ಬೆಂಗಳೂರು; ಲಾಕ್‌ಡೌನ್‌ನಿಂದಾಗಿ ಸ್ವಂತ ಸ್ಥಳಗಳಿಗೆ ತೆರಳಿರುವ ವಲಸಿಗ ಕಾರ್ಮಿಕರಿಗೆ ನರೇಗಾದಡಿಯಲ್ಲಿ ಉದ್ಯೋಗ ಅವಕಾಶ ಕಲ್ಪಿಸಬೇಕಿದ್ದ ಅಧಿಕಾರಿಗಳು, ತಮ್ಮ ಕುಟುಂಬ ಸದಸ್ಯರ ಹೆಸರಿಗೆ ಜಾಬ್ ಕಾರ್ಡ್ ನೀಡಿ ಕೂಲಿ ಹಣ ಲೂಟಿ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.
ಬಾಗಲಕೋಟೆಯ ಉಪ ವಲಯ ಅರಣ್ಯಾಧಿಕಾರಿ ಟಿ ಬಿ ಬಲವಂತನವರ ತಮ್ಮ ಪತ್ನಿ ಮತ್ತು ಮಕ್ಕಳ ಹೆಸರಿನಲ್ಲಿ ಜಾಬ್ ಕಾರ್ಡ್ ನೀಡಿರುವುದು ದಾಖಲೆಯಿಂದ ತಿಳಿದು ಬಂದಿದೆ. ಈ ಸಂಬಂಧ ಮಲ್ಲಿಕಾರ್ಜುನ ಎಸ್ ರಾಂಪೂರ ಎಂಬುವರು ಪ್ರಧಾನ ಅರಣ್ಯ ಮುಖ್ಯ ಸಂರಕ್ಷಣಾಧಿಕಾರಿ ಸಂಜಯ್ ಮೋಹನ್ ಅವರಿಗೆ ದಾಖಲೆ ಸಮೇತ ದೂರು ಸಲ್ಲಿಸಿದ್ದಾರೆ. ಈ ದೂರಿನ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.
ಬಾಗಲಕೋಟೆಯ ಹುನಗಂದ ಪ್ರಾದೇಶಿಕ ವಲಯದಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಟಿ ಬಿ ಬಲವಂತನವರ ಅವರು ಪತ್ನಿ ಶಾರದಾ ತಿಪ್ಪಣ್ಣ ಬಲವಂತನವರ, ಮಗ ನಾಗರಾಜ, ನವೀನಕುಮಾರ ಮತ್ತು ಮಗಳು ನಂದಿನಿ ಹೆಸರಿನಲ್ಲಿ ಅಮರಾವತಿ ಗ್ರಾಮ ಪಂಚಾಯ್ತಿಯ ಅಮರಾವತಿ ಗ್ರಾಮದಲ್ಲಿ ಜಾಬ್ ಕಾರ್ಡ್(ಕೆಎನ್-01-004-018-003/325) ಪಡೆದಿರುವುದು ದಾಖಲೆಯಿಂದ ಗೊತ್ತಾಗಿದೆ.
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಉದ್ಯೋಗ ಕಾರ್ಡ್ ಪಡೆದಿರುವ ಟಿ ಬಿ ಬಲವಂತನವರ ಅವರ ಕುಟುಂಬ ಸದಸ್ಯರ ಖಾತೆಗೆ ಕೂಲಿ ಹಣವೂ ಜಮಾ ಆಗಿರುವುದು ನರೇಗಾದ ಅಧಿಕೃತ ಜಾಲ ತಾಣದಿಂದ ತಿಳಿದು ಬಂದಿದೆ.
ಆರೋಪಿತ ಐಎಫ್‌ಎಸ್ ಅಧಿಕಾರಿ ಪತ್ನಿ ಮತ್ತು ಮೂವರು ಮಕ್ಕಳು ಅಮರಾವತಿ ಗ್ರಾಮದಲ್ಲಿ ಸಂಗಮಕ್ಕೆ ಹೋಗುವ ಒಳ ರಸ್ತೆ ಬದಿ ಕಾಮಗಾರಿ, ಅಮರಾವತಿ ಚೆಕ್ ಡ್ಯಾಂ ಹೂಳು ತೆಗೆಯುವುದು, ರೈತರ ಹೊಲಗಳ ಬದುಗಳಲ್ಲಿ ಜೈವಿಕ ಇಂಧನ ಸಸಿ ನೆಡುವುದು, ರೈತರ ಹೊಲದಲ್ಲಿ ಜೈವಿಕ ನೆಡುತೋಪು ಬೆಳೆಸುವುದು, ರಸ್ತೆ ಮತ್ತು ಬ್ಲಾಕ್‌ಗಳಲ್ಲಿ ಸಸಿ ನೆಡುವುದು ಸೇರಿದಂತೆ ಮತ್ತಿತರ ಕಾಮಗಾರಿಗಳಲ್ಲಿ ದುಡಿದು ಕೂಲಿ ಹಣ ಪಡೆದಿರುವುದು ಲಭ್ಯ ಇರುವ ಜಾಬ್ ಕಾರ್ಡ್‌ನಿಂದ ತಿಳಿದು ಬಂದಿದೆ.
‘ಗ್ರಾಮೀಣ ಜನತೆಯ ಸರ್ವತೋಮುಖ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಿರುವ ನರೇಗಾ ಯೋಜನೆಯನ್ನು ಅಧಿಕಾರಶಾಹಿಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಗ್ರಾಮೀಣ ಜನತೆಯು ಉದ್ಯೋಗವಕಾಶಕ್ಕಾಗಿ ಪಟ್ಟಣ, ಇತರೆ ಔದ್ಯಮಿಕ ಕೇಂದ್ರಗಳಿಗೆ ವಲಸೆ ಹೋಗುತ್ತಿದ್ದಾರೆ. ಇದನ್ನು ತಡೆಗಟ್ಟಲು ಸ್ಥಳೀಯ ಮಟ್ಟದಲ್ಲಿ ಉದ್ಯೋಗ ನೀಡುವ ದೂರದೃಷ್ಟಿಯಿಂದ ಜಾರಿಗೊಂಡಿರುವ ಈ ಯೋಜನೆಯ ಅನುದಾನವನ್ನು ಪ್ರಭಾವಿ ಅಧಿಕಾರಿಗಳು ಲೂಟಿ ಮಾಡುತ್ತಿದ್ದಾರೆ,’ ಎಂದು ಮಲ್ಲಿಕಾರ್ಜುನ ರಾಂಪೂರ ಅವರು ದೂರಿನಲ್ಲಿ ವಿವರಿಸಿದ್ದಾರೆ.