ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ಅಕ್ರಮ; ತನಿಖೆಯ ಸದ್ಯದ ವರದಿ ಸಲ್ಲಿಸಲು ಸೂಚನೆ

ಬೆಂಗಳೂರು: ಬೆಂಗಳೂರಿನ ಬಸವನಗುಡಿಯಲ್ಲಿರುವ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ಆಗಿರುವ ಅಕ್ರಮದ ಬಗ್ಗೆ ನಡೆಸಿರುವ ತನಿಖೆಯ ಸದ್ಯದ ಸ್ಥಿತಿ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಉಚ್ಛ ನ್ಯಾಯಾಲಯ ಮತ್ತು ಪೊಲೀಸ್‌ ಮಹಾನಿರ್ದೇಶಕರಿಗೆ ವರದಿ ಸಲ್ಲಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ವಿಶ್ವಜಿತ್‌ ಶೆಟ್ಟಿ ನೇತೃತ್ವದ ವಿಭಾಗೀಯ ಪೀಠ ಸೂಚಿಸಿದೆ.


ನರಸಿಂಹಮೂರ್ತಿ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ವಿಭಾಗೀಯ ಪೀಠ, ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್‌ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ, ಸಹಕಾರ ಸಂಘಗಳ ನಿಬಂಧಕರು, ಡಿಜಿಐಜಿ, ಬ್ಯಾಂಕ್‌ನ ಅಧ್ಯಕ್ಷರು ಸೇರಿದಂತೆ ಒಟ್ಟು 9 ಮಂದಿಗೆ ನೋಟೀಸ್‌ ಜಾರಿಗೊಳಿಸಿದೆ. ಪ್ರಕರಣವನ್ನು ಜೂನ್‌ 16ಕ್ಕೆ ಮುಂದೂಡಿಕೆಯಾಗಿದೆ.


ಪ್ರಕರಣವನ್ನು ಬಾಣಸವಾಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿಲ್ಲ ಎಂಬ ಆಕ್ಷೇಪಣೆಗಳು ಕೇಳಿ ಬಂದಿದ್ದವು. ಹೀಗಾಗಿ ಡಿಐಜಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡದ ಮೂಲಕ ತನಿಖೆ ನಡೆಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.


ಬ್ಯಾಂಕ್‌ನಲ್ಲಿ ಯಾವುದೇ ಆಧಾರವಿಲ್ಲದೆ ಸುಮಾರು 1,650 ಕೋಟಿ ರು. ಸಾಲ ನೀಡಲಾಗಿತ್ತು. ಹಾಗೆಯೇ ನಕಲಿ ಠೇವಣಿ ಮೇಲೆ ಸಾಲ ವಿತರಿಸಲಾಗಿತ್ತು. ಠೇವಣಿದಾರರಿಗೆ ತಿಂಗಳ ಬಡ್ಡಿ ಮತ್ತು ಅಸಲು ಮೊತ್ತವೂ ದೊರೆತಿರಲಿಲ್ಲ. ಬ್ಯಾಂಕ್‌ನ ವಹಿವಾಟುಗಳ ಮೇಲೆ ಆರ್‌ಬಿಐ ಕೂಡ ನಿರ್ಬಂಧ ಹೇರಿತ್ತು.


ಬ್ಯಾಂಕ್‌ನಲ್ಲಿ ನಡೆದಿದ್ದ ಈ ಎಲ್ಲಾ ಬೆಳವಣಿಗೆಗಳಿಂದ ಹೂಡಿಕೆದಾರರು ಮತ್ತು ಠೇವಣಿದಾರರಲ್ಲಿ ಆತಂಕ ಉಂಟಾಗಿತ್ತು. ಠೇವಣಿದಾರರಿಗೆ ವಂಚನೆ ಆಗಿದೆ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಬ್ಯಾಂಕ್‌ಗೆ ಆಡಳಿತಾಧಿಕಾರಿ ನೇಮಕವಾಗಿದೆ.
ಬ್ಯಾಂಕ್‌ನಲ್ಲಿ ನಡೆದಿರುವ ಗಂಭೀರ ಸ್ವರೂಪದ ಅಕ್ರಮಗಳಲ್ಲಿ ಸಹಕಾರ ಇಲಾಖೆಯ ಅಧಿಕಾರಿಗಳೂ ಭಾಗಿ ಆಗಿದ್ದಾರೆ ಎಂಬ ಆರೋಪಗಳಿವೆ. ಇವರ ವಿರುದ್ಧವೂ ಭ್ರಷ್ಟಾಚಾರ ನಿಗ್ರಹ ತಡೆ ಕಾಯ್ದೆ ಅನ್ವಯ ತನಿಖೆ ನಡೆಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಅರ್ಜಿದಾರರ ಪರ ವೆಂಕಟೇಶ್‌ ದಳವಾಯಿ ಅವರು ವಕಾಲತ್ತು ವಹಿಸಿದ್ದಾರೆ.


ಈ ಬ್ಯಾಂಕು ಸುಮಾರು ₹ 2,400 ಕೋಟಿ ವಾರ್ಷಿಕ ವಹಿವಾಟು ಹೊಂದಿದೆ. ಒಟ್ಟು ಆರು ಶಾಖೆಗಳನ್ನು ಹೊಂದಿದ್ದು, ಸಾವಿರಾರು ಮಂದಿ ಲಕ್ಷಾಂತರ ರೂಪಾಯಿ ಠೇವಣಿ ಇರಿಸಿದ್ದಾರೆ. ಇತ್ತೀಚೆಗೆ ಪರಿಚಯಿಸಿದ ಹೊಸ ಯೋಜನೆಗಳಿಂದ ಆಕರ್ಷಿತರಾಗಿ ಕಳೆದ ಕೆಲವು ತಿಂಗಳುಗಳಲ್ಲೇ ಸಾವಿರಾರು ಮಂದಿ ಬ್ಯಾಂಕಿನ ಸದಸ್ಯರಾಗಿದ್ದರು. ಉದ್ಯೋಗದಲ್ಲಿದ್ದು ನಿವೃತ್ತರಾದ ಅನೇಕರು ತಮ್ಮ ಜೀವಿತಾವಧಿಯ ಉಳಿತಾಯದ ಹಣವನ್ನು ಇಲ್ಲಿ ಠೇವಣಿ ಇಟ್ಟಿದ್ದರು.


ಯಾವುದೇ ಆಧಾರವಿಲ್ಲದೆ ಮತ್ತು ನಕಲಿ ಠೇವಣಿಗಳ ಮೇಲೆ ಒಂದು ಸಾವಿರ ಕೋಟಿಗೂ ಮೀರಿದ ಸಾಲ ನೀಡಿದ್ದರಿಂದಾಗಿ ಬ್ಯಾಂಕ್‌ ಬೀದಿಗೆ ಬಂದಿತ್ತು. ಹೀಗಾಗಿ ಬ್ಯಾಂಕ್‌ನ ವಹಿವಾಟುಗಳ ಮೇಲೆ ಆರ್‌ಬಿಐ ನಿರ್ಬಂಧ ಹೇರಿತ್ತು.


ಆರ್‌ಬಿಐ ನೀಡಿದ ನಿರ್ದೇಶನವೇನು?


ಆರ್‌ಬಿಐ ನೀಡಿರುವ ನಿರ್ದೇಶನದಲ್ಲಿ, ‘ಆರ್‌ಬಿಐಯಿಂದ ಲಿಖಿತವಾಗಿ ಪೂರ್ವಾನುಮತಿ ಪಡೆಯದೆ ಯಾವುದೇ ಸಾಲ ನೀಡುವುದಾಗಲಿ ಅಥವಾ ಸಾಲ ನವೀಕರಣವಾಗಲಿ ಮಾಡಬಾರದು. ಬಂಡವಾಳ ಹೂಡಿಕೆ ಮಾಡಬಾರದು. ಹೊಸದಾಗಿ ಠೇವಣಿ ಸ್ವೀಕರಿಸಬಾರದು ಎಂದು ಹೇಳಿತ್ತು.


ಆರ್‌ಬಿಐ 2020ರ ಜ. 2ರಂದು ನೀಡಿರುವ ನಿರ್ದೇಶನದಲ್ಲಿರುವುದನ್ನು ಹೊರತುಪಡಿಸಿ ಯಾವುದೇ ವಹಿವಾಟು ನಡೆಸಬಾರದು. ಅಲ್ಲದೆ, ಪ್ರತಿ ಖಾತೆಯಲ್ಲಿರುವ ಒಟ್ಟು ಠೇವಣಿ ಮೊತ್ತದಲ್ಲಿ ₹ 35 ಸಾವಿರಕ್ಕಿಂತ ಹೆಚ್ಚು ಹಣವನ್ನು ವಾಪಸು ಪಡೆಯಲು ಅವಕಾಶ ಇಲ್ಲ. ಈ ನಿರ್ದೇಶನಗಳು ಮುಂದಿನ ಆರು ತಿಂಗಳವರೆಗೆ ಜಾರಿಯಲ್ಲಿ ಇರಲಿದೆ. ಆದರೆ, ಇದರ ಮರುಪರಿಶೀಲನೆಗೆ ಅವಕಾಶ ಇದೆ ಎಂದು ತಿಳಿಸಿತ್ತು.


ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಆಡಳಿತ ಮಂಡಳಿಯಿಂದ ಸ್ಪಷ್ಟನೆ ಕೋರಿ ಆರ್‌ಬಿಐ ನೋಟಿಸ್ ನೀಡಿತ್ತು. ಖಾತೆಯಲ್ಲಿ ಕೆಲವೊಂದು ದೋಷಗಳನ್ನು ಗುರುತಿಸಿತ್ತಲ್ಲದೆ, ಠೇವಣಿದಾರರು 35 ಸಾವಿರ ರೂ. ಮಾತ್ರ ಡ್ರಾ ಮಾಡಬಹುದು ಎಂದು ಹೇಳಿತ್ತು.

the fil favicon

SUPPORT THE FILE

Latest News

Related Posts