ಸಾಲ ವಿತರಣೆಯಲ್ಲಿ ಕೋಟ್ಯಂತರ ರು. ಅಕ್ರಮ; ಕಲಬುರಗಿ ಡಿಸಿಸಿ ಬ್ಯಾಂಕ್‌ ಸೂಪರ್‌ಸೀಡ್‌?

ಬೆಂಗಳೂರು; ರೈತರ ಹಿತ ಕಾಯಬೇಕಿದ್ದ ಕಲಬುರಗಿ-ಯಾದಗಿರಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌, ಕೃಷಿ ಮತ್ತು ಕೃಷಿ ಪೂರಕ ಸಾಲ ನೀಡುವಲ್ಲಿ ವಿಫಲವಾಗಿದೆ. ಹಗರಣಗಳನ್ನೇ ಹಾಸಿ ಹೊದ್ದುಕೊಂಡಿರುವ ಈ ಬ್ಯಾಂಕ್‌ನಲ್ಲಿ ರೈತರಿಗೆ ಕೃಷಿ, ಕೃಷಿಗೆ ಪೂರಕ ಸಾಲ ಮತ್ತು ಅಲ್ಪಾವಧಿ ಬೆಳೆ ಸಾಲ ವಿತರಣೆಯಲ್ಲಿ ಕೋಟ್ಯಂತರ ರು. ಅಕ್ರಮ ನಡೆದಿರುವುದು ಇದೀಗ ಬಹಿರಂಗಗೊಂಡಿದೆ.


ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾಗಿದ್ದ ರೈತರ ಸಾಲ ಮನ್ನಾ ಯೋಜನೆಗೆ ಹಂಚಿಕೆಯಾಗಿದ್ದ ಹಣವನ್ನೂ ಬಿಡದೆ ಕಬಳಿಸಿರುವ ಅಧಿಕಾರಿಗಳ ಅಕ್ರಮದಿಂದಾಗಿ ಈ ಬ್ಯಾಂಕ್‌ನ್ನು ಸೂಪರ್‌ಸೀಡ್‌ ಮಾಡಲು ಸಹಕಾರ ಸಂಘಗಳ ಜಂಟಿ ನಿಬಂಧಕರು ಶಿಫಾರಸ್ಸು ಮಾಡಲು ಸರ್ಕಾರದ ನಿರ್ದೇಶನಕ್ಕಾಗಿ ಎದುರು ನೋಡುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕೆಲ ದಾಖಲೆಗಳು ‘ದಿ ಫೈಲ್‌’ಗೆ ಲಭ್ಯವಾಗಿದೆ.

ಶಾಸನಬದ್ಧವಾಗಿ ನಿರ್ವಹಿಸಬೇಕಾಗಿದ್ದ ಈ ಬ್ಯಾಂಕ್‌ ತನ್ನ ಕರ್ತವ್ಯಗಳನ್ನು ಪಾಲಿಸಿಲ್ಲ. ನಬಾರ್ಡ್‌ ಮತ್ತು ಸಹಕಾರ ಸಂಘಗಳ ನಿಬಂಧಕರು ಹಾಗೂ ಸರ್ಕಾರ ಕಾಲಕಾಲಕ್ಕೆ ನೀಡಿದ್ದ ಸೂಚನೆಗಳನ್ನು ಪಾಲಿಸದೆಯೇ ರೈತ ಸಹಕಾರಿ ಸದಸ್ಯರನ್ನು ಸಂಕಷ್ಟಕ್ಕೆ ದೂಡಿರುವುದು ದಾಖಲೆಯಿಂದ ತಿಳಿದು ಬಂದಿದೆ.


ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯ ರೈತರಿಗೆ 460 ಕೋಟಿ ರು. ಕೃಷಿ ಸಾಲದ ಅವಶ್ಯಕತೆ ಇದ್ದರೂ 2019-20ನೇ ಸಾಲಿನಲ್ಲಿ 30,120 ಸದಸ್ಯರಿಗೆ 71.87 ಕೋಟಿ ರು. ಸಾಲ ನೀಡಿದೆ. ಅವಶ್ಯಕತೆಗನುಗುಣವಾಗಿ ರೈತರಿಗೆ ಕೃಷಿ ಮತ್ತು ಕೃಷಿ ಪೂರಕ ಸಾಲ ನೀಡಲು ವಿಫಲವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.


ಈ ಬ್ಯಾಂಕ್‌ ನೀಡಿದೆ ಎನ್ನಲಾಗಿರುವ ಬೆಳೆ ಸಾಲವೇ ಸುಳ್ಳು ಸಾಲವಾಗಿದೆ. ‘2017ರ ಮಾರ್ಚ್‌ನಲ್ಲಿ 17,785 ರೈತರಿಗೆ ಮಂಜೂರಾಗಿರುವ 26.65 ಕೋಟಿ ರು. ಅಲ್ಪಾವಧಿ ಬೆಳೆ ಸಾಲ ಸುಳ್ಳು ಸಾಲವಾಗಿತ್ತು. ಈ ಪೈಕಿ 17.92 ಕೋಟಿ ರು. ಸಾಲ ಮನ್ನಾಕ್ಕೆ ಕ್ಲೈಮ್‌ ಮಾಡಲಾಗಿದೆ. ಇದು ಅತ್ಯಂತ ಗಂಭೀರ ಪ್ರಕರಣ,’ ಎಂದು ಕಲಬುರಗಿ ವಿಭಾಗದ ಸಹಕಾರ ಸಂಘಗಳ ಜಂಟಿ ನಿಬಂಧಕರು ವರದಿ ಮಾಡಿದ್ದಾರೆ. ಅಲ್ಲದೆ ನಬಾರ್ಡ್‌ನಿಂದ ಪುನರ್ಧನ ಮೊತ್ತವನ್ನೂ ಕ್ಲೈಮ್‌ ಮಾಡಿರುವುದು ದಾಖಲೆಯಿಂದ ತಿಳಿದು ಬಂದಿದೆ.

ಜಂಟಿ ನಿಬಂಧಕರು ಈ ಬಗ್ಗೆ ತನಿಖೆ ಮಾಡಿ ವರದಿ ನೀಡಿದ್ದರೂ ಬ್ಯಾಂಕ್‌ನ ಆಡಳಿತ ಮಂಡಳಿ ಯಾರ ವಿರುದ್ಧವೂ ಕ್ರಮ ಕೈಗೊಂಡಿಲ್ಲ ಎಂದು ಗೊತ್ತಾಗಿದೆ. ಈಗಾಗಲೇ ಬ್ಯಾಂಕ್‌ ನೀಡಿರುವ 71.87 ಕೋಟಿ ರು. ಸಾಲ, ಬ್ಯಾಂಕ್‌ನ ಆಡಳಿತ ಮಂಡಳಿ ಸದಸ್ಯರು ಮತ್ತು ಬ್ಯಾಂಕ್‌ನ ಅಧಿಕಾರಿಗಳ ಸಂಬಂಧಿಕರ ಪಾಲಾಗಿದೆ. ಇದು ನಬಾರ್ಡ್‌ನ ಮಾರ್ಗಸೂಚಿಗಳ ಉಲ್ಲಂಘನೆ. ಅಲ್ಲದೆ ಈ ಸಾಲ ವಸೂಲಾತಿಗೆ ಸಿವಿಲ್‌ ಮತ್ತು ಕ್ರಿಮಿನಲ್‌ ಕ್ರಮವನ್ನೂ ಜರುಗಿಸಿಲ್ಲ. ಇದರಿಂದ ಬ್ಯಾಂಕ್‌ನ ಅನುತ್ಪಾದಕ ಅಸ್ತಿ (ಎನ್‌ಪಿಎ) ಪ್ರಮಾಣ ಹೆಚ್ಚಾಗಿದೆ ಎಂಬುದು ದಾಖಲೆಯಿಂದ ತಿಳಿದು ಬಂದಿದೆ.


ಇನ್ನು ರಾಜ್ಯದ 21 ಡಿಸಿಸಿ ಬ್ಯಾಂಕ್‌ಗಳ ಪೈಕಿ ಕಲಬುರಗಿ-ಯಾದಗಿರಿ ಡಿಸಿಸಿ ಬ್ಯಾಂಕ್‌ ಅತ್ಯಂತ ಕಡಿಮೆ ಪ್ರಮಾಣದ ವಸೂಲಿ ಅಂದರೆ ಶೇ.32ರಷ್ಟು ಮಾತ್ರ ಮಾಡಿರುವುದು ವರದಿಯಿಂದ ಗೊತ್ತಾಗಿದೆ.


ಈ ಬ್ಯಾಂಕ್‌ನ ಆರ್ಥಿಕ ಚಟುವಟಿಕೆ ಮತ್ತು ಸಾಲ ವಿತರಣೆ ಬಗ್ಗೆ ನಬಾರ್ಡ್‌ ಕೂಡ ವರದಿ ಮಾಡಿದೆ. 2020ರ ಜನವರಿ 8ರಂದು ಸರ್ಕಾರಕ್ಕೆ ವರದಿಯನ್ನೂ ಸಲ್ಲಿಸಿದೆ. ವರದಿ ಪ್ರಕಾರ 2018ರ ಮಾರ್ಚ್‌ 3 ಅಂತ್ಯಕ್ಕೆ 137.28 ಕೋಟಿ ರು.ಇದ್ದ ಹೂಡಿಕೆಯು ಒಂದೇ ವರ್ಷದಲ್ಲಿ ಅಂದರೆ 2019ರ ಮಾರ್ಚ್‌ 31ರ ಅಂತ್ಯಕ್ಕೆ 57.96 ಕೋಟಿ ರು.ಗೆ ಇಳಿಕೆಯಾಗಿದೆ. ಈ ಅವಧಿಯಲ್ಲಿ ಶೇ.53.55 ಋಣಾತ್ಮಕ ಬೆಳವಣಿಗೆಯಾಗಿದೆ ಎಂದು ವರದಿಯಲ್ಲಿ ದಾಖಲಿಸಲಾಗಿದೆ.


ಬ್ಯಾಂಕ್‌ನ ಅನುತ್ಪಾದಕ ಆಸ್ತಿಗಳ ಪ್ರಮಾಣವೂ ಶೇ.16.09ರಿಂದ ಶೇ.23.23ಗೆ ಹೆಚ್ಚಳವಾಗಿದೆ. ಕೃಷಿ ಸಾಲ 432 ಕೋಟಿ ರು ಗಳಿಂದ 315 ಕೋಟಿ ಗೆ ಮತ್ತು 2019-20ನೇ ಸಾಲಿಗೆ 71 ಕೋಟಿ ರು ಗೆ ಇಳಿಕೆಯಾಗಿದೆ. 2018-19ನೇ ಒಂದೇ ಸಾಲಿನಲ್ಲಿ 36 ಕೋಟಿ ರು. ಕ್ರೋಡಿಕೃತ ನಷ್ಟ ಹೊಂದಿರುವುದು ದಾಖಲೆಯಿಂದ ತಿಳಿದು ಬಂದಿದೆ.


ಬ್ಯಾಂಕ್‌ನಲ್ಲಿ ಕಂಡು ಬಂದಿರುವ ಇಂತಹ ಗಂಭೀರ ಲೋಪಗಳನ್ನು ಸರಿಪಡಿಸಿಕೊಳ್ಳಲು ಸಹಕಾರ ಸಂಘಗಳ ನಿಬಂಧಕರು 2019ರ ಫೆ 25 ಮತ್ತು ಸೆ.26ರಂದು ಸಭೆಗಳನ್ನು ನಡೆಸಿ ಸೂಚನೆ ನೀಡಿದ್ದರು. ಸಾಲ ವಸೂಲಾತಿ ಮತ್ತು ನಬಾರ್ಡ್‌ನಿಂದ ಪುನರ್ಧನ ಪಡೆಯುವ ನಿಟ್ಟಿನಲ್ಲಿಯೂ ನೀಡಿದ್ದ ಯಾವ ಸೂಚನೆಯನ್ನೂ ಆಡಳಿತ ಮಂಡಳಿ ಪಾಲಿಸದಿರುವುದು ಗೊತ್ತಾಗಿದೆ.
‘ಈ ದಿಸೆಯಲ್ಲಿ ಕ್ರಿಯಾ ಯೋಜನೆ ಹಾಕಿಕೊಳ್ಳದೇ ನಿರ್ಲಕ್ಷ್ಯ ವಹಿಸಿರುವುದು ಕಂಡು ಬಂದಿರುತ್ತದೆ. ಎಲ್ಲಾ ನ್ಯೂನತೆಗಳನ್ನು ಸುದೀರ್ಘವಾಗಿ ಪರಿಶೀಲಿಸಿದಾಗ ಮತ್ತು ಬ್ಯಾಂಕ್‌ನ ಕಾರ್ಯವ್ಯಾಪ್ತಿಯ ರೈತರಿಗೆ ಅವಶ್ಯಕ ಕೃಷಿ ಸಾಲ ಒದಗಿಸಲು, ಬ್ಯಾಂಕ್‌ನ ನ್ಯೂನತೆಗಳನ್ನು ಸರಿಪಡಿಸಲು ಬ್ಯಾಂಕ್‌ನ್ನು ಸೂಪರ್‌ಸೀಡ್‌ ಮಾಡಬೇಕು,’ ಎಂದು ನಿಬಂಧಕರು ಶಿಫಾರಸ್ಸು ಮಾಡಿದ್ದಾರೆ ಎಂದು ತಿಳಿದು ಬಂದಿದೆ.


ರೈತರ ಸಾಲ ಮನ್ನಾದಲ್ಲಿನ ಅವ್ಯವಹಾರದ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಬಿಜೆಪಿ ಜಿಲ್ಲಾ ಘಟಕವೂ ಬೃಹತ್ ಪ್ರತಿಭಟನೆ ನಡೆಸಿತ್ತು. ಹಿಂದಿನ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡಿದ್ದಾಗಿ ಹೇಳಿದ್ದಾರಾದರೂ ಜಿಲ್ಲೆಯಲ್ಲಿ ರೈತರ ಸಾಲ ಮನ್ನಾ ಆಗಿಲ್ಲ. ಜಿಲ್ಲೆಗೆ ಒಟ್ಟು 315 ಕೋಟಿ ರೂ.ರೈತರ ಸಾಲ ಮನ್ನಾಕ್ಕೆ ಮೊತ್ತ ಬರಬೇಕಿತ್ತು. ಇದರಲ್ಲಿ 260 ಕೋಟಿ ರೂ. ಬಿಡುಗಡೆಯಾಗಿತ್ತು. 109 ಕೋಟಿ ರೂ. ಹಾಗೂ 25 ಕೋಟಿ ರೂ. ಸೇರಿ ಒಟ್ಟು 134 ಕೋಟಿ ರೂ. ಗಳನ್ನು ಅಪೆಕ್ಸ್‌ ಬ್ಯಾಂಕ್‌ ಸಾಲ ಪಾವತಿಸಲಾಗಿತ್ತು. ಜಿಲ್ಲೆಗೆ ಇನ್ನು 55 ಕೋಟಿ ರೂ. ಬರಬೇಕಾಗಿದೆ. ಹಿಂದಿನ ಸಿದ್ದರಾಮಯ್ಯ ಸರ್ಕಾರ ಮಾಡಿರುವ ಸಾಲ ಮನ್ನಾದಲ್ಲೂ 70 ಕೋಟಿ ರೂ. ಬಾಕಿ ಇತ್ತು.


ರೈತರ ಸಾಲ ಮನ್ನಾದಲ್ಲಿ ಭಾರಿ ಅವ್ಯವಹಾರ ನಡೆಯುತ್ತಿದೆ ದೂರಿದ್ದ ರೈತರು, ಜೇವರ್ಗಿ ತಾಲೂಕಿನಲ್ಲಿ ಸತ್ತವರ ಹೆಸರಿನಲ್ಲಿ ರೈತರ ಸಾಲ ಮನ್ನಾ ಮಾಡಿ ಅವ್ಯವಹಾರ ಎಸಗಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿತ್ತು.
ರೈತರ ಬ್ಯಾಂಕ್‌ ಖಾತೆಗೆ ಆಧಾರ್‌ ಕಾರ್ಡ್‌ ನಂಬರ್‌ ಹಾಗೂ ಮೊಬೈಲ್‌ ನಂಬರ್‌ ಜೋಡಣೆ ಮಾಡಬೇಕು. ಆದರೆ, ಬ್ಯಾಂಕ್‌ ಅಧಿಕಾರಿಗಳು ರೈತರ ಖಾತೆಗೆ ಆಧಾರ್‌, ಮೊಬೈಲ್‌ ನಂಬರ್‌ ಜೋಡಣೆಯಾದರೆ ತಮ್ಮ ಅವ್ಯವಹಾರ ಹೊರಗೆ ಬರುತ್ತದೆ ಎಂದು ಯಾವುದೇ ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸದೇ ಅಕ್ರಮ ಎಸಗಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

Your generous support will help us remain independent and work without fear.

Latest News

Related Posts