ಕರ್ನಾಟಕ ಅಂತರಗಂಗಾ ಸೂಕ್ಷ್ಮ ನೀರಾವರಿ ನಿಗಮ ಮುಚ್ಚಲು ಹೊರಟ ಬಿಜೆಪಿ ಸರ್ಕಾರ

ಬೆಂಗಳೂರು; ಕೋವಿಡ್‌-19ರಿಂದ ತೀವ್ರ ತರದಲ್ಲಿರುವ ಎದುರಾಗಿರುವ ಆರ್ಥಿಕ ಮುಗ್ಗಟ್ಟು, ನೀರಾವರಿ ನಿಗಮಗಳ ಮೇಲೂ ಪರಿಣಾಮ ಬೀರಲಾರಂಭಿಸಿದೆ. ಅನಗತ್ಯ ಖರ್ಚಿಗೆ ಕಾರಣವಾಗುತ್ತಿದೆ ಎಂದು ನೆಪವೊಡ್ಡಿ ರಾಜ್ಯ ಬಿಜೆಪಿ ಸರ್ಕಾರ ಇದೀಗ ಹಿಂದಿನ ಸರ್ಕಾರ ಸ್ಥಾಪಿಸಿದ್ದ ಕರ್ನಾಟಕ ಅಂತರಗಂಗಾ ಸೂಕ್ಷ್ಮ ನೀರಾವರಿ ನಿಗಮವನ್ನು ಮುಚ್ಚಲು ಹೊರಟಿದೆ.


ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್‌ ಡಿ ಕುಮಾರಸ್ವಾಮಿ ಅವರು ಈ ನಿಗಮಕ್ಕೆ ಬಜೆಟ್‌ನಲ್ಲಿ ಹಣ ಹಂಚಿಕೆ ಮಾಡಿದ್ದರು. ಮೈತ್ರಿ ಸರ್ಕಾರ ಪತನಗೊಂಡ ಬಳಿಕ ಇದನ್ನು ಮುಚ್ಚಲು ಹೊರಟಿರುವ ಬಿಜೆಪಿ ಸರ್ಕಾರ, ರೈತರ ಆಕ್ರೋಶಕ್ಕೆ ತುತ್ತಾಗಲಿದೆ.


ಕೃಷಿ ಇಲಾಖೆಯಲ್ಲಿ ಸೂಕ್ಷ್ಮ ನೀರಾವರಿ ಯೋಜನೆಯನ್ನು ಅಂತರಗಂಗೆ ನಿಗಮದ ಮೂಲಕ ಅನುಷ್ಠಾನಗೊಳಿಸಲಾಗುವುದು ಎಂದು ಸಚಿವ ಬಿ ಸಿ ಪಾಟೀಲ್‌ ಅವರು 2020ರ ಮಾರ್ಚ್‌ 15ರಂದು ನಡೆದಿದ್ದ ಅಧಿವೇಶನದಲ್ಲಿ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಅನಗತ್ಯ ಖರ್ಚಿಗೆ ಕಾರಣವಾಗುತ್ತಿದೆ ಎಂಬ ವಾದವನ್ನು ಮುಂದೊಡ್ಡಿರುವ ಆರ್ಥಿಕ ಇಲಾಖೆ, ಕರ್ನಾಟಕ ಅಂತರಗಂಗೆ ಸೂಕ್ಷ್ಮ ನೀರಾವರಿ ನಿಗಮವನ್ನು ಮುಕ್ತಾಯಗೊಳಿಸಲು ಆಡಳಿತ ಇಲಾಖೆಗೆ ಸೂಚಿಸಿದೆ.


‘ಸೂಕ್ಷ್ಮ ನೀರಾವರಿಯ ವಿವಿಧ ಕಾರ್ಯಕ್ರಮಗಳನ್ನು ಪ್ರಸ್ತುತ ಕೃಷಿ, ತೋಟಗಾರಿಕೆ, ರೇಷ್ಮೆ ಹಾಗೂ ಜಲ ಸಂಪನ್ಮೂಲ ಇಲಾಖೆಗಳಲ್ಲಿ ನಿರ್ವಹಿಸುತ್ತಿರುವುದರಿಂದ ನಿಗಮದ ಸ್ಥಾಪನೆಯು ಅನಗತ್ಯ ಖರ್ಚಿಗೆ ಕಾರಣವಾಗುವುದರಿಂದ ನಿಗಮವನ್ನು ಮುಕ್ತಾಯಗೊಳಿಸಲು ಆಡಳಿತ ಇಲಾಖೆ ಕ್ರಮಕೈಗೊಳ್ಳಬಹುದಾಗಿದೆ,’ ಎಂದು ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ 2020ರ ಮೇ 29ರಂದು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

ಕೃಷಿ ಇಲಾಖೆಯಲ್ಲಿ ಸೂಕ್ಷ್ಮ ನೀರಾವರಿ ಯೋಜನೆಯನ್ನು ಅಂತರಗಂಗೆ ಕಾರ್ಪೋರೇಷನ್ ಮೂಲಕ ಅನುಷ್ಠಾನಗೊಳಿಸಲು ತೀರ್ಮಾನಿಸಿದ್ದ ಹಿಂದಿನ ಸರ್ಕಾರ ಕರ್ನಾಟಕ ಅಂತರಗಂಗಾ ಸೂಕ್ಷ್ಮ ನೀರಾವರಿ ನಿಗಮ(ಕೆಮಿಕ್) ಸ್ಥಾಪನೆಗೆ 2011 ಮತ್ತು 2018 ರಲ್ಲಿ ಸರ್ಕಾರಿ ಆದೇಶಗಳನ್ನು ಹೊರಡಿಸಿತ್ತು.


ಸದ್ಯದ ಪರಿಸ್ಥಿತಿಯ ಮಳೆ ಹಂಚಿಕೆ, ಅಂತರ್ಜಲ ಮಟ್ಟವನ್ನಾಧರಿಸಿ ಸೂಕ್ಷ್ಮ ನೀರಾವರಿ ಕಾರ್ಯಕ್ರಮಗಳಿಗೆ ಪ್ರತ್ಯೇಕವಾಗಿ ಒತ್ತು ನೀಡುವುದು ಅನಿವಾರ್ಯ ಎಂಬ ಕಾರಣದಿಂದ ಕರ್ನಾಟಕ ಅಂತರಗಂಗೆ ಸೂಕ್ಷ್ಮ ನೀರಾವರಿ ನಿಗಮ ಆರಂಭಿಸಿತ್ತು.
ಈ ನಿಗಮಕ್ಕೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಹಿರಿಯ ಐಎಎಸ್‌ ಅಧಿಕಾರಿ ವಂದಿತಾ ಶರ್ಮಾ, ರಾಜೇಂದ್ರಕುಮಾರ್‌ ಕಟಾರಿಯಾ, ಸಿ ಎನ್‌ ನಂದಿನಿಕುಮಾರಿ ಅವರು ನಿರ್ದೇಶಕರಾಗಿದ್ದಾರೆ. ನಿಗಮಕ್ಕೆ ಅಧಿಕೃತ ಷೇರು ಬಂಡವಾಳ ರೂಪದಲ್ಲಿ 50,000,000 ರು. ಮತ್ತು ದುಡಿಯುವ ಬಂಡವಾಳ ರೂಪದಲ್ಲಿ 500,000 ರು.ಗಳನ್ನು ಹೂಡಲಾಗಿತ್ತು.


2014ರಲ್ಲಿ ಆರಂಭಗೊಂಡಿದ್ದ ಈ ನಿಗಮವನ್ನು 2015ರಲ್ಲಿ ನೋಂದಣಿ ಮಾಡಲಾಗಿತ್ತು. 2019-20ರಲ್ಲಿ ಈ ಯೋಜನೆಗಾಗಿ 336 ಕೋಟಿ ರೂ.ಗಳನ್ನು ಬಜೆಟ್‌ನಲ್ಲಿ ಇಡಲಾಗಿತ್ತು. 269 ಕೋಟಿ ರೂ.ಬಿಡುಗಡೆಯಾದ ಹಣದಲ್ಲಿ 254ಕೋಟಿ ರೂ.ಗಳನ್ನು ಯೋಜನೆಗಾಗಿ ಖರ್ಚು ಮಾಡಲಾಗಿದೆ ಎಂದು ತಿಳಿದು ಬಂದಿದೆ.


ಹನಿ, ತುಂತುರು ಮತ್ತು ರೈನ್‌ಗನ್ ಘಟಕಗಳನ್ನು ಅನುಷ್ಠಾನ ಮಾಡುವುದು. ರೈತರಿಗೆ ಗುಣಮಟ್ಟದ ಸಾಮಗ್ರಿಗಳ ಸರಬರಾಜು, ಸಮಯೋಚಿತ ಮತ್ತು ರೈತರಿಗೆ ತ್ವರಿತವಾಗಿ ವಿತರಿಸುವುದು. ವಿವಿಧ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ರಿಯಾಯಿತಿ ಯೋಜನೆಗಳ ಮತ್ತು ಸೂಕ್ಷ್ಮ ನೀರಾವರಿ ಯೋಜನೆಗಳ ಉಪಯುಕ್ತತೆ ಕುರಿತು ರೈತ ಸಮುದಾಯಗಳಲ್ಲಿ ಜಾಗೃತಿ ಮೂಡಿಸುವುದು ಹಾಗೂ ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಮುಂತಾದ ಇಲಾಖೆಗಳಲ್ಲಿ ಅನುಷ್ಠಾನ ಮಾಡುತ್ತಿರುವ ಸೂಕ್ಷ್ಮ ನೀರಾವರಿ ಯೋಜನೆಗಳನ್ನು ಏಕಗವಾಕ್ಷಿ ಮಾದರಿಯಲ್ಲಿ ನಿಗಮದಿಂದ ಅನುಷ್ಠಾನಗೊಳ್ಳುತ್ತಿತ್ತು.


ರಿಯಾಯಿತಿ ಸೌಲಭ್ಯ ಪುನರಾವರ್ತನೆ ಮತ್ತು ಅನುದಾನ ದುರ್ಬಳಕೆಗಳನ್ನು ತಡೆಯಬಹುದಾಗಿದೆ.ಫಲಾನುಭವಿಗಳ ಅರ್ಜಿ ಸ್ವೀಕೃತಿ ಪ್ರಕ್ರಿಯೆಯಿಂದ ಅನುಷ್ಠಾನದವರೆಗೆ ಗಣಕೀಕರಣಕ್ಕೆ ಈಗಿನ ಸರ್ಕಾರ ಮುಂದಾಗಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts