ಜೂನ್‌ ಅಂತ್ಯಕ್ಕೆ ಕೋವಿಡ್‌ ಪ್ರಕರಣಗಳ ಸಂಖ್ಯೆ 5,000ಕ್ಕೇರಿಕೆ!; ಮಹಾರಾಷ್ಟ್ರದ್ದೇ ಸಿಂಹಪಾಲು

ಬೆಂಗಳೂರು; ಲಾಕ್‌ಡೌನ್‌ ಮಾರ್ಗಸೂಚಿಗಳನ್ನು ಸಡಿಲಿಸಿದ ನಂತರ ರಾಜ್ಯದಲ್ಲಿ ಕೋವಿಡ್‌-19 ದೃಢಪಟ್ಟಿರುವ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ದಿನವೊಂದಕ್ಕೆ ಕನಿಷ್ಠ 100 ಪ್ರಕರಣಗಳು ವರದಿಯಾಗುತ್ತಿದೆಯಲ್ಲದೆ, ಇದರ ವೇಗವನ್ನು ಗಮನಿಸಿದರೆ ಜೂನ್ ಅಂತ್ಯಕ್ಕೆ ಇದರ ಸಂಖ್ಯೆ 5,000ಕ್ಕೆ ತಲುಪಿದರೂ ಅಚ್ಚರಿಯೇನಿಲ್ಲ.


‘ದಿ ಫೈಲ್‌’ನೊಂದಿಗೆ ಮಾತನಾಡಿದ ಅಧಿಕಾರಿಯೊಬ್ಬರ ಪ್ರಕಾರ ಪ್ರಕಣಗಳ ಸಂಖ್ಯೆ ರಾಜ್ಯದಲ್ಲೀಗ ಇಳಿಮುಖವಾಗುತ್ತಿದೆ. ‘ಹೊರರಾಜ್ಯದಿಂದ ಬಂದವರಿಂದಲೇ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಒಟ್ಟು ವರದಿಯಾಗಿರುವ ಪ್ರಕರಣಗಳಲ್ಲಿ ರಾಜ್ಯದೊಳಗೆ 1,000 ಪ್ರಕರಣಗಳಿದ್ದರೆ ಇನ್ನುಳಿದ 1,922 ಪ್ರಕರಣಗಳು ಹೊರರಾಜ್ಯದಿಂದ ಬಂದವರಿಂದ ವರದಿಯಾಗಿವೆ,’ ಎನ್ನುತ್ತಾರೆ ಅಧಿಕಾರಿಯೊಬ್ಬರು.


ಕಳೆದ 7 ವಾರಗಳಲ್ಲಿ ಪ್ರಕರಣಗಳ ಸಂಖ್ಯೆ ಏರುಮುಖದಲ್ಲಿತ್ತು. ಆ ನಂತರ 3 ವಾರ ಇಳಿಕೆ ಆಗಿತ್ತು. ಮೇ ಅಂತ್ಯಕ್ಕೆ ಇಳಿಮುಖವಾಗಬೇಕಿತ್ತಾದರೂ ಇನ್ನೂ ಏರಿಕೆಯಲ್ಲೇ ಇದೆ. ಇಳಿಮುಖವಾಗಲು ಕನಿಷ್ಠ 5 ವಾರವಾದರೂ ಬೇಕು. ಜೂನ್‌ ತಿಂಗಳ ಅಂತ್ಯಕ್ಕೆ 5,000ಕ್ಕೇರುವ ಅಂದಾಜಿದೆ ಇದೆಯಾದರೂ ವಲಸಿಗರು ಆಗಮನ ಸದ್ಯಕ್ಕೆ ನಿಂತಿರುವ ಕಾರಣ ಜೂನ್‌ನಲ್ಲಿ ಇದೇ ಸಂಖ್ಯೆಯಲ್ಲೇ ತಟಸ್ಥವಾಗಲಿದೆ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.


ರಾಜ್ಯದಲ್ಲಿ ವರದಿಯಾಗಿರುವ ಒಟ್ಟು ಸಂಖ್ಯೆಯಲ್ಲಿ ಮಹಾರಾಷ್ಟ್ರ ಪ್ರಯಾಣ ಹಿನ್ನಲೆ ಹೊಂದಿದವರಿಂದ 1,700 ಪ್ರಕರಣಗಳು ವರದಿಯಾಗಿವೆ. ಇನ್ನೇನಿದ್ದರೂ ಪ್ರಾಥಮಿಕ ಸಂಪರ್ಕಕ್ಕಿಂತಲೂ ದ್ವಿತೀಯ ಸಂಪರ್ಕ ಹೆಚ್ಚಾಗಲಿವೆ. ಇದು ಕೂಡ ಆತಂಕಕಾರಿ ವಿಚಾರ ಎನ್ನುತ್ತಾರೆ ಅಧಿಕಾರಿಗಳು.


ಮೇ 30ರ ಅಂತ್ಯಕ್ಕೆ 2,922 ಪ್ರಕರಣಗಳು ವರದಿಯಾಗಿದೆ. ಒಟ್ಟು ಸೋಂಕಿತರ ಪೈಕಿ ಶೇ. 50ರಷ್ಟು ಸೋಂಕಿತರು ಮಹಾರಾಷ್ಟ್ರದ ಪ್ರಯಾಣ ಹಿನ್ನಲೆ ಹೊಂದಿದ್ದಾರೆ. ಮುಂಬೈ ಪ್ರಯಾಣ ಹಿನ್ನಲೆ ಹೊಂದಿದ್ದ ಪ್ರಕರಣ ಆರಂಭದಲ್ಲಿ ಮಂಡ್ಯದಲ್ಲಿ ಮಾತ್ರ ಕಾಣಿಸಿಕೊಂಡಿತ್ತು. ಆದರೀಗ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಮತ್ತು ಹೈದರಾಬಾದ್‌ ಕರ್ನಾಟಕದ ಪ್ರದೇಶಗಳಲ್ಲಿಯೂ ಅದರ ಸಂಖ್ಯೆ ದಿನದಿಂದ ದಿನಕ್ಕೆ ದ್ವಿಗುಣಗೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.


ಮೇ 29ರ ಅಂತ್ಯಕ್ಕೆ ವರದಿಯಾದ ಒಟ್ಟು 2,781ರ ಪೈಕಿ 1,348 ಸಂಖ್ಯೆಯ ಸೋಂಕಿತರಿಗೆ ಮಹಾರಾಷ್ಟ್ರದ ಪ್ರಯಾಣದ ಹಿನ್ನೆಲೆ ಇದೆ. ಶುಕ್ರವಾರ ಒಟ್ಟು 248 ಮತ್ತು ಶನಿವಾರದ 141 ಒಟ್ಟು ಪ್ರಕರಣಗಳು ವರದಿಯಾಗಿವೆ. ಶನಿವಾರ ದೃಢಪಟ್ಟ 141 ಪ್ರಕರಣಗಳ ಪೈಕಿ 83 ಪ್ರಕರಣಗಳಿಗೆ ಮಹಾರಾಷ್ಟ್ರದ ಪ್ರಯಾಣ ಹಿನ್ನೆಲೆ ಇದೆ. ಇವರೊಂದಿಗಿನ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಹೊಂದಿರುವವರ ಸಂಖ್ಯೆ 815ರಷ್ಟಿದೆ. ಗುಜರಾತ್‌ನಿಂದ ಬಂದವರ ಪೈಕಿ 58, ದೆಹಲಿ 59 ಮತ್ತು ತಮಿಳುನಾಡಿನಿಂದ ಬಂದವರ ಪೈಕಿ 55 ಮಂದಿಗೆ ಸೋಂಕು ದೃಢಪಟ್ಟಿದೆ.


ಸೋಂಕು ನಿಧಾನವಾಗಿ ರಾಜ್ಯದಲ್ಲಿ ಹರಡುತ್ತಿದೆಯಲ್ಲದೆ ಕಳೆದ 15 ದಿನದಲ್ಲಿ ಪ್ರಕರಣಗಳ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ಅದರಲ್ಲೂ ಕಳೆದ 2 ತಿಂಗಳಲ್ಲಿ (ಮಾರ್ಚ್‌ 9 ರಿಂದ ಮೇ 15) 1,000 ಪ್ರಕರಣಗಳು ವರದಿಯಾಗಿವೆ. ಮೇ 15ರ ನಂತರ ಅಂದರೆ ಕೇವಲ ಎರಡೇ ಎರಡು ವಾರದಲ್ಲಿ 1,781 ಪ್ರಕರಣಗಳು ವರದಿಯಾಗಿರುವುದು ಆತಂಕವನ್ನು ಹೆಚ್ಚಿಸಿದೆ.


ಮಂಡ್ಯದಲ್ಲಿ 224, ಯಾದಗಿರಿಯಲ್ಲಿ 207, ಕಲ್ಬುರ್ಗಿಯಲ್ಲಿ 159, ಉಡುಪಿಯಲ್ಲಿ 158 ಪ್ರಕರಣಗಳು ಸಕ್ರಿಯವಾಗಿವೆ. ಇದು ಬೆಂಗಳೂರು ನಗರಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿವೆ. ಇದಾದ ನಂತರ ರಾಯಚೂರು (132), ಚಿಕ್ಕಬಳ್ಳಾಪುರ (114) ಮತ್ತು ಹಾಸನದಲ್ಲಿ (114) ಪ್ರಕರಣಗಳು ಸಕ್ರಿಯವಾಗಿವೆ.

the fil favicon

SUPPORT THE FILE

Latest News

Related Posts