ಮತ್ತು ಪ್ರತಿ ರಸ್ತೆಗಳಲ್ಲಿ ಕಸ ಸಂಗ್ರಹಿಸಲು ಡಸ್ಟ್‌ಬಿನ್‌ಗಳನ್ನು ಒದಗಿಸುವುದು. ಕೋವಿಡ್-19 ವೈರಸ್‌ ಸೋಂಕು ಹರಡುವಿಕೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು. ಕೂಲಿ ಕಾರ್ಮಿಕರು, ವಲಸೆ ಕಾರ್ಮಿಕರು ಮತ್ತು ಬಡ ಜನರ ಸಹಿತ ಅವಶ್ಯವಿರುವವರಿಗೆ ಆಹಾರ ಪದಾರ್ಥ ಹಾಗೂ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಬಳಸಿಕೊಳ್ಳಬಹುದು.

the fil favicon

SUPPORT THE FILE

Latest News

Related Posts