ಯೋಗೀಶ್‌ಗೌಡನ ಹತ್ಯೆ ಹಿಂದೆ ಜಯಕರ್ನಾಟಕ ಸಂಘಟನೆ ಕಾರ್ಯಕರ್ತರ ಕೈವಾಡ; ಸಿಬಿಐ ಆರೋಪ

ಬೆಂಗಳೂರು; ಧಾರವಾಡ ಜಿಲ್ಲಾ ಪಂಚಾಯ್ತಿ ಬಿಜೆಪಿ ಸದಸ್ಯ ಯೋಗೇಶ್‌ಗೌಡ ಗೌಡರ್‌ ಕೊಲೆಯ ಹಿಂದೆ ರಾಜಕೀಯ ಉದ್ದೇಶವಿತ್ತು ಎಂದು ಆರೋಪಿಸಿ ಸಿಬಿಐ, ಧಾರವಾಡ ಜಿಲ್ಲಾ ಸೆಷನ್ಸ್‌ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ. ಈ ಕೊಲೆಯ ಹಿಂದೆ ಜಯ ಕರ್ನಾಟಕ ಸಂಘಟನೆ ಮುಖಂಡರ ಕೈವಾಡವೂ ಇದೆ ಎಂಬುದನ್ನು ಸಿಬಿಐ ಸಲ್ಲಿಸಿರುವ ದೋಷಾರೋಪಣೆ ಪಟ್ಟಿ ಹೊರಗೆಡವಿದೆ.


ಜಯ ಕರ್ನಾಟಕ ಸಂಘಟನೆಗೆ ಸೇರಿರುವ ದಿನೇಶ್‌ (ಆರೋಪಿ 8) ಮತ್ತು ಅಶ್ವಥ್‌ (ಆರೋಪಿ 9) ಎಂಬುವರು ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಲ್ಲೊಬ್ಬರು ಎಂದು ದೋಷಾರೋಪಣೆ ಪಟ್ಟಿ ವಿವರಿಸಿದೆ. 2020ರ ಮೇ 20ರಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪಣೆ ಪಟ್ಟಿ ‘ದಿ ಫೈಲ್‌’ಗೆ ಲಭ್ಯವಾಗಿದೆ.


ಯೋಗೀಶ್‌ಗೌಡ ಗೌಡರ್‌ ಹತ್ಯೆ ನಡೆಸುವ ಭಾಗವಾಗಿಯೇ ಒಂದನೇ ಆರೋಪಿ ಬಸವರಾಜ ಮುತ್ತಗಿ ಎಂಬಾತ ದಿನೇಶ್‌ ಮತ್ತು ಅಶ್ವಥ್‌ ಅವರೊಂದಿಗೆ ಸಮಾಲೋಚಿಸಲು 2016ರ ಏಪ್ರಿಲ್‌ ಮತ್ತು ಮೇ ಮಧ್ಯದಲ್ಲಿ ಹಲವು ಬಾರಿ ಬೆಂಗಳೂರಿಗೆ ಬಂದಿದ್ದನಲ್ಲದೆ ಹತ್ಯೆಗೈಯಲು ಇವರಿಬ್ಬರ ಸಹಕಾರವನ್ನು ಪಡೆದಿದ್ದ ಎಂಬ ವಿವರಗಳು ದೋಷಾರೋಪಣೆ ಪಟ್ಟಿಯಲ್ಲಿವೆ. ಇದಲ್ಲದೆ ಯೋಗೀಶ್‌ಗೌಡನನ್ನು ಹತ್ಯೆಗೈಯಲು ನಡೆಸಿದ್ದ ಕಾರ್ಯಾಚರಣೆಯನ್ನು ದೋಷಾರೋಪಣೆ ಪಟ್ಟಿಯಲ್ಲಿ ಎಳೆಎಳೆಯಾಗಿ ಬಿಡಿಸಿಡಲಾಗಿದೆ.


ವಿಕ್ರಂ ಬಳ್ಳಾರಿ, ಕೀರ್ತಿಕುಮಾರ್ ಬಸವರಾಜ ಕುರಹಟ್ಟಿ, ಸಂದೀಪ್‌ ಸೌದತ್ತಿ, ವಿನಾಯಕ ಕಟಗಿ, ಮಹಾಬಲೇಶ್ವರ್ ಹೊಂಗಲ್, ಸಂತೋಷ್‌ ಸವದತ್ತಿ, ಮಂಡ್ಯದ ಸುನೀಲ್‌ ಕೆ ಎಸ್‌, ಬೆಂಗಳೂರಿನ ಸೊನ್ನೇನಹಳ್ಳಿಯ ನಜೀರ್ ಅಹ್ಮದ್‌, ಶಾ ನವಾಜ್‌, ಸುಬ್ರಹ್ಮಣ್ಯಪುರದ ನೂತನ್‌, ಕೊಡಗಿನ ಸೋಮವಾರಪೇಟೆಯ ಹರ್ಷಿತ್‌, ಪ್ರಕರಣದಲ್ಲಿ ಇತರೆ ಆರೋಪಿಗಳೆಂದು ಗುರುತಿಸಲಾಗಿದೆ.


322 ಬಾರಿ ಕರೆ ಮಾಡಿದ್ದ ಮುತ್ತಗಿ


ಬಸವರಾಜ ಮುತ್ತಗಿ ಹೆಸರಿನಲ್ಲಿದ್ದ ಮೊಬೈಲ್‌ ನಂಬರ್‌ (95386 59906)ನಿಂದ 8ನೇ ಆರೋಪಿ ದಿನೇಶ್‌ ಎಂಬಾತನ ಮೊಬೈಲ್‌ (7899429139)ನಂಬರ್‌ಗೆ 2016ರ ಏಪ್ರಿಲ್‌ 1ರಿಂದ 2016ರ ಜೂನ್‌ 13ರವರೆಗೆ ಒಟ್ಟು 322 ಬಾರಿ ಕರೆ ಮಾಡಿದ್ದ ಎಂಬ ಸಂಗತಿಯೂ ದೋಷಾರೋಪಣೆ ಪಟ್ಟಿಯಿಂದ ತಿಳಿದು ಬಂದಿದೆ.


ದಿನೇಶ್‌ ಮತ್ತು ಅಶ್ವಥ್‌ ಎಂಬುವರು ಯೋಗೀಶ್‌ ಗೌಡ ಹತ್ಯೆಯ ಕಾರ್ಯಾಚರಣೆ ನಡೆಸಲು ಸುನೀಲ್‌(10ನೇ ಆರೋಪಿ), ನಜೀರ್‌ ಅಹ್ಮದ್‌(11ನೇ ಆರೋಪಿ), ಶಾನವಾಜ್‌(12), ನೂತನ್‌(13ನೇ ಆರೋಪಿ), ಹರೀಶ್‌(14ನೇ ಆರೋಪಿ) ಅವರ ನೆರವು ಪಡೆದಿದ್ದರಲ್ಲದೆ, ಇವರನ್ನು ಧಾರವಾಡಕ್ಕೆ ಕರೆಸಿಕೊಂಡಿದ್ದರು ಎಂಬುದು ದೋಷಾರೋಪಣೆ ಪಟ್ಟಿಯಲ್ಲಿ ಆರೋಪಿಸಲಾಗಿದೆ.


ಯೋಗೇಶ್‌ಗೌಡ ಹತ್ಯೆ ನಡೆಸುವ ಒಂದೇ ಉದ್ದೇಶದಿಂದ ಒಂದನೇ ಆರೋಪಿ ಬಸವರಾಜ ಮುತ್ತಗಿ ಸೇರಿದಂತೆ 14 ಮಂದಿ ಆರೋಪಿಗಳು ಧಾರವಾಡದ ಸಾರಸ್ವತಪುರದಲ್ಲಿನ 14 ಗುಂಟೆ ವಿಸ್ತೀರ್ಣದಲ್ಲಿದ್ದ ಹಳೆಯ ಮನೆಯೊಂದರಲ್ಲಿ ಸೇರಿದ್ದರು. ಈ ಮನೆಯನ್ನು 5ನೇ ಆರೋಪಿ ವಿನಾಯಕ ಕಟಗಿ ಎಂಬಾತ ಅಕ್ರಮವಾಗಿ ಸ್ವಾಧೀನಕ್ಕೆ ಪಡೆದಿದ್ದ ಎಂಬ ಮಾಹಿತಿ ದೋಷಾರೋಪಣೆ ಪಟ್ಟಿಯಲ್ಲಿದೆ. ಈ ಮನೆ ನಿಜಕ್ಕೂ ಯಾರಿಗೆ ಸೇರಿದೆ ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ.


ಹಾರ್ನ್‌ಬಿಲ್‌ ರೆಸಾರ್ಟ್‌ನಲ್ಲಿ ತಂಗಿದ್ದ ಆರೋಪಿಗಳು


ಯೋಗೀಶ್‌ಗೌಡ ಹತ್ಯೆಯ ಕಾರ್ಯಾಚರಣೆಯಲ್ಲಿ ಆರಂಭದಲ್ಲಿ ಹಿನ್ನಡೆಯಾಗಿದ್ದರಿಂದ 8ನೇ ಆರೋಪಿ ದಿನೇಶ್‌ ಸೇರಿದಂತೆ 6 ಮಂದಿ ಆರೋಪಿಗಳು(14ನೇ ಆರೋಪಿಯವರೆಗೆ) 4ನೇ ಆರೋಪಿ ಸಂದೀಪ್‌ ಮತ್ತು 2ನೇ ಆರೋಪಿ ವಿಕ್ರಮ್‌ ಬಳ್ಳಾರಿ ಅವರೊಂದಿಗೆ ತವೇರಾ ವಾಹನದಲ್ಲಿ ದಾಂಡೇಲಿಗೆ ತೆರಳಿ ಅಲ್ಲಿನ ಹಾರ್ನ್‌ಬಿಲ್‌ ರೆಸಾರ್ಟ್‌ನಲ್ಲಿ ರಾತ್ರಿ ಕಳೆದಿದ್ದರು ಎಂಬ ಮಾಹಿತಿ ದೋಷಾರೋಪಣೆ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.


ಇದಾದ ನಂತರ ಒಂದನೇ ಆರೋಪಿ ಬಸವರಾಜ ಮುತ್ತಗಿ ಧಾರವಾಡದ ಅಂಕಿತ ರೆಸಿಡೆನ್ಸಿಯಲ್ಲಿ ಕೊಠಡಿಯನ್ನು ಕಾಯ್ದಿರಿಸಿದ್ದ. 2016ರ ಜೂನ್‌ 12ರ ನಂತರ ನಡೆದ 2ನೇ ಕಾರ್ಯಾಚರಣೆಯನ್ನು ಇಲ್ಲಿಂದಲೇ ನಡೆಸಲಾಗಿತ್ತು. 8ನೇ ಆರೋಪಿ ದಿನೇಶ್‌ ಸೇರಿದಂತೆ 6 ಮಂದಿ ಆರೋಪಿಗಳು 2016ರ ಜೂನ್‌ 13ರಂದು ಧಾರವಾಡದ ಸಾರಸ್ವತಪುರದಲ್ಲಿನ ಹಳೆ ಮನೆಯೊಂದರಲ್ಲಿ ಪುನಃ ಸೇರಿದ್ದರು.
ಈ ಮನೆ, ಉದಯ್‌ ಜಿಮ್‌ಗೆ ಹತ್ತಿರವಾಗಿತ್ತಲ್ಲದೆ, ಯೋಗೀಶ್‌ಗೌಡ ಪ್ರತಿನಿತ್ಯ ಬೆಳಗ್ಗೆ 7-30ರಿಂದ 9-30ರವರೆಗೆ ಜಿಮ್‌ನಲ್ಲಿ ತರಬೇತಿ ಪಡೆಯಲು ಬರುತ್ತಿದ್ದ ಮಾಹಿತಿಯೂ ಸೇರಿದಂತೆ ಇನ್ನಿತರೆ ಚಲನವಲನಗಳನ್ನು ಈ ಮನೆಯಿಂದಲೇ ಗಮನಿಸಲಾಗುತ್ತಿತ್ತು ಎಂಬ ವಿವರಗಳು ದೋಷಾರೋಪಣೆ ಪಟ್ಟಿಯಲ್ಲಿವೆ.


7ನೇ ಆರೋಪಿ ಮತ್ತು 9ನೇ ಆರೋಪಿ ಧರಿಸಿದ್ದ ಕೆಂಪು ಬಣ್ಣದ ಜಾಕೆಟ್‌ನಲ್ಲಿ ಆಯುಧಗಳನ್ನು ಬಚ್ಚಿಟ್ಟುಕೊಂಡಿದ್ದರು. 2016ರ ಜೂನ್‌ 14ರ ಬೆಳಗ್ಗೆ 7-23ಕ್ಕೆ ಹೀರೋ ಹೋಂಡಾ ಸ್ಪ್ಲೆಂಡರ್‌ ವಾಹನವನ್ನೇರಿ(ಕೆ ಎ 25-ಇಎ 6230) ಉದಯ್‌ ಜಿಮ್‌ ಬಳಿ ಬಂದಿದ್ದರು. ಹಸಿರು ಬಣ್ಣದ ಅಂಗಿ ಧರಿಸಿದ್ದ 11ನೇ ಆರೋಪಿ ಸಣ್ಣ ಬ್ಯಾಗ್‌ನಲ್ಲಿ ಆಯುಧಗಳನ್ನಿರಿಸಿದ್ದ. ಬಿಳಿ ಬಣ್ಣದ ಮತ್ತೊಂದು ದ್ವಿಚಕ್ರ ವಾಹನದಲ್ಲಿ 11ನೇ ಆರೋಪಿ ಸೇರಿ ಇನ್ನಿಬ್ಬರು ಆರೋಪಿಗಳು 7-27ಕ್ಕೆ ಸ್ಥಳದಲ್ಲಿದ್ದರು. ನಂತರ 8ನೇ ಆರೋಪಿ ದಿನೇಶ್‌ ಮತ್ತು 13ನೇ ಆರೋಪಿ ಈ ಸ್ಥಳವನ್ನು ತಲುಪಿದ್ದರು.


ಉದಯ್‌ ಜಿಮ್‌ ಸುತ್ತಲೂ ಈ ಆರೋಪಿಗಳು ಓಡಾಡಿದ್ದರಲ್ಲದೆ ಯೋಗೀಶ್‌ಗೌಡ ಬರುವುದನ್ನೇ ಕಾದು ಕುಳಿತು ಹೊಂಚು ಹಾಕಿದ್ದರು. 7-34ಕ್ಕೆ ಇನ್ನೋವಾ ವಾಹನದಲ್ಲಿ ಯೋಗೀಶ್‌ಗೌಡ ಬಂದಿದ್ದ. ಆದರೆ ತಕ್ಷಣವೇ ಜಿಮ್‌ನಿಂದ ವಾಪಸ್‌ ಆಗಿದ್ದ. ಹೀಗಾಗಿ ಹೊಂಚು ಹಾಕಿ ಕುಳಿತಿದ್ದ ಆರೋಪಿಗಳ ಯತ್ನ ವಿಫಲವಾಗಿತ್ತು. ಈ ಎಲ್ಲಾ ಆರೋಪಿಗಳು ಪುನಃ ಸಾರಸ್ವತಪುರದಲ್ಲಿನ ಹಳೆ ಮನೆಗೆ ವಾಪಸ್‌ ಆಗಿದ್ದರು. ಮಾರನೇ ದಿನ ಹತ್ಯೆ ನಡೆಸುವ ಬಗ್ಗೆ ನಿರ್ಧರಿಸಿದ್ದರು ಎಂಬ ಮಾಹಿತಿ ದೋಷಾರೋಪಣೆ ಪಟ್ಟಿಯಲ್ಲಿ ವಿವರಿಸಲಾಗಿದೆ.


2016ರ ಜೂನ್‌ 15ರಂದು ಎಂದಿನಂತೆ 7ನೇ ಆರೋಪಿಯಿಂದಿಡಿದು 9ನೇ ಆರೋಪಿ , ಉದಯ್‌ ಜಿಮ್‌ ಬಳಿ 6-46ಕ್ಕೆ ತಲುಪಿದ್ದರು. ಮಾರಕ ಅಸ್ತ್ರಗಳ ಸಮೇತ ಸಜ್ಜಾಗಿ ಬಂದಿದ್ದ ಈ ಆರೋಪಿಗಳು ಜಿಮ್‌ ಬಳಿ ಸುಳಿದಾಡುತ್ತಿದ್ದದ್ದು ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ಜಿಮ್‌ಗೆ ಹೊಂದಿಕೊಂಡಿರುವ ಗೋಡೆಗೆ ಒರಗಿಕೊಂಡಿದ್ದ 9ನೇ ಆರೋಪಿ ನ್ಯೂಸ್‌ ಪೇಪರ್‌ನಿಂದ ತನ್ನ ಮುಖ ಕಾಣಿಸದಂತೆ ಮುಚ್ಚಿಕೊಂಡಿದ್ದನಲ್ಲದೆ ಯೋಗೀಶ್‌ ಗೌಡ ಬರುವುದನ್ನೇ ಕಾಯುತ್ತಿದ್ದ ಎಂಬ ಮಾಹಿತಿ ದೋಷಾರೋಪಣೆ ಪಟ್ಟಿಯಲ್ಲಿದೆ.


ಕೆಸಿಡಿ ಸರ್ಕಲ್‌ನಿಂದಲೇ ಸಮನ್ವಯ


ಈ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಲು ಒಂದನೇ ಆರೋಪಿ ಬಸವರಾಜ ಮುತ್ತಗಿ, 2, 3 ಮತ್ತು 5ನೇ ಆರೋಪಿ ಧಾರವಾಡದ ಕೆಸಿಡಿ ಸರ್ಕಲ್‌ನಲ್ಲಿದ್ದರಲ್ಲದೆ ಹತ್ಯೆ ಕಾರ್ಯಾಚರಣೆಗೆ ಸಮನ್ವಯ ಮಾಡುತ್ತಿದ್ದರು. ಯೋಗೀಶ್‌ಗೌಡ ಮನೆಯಿಂದ ಜಿಮ್‌ನತ್ತ ಹೊರಡುತ್ತಿದ್ದಂತೆ 6ನೇ ಆರೋಪಿ ದೂರವಾಣಿ ಕರೆ ಮೂಲಕ ಮಾಹಿತಿ ನೀಡಿದ್ದ. ಒಂದನೇ ಆರೋಪಿ ಬಸವರಾಜ ಮುತ್ತಗಿ , 2,3 ಮತ್ತು 5ನೇ ಆರೋಪಿಯಿಂದ 6ನೇ ಆರೋಪಿ ಸತತವಾಗಿ ದೂರವಾಣಿ ಸಂಪರ್ಕದಲ್ಲಿದ್ದ.


ಇದೇ ಹೊತ್ತಿಗೆ 13ನೇ ಆರೋಪಿ ಜತೆಗೂಡಿ ಬಂದಿದ್ದ 8ನೇ ಆರೋಪಿ ದಿನೇಶ್‌, ಬಿಳಿ ಬಣ್ಣದ ದ್ವಿಚಕ್ರ ವಾಹನದಲ್ಲಿ ಉದಯ್‌ ಜಿಮ್‌ ಬಳಿ ತಲುಪಿದ್ದ. ಆಯುಧಗಳನ್ನು ದ್ವಿಚಕ್ರ ವಾಹನದಲ್ಲಿರಿಸಿದ್ದ. ಇದೆಲ್ಲವೂ ಸಿಸಿಟಿವಿಯಲ್ಲಿ ಸೆರೆಯಾಗಿದ್ದವು.
ಯೋಗೀಶ್‌ಗೌಡ ಜಿಮ್‌ ಗೆ ತೆರಳುವ ಹಾದಿಯಲ್ಲೇ 7ನೇ ಆರೋಪಿ ಜಿಮ್‌ ಮೆಟ್ಟಿಲ ಮೇಲೆ ನಿಂತಿದ್ದ. ಮೆಣಸಿನ ಪುಡಿ ಯನ್ನು ಕಣ್ಣಿಗೆ ಎರಚಿ ಆತನ ಕುತ್ತಿಗೆಗೆ ಇರಿದಿದ್ದ. ಉಳಿದ ಆರೋಪಿಗಳು ಲಾಂಗ್‌ ಮತ್ತು ಮಚ್ಚುಗಳ ಸಮೇತ ಯೋಗೀಶ್‌ಗೌಡನನ್ನು ಇರಿದಿದ್ದರು. ಯೋಗೀಶ್‌ಗೌಡನನ್ನು ಮೆಟ್ಟಿಲ ಮೇಲಿಂದ ಎತ್ತಿಕೊಂಡು ಆರೋಪಿಗಳು ಹೋಗುತ್ತಿದ್ದಂತೆ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದವರೆಲ್ಲಾ ಓಡಿ ಹೋಗಿದ್ದರು.


ಕೊಲೆ ಬಳಿಕ ನೇರವಾಗಿ ಹಾವೇರಿಯ ಶಿಗ್ಗಾಂವ್‌ ನಲ್ಲಿದ್ದ ಪಂಚವಟಿ ಹೋಟೆಲ್‌ನಲ್ಲಿ ಆಶ್ರಯ ಪಡೆದಿದ್ದರು. ಇದಾದ ನಂತರ ಒಂದನೇ ಆರೋಪಿ ಮುತ್ತಗಿ ಸೇರಿದಂತೆ 5 ಆರೋಪಿಗಳು ಪೊಲೀಸರಿಗೆ ಶರಣಾಗಿದ್ದರು. ರಾಜಕೀಯ ಮಹತ್ವಾಕಾಂಕ್ಷೆ ಕಾರಣಕ್ಕೆ ಕೊಲೆ ಮಾಡಿದ್ದಾರೆ ಎಂದು ಸಿಬಿಐ ದೋಷಾರೋಪ ಪಟ್ಟಿಯಲ್ಲಿ ವಿವರಿಸಿದೆ.

SUPPORT THE FILE

Latest News

Related Posts